ಸಂದರ್ಶನ : ಶೀಲಾ ಸಿ. ಶೆಟ್ಟಿ
ಗೆಜೆಟೆಡ್ ಆಫೀಸರ್ ಆಗಿದ್ದುಕೊಂಡೇ ಫ್ಯಾಷನ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಅಶ್ವಿನಿ ಲಕ್ಷ್ಮಯ್ಯ, ಮಿಸ್ ಅರ್ತ್ ಇಕೋಸ್ಪಿಯರ್ 2023 (Miss Earth Ecosphere 2023) ಟೈಟಲ್ ವಿಜೇತೆ, ಅಷ್ಟು ಮಾತ್ರವಲ್ಲ, ಮಿಸೆಸ್ ಇಂಡಿಯಾ (ಐಎನ್‌ಸಿ) ಫೈನಲಿಸ್ಟ್ ಆಗಿದ್ದವರು. ಜೊತೆಗೆ ಬೆಲ್ಲಿ ಡಾನ್ಸರ್, ಫಿಟ್ನೆಸ್ ಫ್ರೀಕ್ ಹೀಗೆ ಸಖತ್ ಸಕ್ರಿಯವಾಗಿರುವ ಲೇಡಿ. ಇವೆಲ್ಲದರೊಂದಿಗೆ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲೂ ತಮ್ಮನ್ನೂ ತೊಡಗಿಸಿಕೊಂಡಿರುವ ಇವರು, ಸರಕಾರಿ ಕೆಲಸದಲ್ಲಿದ್ದರೂ ಕೂಡ ಫ್ಯಾಷನ್ ಕನಸು ಕಾಣಬಹುದು, ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ತಮ್ಮ ಪ್ರೊಫೆಷನ್, ಪ್ಯಾಷನ್ ಹಾಗೂ ಫ್ಯಾಷನ್ ಕುರಿತಂತೆ ಒಂದಿಷ್ಟು ವಿಷಯಗಳನ್ನು ವಿಸ್ತಾರ ನ್ಯೂಸ್‌ನೊಂದಿಗೆ (Fashion Talk) ಹಂಚಿಕೊಂಡಿದ್ದಾರೆ.
ವಿಸ್ತಾರ ನ್ಯೂಸ್ : ಗೆಜೆಟೆಡ್ ಆಫೀಸರ್ ಆಗಿರುವ ನೀವು ಫ್ಯಾಷನ್ ಲೋಕದತ್ತ ಹೇಗೆ ಸಾಗಿದಿರಿ?
ಮೊದಲಿನಿಂದಲೂ ನಾನು ಡಾನ್ಸ್, ಮಾರ್ಷಲ್ ಆರ್ಟ್ಸ್ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ನನ್ನನ್ನು ನಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಫ್ಯಾಷನ್ ಪೇಜೆಂಟ್‌ನಲ್ಲಿ ಪಾಲ್ಗೊಂಡು ಗೆಲುವು ಸಾಧಿಸುವ ಮೂಲಕ ಒಂದು ಐಡೆಂಟಿಟಿ ಪಡೆದು ಮತ್ತಷ್ಟು ಸಾಧನೆ ಮಾಡುವ ಕನಸನ್ನು ಕಂಡಿದ್ದೆ. ಇದಕ್ಕಾಗಿ ಕಷ್ಟಪಟ್ಟು ತಯಾರಿ ನಡೆಸಿದೆ. ಕೊನೆಗೆ ಗೆಲುವು ಸಾಧಿಸಿದೆ.
ವಿಸ್ತಾರ ನ್ಯೂಸ್ : ಫ್ಯಾಷನ್ ಪೇಜೆಂಟ್‌ಗಳು ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಗುರುತಿಸಿಕೊಳ್ಳಲು ಸಹಾಯ ಮಾಡುತ್ತವೆಯೇ!
ಖಂಡಿತಾ ಹೌದು. ಒಂದು ಐಡೆಂಟಿಟಿ ಗಳಿಸಿಕೊಂಡಲ್ಲಿ ಜನರು ಗುರುತಿಸುತ್ತಾರೆ. ಇದು ಮತ್ತಷ್ಟು ಸಮಾಜ ಸೇವೆ ಮಾಡಲು ಪೂರಕವಾಗುತ್ತವೆ.
ವಿಸ್ತಾರ ನ್ಯೂಸ್ : ಈ ಪೇಜೆಂಟ್‌ನಲ್ಲಿ ಗೆಲುವು ಸಾಧಿಸಲು ಯಾವ ರೀತಿ ನೀವು ತಯಾರಿ ನಡೆಸಿದಿರಿ?
ಫಿಲಿಫೈನ್ಸ್ ನಲ್ಲಿ ನಡೆದ ಈ ಪೇಜೆಂಟ್‌ಗೆ ತಯಾರಿ ನಡೆಸಲು ನನಗೆ ಸುಮಾರು ಒಂದು ತಿಂಗಳ ಕಾಲ ಅವಕಾಶ ದೊರಕಿತ್ತು. ರೆಗ್ಯುಲರ್ ಆಗಿ ವರ್ಕೌಟ್ ಮಾಡುತ್ತಿದೆ. ಸ್ಟ್ರಿಕ್ಟ್ ಡಯಟ್ ಮಾಡಿದೆ. ಲುಕ್ಸ್‌ಗಾಗಿ ಸಾಕಷ್ಟು ಗ್ರೂಮಿಂಗ್ ತರಗತಿಗಳನ್ನು ಪಡೆದೆ. ಪರಿಸರ ಜಾಗೃತಿ ಕುರಿತಂತೆ ಈ ಪೇಜೆಂಟ್‌ನಲ್ಲಿ ಹೆಚ್ಚಿನ ಗಮನ ನೀಡುತ್ತಿದ್ದದ್ದರಿಂದ ಈ ಕುರಿತು ತರಬೇತಿ ಪಡೆದೆ.
ವಿಸ್ತಾರ ನ್ಯೂಸ್ : ನಿಮ್ಮ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ ಏನು ?
ಆಫೀಸ್‌ವೇರ್‌ನಲ್ಲಿ ಸೀರೆಯನ್ನು ಧರಿಸುತ್ತೇನೆ. ಫೀಲ್ಡ್ ವರ್ಕ್ ಇದ್ದಾಗ, ಜೀನ್ಸ್ ಹಾಗೂ ವೈಟ್ ಶರ್ಟ್ ಧರಿಸಲು ಇಷ್ಟಪಡುತ್ತೇನೆ. ಇನ್ನು ಫ್ಯಾಷನ್ ವಿಷಯಕ್ಕೆ ಬಂದಲ್ಲಿ, ನನಗೆ ಬಾಡಿಕಾನ್ ಉಡುಪುಗಳು ನನಗಿಷ್ಟ. ಅದರೊಂದಿಗೆ ನನಗೆ ನನ್ನದೇ ಆದ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳಿವೆ. ಎಲಿಗೆನ್ಸ್ ಹಾಗೂ ಕಂಫರ್ಟ್‌ಗೆ ಮೊದಲ ಆದ್ಯತೆ.
ವಿಸ್ತಾರ ನ್ಯೂಸ್ : ಸರಕಾರಿ ಕೆಲಸದಲ್ಲಿದ್ದುಕೊಂಡು ಫ್ಯಾಷನ್ ಕ್ಷೇತ್ರಕ್ಕೆ ಕಾಲಿಡುವವರಿಗೆ ಯಾವ ಬಗೆಯ ಸಲಹೆ ನೀಡುತ್ತೀರಾ?
ಮೊದಲು ಸಂಬಂಧಿಸಿದ ವಿಭಾಗದ ಮುಖ್ಯಸ್ಥರ ಪರ್ಮಿಷನ್ ತೆಗೆದುಕೊಳ್ಳಿ. ಹೆದರಬೇಡಿ, ಧೈರ್ಯವಾಗಿ ಮುನ್ನುಗ್ಗಿ. ಸರಿಯಾದ ಟ್ರೈನರ್ ಹಾಗೂ ಪೇಜೆಂಟ್‌ಗಳನ್ನು ಆಯ್ಕೆ ಮಾಡಿ. ಟ್ರೆಂಡ್ ಬಗ್ಗೆ ತಿಳಿದುಕೊಳ್ಳಿ. ಗ್ರೂಮಿಂಗ್‌ಗೆ ಒಳಗಾಗಿ.
ವಿಸ್ತಾರ ನ್ಯೂಸ್ : ನಿಮ್ಮ ಮುಂದಿನ ಗುರಿಯೇನು ?
ಸೇವಾ ಕಾರ್ಯಗಳಿಗೆ ಈ ಟೈಟಲ್ ಬಳಸಿಕೊಳ್ಳುವುದು. ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Bracelate fashion: ಬ್ರೇಸ್‌ಲೆಟ್ ಆಗಿ ಬದಲಾದ ಮಾಂಗಲ್ಯದ ಕರಿಮಣಿ ಸರ