Site icon Vistara News

Fashion News | ಜಪಾನಿಯರ ಮನ ಗೆದ್ದ ಕನ್ನಡತಿ ಶರಧಿ ಶೆಟ್ಟಿಯ ಒರಿಗಾಮಿ ಡಿಸೈನರ್‌ ವೇರ್‌

Fashion News

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಜಪಾನಿನ ಟೊಯೋಟಾ ಸಿಟಿಯಲ್ಲಿ ನಡೆದ ಎಕೋ ಫೆಸ್ಟಾ ಪ್ರದರ್ಶನದಲ್ಲಿ ಕನ್ನಡತಿ, ಡಿಸೈನರ್‌ ಶರಧಿ ಶೆಟ್ಟಿ ತಾವೇ ರಚಿಸಿದ ಪೇಪರ್‌ ಒರಿಗಾಮಿ ಡ್ರೆಸ್‌ಗಳನ್ನು ಪ್ರದರ್ಶಿಸಿ, ಜಪಾನಿಯರ ಮನ ಗೆದ್ದರು. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಅಲ್ಲಿಯೇ ಕಲಿತ ಒರಿಗಾಮಿ ಕಲೆಯ ನಾನಾ ಪ್ರಕಾರಗಳನ್ನು ಅಲ್ಲಿನ ಮಕ್ಕಳಿಗೆ ವಿಭಿನ್ನ ಡಿಸೈನ್‌ನಲ್ಲಿ ಹೇಳಿಕೊಟ್ಟರು.

ಕನ್ನಡತಿ ಶರಧಿ ಶೆಟ್ಟಿಯ ಡಿಸೈನಿಂಗ್‌ ಜರ್ನಿ

ಅಂದಹಾಗೆ, ಶರಧಿ ಶೆಟ್ಟಿ ಮೂಲತಃ ಕರ್ನಾಟಕದವರು. ಮಂಗಳೂರಿನ ನಿಡ್ಡೋಡಿಯವರು. ಮಂಗಳೂರಿನಲ್ಲಿ ಬಿಎಸ್ಸಿ ಇನ್‌ ಗಾರ್ಮೆಂಟ್‌ ಡಿಸೈನಿಂಗ್‌ನಲ್ಲಿ ಹಾಗೂ ಬೆಂಗಳೂರು ಯೂನಿವರ್ಸಿಟಿಯ ಎಂಎಸ್ಸಿ ಇನ್‌ ಅಪರೆಲ್‌ ಟೆಕ್ನಾಲಜಿ ಮ್ಯಾನೆಜ್‌ಮೆಂಟ್‌ನಲ್ಲಿ ಸತತವಾಗಿ ಮೊದಲ ರ್ಯಾಂಕ್‌ ಪಡೆದು ಡಿಸೈನಿಂಗ್‌ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು.

ಮದುವೆಯಾದ ನಂತರ ಪತಿ ಕೆಲಸದ ನಿಮಿತ್ತ ಜಪಾನ್‌ಗೆ ತೆರಳಿದಾಗ, ಅವರೊಂದಿಗೆ ಹೋಗಿದ್ದ ಶರಧಿ, ಅಲ್ಲಿನ ಒರಿಗಾಮಿ ಕಲೆಯನ್ನು ಕಲಿತರು. ಭಾರತಕ್ಕೆ ವಾಪಸ್‌ ಆದ ನಂತರವೂ ಈ ಕಲೆಯನ್ನು ಮುಂದುವರಿಸಿ, ನಾನಾ ವಿನ್ಯಾಸಗಳನ್ನು ಸೃಷ್ಟಿಸಿದರು. ಫ್ಯಾಷನ್‌ ಶೋಗಳಲ್ಲೂ ತಮ್ಮ ಡಿಸೈನರ್‌ವೇರ್‌ಗಳನ್ನು ಪ್ರದರ್ಶಿಸಿದರು. ಇದೀಗ ಮತ್ತೊಮ್ಮೆ ಕೆಲಸದ ನಿಮಿತ್ತ ಪತಿಯೊಂದಿಗೆ ತೆರಳಿರುವ ಶರಧಿ, ಅಲ್ಲಿಯೇ ಕಲಿತ ಕಲೆಗೆ ಹೊಸ ರೂಪ ನೀಡಿ, ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.

ಒರಿಗಾಮಿಯ ಪೇಪರ್‌ ಡಿಸೈನರ್‌ ವೇರ್‌

ಜಪಾನಿನ ಮೂಲ ಕಲೆಯಾದ ಒರಿಗಾಮಿಯಲ್ಲಿ ಈಗಾಗಲೇ ಸಾಕಷ್ಟು ಪ್ರಯೋಗಾತ್ಮಕ ಡಿಸೈನರ್‌ ವೇರ್‌ಗಳನ್ನು ಸಿದ್ಧಪಡಿಸಿದ್ದೇನೆ. ಕೆಜಿ ಕಾರ್ಡ್ಬೋರ್ಡ್, ಹ್ಯಾಂಡ್‌ಮೇಡ್‌ ಪೇಪರ್‌ ಹಾಗೂ ಪೇಪರ್‌ ಶೀಟ್‌ನಿಂದ ಮಾಡಿರುವ ಡಿಸೈನರ್‌ವೇರ್‌ಗಳು ಅತಿ ಸೂಕ್ಷ್ಮವಾಗಿರುತ್ತವೆ. ಅತಿ ಜಾಗರೂಕತೆಯಿಂದ ಬಳಸಿದಲ್ಲಿ ೪-೫ ಬಾರಿ ಬಳಸಬಹುದು. ಇದೀಗ ಈ ಕಲೆಯನ್ನು ಬಟ್ಟೆಯಲ್ಲಿ ಡಿಸೈನ್‌ ಮಾಡಲು ಪ್ಲೀಟಿಂಗ್‌ ಟೆಕ್ನಿಕ್‌ ಬಳಸಿ ಕಲಿಯುತ್ತಿದ್ದೇನೆ. ಅಲ್ಲದೇ, ಸುಮಾರು ೧ ವರ್ಷಗಳಿಂದ ಒರಿಗಾಮಿ ಡಿಸೈನ್ಸ್‌ ಕುರಿತ ವಿಡಿಯೋಗಳನ್ನು ನನ್ನದೇ ಆದ ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಆಸಕ್ತರು ಕಲಿಯಬಹುದು ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ ಡಿಸೈನರ್‌ ಶರಧಿ ಶೆಟ್ಟಿ.

ಜಪಾನಿನಲ್ಲಿ ಕಲಿತ ಕಲೆ

“ಖುಷಿಯ ವಿಚಾರವೆಂದರೆ ಜಪಾನಿನ ಕಲೆಯನ್ನು ಕಲಿತು, ಅಲ್ಲಿಯೇ ಯಶಸ್ವಿ ಪ್ರದರ್ಶನ ನೀಡಿ, ಅಲ್ಲಿಯವರಿಂದ ಪ್ರಶಂಸೆ ಗಳಿಸಿರುವುದು ಮತ್ತಷ್ಟು ಡಿಸೈನ್‌ ಮಾಡುವ ಹುರುಪು ನನ್ನಲ್ಲಿ ಹೆಚ್ಚಿಸಿದೆ. ಇದಕ್ಕಿಂತ ಡಿಸೈನರ್‌ಗಳಿಗೆ ಇನ್ನೇನು ಬೇಕು? ಮತ್ತಷ್ಟು ಹೊಸ ಟೆಕ್ನಾಲಜಿಗಳನ್ನು ಕಲಿತು ಪ್ರಯೋಗಾತ್ಮಕ ಡಿಸೈನರ್‌ವೇರ್‌ಗಳನ್ನು ಸಿದ್ಧಪಡಿಸುವೆ” ಎಂದು ಜಪಾನಿನಿಂದಲೇ ಸಂತಸ ಹಂಚಿಕೊಳ್ಳುತ್ತಾರೆ ಶರಧಿ ಶೆಟ್ಟಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version