Site icon Vistara News

Eye Care: ಡಿಜಿಟಲ್‌ ಜಗತ್ತಿನಲ್ಲಿ ಕಣ್ಣುಗಳ ರಕ್ಷಣೆ ಹೇಗೆ?

Eye Care: How to protect eyes in digital world?

ಕೋವಿಡ್‌ ಮತ್ತು ನಂತರ ದಿನಗಳಲ್ಲಿ ಕಂಪ್ಯೂಟರ್‌ ಬಳಕೆ ಹೆಚ್ಚಾಗಿದೆ. ಇದರ ನೇರ ಪರಿಣಾಮವಾಗಿ ದೊಡ್ಡವರು ಚಿಕ್ಕವರೆನ್ನದೆ ಬಹಳಷ್ಟು ಮಂದಿಯಲ್ಲಿ ಕಣ್ಣಿನ ಸಮಸ್ಯೆ ಕಾಣಿಸುತ್ತಿದೆ. ಒಂದೇ ಸಮನೆ ಕಂಪ್ಯೂಟರ್‌ ಪರದೆಯನ್ನು ನೋಡುವುದರಿಂದ ಆಗುವ ದುಷ್ಪರಿಣಾಮವಿದು. ಬೇರೆ ಉಪಾಯವಿಲ್ಲ, ಆಧುನಿಕ ಬದುಕಿನ ಹೆಚ್ಚಿನ ಉದ್ಯೋಗಗಳು ಮತ್ತು ಶಿಕ್ಷಣ ವ್ಯವಸ್ಥೆಯು ಕಂಪ್ಯೂಟರ್‌, ಟ್ಯಾಬ್‌, ಮೊಬೈಲ್‌ ಪರದೆಗೆ ಕಣ್ಣು ಕೀಲಿಸಿಕೊಂಡಿರುವ ಅನಿವಾರ್ಯತೆಯನ್ನು ತಂದೊಡ್ಡುತ್ತಿವೆ. ಇದರಿಂದಾಗಿ ಕಣ್ಣುರಿ, ಕಣ್ಣುಗಳಲ್ಲಿ ಆಯಾಸ, ಕಣ್ಣು ಒಣಗಿದಂತಾಗುವುದು, ತಲೆನೋವು ಮುಂತಾದ ಹಲವಾರು ಸಮಸ್ಯೆಗಳನ್ನು ಕಾಣಿಸಿಕೊಳ್ಳುತ್ತಿವೆ. ದಿನೇದಿನೇ ಹೆಚ್ಚುತ್ತಿರುವ ಈ ರೀತಿಯ ಡಿಜಿಟಲ್‌ ಆಯಾಸವನ್ನು ಕಂಪ್ಯೂಟರ್‌ ವಿಷನ್‌ ಸಿಂಡ್ರೋಮ್‌ ಎನ್ನಲಾಗುತ್ತದೆ(Eye Care).

ಹೀಗೇಕಾಗುತ್ತದೆ?

ನಾವು ಸಾಮಾನ್ಯವಾಗಿ ನಿಮಿಷಕ್ಕೆ ೧೫-೨೦ ಬಾರಿ ಕಣ್ಣು ಮಿಟುಕಿಸುತ್ತೇವೆ. ಅಂದರೆ, ನೀರಿನ ಕಣಗಳು ಕಣ್ಣನ್ನು ಪದೇಪದೆ ಶುಚಿಗೊಳಿಸಿ, ಕಣ್ಣುರಿ ಮತ್ತು ನೇತ್ರಗಳು ಒಣಗುವುದನ್ನು ತಪ್ಪಿಸುತ್ತವೆ. ಆದರೆ ಓದುವಾಗ, ಆಡುವಾಗ ಮತ್ತು ಕಂಪ್ಯೂಟರ್‌ ಪರದೆ ನೋಡುವಾಗ ಕಣ್ಣು ಮಿಟುಕಿಸುವ ಪ್ರಮಾಣ ಕಡಿಮೆಯಾಗುತ್ತದೆ. ಪರದೆಯನ್ನು ನೋಡುವುದು, ಪುಸ್ತಕ ಓದಿದಷ್ಟು ಸರಳವಲ್ಲವಲ್ಲ. ಹಲವಾರು ಬಣ್ಣಗಳು, ಥಟ್ಟೆಂದು ಚಲಿಸುವ ಅಕ್ಷರ ಅಥವಾ ಚಿತ್ರಗಳು, ಹೊಳೆಯುವ ಮೇಲ್ಮೈ, ಬೆಳಕು ಬೀರುವ ಪರದೆ- ಇವೆಲ್ಲಾ ಸೇರಿ ಕಣ್ಣಿನ ಸಂಕಷ್ಟವನ್ನು ನಿರ್ದಯವಾಗಿ ಹೆಚ್ಚು ಮಾಡುತ್ತವೆ.

ಏನು ಮಾಡಬಹುದು?

ಕಣ್ಣಿನ ಸುರಕ್ಷತೆಗಾಗಿ ಪರದೆ ನೋಡುವುದರಿಂದ ಆಗಾಗ ಬ್ರೇಕ್‌ ತೆಗೆದುಕೊಳ್ಳಿ. ೨೦-೨೦-೨೦ ನಿಮಯವನ್ನು ಕಡ್ಡಾಯವಾಗಿ ಪಾಲಿಸಿ. ಅಂದರೆ, ಪ್ರತಿ ೨೦ ನಿಮಿಷಗಳಿಗೆ ಒಮ್ಮೆ ಕನಿಷ್ಟ ೨೦ ಅಡಿ ದೂರದ ವಸ್ತುವನ್ನು ಕನಿಷ್ಟ ೨೦ ಸೆಕೆಂಡ್‌ಗಳ ಕಾಲ ವೀಕ್ಷಿಸಿ. ಪ್ರತಿ ಎರಡು ತಾಸುಗಳಿಗೆ ಒಮ್ಮೆ ೧೫ ನಿಮಿಷದ ವಿರಾಮ ಬೇಕೆಬೇಕು. ಯಾವ ಕೋಣೆಯಲ್ಲಿ ಕಂಪ್ಯೂಟರ್‌ ಬಳಕೆ ಮಾಡುತ್ತೀರೋ, ಅಲ್ಲಿ ಆಗಾಗ ಹ್ಯುಮಿಡಿಫಯರ್‌ ಬಳಕೆ ಮಾಡಿ. ಇದರಿಂದ ಆ ಜಾಗದಲ್ಲಿ ಒಣಹವೆ ಇರುವುದಿಲ್ಲ. ಕಣ್ಣುಗಳು ಒಣಗುವುದೂ ಕಡಿಮೆಯಾಗುತ್ತದೆ.

ಬೆಚ್ಚಗಿನ ಮಸಾಜ್‌

ದೀರ್ಘ ಕಾಲ ಕಂಪ್ಯೂಟರ್‌ ನೋಡುವ ಅನಿವಾರ್ಯತೆಯಿದ್ದರೆ, ಬೆಚ್ಚಗಿನ ನೀರಲ್ಲಿ ಮೃದು ಮತ್ತು ಸ್ವಚ್ಛವಾದ ಹತ್ತಿ ಬಟ್ಟೆಯನ್ನು ಅದ್ದಿ, ಹಿಂಡಿ. ಅದು ಬೆಚ್ಚಗಿರುವವರೆಗೆ ಕಣ್ಣಿಗೆ ಇರಿಸಿಕೊಳ್ಳಿ. ಒಂದೊಂದು ಕಣ್ಣಿಗೂ ಕನಿಷ್ಟ ಮೂರು ಬಾರಿ ಮಾಡಿ. ಇದರಿಂದ ಕಣ್ಣಿನ ಆಯಾಸ ಕಡಿಮೆ ಮಾಡಬಹುದು. ಮಾತ್ರವಲ್ಲ, ಕೈ ಶುದ್ಧಗೊಳಿಸಿಕೊಳ್ಳಿ. ಕಣ್ಣಿನ ಸುತ್ತಲೂ ಮೃದುವಾಗಿ ಮಸಾಜ್‌ ಮಾಡಿ. ಅಗತ್ಯವಿದ್ದರೆ ಒಂದೆರಡು ಹನಿ ಬಾದಾಮಿ ಎಣ್ಣೆಯನ್ನು ಮಸಾಜ್‌ಗೆ ಉಪಯೋಗಿಸಬಹುದು. ಇದರಿಂದ ಈ ಭಾಗದಲ್ಲಿ ರಕ್ತ ಸಂಚಾರ ವೃದ್ಧಿಸಿ. ಆಯಾಸ ಕಡಿಮೆಯಾಗುತ್ತದೆ. ಕಣ್ಣಿನ ಸುತ್ತಲೂ ಉಬ್ಬಿದಂತಾಗಿದ್ದರೆ, ಅಲೊವೇರಾ ಜೆಲ್‌ ಹಾಕಿಯೂ ಮಸಾಜ್‌ ಮಾಡಬಹುದು. ಆದರೆ ಇವೆಲ್ಲಾ ಕಣ್ಣಿನ ಹೊರಭಾಗಕ್ಕೇ ಸೀಮಿತಗೊಳಿಸಬೇಕು. ವೈದ್ಯರು ಕೊಟ್ಟ ಡ್ರಾಪ್ಸ್‌ ಬಿಟ್ಟರೆ, ಇನ್ನೇನ್ನೇನ್ನೂ ಕಣ್ಣೊಳಗೆ ಹಾಕುವಂತಿಲ್ಲ.

ಸೂರ್ಯಸ್ನಾನ

ಇದರ ಹೆಸರು ದೊಡ್ಡದಾದರೂ ವಿಷಯ ಸರಳ! ಬೆಳಗಿನ ಎಳೆ ಬಿಸಿಲಿನಲ್ಲಿ ಕಣ್ಣು ಮುಚ್ಚಿಕೊಂಡು, ಕಣ್ಣಿಗೆ ಬಿಸಿಲು ತಾಗುವಂತೆ ಕೆಲವು ನಿಮಿಷ ನಿಲ್ಲುವುದು. ಹೀಗೆ ನಿಲ್ಲುವಾಗ ಕನ್ನಡಕ, ಲೆನ್ಸ್‌ಗಳನ್ನು ತೆಗೆದಿರಿಸಬೇಕು. ಆದರೆ ಯಾವುದೇ ಕಾರಣಕ್ಕೂ ನೇರವಾಗಿ ಸೂರ್ಯನನ್ನು ದಿಟ್ಟಿಸುವಂತಿಲ್ಲ. ಕಣ್ಣು ಮುಚ್ಚಿ ನಿಂತಾಗ, ರೆಪ್ಪೆ ಬಿಸಿಯಾದರೆ ಸಾಕು. ಮಕ್ಕಳಿಗೂ ಈ ಕ್ರಮ ಉಪಯುಕ್ತ. ರೆಟಿನಾದಿಂದ ಬಿಡುಗಡೆಯಾಗುವ ಡೋಪಮಿನ್‌ ಚೋದಕಗಳು ದೃಷ್ಟಿಯನ್ನು ಚುರುಕಾಗಿಸುತ್ತವೆ.

ಇದನ್ನೂ ಓದಿ: Eye health foods | ಕಣ್ಣು ಆರೋಗ್ಯವಾಗಿ ಇರಬೇಕಿದ್ದರೆ ಇವನ್ನೆಲ್ಲ ತಿನ್ನುತ್ತಿರಿ!

ದೂರವಿರಲಿ

ಈ ಪರದೆಗಳನ್ನು ಅತ್ಯಂತ ಹತ್ತಿರದಿಂದ ನೋಡುವ ಅಗತ್ಯವಿಲ್ಲ. ಕಣ್ಣಿನಿಂದ ಇವು ಕನಿಷ್ಟ ೨೫ ಇಂಚಾದರೂ ದೂರವಿರಬೇಕು. ಅಂದಾಜಿಗೆ ಹೇಳುವುದಾದರೆ ಒಂದು ತೋಳಿನಷ್ಟು ದೂರವಿರಬೇಕು. ಕಂಪ್ಯೂಟರ್‌ ಪರದೆಯ ನಡುವಿನ ಭಾಗವು ಕಣ್ಣಿನ ಮಟ್ಟಕ್ಕಿಂದ ೧೦ ಡಿಗ್ರಿಯಷ್ಟು ಕೆಳಗಿದ್ದರೆ ಸೂಕ್ತ. ಪರದೆಯ ಹೊಳಪನ್ನು ಕಡಿಮೆ ಮಾಡಲು ಸ್ಕ್ರೀನ್‌ ಫಿಲ್ಟರ್‌ ಬಳಸುವುದು ಒಳ್ಳೆಯದು. ಮಾತ್ರವಲ್ಲ, ಸುತ್ತಲಿನ ಬೆಳಕಿಗಿಂತ ಪರದೆಯ ಬೆಳಕು ಕಡಿಮೆಯೇ ಇರಬೇಕು. ನಿಯಮಿತವಾಗಿ ಕಣ್ಣುಗಳ ತಪಾಸಣೆ ಮಾಡಿಸಿಕೊಂಡರೆ, ಮುಂದಾಗುವ ತೊಂದರೆಗಳನ್ನು ತಪ್ಪಿಸುವುದಕ್ಕೆ ಅನುಕೂಲ. ಜೊತೆಗೆ, ಕಂಪ್ಯೂಟರ್‌ ಬಳಕೆಗೆ ಸರಿಹೊಂದುವಂಥ ಕನ್ನಡಕ ಧರಿಸುವ ಬಗ್ಗೆ ವೈದ್ಯರಲ್ಲಿ ಚರ್ಚಿಸಬಹುದು.

Exit mobile version