Site icon Vistara News

Fashion Icon | ಬ್ರಿಟಿಷ್‌ ಫ್ಯಾಷನ್‌ ಅವಾರ್ಡ್ ಸಮಾರಂಭದಲ್ಲಿ ಗಮನ ಸೆಳೆದ ನತಾಶ ಪೂನಾವಾಲಾ ಫ್ಲವರ್‌ ಬ್ಲಾಕ್‌ ಗೌನ್‌

Fashion Icon

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬ್ರಿಟನ್‌ನಲ್ಲಿ ನಡೆಯುತ್ತಿರುವ ಬ್ರಿಟಿಷ್‌ ಫ್ಯಾಷನ್‌ ಅವಾರ್ಡ್ ಸಮಾರಂಭದಲ್ಲಿ ಉದ್ಯಮಿ ಹಾಗೂ ಇಂಟರ್‌ನ್ಯಾಷನಲ್‌ ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಗಳಿಸಿರುವ ನತಾಶ ಪೂನಾವಾಲಾ, ತಮ್ಮ ವಿಭಿನ್ನ ಶೈಲಿಯ ಫ್ಲವರ್‌ ಬ್ಲಾಕ್‌ ಗೌನ್‌ ಧರಿಸಿ ಎಲ್ಲರ ಗಮನಸೆಳೆದರು. ಸ್ಲೀವ್‌ ಹಾಗೂ ನೆಕ್‌ಲೈನ್‌ ಜಾಗದಲ್ಲಿ ಹೂವುಗಳ ಬೊಕ್ಕೆಯಂತೆ ಕಾಣುವ ಫ್ಲವರ್‌ ಬಂಚ್‌ ಇರುವ ಬ್ಲಾಕ್‌ ಗೌನ್‌ ಧರಿಸಿ, ತಮ್ಮದೇ ಆದ ಹೊಸ ಫ್ಯಾಷನ್‌ ಸ್ಟೇಟ್‌ಮೆಂಟ್‌ಗೆ ವ್ಯಾಖ್ಯಾನ ಬರೆದರು.

ಯಾರಿದು ನತಾಶ ಪೂನಾವಾಲ ?

ಮೂಲತಃ ನತಾಶ ಹುಟ್ಟಿದ್ದು, ಬೆಳೆದದ್ದು ಎಲ್ಲವೂ ಭಾರತದಲ್ಲೆ. ಮೊದಲಿನಿಂದಲೂ ಅತ್ಯಾಕಾಂಕ್ಷೆ ಇರಿಸಿಕೊಂಡಿದ್ದ ನತಾಶ, ಲಂಡನ್‌ನಲ್ಲಿ ಓದು ಮುಗಿಸಿದ ನಂತರ ಅಲ್ಲಿಯೇ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ, ಸೀರಮ್‌ ಇನ್ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸಿಇಓ ಅದರ್‌ ಪೂನಾವಾಲಾ ಅವರನ್ನು ಪ್ರೀತಿಸಿ ಮದುವೆಯಾದರು. ನಂತರ ಫ್ಯಾಮಿಲಿಯ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದರೊಂದಿಗೆ ತಮಗಿದ್ದ ಫ್ಯಾಷನ್‌ ಬಗೆಗಿನ ಪ್ಯಾಷನ್‌ ಅನ್ನು ಹಾಗೆಯೇ ಮುಂದುವರೆಸಿದರು.

ಇಂಟರ್‌ನ್ಯಾಷನಲ್‌ ಫ್ಯಾಷನ್‌ ಐಕಾನ್‌

ಈಗಾಗಲೇ ಇಬ್ಬರು ಮಕ್ಕಳ ತಾಯಿಯಾಗಿರುವ ೪೦ರ ಪ್ರಾಯದ ಉದ್ಯಮಿ ನತಾಶ, ವೋಗ್‌ನಂತಹ ಫ್ಯಾಷನ್‌ ಮ್ಯಾಗಝೀನ್‌ನ ಕವರ್‌ ಪೇಜ್‌ ಸೇರಿದಂತೆ ಸಾಕಷ್ಟು ಪ್ರತಿಷ್ಠಿತ ಫ್ಯಾಷನ್‌ ಮ್ಯಾಗಝೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಲಕ್ಷಗಟ್ಟಲೇ ಫ್ಯಾಷನ್‌ ಅಭಿಮಾನಿಗಳನ್ನು ಪಡೆದಿದ್ದಾರೆ. ಬ್ರಿಟಿಷ್‌ ಫ್ಯಾಷನ್‌ ಕೌನ್ಸಿಲ್‌ನ ಬಹುತೇಕ ಫ್ಯಾಷನ್‌ ಕುರಿತ ಕಾರ್ಯಕ್ರಮಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುತ್ತಾರೆ. ಅಷ್ಟು ಮಾತ್ರವಲ್ಲ, ಪ್ರತಿ ಬಾರಿಯೂ ಭಿನ್ನ- ವಿಭಿನ್ನ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡು ಬೆರಗು ಮೂಡಿಸುತ್ತಿರುತ್ತಾರೆ.

ಕರೀನಾ-ಕರೀಷ್ಮಾ-ಮಲೈಕಾ ಸ್ನೇಹಿತೆ

ಲಂಡನ್‌ಗೆ ಕರೀನಾ ಹಾಗೂ ಕರೀಷ್ಮಾ ಕಪೂರ್‌ ಭೇಟಿ ನೀಡಿದಾಗಲೆಲ್ಲಾ ಸ್ನೇಹಿತೆ ನತಾಶ ಪೂನಾವಾಲರನ್ನು ಭೇಟಿ ಮಾಡಲು ಮರೆಯುವುದಿಲ್ಲ. ಇನ್ನು ಭಾರತಕ್ಕೆ ಬಂದಾಗಲೂ ಅಷ್ಟೇ! ಮಲೈಕಾ, ಅಮೃತಾ ಅರೋರಾ, ಮನೀಶ್‌ ಮಲ್ಹೋತ್ರಾ, ಕರಣ್‌ ಜೋಹರ್‌ ಸೇರಿದಂತೆ ಅವರದ್ದೇ ಆದ ಫ್ಯಾಷನ್‌ ಪ್ರಿಯರ ಗ್ಯಾಂಗ್‌ವೊಂದನ್ನು ರಚಿಸಿಕೊಂಡಿದ್ದಾರೆ. ಹಾಗೆಂದು ಅವರೇ ಮಾಧ್ಯಮದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Belt Fashion | ಟ್ರೆಡಿಷನಲ್‌ ಡಿಸೈನರ್‌ವೇರ್ರ್‌ಗೂ ಬಂತು ಬೆಲ್ಟ್ ಫ್ಯಾಷನ್‌

Exit mobile version