ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಬ್ಬದಂದು ಸಾಂಪ್ರದಾಯಿಕ ಲುಕ್ ನೀಡುವ ವಿನೂತನ ಶೈಲಿಯ ಪಂಚೆ-ಶಲ್ಯಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇತರೇ ಉಡುಗೆಗಳಂತೆ ಆರಾಮದಾಯಕವಾಗಿ ಧರಿಸಬಹುದಾದ ವಿನ್ಯಾಸದಲ್ಲಿ ಬಿಡುಗಡೆಯಾಗಿರುವ ಇವು ಇದೀಗ ಮೆನ್ಸ್ ಎಥ್ನಿಕ್ ಫ್ಯಾಷನ್‌ನಲ್ಲಿ ಟಾಪ್ ಲಿಸ್ಟ್‌ನಲ್ಲಿವೆ.
ಆಕರ್ಷಕ ಟ್ರೆಡಿಷನಲ್ ಲುಕ್
ಕುರ್ತಾ, ಪೈಜಾಮ, ಶೆರ್ವಾನಿ ಧರಿಸಿ ಬೇಸರವಾಗಿದ್ದಲ್ಲಿ ಪಕ್ಕಾ ನಮ್ಮ ಸಂಸ್ಕೃತಿಗೆ ಸೂಟ್ ಆಗುವಂತಹ ಸೌತ್ ಇಂಡಿಯನ್ ಲುಕ್ ನೀಡುವ ಪಂಚೆ-ಶಲ್ಯ ಧರಿಸಬಹುದು. ಇದು ನೋಡಲು ಸ್ಥಳೀಯ ಲುಕ್ ನೀಡುತ್ತಲ್ಲದೇ ಹಬ್ಬದ ಸಂಭ್ರಮವನ್ನು ದುಪಟ್ಟಾಗಿಸುವುದು. ಎಲ್ಲದಕ್ಕಿಂತ ಹೆಚ್ಚಾಗಿ ದೇಸಿ ಲುಕ್ ನೀಡುವುದು ಎನ್ನುತ್ತಾರೆ ಮಾಡೆಲ್ ನೀರಜ್. ಅವರ ಪ್ರಕಾರ: ಹಿರಿಯರೊಂದಿಗೆ ಹುಡುಗರು ಕೂಡ ಪಂಚೆ ಶಲ್ಯ ಧರಿಸಿ ಹಬ್ಬವನ್ನು ಆಚರಿಸಿದಾಗ ನೋಡಲು ಚೆನ್ನ. ಸಂತಸದ ವಿಚಾರವೆಂದರೇ ವಯಸ್ಸಿನ ಭೇದ-ಭಾವವಿಲ್ಲದೇ ಇದೀಗ ಎಲ್ಲರೂ ಹಬ್ಬಗಳಂದು ಪಂಚೆ-ಶಲ್ಯ ಧರಿಸುವುದು ಕಾಮನ್ ಆಗುತ್ತಿದೆ.
ಯಾವ್ಯಾವ ಬಗೆಯ ಪಂಚೆ-ಶಲ್ಯ ಲಭ್ಯ?
ಮೊದಲೆಲ್ಲಾ ಪಂಚೆ-ಶಲ್ಯ ಎಂದಾಕ್ಷಣ ಬಹುತೇಕ ಪುರುಷರಿಗೆ ಧರಿಸುವುದೇ ಹಿಂಸೆಯೆಂದೆನಿಸುತ್ತಿತ್ತು. ಅದನ್ನು ಸುತ್ತಿಕೊಳ್ಳುವುದು, ಸರಿಯಾಗದೇ ಇದ್ದಾಗ ಜಾರುವ ಪ್ರಸಂಗ ಎದುರಾಗುವುದು ಸಾಮಾನ್ಯವಾಗಿತ್ತು. ಆದರೆ, ಇದೀಗ ಅಂತಹ ಪ್ರಸಂಗಗಳನ್ನು ಎದುರಿಸುವ ಯಾವುದೇ ತಕರಾರಿಲ್ಲ. ಯಾಕೆಂದರೆ, ಇಂದಿನ ಜನರೇಷನ್ ಹೈಕಳು ಇಷ್ಟಪಡುವಂತಹ ನಾನಾ ಬಗೆಯ ಪಂಚೆಗಳು ಮಾರುಕಟ್ಟೆಯಲ್ಲಿ ಲಭ್ಯ. ಅದರಲ್ಲೂ ಪಾಕೆಟ್ ಇರುವಂತಹ ಪಂಚೆಯಲ್ಲಿ ಮೊಬೈಲ್‌ನಿಂದ ಹಿಡಿದು ವಾಲೆಟ್ ಸಹಿತ ಇರಿಸಿಕೊಳ್ಳಬಹುದು. ಪಂಚೆ ಕಟ್ಟಿಕೊಳ್ಳುವ ಟೆನ್ಷನ್ ಇಲ್ಲ. ವೆಲ್ಕ್ರಾನ್ ಅಂದರೆ, ಸ್ಟಿಕ್ ಮಾಡಿ ಧರಿಸುವಂತವು ಬಂದಿವೆ. ಅಷ್ಟೇಕೆ? ಇದಕ್ಕೆ ಸೂಟ್ ಆಗುವಂತಹ ಶಲ್ಯಗಳು ಆಗಮಿಸಿವೆ.
ಶ್ವೇತ ವರ್ಣ ಇಲ್ಲವೇ ಕ್ರೀಮ್ ಶೇಡ್‌ನ ಗೋಲ್ಡನ್ ಬಾರ್ಡರ್ ಇರುವಂತವು ಈ ಫೆಸ್ಟೀವ್ ಸೀಸನ್‌ನಲ್ಲಿ ಹೆಚ್ಚು ಟ್ರೆಂಡಿಯಾಗಿವೆ. ದೊಡ್ಡ ಹಾಗೂ ಚಿಕ್ಕ ಎರಡು ಬಾರ್ಡರ್‌ನವು ಲಭ್ಯ. ಇನ್ನು ಶಲ್ಯವನ್ನು ಆಯಾ ವ್ತಕ್ತಿಯ ಪರ್ಸನಾಲಿಟಿಗೆ ತಕ್ಕಂತೆ ಮ್ಯಾಚ್ ಮಾಡಿ ಧರಿಸಬೇಕಾಗುತ್ತದೆ. ಚಿಕ್ಕ ಶಲ್ಯದಿಂದ ಹಿಡಿದು ಶಾಲಿನಂತಿರುವ ದೊಡ್ಡ ಶಲ್ಯಗಳು ದೊರೆಯುತ್ತವೆ. ಇನ್ನು ಇವಕ್ಕೆ ಶ್ವೇತ ವರ್ಣದ ಇಲ್ಲವೇ ಕ್ರೀಮ್ ಶೇಡ್‌ನ ಶರ್ಟ್ ಧರಿಸಬಹುದು. ಇಲ್ಲವಾದಲ್ಲಿ ಸಿಲ್ಕ್ ಶರ್ಟ್ ಕೂಡ ಧರಿಸಬಹುದು. ಅಂದಹಾಗೆ, ಸಾಮಾನ್ಯವಾಗಿ ಕಾಟನ್ ಹಾಗೂ ಕಾಟನ್ ಮಿಕ್ಸ್ ಮತ್ತು ರೇಷ್ಮೆಯ ಪಂಚೆ-ಶಲ್ಯಗಳು ದೊರೆಯುತ್ತವೆ. ರೇಷ್ಮೆಯವು ಕೊಂಚ ದುಬಾರಿ ಎನ್ನುತ್ತಾರೆ ಮಾರಾಟಗಾರರು.
ಮಕ್ಕಳಿಗೆ ಕಿಡ್ಸ್ ಸೆಟ್
ಇನ್ನು ಗಂಡು ಮಕ್ಕಳಿಗೆ ಶರ್ಟ್, ಪಂಚೆ-ಶಲ್ಯ ಸೆಟ್‌ಗಳಲ್ಲಿ ದೊರೆಯುತ್ತವೆ. ಆಯಾ ವಯಸ್ಸಿನವರಿಗೆ ಸೂಟ್ ಆಗುವಂತಹ ಸೈಝ್‌ನಲ್ಲಿ ಇವು ದೊರೆಯುತ್ತವೆ. ಮಕ್ಕಳಿಗೆ ಮಾತ್ರ ಶರ್ಟ್‌ಗಳು ನಾನಾ ಕಲರ್‌ಗಳಲ್ಲಿ ದೊರೆಯುತ್ತವೆ.
ಪಂಚೆ-ಶಲ್ಯ ಪ್ರಿಯರು ಗಮನಿಸಬೇಕಾದ ಅಂಶ:
– ಪಾಕೆಟ್ ಹಾಗೂ ಸ್ಟಿಕ್‌ಮಾಡಬಹುದಾದ ಪಂಚೆ ಆಯ್ಕೆ ಮಾಡಿ.
– ಮಕ್ಕಳಿಗಾದಲ್ಲಿ ಸರಿಯಾದ ಸೈಜನ್ನು ಆರಿಸಿ.
-ತೀರಾ ಗಿಡ್ಡನಾದ ಶಲ್ಯವನ್ನು ಧರಿಸಬೇಡಿ. ಧರಿಸಿದಾಗ ಸೊಂಟದವರೆಗೆ ಇರಬೇಕು.
-ಪಂಚೆಗೆ ಧರಿಸುವ ಶರ್ಟ್ ಮ್ಯಾಚ್ ಮಾಡುವುದು ಅತ್ಯಗತ್ಯ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Wedding Mens Fashion | ಮದುಮಗನಿಗೆ ರಾಯಲ್ ಲುಕ್ ನೀಡುವ ಶೆರ್ವಾನಿ