ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಂಡ್ ಆಫ್ ಸೀಸನ್ ಸೇಲ್‌ನಲ್ಲಿ (End Of Season Sale Shopping) ಯರ‍್ರಾಬಿರ‍್ರಿ ಶಾಪಿಂಗ್ ಮಾಡುವ ಯೋಚನೆ ನಿಮಗೇನಾದರೂ ಇದೆಯಾ ಅಥವಾ ಕಂಡ ಕಂಡದ್ದನ್ನೆಲ್ಲಾ ಸುಮ್ಮನೆ ಕೊಳ್ಳಲು ಮುಂದಾಗುವ ಜಾಯಮಾನದವರು ನೀವಾ? ಹಾಗಾದಲ್ಲಿ, ಸೀಸನ್ ಎಂಡ್ ಸೇಲ್ ಶಾಪಿಂಗ್ ಹೋಗುವ ಮುನ್ನ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತೆರಳಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಹೌದು. ಈಗಾಗಲೇ ಮಾನ್ಸೂನ್ ಶುರುವಾಗಿದೆ. ಇದರ ಜೊತೆಗೆ ಕಳೆದ ಸೀಸನ್‌ನ ಫ್ಯಾಷನ್‌ವೇರ್‌ಗಳ ಸೀಸನ್ ಎಂಡ್ ಸೇಲ್ ಆರಂಭಗೊಂಡಿದೆ. ಇದಕ್ಕೆ ಪೂರಕ ಎಂಬಂತೆ, ಅರ್ಧಕ್ಕರ್ಧ ಕಡಿಮೆ ದರದಲ್ಲಿ ಹಾಗೂ ಡಿಸ್ಕೌಂಟ್ ದರದಲ್ಲಿ ಶಾಪಿಂಗ್ ಮಾಲ್‌ಗಳು ಹಾಗೂ ಫ್ಯಾಷನ್ ಸ್ಟೋರ್‌ಗಳು ಗ್ರಾಹಕರಿಗೆ ಅದರಲ್ಲೂ ಫ್ಯಾಷನ್‌ವೇರ್ ಪ್ರಿಯರಿಗೆ ಸಾಕಷ್ಟು ಆಮಿಷ ನೀಡುತ್ತಿವೆ. ಈ ಆಫರ್‌ಗಳಿಗೆ ಶರಣಾಗಿ, ಸುಖಾಸುಮ್ಮನೇ ಹಣ ಪೋಲು ಮಾಡಿಕೊಳ್ಳಬೇಡಿ. ಅಗತ್ಯವೆನಿಸುವಂತದ್ದನ್ನು ಮಾತ್ರ ಖರೀದಿಸಲು ಮುಂದಾಗಿ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್‌ಗಳು.
ಔಟ್ ಆಫ್ ಸೀಸನ್ ಫ್ಯಾಷನ್‌ವೇರ್ಸ್ ಬೇಡ
ಈ ಸೀಸನ್‌ನಿಂದ ಹೊರ ಹೋದ ಹಾಗೂ ಕಳೆದ ಬೇಸಿಗೆಯ ಟ್ರೆಂಡ್‌ನಲ್ಲಿದ್ದ ಔಟ್‌ಫಿಟ್‌ಗಳನ್ನು, ಈ ಮಾನ್ಸೂನ್ ಸೀಸನ್‌ನಲ್ಲಿ ನಿಜವಾಗಿಯೂ ನೀವು ಧರಿಸುತ್ತೀರಾ! ಎಂಬುದನ್ನು ಒಮ್ಮೆ ಯೋಚಿಸಿ. ಕೇವಲ ವಾರ್ಡ್‌ರೋಬ್ ತುಂಬಿಸಲು ಖರೀದಿಸಬೇಡಿ. ಧರಿಸುವುದಾದಲ್ಲಿ ಆದಷ್ಟೂ ಲೇಯರ್ ಲುಕ್‌ಗೆ ಸಾಥ್ ನೀಡುವ ಉಡುಪುಗಳನ್ನು ಕೊಳ್ಳಿ.
ಗಿಫ್ಟ್ ವೋಚರ್‌ಗಳಿಗೆ ಮರುಳಾಗಬೇಡಿ
ಇಂತಿಷ್ಟು ಖರೀದಿಸಿದಲ್ಲಿ ಗಿಫ್ಟ್ ವೋಚರ್ ಸಿಗುತ್ತದೆ ಎಂಬ ಆಮಿಷಗಳಿಗೆ ಕಿವಿ ಕೊಡಬೇಡಿ. ಇದು ಕೇವಲ ಬ್ಯುಸಿನೆಸ್ ಗಿಮಿಕ್. ಆದಷ್ಟೂ ನಿಮ್ಮ ಬಜೆಟ್ ಪ್ಲಾನಿಂಗ್‌ಗೆ ತಕ್ಕಂತೆ ಮಾತ್ರ ಶಾಪಿಂಗ್ ಮಾಡಿ.
ವಿಂಡೋ ಶಾಪಿಂಗ್ ಮಾಡಿ
ಸಮಯವಿದ್ದಾಗ ಸೀಸನ್ ಎಂಡ್ ಸೇಲ್‌ನಲ್ಲಿ, ಕೇವಲ ವಿಂಡೋ ಶಾಪಿಂಗ್ ಮಾಡಿ. ಯಾವ್ಯಾವ ಔಟ್‌ಫಿಟ್ಸ್ ಮಾನ್ಸೂನ್‌ಗೂ ಮುಂದುವರಿಸಬಹುದು ಎಂಬುದನ್ನು ಲೆಕ್ಕ ಹಾಕಿ, ಡಿಸೈಡ್ ಮಾಡಿ.
ಟ್ರಯಲ್ ನೋಡಿ ಖರೀದಿಸಿ
ಸಮ್ಮರ್ ಸೀಸನ್ ಎಂಡ್ ಸೇಲ್‌ನಲ್ಲಿ ಬಹುತೇಕ ಉಡುಪುಗಳು ಧರಿಸಿದಾಗ ಸಮ್ಮರ್ ಲುಕ್ ನೀಡುತ್ತವೆ. ಆದರೂ ಒಂದಿಷ್ಟು ಲೇಯರ್ ಲುಕ್ ಔಟ್‌ಫಿಟ್ಸ್ ಆಯ್ಕೆ ಮಾಡಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದಿಷ್ಟೇ! ಮೊದಲು ಸೆಲೆಕ್ಟ್ ಮಾಡಿದ ಡ್ರೆಸ್‌ಗಳನ್ನು ಟ್ರಯಲ್ ಮಾಡಿ ನೋಡಿ. ಓಕೆಯಾದಲ್ಲಿ ಖರೀದಿಸಿ.
ಆಕ್ಸೇಸರೀಸ್ ಸೆಲೆಕ್ಷನ್
ಸಮ್ಮರ್ ಕ್ಯಾಪ್, ಹ್ಯಾಟ್, ಫಂಕಿ ಜ್ಯುವೆಲರಿಗಳು ಮಾನ್ಸೂನ್‌ಗೆ ಮ್ಯಾಚ್ ಆಗುವುದಿಲ್ಲ. ಸನ್‌ಗ್ಲಾಸ್‌ಗಳು ಯಾವ ಸೀಸನ್ ಆದರೂ ಒಕೆ ಧರಿಸಬಹುದು. ಹಾಗಾಗಿ ಯೋಚಿಸಿ, ಶಾಪಿಂಗ್‌ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Factory: ಹಳೆ ಬಟ್ಟೆ, ಶೂ ಕೊಟ್ರೆ, ಹೊಸ ಬಟ್ಟೆ ಕೊಡ್ತಾರೆ! ಇದು ಫ್ಯಾಷನ್ ಫ್ಯಾಕ್ಟರಿ ಕಮಾಲ್