ಆತ ಆಕೆಯನ್ನು ತುಂಬಾ ಪ್ರೀತಿಸುತ್ತಾನೆ. ಆದರೆ ಹೇಳೋಕೆ ಹಿಂಜರಿಕೆ. ಅಷ್ಟರಲ್ಲೇ ಇನ್ಯಾರೋ ಬಂದು ಆಕೆಯ ಮುಂದೆ ಪ್ರೇಮನಿವೇದನೆ ಮಾಡಿಕೊಂಡು, ಆಕೆಯನ್ನು ಪಟಾಯಿಸಿಯೇ ಬಿಡುತ್ತಾನೆ.
ಇದ್ಯಾವುದೋ ಗೊತ್ತಿರೋ ಫಿಲಂ ಕತೆ ಅಂದುಕೊಂಡ್ರಾ? ನಿಜ, ಎಷ್ಟೊಂದು ಚಲನಚಿತ್ರಗಳು ಇಂಥ ಕತೆಯಿಂದಲೇ ನಡೀತವೆ! ಬಂಧನ, ಅಮೆರಿಕಾ ಅಮೆರಿಕಾ, ನಮ್ಮೂರ ಮಂದಾರ ಹೂವೆ- ಎಲ್ಲವನ್ನೂ ನೆನಪು ಮಾಡಿಕೊಳ್ಳಿ.
ಇದು ನಿಜಜೀವನದಲ್ಲೂ ಘಟಿಸುತ್ತವೆ. ಆಮೇಲೆ ಭಗ್ನಪ್ರೇಮಿಗಳು ಜೀವನವಿಡೀ ಕೊರಗಬೇಕಾಗುತ್ತೆ. ಅಯ್ಯೋ, ಒಂದೇ ಒಂದ್ಸಲ ಹೇಳಿಬಿಡಬೇಕಾಗಿತ್ತು- ಅಂತ ಜೀವನವಿಡೀ ಚಡಪಡಿಸುವಂತಾಗುತ್ತದೆ. ನಿಮ್ಮ ಜೀವನದಲ್ಲೂ ಹಾಗಾಗದೇ ಇರಬೇಕಾದರೆ, ಪ್ರೀತಿಯನ್ನು ಅಭಿವ್ಯಕ್ತಿ ಮಾಡುವುದು ಅಭ್ಯಾಸ ಮಾಡಿಕೊಳ್ಳಿ.
ಇದು ಗೆಳೆಯ ಗೆಳತಿಯ ಪ್ರೀತಿ ಪ್ರೇಮಕ್ಕೆ ಮಾತ್ರವೇ ಮೀಸಲಲ್ಲ. ಅಪ್ಪ- ಮಗಳು, ಅಮ್ಮ- ಮಗ, ಸ್ನೇಹಿತರು, ಎಲ್ಲರ ನಡುವಿನ ಸಂಬಂಧಕ್ಕೂ ಅನ್ವಯವಾಗುತ್ತದೆ.
ಯಾವುದೇ ಒಂದು ಸಂಬಂಧ ಗಟ್ಟಿಯಾಗಿ ಉಳಿಯಬೇಕಾದರೆ ಅಲ್ಲಿ ಪ್ರೀತಿ ಇರಬೇಕು. ಹಾಗೇ ನಂಬಿಕೆಯೂ ಇರಬೇಕು. ಇವೆರಡರಲ್ಲಿ ಒಂದು ಇಲ್ಲದಿದ್ದರೂ ಸಂಬಂಧ ಉಳಿಯುವುದು ಕಷ್ಟ. ಆದರೆ ಆ ಪ್ರೀತಿ ಇರುವುದು ಗೊತ್ತಾಗಬೇಕು. ಆಗಾಗ ಕಾಣುತ್ತಿರಬೇಕು. ಹಾಗೆ ಕಂಡರೆ ಮಾತ್ರ ಪ್ರೀತಿ ಇದೆ ಎಂದು ಖಚಿತವಾಗುತ್ತದೆ. ಅಕಸ್ಮಾತ್ ಪ್ರೀತಿ ಇರುವುದು ಗೊತ್ತಾಗದಿದ್ದರೆ? ತುಂಬಾ ಸುಲಭ. ಬ್ರೇಕ್ ಅಪ್ ಅಷ್ಟೇ. ನಂತರ ಪ್ರೀತಿ ಸಿಗುವ ಮತ್ತೊಂದು ಗಮ್ಯದತ್ತ ಪಯಣ. ಇದು ಸದ್ಯದ ರಿಲೇಷನ್‌ಶಿಪ್ ರಿವಾಜು.
ಇಂಡಿಯನ್ ಜರ್ನಲ್ ಆಫ್ ಹೆಲ್ತ್, ಸೆಕ್ಷುವಾಲಿಟಿ & ಕಲ್ಚರ್ ನಡೆಸಿದ ಒಂದು ಸಂಶೋಧನೆಯ ಪ್ರಕಾರ ಸುಮಾರು 30%ರಷ್ಟು ಬ್ರೇಕ್‌ಅಪ್ ಜಗಳ ಹಾಗೂ ಅಸಾಮರಸ್ಯದ ಕಾರಣಕ್ಕೆ ಆಗಿದೆ. ಭಾವನೆಗಳು ಇಲ್ಲ ಅಥವಾ ರಿಲೇಷನ್‌ಶಿಪ್ ಬೋರು ಎಂಬ ಕಾರಣಕ್ಕೆ ಸುಮಾರು 26%ರಷ್ಟು ಬ್ರೇಕ್‌ಅಪ್ ಆಗಿದೆ.
ಹಾಗಾದರೆ ಪ್ರೀತಿಯನ್ನು ವ್ಯಕ್ತ ಮಾಡದಿರುವುದು ತಪ್ಪೇ?
ಅಮೆರಿಕದ ಪ್ರಖ್ಯಾತ ಲೇಖಕಿ ವರ್ಜಿನಿಯಾ ಸತಿರ್ ಹೇಳಿದ ಒಂದು ಮಾತು ಹೀಗಿದೆ:
“Communication is to relationships what breath is to life.”
ಅಂದರೆ, ʼಸಂಬಂಧಗಳಿಗೆ ಸಂವಹನ ಎಂಬುದು ಜೀವಕ್ಕೆ ಉಸಿರಾಟ ಇದ್ದಂತೆ.ʼ ಮನುಷ್ಯ ಜೀವಂತವಾಗಿರಲು ಉಸಿರಾಟ ಎಷ್ಟು ಮುಖ್ಯವೋ, ಒಂದು ಸಂಬಂಧ ಜೀವಂತವಾಗಿರಲು ಸರಿಯಾದ ಸಂವಹನವೂ ಅಷ್ಟೇ ಮುಖ್ಯ.
ಯಾವುದೇ ವಿಷಯವಿರಲಿ, ಇರುವಿಕೆ ಅರಿವಾಗದೇ ಇದ್ದರೆ ಅದಕ್ಕೆ ಪ್ರತಿಕ್ರಿಯೆ ನೀಡುವುದು ಕಷ್ಟವಾಗುತ್ತದೆ. ಪ್ರಿತಿಯೂ ಕೂಡ ಅದೇ ರೀತಿ. ಅದು ಇದೆ ಎಂದು ಇನ್ನೊಬ್ಬರಿಗೆ ಗೊತ್ತಾಗುವುದು ಅದು ಕಂಡಾಗ. ಬಾಯಿಮಾತಿನಲ್ಲಿಯೇ ಹೇಳಬೇಕು ಎಂಬ ನಿಯಮವಿಲ್ಲ. ಪ್ರೀತಿಯನ್ನು ವ್ಯಕ್ತ ಮಾಡಲು ಅನೇಕ ಮಾರ್ಗಗಳಿವೆ.
ಕೆಲವರ ರೀತಿ ಹೀಗಿರುತ್ತದೆ:
- ಪ್ರತಿದಿನ ಬೆಳಗ್ಗೆ ಗುಡ್ ಮಾರ್ನಿಂಗ್ ಮೆಸೇಜ್‌ನಿಂದ ಆರಂಭವಾಗಿ ರಾತ್ರಿ ಗುಡ್ ನೈಟ್ ಮೆಸೇಜ್ ಕಳಿಸುವವರೆಗೂ ಚಾಟಿಂಗ್. ಅದರ ಜತೆ ಒಂದಿಷ್ಟು ಹಾರ್ಟ್ ಇಮೋಜಿಗಳನ್ನು ಕಳಿಸುವುದು, ಸ್ಟಿಕ್ಕರ್‌ಗಳನ್ನು ಕಳಿಸುವುದು.
- ಆಗಾಗ ಮೆಸೇಜ್‌ನಲ್ಲಿ ʼಏನು ಮಾಡ್ತಿದ್ದಿಯಾ? ಊಟಾ ಆಯ್ತಾ? ಕಾಫಿ ಆಯ್ತಾ? ಆಫೀಸಲ್ಲಿ ಕೆಲಸ ಜಾಸ್ತಿ ಇದೆಯಾ? ಕಾಲೇಜಲ್ಲಿ ಟೀಚರ್ ಬಂದಿಲ್ವಾ?ʼ ಪ್ರಶ್ನೆಗಳನ್ನು ಕೇಳುವುದು. ಇದು ನಿತ್ಯವೂ ಜೀವನದಲ್ಲಿ ನಡೆಯುವುದರ ಬಗ್ಗೆ ಸರಿಯಾದ ಮಾಹಿತಿ ಇರಬೇಕು ಎಂಬ ಉದ್ದೇಶ. ಆಗ ಪ್ರೀತಿಸುವವರಿಗೆ ಸಂಪೂರ್ಣ ಮಾಹಿತಿ ಇರುತ್ತದೆ, ಅದರಿಂದ ಅವರನ್ನು ಹೆಚ್ಚು ಅರ್ಥ ಮಾಡಿಕೊಳ್ಳಬಹುದು ಎಂಬ ಯೋಚನೆ.
- ಜ್ವರ ಬಂದಾಗ ಅಥವಾ ತಲೆನೋವು ಬಂದಾಗ ಫೋನ್ ಮಾಡಿ ಮಾತನಾಡುವುದು, ಔಷಧಿ ತೆಗೆದುಕೊಳ್ಳಲು ಜ್ಞಾಪಿಸುವುದು, ವಿಶ್ರಾಂತಿ ಪಡೆಯಲು ನೆನಪಿಸುವುದು. ಇದು ಒಬ್ಬರಿಗೆ ಇನ್ನೊಬ್ಬರ ಮೇಲಿರುವ ಕಾಳಜಿಯ ಸಂಕೇತ.
- ಇನ್ನು ವಿಡಿಯೋ ಕಾಲ್ ಮಾಡಿ ಮಾತನಾಡುವುದು, ಸೆಲ್ಫೀ ಕಳುಹಿಸುವುದೆಲ್ಲವೂ ಮಾಮೂಲಿ ವರ್ತನೆಗಳು. ಇದು ಲಾಂಗ್ ಡಿಸ್ಟನ್ಸ್ ರಿಲೇಶನ್‌ಶಿಪ್ ಅಲ್ಲಿರುವವರಿಗೆ ಅನುಕೂಲವಾಗುವ ವ್ಯವಸ್ಥೆ.
- ಆಗಾಗ ಭೇಟಿಯಾಗವುದು. ಏನೂ ವಿಷಯ ಇಲ್ಲದಿದ್ದರೂ ಗಂಟೆಗಟ್ಟಲೇ ಮಾತನಾಡುವುದು. ಒಂದಿಷ್ಟು ಹೊಸ ಜಾಗಗಳನ್ನು ಹುಡುಕುವುದು, ಒಟ್ಟಿಗೆ ಸಿನಿಮಾ ನೋಡುವುದು, ಒಟ್ಟಿನಲ್ಲಿ ಜತೆಯಲ್ಲಿ ಹೆಚ್ಚಿನ ಸಮಯ ಕಳೆಯುವುದು ಒಬ್ಬರು ಮತ್ತೊಬ್ಬರ ಇಷ್ಟ-ಕಷ್ಟಗಳನ್ನು ಅರ್ಥಮಾಡಿಕೊಳ್ಳುವ ಪರಿ.
- ಪ್ರೇಮಿಗಳಾಗಿದ್ದರೆ ಎರಡು ದಿನಕ್ಕೊಮ್ಮೆಯಾದರೂ ಒಬ್ಬರು ಇನ್ನೊಬ್ಬರಿಗೆ ʼಐ ಲವ್ ಯೂʼ ಎಂದು ಹೇಳುವುದು. ಇದು ಬಿಪಿ ಅಥವಾ ಶುಗರ್ ಖಾಯಿಲೆಗೆ ತೆಗುದಕೊಳ್ಳುವ ಮಾತ್ರೆಯಿದ್ದಂತೆ. ಅತ್ಯವಶ್ಯಕ.
ಇವಿಷ್ಟು ಸಾಮಾನ್ಯವಾಗಿ ರೀಲೇಶನ್‌ಶಿಪ್‌ನಲ್ಲಿ ಕಾಣುವ ಸಂಗತಿಗಳು. ಒಂದು ಒಳ್ಳೆಯ ರಿಲೇಶನ್‌ಶಿಪ್‌ನ ಅಲಿಖಿತ ನಿಯಮ ಎಂದೂ ಹೇಳಬಹುದು.
ಆದರೆ ಜೀವನ ಪರ್ಯಂತ ಹೀಗೇ ಇರಬೇಕಾ?
ಒಂದು ಹೊಸ ಸಂಬಂಧ ಶುರುವಾದಾಗ, ಅಲ್ಲಿ ಉತ್ಸಾಹ ಇರುತ್ತದೆ, ನಿರೀಕ್ಷೆ ಇರುತ್ತದೆ. ತನ್ನ ಪ್ರೇಯಸಿ ಅಥವಾ ಪ್ರಿಯಕರ ಹೀಗಿದ್ದರೆ ಚೆನ್ನ, ತನ್ನೊಂದಿಗೆ ಹೆಚ್ಚು ಮಾತನಾಡಬೇಕು, ಸಮಯ ನೀಡಬೇಕು ಎಂಬ ಆಸೆಯಿರುತ್ತದೆ. ಅದು ತಪ್ಪೇನಲ್ಲ. ಆದರೆ, ಇವೆಲ್ಲವೂ ಎಲ್ಲಿಯವರೆಗೆ? ಎಂಬ ಪ್ರಶ್ನೆ ಹುಟ್ಟುತ್ತದೆ. ಅದು ಒಬ್ಬರೊನ್ನೊಬ್ಬರು ಅರ್ಥಮಾಡಿಕೊಳ್ಳುವವರೆಗೆ ಅನಿವಾರ್ಯ.
ಪ್ರೀತಿಯಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಯಾವುದೇ ನಿರ್ದಿಷ್ಟ ನಿಯಮವಿಲ್ಲ. ಹೇಗೂ ಇರಬಹುದು. ಆದರೆ, ಒಬ್ಬರನ್ನೊಬ್ಬರು ಸರಿಯಾಗಿ ಅರ್ಥಮಾಡಿಕೊಳ್ಳುವವರೆಗೆ ಈ ಅಲಿಖಿತ ನಿಯಮವನ್ನು ಪಾಲಿಸುವುದು ಸೂಕ್ತ. ಕ್ರಮೇಣ ಈ ನಿಯಮಗಳಿಂದ ಹೊರಬಂದು ರಿಲೇಷನ್‌ಶಿಪ್ ನಿತ್ಯನೂತನವಾಗಿರಿಸಲು ಅನೇಕ ಮಾರ್ಗಗಳು ಜೋಡಿಗಳೇ ಕಂಡುಕೊಳ್ಳುತ್ತಾರೆ. ಮುಖ್ಯವಾಗಿ ಪ್ರೀತಿಯಲ್ಲಿ ಸಂತೋಷವಿರಬೇಕು ಹಾಗೂ ನೆಮ್ಮದಿ ಇರಬೇಕು.
ಒಂದು ಹಂತದಲ್ಲಿ ಬಿಪಿ ಮಾತ್ರೆಯನ್ನೂ ಕಡಿಮೆಮಾಡಬಹುದು. ಆದರೆ, ಆಗಾಗ ತೆಗುದುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು.
ಪ್ರೀತಿಯಲ್ಲಿ ಮಾತು ಹಾಗೂ ಮೌನ ಎರಡೂ ಸಮಾನವಾಗಿ ಮುಖ್ಯವಾಗಿರುತ್ತದೆ. ಯಾವಾಗ ಮಾತನಾಡಬೇಕು? ಯಾವಾಗ ಮೌನವಾಗಿರಬೇಕು? ಎನ್ನುವುದು ಅರ್ಥ ಮಾಡಿಕೊಂಡಷ್ಟು ಸುಖವಾಗಿರಬಹುದು. ಕೆಲವೊಮ್ಮೆ ಕೆಲವು ಪ್ರಶ್ನೆಗೆ ಉತ್ತರ ನೀಡದೇ ಇರುವುದು ಅನುಮಾನಗಳಿಗೆ ದಾರಿ ಮಾಡಿಕೊಡುತ್ತದೆ. ನಂಬಿಕೆ ಕಡಿಮೆಯಾಗುವ ಸಾಧ್ಯತೆಯಿರುತ್ತದೆ.
ಇತರೆ ಸಂಬಂಧಗಳ ಪ್ರೀತಿ ಹೇಗೆ?
ಒಬ್ಬ ತಾಯಿ ತನ್ನ ಮಗುವನ್ನು ಪ್ರೀತಿಸುವ ರೀತಿ ಬೇರೆ. ಹಾಗೇ ಒಬ್ಬ ತಂದೆ ತನ್ನ ಮಗುವನ್ನು ಪ್ರೀತಿಸುವ ರೀತಿಯೂ ಬೇರೆ.
ತಾಯಿಯಾದರೆ ಮಗುವನ್ನು ಕಾಳಜಿಯಿಂದ ನೋಡುತ್ತಾಳೆ, ಮುದ್ದಿಸುತ್ತಾಳೆ, ಮಗುವಿಗೆ ಇಷ್ಟವಾಗುವ ತಿಂಡಿ ತಿನಿಸುಗಳನ್ನು ಮಾಡಿ ಬಡಿಸುತ್ತಾಳೆ, ಅಂಗಡಿಯಲ್ಲಿ ಕೇಳಿದ್ದನ್ನು ಕೊಡಿಸುತ್ತಾಳೆ. ವಿವಿಧ ರೀತಿಯಲ್ಲಿ ತಾಯಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾಳೆ.
ಆದರೆ ತಂದೆ ಹಾಗಲ್ಲ. ಸಾಮಾನ್ಯವಾಗಿ ತಂದೆ ತನ್ನ ಭಾವನೆಗಳನ್ನು ವ್ಯಕ್ತ ಪಡಿಸುವಲ್ಲಿ ಸಣ್ಣ ಹಿಂದೇಟು ಹಾಕುತ್ತಾನೆ. ಅಥವಾ ಬಹಿರಂಗವಾಗಿ ಮಗು ಕೇಳಿದ್ದನ್ನು ಕೊಡಿಸುವ ಮೂಲಕವೋ ಅಥವಾ ಮಗುವನ್ನು ಮುದ್ದಿಸುವ ಮೂಲಕವೋ ತನ್ನ ಪ್ರೀತಿಯನ್ನು ವ್ಯಕ್ತ ಮಾಡುವುದಿಲ್ಲ. ಹಾಗಿದ್ದರೆ ತಂದೆಗೆ ಮಗುವಿನ ಪ್ರೀತಿ ಇಲ್ಲವೇ? ಖಂಡಿತ ಇದೆ, ಆದರೆ ಅದು ಕಾಣುವುದಿಲ್ಲ. ಮೊಸರೊಳಗಿರುವ ಬೆಣ್ಣೆಯಂತೆ. ಇದೆ, ಅದರೆ ಕಾಣುವುದಿಲ್ಲ.
ಹೀಗೆ ಸಹೋದರ, ಸಹೋದರಿಯ ಪ್ರೀತಿ ವ್ಯಕ್ತಪಡಿಸುವ ರೀತಿಯೂ ವಿಭಿನ್ನವಾಗಿರುತ್ತದೆ.
ಪ್ರೀತಿಯನ್ನು ವ್ಯಕ್ತಪಡಿಸುವ ತವಕದಲ್ಲಿ ಸ್ವಂತಿಕೆಯನ್ನು ಕಳೆದುಕೊಳ್ಳದಂತೆ ಎಚ್ಚರವಹಿಸುವುದು ಒಳ್ಳೆಯದು. ಪ್ರೀತಿ ಇದ್ದರೆ ಅದು ತಾನಾಗಿಯೇ ದಾರಿ ಕಂಡುಕೊಂಡು ವ್ಯಕ್ತವಾಗುತ್ತದೆ.
ಇದನ್ನೂ ಓದಿ: ಕನ್ನಡದ ಹುಡುಗರಿಗೆ ಬೇಕು ಕನ್ನಡದ ಡೇಟಿಂಗ್ ಆ್ಯಪ್!