Site icon Vistara News

Elder Abuse Awareness Day: ಹಿರಿಯ ಜೀವಗಳಿಗೂ ಬೇಕು ಮಕ್ಕಳಂತೆ ಕಾಳಜಿ

elder abuse

ಮಕ್ಕಳಿಗೆ ಹೇಗೆ ಪ್ರೀತಿ, ಮಮತೆ ಹಾಗೂ ಕಾಳಜಿಯ ಅವಶ್ಯಕತೆಯಿದೆಯೋ ಹಾಗೆಯೇ ಹಿರಿಯ ಜೀವಗಳಿಗೂ ಅದೇ ಕಾಳಜಿ ಪ್ರೀತಿಯ ಅವಶ್ಯಕತೆಯಿದೆ ಎಂಬುದನ್ನು ಇಂದಿನ ನಾಗಾಲೋಟದ ಬದುಕು ನಮ್ಮಿಂದ ಬಹಳಷ್ಟು ಸಾರಿ ಮರೆಸುತ್ತದೆ. ಇದೇ ಕಾರಣದಿಂದ ಇಂದು ಹಿರಿಯ ಜೀವಗಳ ಆರೋಗ್ಯದಲ್ಲಿ ಏರುಪೇರು, ಮುಖ್ಯವಾಗಿ ಖಿನ್ನತೆಯಂತಹ ಕಾಯಿಲೆಗಳು ಮುಪ್ಪಿನಲ್ಲಿ ಕಂಡುಬರುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ, ಹಿರಿಯರ ಮೇಲಾಗುತ್ತಿರುವ ದೌರ್ಜನ್ಯವೇ ಇಂದು ಅವರ ಮಾನಸಿಕ ಹಾಗೂ ದೈಹಿಕ ಅಸಮತೋಲನದಂತಹ ಪ್ರಕರಣಗಳ ಹೆಚ್ಚುವಿಕೆಗೆ ಕಾರಣವಾಗಿದೆ ಎಂದಿದೆ.

ಪ್ರತಿ ವರ್ಷ ಜೂನ್‌ 15, ವಿಶ್ವ ಹಿರಿಯ ನಾಗರಿಕ ದೌರ್ಜನ್ಯದ ಅರಿವಿನ ದಿನವಾಗಿ (World Elder Abuse Awareness Day) ಆಚರಿಸಲಾಗುತ್ತಿದ್ದು, ಜಾಗತಿಕವಾಗಿ ಹಿರಿಯ ನಾಗರಿಕರು ಅನುಭವಿಸುತ್ತಿರುವ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳ ಪರಿಹಾರಕ್ಕಾಗಿ ಇದು ಪಣ ತೊಟ್ಟಿದೆ. ಈ ಕುರಿತು ಸಾಮಾನ್ಯ ನಾಗರಿಕರಲ್ಲಿ ತಿಳುವಳಿಕೆ ಮೂಡಿಸುವುದು ಹಾಗೂ ಹಿರಿಯ ನಾಗರಿಕರ ಹಕ್ಕುಗಳನ್ನು ಅವರಿಗೆ ತಲುಪಿಸುವುದೇ ಉದ್ದೇಶ.

ಹಿರಿಯ ನಾಗರಿಕರ ಸೂಕ್ಷ್ಮ ಮನಸ್ಸಿನ ಮೇಲಾದ ಪರಿಣಾಮಗಳು ಅವರ ದಿನನಿತ್ಯದ ಕೆಲಸಗಳಲ್ಲೇ ವ್ಯತಿರಿಕ್ತ ಪರಿಣಾಮಗಳನ್ನು ಬೀರಬಹುದು. ಪ್ರತಿದಿನದ ಕೆಲಸ ಕಾರ್ಯಗಳಲ್ಲಿ ಇದ್ದಕ್ಕಿದ್ದಂತೆ ನಿರ್ಲಕ್ಷ್ಯ ತೋರುವುದು, ಯಾವಾಗಲೂ ಮಾಡುವ ಕೆಲಸವನ್ನು ಮಾಡದೇ ಇರುವುದು, ದಿನಚರಿಯಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಮಾಡಿಕೊಳ್ಳುವುದು, ಇಷ್ಟಪಟ್ಟು ಮಾಡುವ ಕೆಲಸಗಳನ್ನೇ ದಿಢೀರ್‌ ಬಿಡುವುದು ಅಥವಾ ಉದಾಸೀನತೆ ತೋರುವುದು ಎಲ್ಲವೂ ಅವರ ಮಾನಸಿಕ ಆರೋಗ್ಯದ ಮೇಲಾದ ದೌರ್ಜನ್ಯದ ಪರಿಣಾಮಗಳೇ. ಇಂತಹವುಗಳೇ, ಮುಪ್ಪಿನಲ್ಲಿ ಡಿಮೆನ್ಶಿಯಾದಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ.

ವಿಪರೀತ ಮರೆವು ಕಾಣಿಸಿಕೊಳ್ಳುವುದೂ ಕೂಡ ಇದೇ ಕಾರಣಕ್ಕೆ. ದಿನವೂ ಊಟದ ನಂತರ ನುಂಗುವ ಮಾತ್ರೆಯನ್ನು ನುಂಗಲು ಮರೆತೇ ಬಿಡುವುದು, ಮಾತ್ರೆ ನುಂಗಿದೆನೋ ಇಲ್ಲವೋ ಎಂದು ಕಳವಳವಾಗುವುದು, ಅಥವಾ, ಮಾತ್ರೆ ನುಂಗಲೆಂದು ನೀರನ್ನು ತಂದಿಟ್ಟುಕೊಂಡು, ಮಾತ್ರೆ ಕೈಯಲ್ಲಿ ಹಿಡಿದು ತುಂಬಾ ಹೊತ್ತು ಸುಮ್ಮನೇ ಕುಳಿತಿರುವುದು ಕೂಡಾ ಹಿರಿಯರ ಮನಸ್ಸಿನ ಮೇಲಾದ ಪರಿಣಾಮಗಳು ತಂದೊಡ್ಡುವ ಸಮಸ್ಯೆಗಳೇ.

ತನ್ನದೇ ದೇಹದ ಮೇಲೆ ಪದೇ ಪದೇ ಗಾಯ ಮಾಡಿಕೊಳ್ಳುವುದು, ಮತ್ತು ಆ ಗಾಯ ಯಾವಾಗ ಹೇಗಾಯಿತೆಂದು ನೆನಪಾಗದಿರುವುದೂ ಕೂಡ ಇದರ ಪರಿಣಾಮಗಳೇ. ತಮ್ಮ ಬಗ್ಗೆ ಅವರು ಹೆಚ್ಚಿನ ಆಸ್ಥೆ ವಹಿಸಿಕೊಳ್ಳುತ್ತಿಲ್ಲ ಎಂಬುದನ್ನು ಅವರ ಕುಟುಂಬದವರು ಅರ್ಥ ಮಾಡಿಕೊಳ್ಳಬೇಕು

ತನ್ನ ಕಾಳಜಿಯನ್ನು, ತನ್ನ ನಿತ್ಯಕರ್ಮಗಳನ್ನು ಮಾಡಿಕೊಳ್ಳುವಲ್ಲಿ ಅಸಡ್ಡೆ ತೋರಿಸುವುದೂ ಕೂಡಾ ಇದರ ಲಕ್ಷಣಗಳೇ. ಅತಿಯಾದ ಉದಾಸೀನತೆ, ಸುಮ್ಮನೆ ಮಲಗಿಕೊಂಡಿರುವುದು ಎಲ್ಲವೂ ಅವರ ಮಾನಸಿಕ ಏರುಪೇರಿನ ಸೂಚನೆ. ಇದರಿಂದಾಗಿ ಅವರ ದೈಹಿಕ ಸಮತೋಲನವೂ ಹದಗೆಡುವ ಸಂಭವವಿರುವುದರಿಂದ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: Snapping footwear: ಮಧುಮೇಹಿಗಳಿಗೆ IIScಯಿಂದ ಸ್ಪೆಷಲ್‌ ಪಾದರಕ್ಷೆ, ನೋವಾಗಲ್ಲ, ಕೀವಾಗಲ್ಲ!

ಕಿರಿಯರಿಂದ ಆಗಾಗ್ಗೆ ಅನುಭವವಾಗುವ ಉಡಾಫೆ, ನಿರ್ಲಕ್ಷ್ಯ, ಕಾಲೆಳೆಯುವುದೂ ಕೂಡಾ ಮಾನಸಿಕವಾಗಿ ಪರಿಣಾಮ ಬೀರುತ್ತದೆ. ಸಮಾಜದಲ್ಲಿ, ಸುತ್ತಮುತ್ತಲಿನವರಿಂದ ಅಥವಾ ತನ್ನದೇ ಮನೆಯಲ್ಲಿ ತಾನು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದೇನೆಂಬ ಭಾವನೆಯೇ ಇವರನ್ನು ಇನ್ನಷ್ಟು ಕೆಳಗಿಳಿಸುತ್ತದೆ. ಅದರ ವಿರುದ್ಧ ಹೋರಾಡಲು ಸಾಕಷ್ಟು ಶಕ್ತಿ ಇಲ್ಲದಿರುವುದೂ ಕೂಡಾ ಮತ್ತಷ್ಟು ಕುಗ್ಗಿಸುತ್ತದೆ.

ಇತ್ತೀಚೆಗೆ ಜಾಗತಿಕವಾಗಿ ಇವೆಲ್ಲ ಸಮಸ್ಯೆಗಳು ಹಿರಿಯರ ಲೋಕದ ಸಾಮಾನ್ಯ ಸಂಗತಿಗಳಾಗುತ್ತಿದ್ದು ಇವುಗಳ ಬಗೆಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವನ್ನು ವಿಶ್ವ ಆರೋಗ್ಯ ಸಂಸ್ಥೆ ಮನಗಂಡಿದೆ. ಮುಖ್ಯವಾಗಿ, ಕಿರಿಯರು, ಹಿರಿಯರ ಅಗತ್ಯಗಳಿಗೆ ಸ್ಪಂದಿಸುತ್ತಿದ್ದರೆ, ಅವರ ಸಾಮಾನ್ಯ ಸಮಸ್ಯೆಗಳಿಗೆ ಕಿವಿಯಾಗುತ್ತಿದ್ದರೆ, ಸೂಕ್ತ ಸಮಯಕ್ಕೆ ಸರಿಯಾಗಿ ಸಮಸ್ಯೆಯ ಮೂಲವನ್ನು ಅರಿತು ಮಾನಸಿಕವಾಗಿ, ದೈಹಿಕವಾಗಿ ವೈದ್ಯಕೀಯ ನೆರವು ಕೊಡಿಸಿದರೆ, ಈ ಸಮಸ್ಯೆ ಉಲ್ಬಣವಾಗುವುದನ್ನು ತಪ್ಪಿಸಬಹುದು ಎಂದಿದೆ.

ಇದನ್ನೂ ಓದಿ: ಮುಷರಫ್‌ಗೆ ಕಾಡುತ್ತಿದೆ ಅಪರೂಪದ ಆರೋಗ್ಯ ಸಮಸ್ಯೆ, ಏನಿದು Amyloidosis?

Exit mobile version