ಶೀಲಾ ಸಿ. ಶೆಟ್ಟಿ, ಬೆಂಗಳೂರು
ರೇಷ್ಮೆ ಸೀರೆಯನ್ನು ಧರಿಸಿ ಹೆಜ್ಜೆ ಹಾಕುತ್ತಿದ್ದರೆ ಥೇಟ್ ರಂಭೆ, ಊರ್ವಶಿ ಹಾಗೂ ಮೇನಕೆಯರೇ ಧರೆಗಿಳಿದಂತಹ ಭಾವ ನೋಡುಗರಲ್ಲಿ ಮೂಡಿತ್ತು. ಮುಡಿಯಿಂದ ಕಾಲಿನವರೆಗೂ ದೇಸಿ ಉಡುಪಿನಲ್ಲಿ, ಸಾಂಪ್ರದಾಯಿಕ ಅಭರಣಗಳನ್ನು ಧರಿಸಿದ ಮಾನಿನಿಯರು ರ್ಯಾಂಪ್ ವಾಕ್ ಮಾಡುತ್ತಾ ಭಾರತೀಯ ಸಂಸ್ಕೃತಿಯನ್ನು(Indian culture) ಎತ್ತಿ ಹಿಡಿದರು. ಜತೆಗೆ ಸೀರೆಯನ್ನು ಯಾವ ಶೈಲಿಯಲ್ಲೆಲ್ಲಾ ಉಟ್ಟು ವಾಕ್ ಮಾಡಬಹುದು ಎಂಬುದನ್ನು ರ್ಯಾಂಪ್ ಮೇಲೆ ತೋರಿಸಿಕೊಟ್ಟರು. ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ರೇಷ್ಮೆ ಸೀರೆಗಳಿಂದಿಡಿದು ನಾನಾ ವರ್ಣದ ಡಿಸೈನ್‌ನ ಶೇಡ್‌ಗಳ ಡಿಸೈನರ್ ಸೀರೆಗಳಲ್ಲಿ ಹೆಜ್ಜೆ ಹಾಕಿ ಎಲ್ಲರ ಮನ ಸೆಳೆದರು.
ಅಂದ ಹಾಗೆ, ಮಹಿಳೆಯರನ್ನು ಪ್ರೋತ್ಸಾಹಿಸುವ ಈ ವರ್ಣಮಯ ಫ್ಯಾಷನ್ ಶೋ ಬೆಂಗಳೂರಿನ ಸ್ಮೃತಿ ಸಾಧನ ಸಂಸ್ಥೆಯ ಆಶ್ರಯದಲ್ಲಿ ನಡೆಯಿತು.
ಫ್ಯಾಷನ್ ಡಿಸೈನರ್ ಶೋ
ಕೌಸ್ತುಭ, ಶ್ರದ್ಧಾ, ವಲ್ಲಿ, ನತಾಶಾ, ಮಲ್ಲಿಕ್, ದಿವ್ಯಾ, ರಮ್ಯಾ, ಭಕ್ತ್ ಅಲಿ ಸೇರಿದಂತೆ ನಾನಾ ಡಿಸೈನರ್‌ಗಳು ಈ ಫ್ಯಾಷನ್ ಶೋನಲ್ಲಿ ಪಾಲ್ಗೊಂಡು ತಮ್ಮ ಡಿಸೈನರ್ ಸೀರೆಗಳನ್ನು ಪ್ರದರ್ಶಿಸಿದರು. ಈ ಮಧ್ಯೆ ಮಾಡೆಲ್ ಸಿಂಪಿತಾ ಶೋ ಸ್ಟಾಪರ್ ಆಗಿ ವಾಕ್ ಮಾಡಿದ್ದು ನೋಡುಗರ ಹುಬ್ಬೇರಿಸಿತ್ತು. ಈ ಶೋ ಅತಿಥಿಯಾಗಿ ಆಗಮಿಸಿದ್ದ ನಟಿ ರಾಗಿಣಿ ದ್ವಿವೇದಿಯವರ ಮೆಚ್ಚುಗೆ ಪಡೆಯಿತು.
“ಡಿಸೈನರ್ ಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಆಗಾಗ ಮಹಿಳೆಯರ ಸಬಲೀಕರಣಕ್ಕೆ ಕನ್ನಡಿ ಹಿಡಿಯುವ ಜತೆಗೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತಹ ಫ್ಯಾಷನ್ ಶೋಗಳನ್ನು ನಡೆಸುತ್ತಿದೆ. ವಿಶೇಷ ಎಂದರೇ ಈ ಶೋನಲ್ಲಿ ಸಾಕಷ್ಟು ಉದಯೋನ್ಮುಖ ಡಿಸೈನರ್‌ಗಳು ಭಾಗವಹಿಸುತ್ತಾರೆ. ಇದರಿಂದ ಅವರಿಗೆ ತಮ್ಮತಮ್ಮ ಕ್ಷೇತ್ರಗಳಲ್ಲಿ ಮುಂದುವರಿಯಲು ಉತ್ತೇಜನ ನೀಡಿದಂತಾಗುತ್ತದೆ’’ ಎನ್ನುತ್ತಾರೆ ಸ್ಮೃತಿ ಸಾಧನ ಸಂಸ್ಥೆಯ ರೂವಾರಿ ಶಿವಕುಮಾರ್.
ಇನ್ನು ಡಿಸೈನರ್ ಕಮ್ ಮಾಡೆಲ್ ಪ್ರಿಯ ಕುಮಾರ್ ಹೇಳುವಂತೆ: ಇಂತಹ ಶೋಗಳಲ್ಲಿ ವಯಸ್ಸಿನ ಭೇದ-ಭಾವವಿಲ್ಲದೇ ಮಹಿಳೆಯರು ಭಾಗವಹಿಸುವುದರಿಂದ ಅವರಲ್ಲಿ ಜೀವನೋತ್ಸಾಹ ಹೆಚ್ಚುತ್ತದೆ.
ಒಟ್ಟಿನಲ್ಲಿ, ಮಹಿಳೆಯರೇ ಆವರಿಸಿಕೊಂಡಿದ್ದ ಈ ಫ್ಯಾಷನ್ ಶೋ ಸಂಸ್ಕೃತಿ ಬಿಂಬಿಸುವ ವೇದಿಕೆಯಾಗಿ ಪರಿವರ್ತನೆಗೊಂಡಿತ್ತು ಎನ್ನಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| ಹೊಸ ಟ್ರೆಂಡ್ ಹುಟ್ಟುಹಾಕಿದ ಹೂಲಾ ಹೂಪ್ ರ್‍ಯಾಂಪ್ ವಾಕ್