ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷನ್ ಪೇಜೆಂಟ್ ಮೂಲಕ ಗ್ಲಾಮರ್ ಪ್ರಪಂಚಕ್ಕೆ ಎಂಟ್ರಿ ನೀಡುವ ಆಸೆಯಿದೆಯಾ! ರ್ಯಾಂಪ್ ಮೇಲೆ ಹೆಜ್ಜೆ ಹಾಕುವ ಕನಸಿದೆಯಾ! ಮಾಡೆಲ್ಗಳಾಗುವ ಬಯಕೆಯಲ್ಲಿ ಯಾವುದೋ ಗುತ್ತು ಗುರಿಯಿಲ್ಲದ ಸಂಸ್ಥೆಗೆ ಹಣ ಸುರಿದು, ವಿನ್ನರ್ ಆಗುವ ಕನಸಿನಲ್ಲಿ ಕೂಡಿಟ್ಟ ಹಣ ಕಳೆದುಕೊಂಡಿರಾ, ಜೋಕೆ! (Fashion Pageant Awareness) ಎಚ್ಚರ ಎನ್ನುತ್ತಾರೆ ಫ್ಯಾಷನ್ ಸಲಹೆಗಾರರು.
ಹೌದು, ಇದಕ್ಕೆ ಇತ್ತೀಚೆಗೆ ನಡೆದ ನಿಶಾ ನರಸಪ್ಪ ಫ್ಯಾಷನ್ ಇವೆಂಟ್ ವಂಚನೆ ಪ್ರಕರಣವೇ ಪ್ರತ್ಯಕ್ಷ ಸಾಕ್ಷಿ. ಈ ಘಟನೆ ಸಾಕಷ್ಟು ಅಕಾಂಕ್ಷಿಗಳಿಗೆ ಪಾಠ ಕಲಿಸಿದೆ. ಹಿಂದೂ ಮುಂದೂ ಯೋಚಿಸದೇ ಕೇಳಿದಷ್ಟು ಹಣ ನೀಡಿ, ನಂತರ ವಂಚನೆಗೊಳಗಾದ ಪೋಷಕರ ಹಾಗೂ ಆಯೋಜಕಿಯ ಪ್ರಕರಣ ಇದೀಗ ಠಾಣೆಯ ಮೆಟ್ಟಿಲೇರಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ ಫ್ಯಾಷನ್ ಕ್ಷೇತ್ರಕ್ಕೆ ಎಂಟ್ರಿ ನೀಡಬೇಕಾದಲ್ಲಿ, ಆದಷ್ಟೂ ಯೋಚಿಸಿ, ವಿಚಾರಿಸಿ ಮುಂದಿನ ಹೆಜ್ಜೆ ಇರಿಸುವುದು ಲೇಸು ಎನ್ನುತ್ತಾರೆ ಫ್ಯಾಷನ್ ಪೇಜೆಂಟ್ವೊಂದರಲ್ಲಿ ಭಾಗವಹಿಸಿ ಟೈಟಲ್ ವಂಚಿತರಾದ ಮಾಡೆಲ್ವೊಬ್ಬರು. ಯಾವುದೇ ಪೇಜೆಂಟ್ನಲ್ಲಿ ರಿಜಿಸ್ಟರ್ ಆಗುವ ಮುನ್ನ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಸಲಹೆ ನೀಡುತ್ತಾರೆ ಫ್ಯಾಷನ್ ಸಲಹೆಗಾರರಾದ ವಿದ್ಯಾ ವಿವೇಕ್.
ಸಂಸ್ಥೆಯ ಬ್ಯಾಕ್ಗ್ರೌಂಡ್ ತಿಳಿದುಕೊಳ್ಳಿ
ಯಾವುದೇ ಪೆಜೇಂಟ್ನಲ್ಲಿ ಪಾಲ್ಗೊಳ್ಳುವಾಗ ಆ ಸಂಸ್ಥೆ ರಿಜಿಸ್ಟರ್ ಆಗಿದೆಯೇ, ಬ್ಯಾಕ್ಗ್ರೌಂಡ್ ಹಾಗೂ ಜನಾಭಿಪ್ರಾಯ ಮೊದಲು ತಿಳಿದುಕೊಳ್ಳಬೇಕು. ಯಾಕೆಂದರೆ, ಸಾಕಷ್ಟು ಹೇಳ ಹೆಸರಿಲ್ಲದ ಸಂಸ್ಥೆಗಳು ಅನಧಿಕೃತವಾಗಿ ಪೇಜೆಂಟ್ ನಡೆಸುತ್ತಿರುತ್ತವೆ.
ಸಂಸ್ಥೆಯ ಪೇಜೆಂಟ್ ಹಿಸ್ಟರಿ ತಿಳಿದುಕೊಳ್ಳಿ
ಮೊದಲು ನೀವು ಭಾಗವಹಿಸಬೇಕೆಂದುಕೊಂಡಿರುವ ಸಂಸ್ಥೆಯ ಆಯೋಜಕರ ಹಿಸ್ಟರಿ ಅರಿಯುವುದು ಉತ್ತಮ. ಎಷ್ಟು ಬಾರಿ ಸ್ಪರ್ಧೆ ನಡೆದಿದೆ. ಯಾರ್ಯಾರು ವಿಜೇತರಾಗಿ, ಏನು ಮಾಡುತ್ತಿದ್ದಾರೆ? ಇದೇ ಮೊದಲ ಬಾರಿಯಾ ಎಂಬುದನ್ನು ಕೇಳಿ ತಿಳಿದುಕೊಂಡು ಡಿಸೈಡ್ ಮಾಡಿ.
ಶುಲ್ಕ ತಿಳಿದುಕೊಂಡು ಜಾಯಿನ್ ಆಗಿ
ಪೇಜೆಂಟ್ನಲ್ಲಿ ಭಾಗವಹಿಸುವ ಮುನ್ನ ಕೊಡಬೇಕಾದ ಹಣ, ಗ್ರೂಮಿಂಗ್ ಹಾಗೂ ಪಾಲ್ಗೊಳ್ಳುವಿಕೆಯ ಹಣ ಎಲ್ಲವನ್ನೂ ಮೊದಲೇ ತಿಳಿದುಕೊಂಡು ಮುಂದುವರೆಯಿರಿ. ಅದನ್ನು ಬಿಟ್ಟು ಆಮೇಲೆ ನೋಡಿದಾರಾಯಿತು ಎಂದು ಹೆಸರು ರಿಜಿಸ್ಟರ್ ಮಾಡಿಕೊಳ್ಳಬೇಡಿ.
ಡಿಸೈನರ್ವೇರ್-ಗ್ರೂಮಿಂಗ್ ಇನ್ವೆಸ್ಟ್ಮೆಂಟ್
ಗ್ಲಾಮರ್ ಪ್ರಪಂಚ ಎಂದೆನಿಸಿಕೊಂಡಿರುವ ಈ ಫ್ಯಾಷನ್ ಲೋಕದಲ್ಲಿ ಇದ್ದು ಜಯಿಸುವುದು ಸುಲಭವೇನಲ್ಲ! ಒಮ್ಮೆ ರ್ಯಾಂಪ್ ವಾಕ್ ಮಾಡಲು ಸ್ಟೇಜ್ ದೊರಕಬಹುದು ಅಷ್ಟೇ! ತದನಂತರ ನಿಮ್ಮ ಹಾರ್ಡ್ವರ್ಕ್ ಮಾತ್ರ ಕೆಲಸ ಮಾಡುವುದು. ಇತರೇ ಬ್ಯುಸಿನೆಸ್ನಂತೆ ಇಲ್ಲಿಯೂ ಇನ್ವೆಸ್ಟ್ ಮಾಡಬೇಕಾಗುವುದು. ಡಿಸೈನರ್ವೇರ್, ಗ್ರೂಮಿಂಗ್ ಎಂದೆಲ್ಲಾ ಹಣ ವ್ಯಯಿಸಬೇಕಾಗಬಹುದು ತಿಳಿದಿರಲಿ. ಎಲ್ಲದಕ್ಕೂ ಶುಲ್ಕ ನೀಡಬೇಕಾದೀತು! ಗೊತ್ತಿರಲಿ.
ಟೈಟಲ್ ವಿನ್ನಿಂಗ್ ನಂತರ
ಟೈಟಲ್ ವಿನ್ನಿಂಗ್ ನಂತರ ಮುಂದಿನ ದಿನಗಳಲ್ಲಿ ಎಲ್ಲಿ ಸ್ಪರ್ಧಿಸಬೇಕು? ಎಷ್ಟು ಖರ್ಚಾಗುತ್ತದೆ? ಯಾಕೆ? ಎಲ್ಲೆಲ್ಲಿ ಅವಕಾಶಗಳನ್ನು ಪಡೆಯಬಹುದು ಎಂಬುದನ್ನು ಪೇಜೆಂಟ್ ಅಡ್ವೈಸರ್ ಬಳಿ ಚರ್ಚಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Monsoon Boots Fashion: ಮಾನ್ಸೂನ್ ಸೀಸನ್ ವೆಸ್ಟರ್ನ್ ಔಟ್ಫಿಟ್ಸ್ ಜೊತೆಯಾದ ಬೂಟ್ಸ್ ಫ್ಯಾಷನ್