ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಶ್ರಾವಣ ಮಾಸದ ಶಾಪಿಂಗ್ ಎಲ್ಲೆಡೆ ಆರಂಭವಾಗಿದೆ. ಕೋವಿಡ್ ನಂತರದ ದಿನಗಳಲ್ಲಿ ಮೊದಲ ಬಾರಿಗೆ ಜನರಲ್ಲಿ ಶಾಪಿಂಗ್ ಉತ್ಸಾಹ ಹೆಚ್ಚಾಗಿದ್ದು, ಕೊಳ್ಳುಗರ ಸಂಖ್ಯೆಯೂ ಅಧಿಕಗೊಂಡಿದೆ. ಸಾಲು ಸಾಲು ಹಬ್ಬಗಳು ಒಂದರ ಹಿಂದೊಂದರಂತೆ ಬರುತ್ತಿರುವ ಹಿನ್ನೆಲೆಯಲ್ಲಿ ಶ್ರಾವಣ ಮಾಸದ ಶಾಪಿಂಗ್ ಉತ್ಸಾಹ ಎಲ್ಲೆಡೆ ಏರಿದೆ.
ಕುಟುಂಬ ಸಮೇತ ಶಾಪಿಂಗ್
“ಆಷಾಢ ಮಾಸ ಮುಗಿದು ಶ್ರಾವಣ ಬಂತೆಂದರೆ ಸಾಕು, ಸಡಗರ ಸಂಭ್ರಮ. ಪುರುಷರು, ಮಹಿಳೆಯರು ಹಾಗೂ ಮಕ್ಕಳ ಟ್ರೆಂಡಿ ಟ್ರೆಡಿಷನಲ್ ಫ್ಯಾಷನ್‌ವೇರ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಹಬ್ಬದ ಶಾಪಿಂಗ್ ಹುಮ್ಮಸ್ಸು ಕುದುರುತ್ತದೆ. ಅದರಲ್ಲೂ ವೀಕೆಂಡ್‌ನಲ್ಲಿ ಕುಟುಂಬ ಸಮೇತ ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ” ಎನ್ನುತ್ತಾರೆ ಸ್ಟೈಲಿಂಗ್ ಎಕ್ಸ್ಪರ್ಟ್ ರಜತ್.
ಅವರ ಪ್ರಕಾರ, ಹಬ್ಬದ ಮಾಸವಾದ ಶ್ರಾವಣ ಎಥ್ನಿಕ್‌ವೇರ್ ಶಾಪಿಂಗ್‌ಗೆ ಹೇಳಿ ಮಾಡಿಸಿದ ಕಾಲ. ಈ ಮಾಸದಲ್ಲಿ ಕೇವಲ ಹಬ್ಬಗಳು ಮಾತ್ರವಲ್ಲ, ಸಾಕಷ್ಟು ಮದುವೆ ಸಮಾರಂಭಗಳು ನಡೆಯುತ್ತವೆ. ಹಾಗಾಗಿ ಟ್ರೆಂಡಿ ಡಿಸೈನ್ ವೇರ್‌ಗಳು ಬಿಡುಗಡೆಗೊಳ್ಳುತ್ತವೆ. ಅತ್ಯುತ್ತಮ ಟ್ರೆಡಿಷನಲ್‌ವೇರ್ ಆಯ್ಕೆಗೆ ಇದು ಹೇಳಿ ಮಾಡಿಸಿದ ಸಮಯʼʼ ಎನ್ನುತ್ತಾರವರು.
ಸೀಸನ್ ಎಥ್ನಿಕ್ವೇರ್ ಶಾಪಿಂಗ್
ಎಂದಿನಂತೆ ಈ ಬಾರಿಯು ಟ್ರೆಡಿಷನಲ್‌ವೇರ್‌ಗಳಿಗೆ ಬೇಡಿಕೆ ಹೆಚ್ಚಿದೆ. ಕಳೆದ ಎರಡು ವರ್ಷಗಳ ಕಾಲ ಉಡುಪುಗಳ ಮಾರಾಟದಲ್ಲಿ ಕುಂಠಿತ ಕಂಡಿತ್ತು. ಆದರೆ, ಈ ಬಾರಿ ವ್ಯಾಪಾರ-ವಹಿವಾಟು ಎಲ್ಲವೂ ಸುಧಾರಿಸಿದ್ದು, ಲೆಕ್ಕವಿಲ್ಲದಷ್ಟು ಟ್ರೆಡಿಷನಲ್‌ವೇರ್ ಡಿಸೈನ್‌ವೇರ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಅದರಲ್ಲೂ ವೆಸ್ಟರ್ನ್ ಔಟ್‌ಫಿಟ್‌ಗಳಿಗಿಂತ ಎಥ್ನಿಕ್‌ವೇರ್ ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ” ಎನ್ನುತ್ತಾರೆ ಮಾಲ್‌ವೊಂದರ ಡಿಸೈನ್‌ವೇರ್ ಶಾಪ್‌ನ ಸೇಲ್ಸ್ ಮ್ಯಾನೇಜರ್.
ಎಥ್ನಿಕ್‌ವೇರ್‌ಗೆ ಹೆಚ್ಚಿದ ಬೇಡಿಕೆ
ಕಳೆದ ಸೀಸನ್ ಹಾಗೂ ಆಷಾಢದಲ್ಲಿದ್ದ ಸೀಸನ್ ಸೇಲ್ ಎಲ್ಲವಕ್ಕೂ ಇದೀಗ ವಿರಾಮ ಸಿಕ್ಕಿದೆ. ಫೆಸ್ಟೀವ್ ಸೀಸನ್‌ನಲ್ಲಿ ಎಂಟ್ರಿ ನೀಡಿರುವ ಹೊಸ ಟ್ರೆಂಡಿ ಉಡುಪುಗಳ ಹಾಗೂ ಆಕ್ಸೆಸರೀಸ್‌ಗಳ ಮಾರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಾರಿ ಎಲ್ಲಾ ವಯೋಮಾನದವರಿಗೂ ಹೊಂದುವಂತಹ ಊಹೆಗೂ ಮೀರಿದ ಡಿಸೈನರ್ ಉಡುಪುಗಳು ಬಿಡುಗಡೆಗೊಂಡಿವೆ ” ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ.
ಟ್ರೆಡಿಷನಲ್‌ವೇರ್‌ಗೆ ಆದ್ಯತೆ ನೀಡಿ
ಅತ್ಯುತ್ತಮ ಸಂಪ್ರಾದಾಯಿಕ ವಿನ್ಯಾಸದ ಉಡುಪುಗಳು ಈ ಸೀಸನ್‌ನಲ್ಲಿ ಆದ್ಯತೆ ಮೇರೆಗೆ ಬಿಡುಗಡೆಯಾಗುತ್ತವೆ. ವೆಸ್ಟರ್ನ್ ಔಟ್‌ಫಿಟ್‌ಗಳು ಕಡಿಮೆ ಬಿಕರಿಯಾಗುತ್ತವೆ. ಇದಕ್ಕೆ ಕಾರಣ, ಹಬ್ಬಗಳಿಗೆ ಮದುವೆ-ಸಮಾರಂಭಗಳಿಗೆ ಇವು ಸೂಟ್ ಆಗುವುದಿಲ್ಲ. ಫೆಸ್ಟೀವ್ ಸೀಸನ್‌ನಲ್ಲಿ ಟ್ರೆಂಡಿ ಟ್ರೆಡಿಷನಲ್‌ವೇರ್ ಖರೀದಿಗೆ ಜನರು ಆದ್ಯತೆ ನೀಡುತ್ತಾರೆ ಎನ್ನುವ ಸ್ಟೈಲಿಸ್ಟ್ ಈ ಸೀಸನ್‌ನಲ್ಲಿ ಶಾಪಿಂಗ್ ಮಾಡುವವರಿಗೆ ಒಂದಿಷ್ಟು ಸಿಂಪಲ್ ಐಡಿಯಾ ನೀಡಿದ್ದಾರೆ.
ಫೆಸ್ಟಿವ್ ಸೀಸನ್ ಶಾಪಿಂಗ್‌ಗೆ ಹೊರಡುವ ಮುನ್ನ…
– ಶಾಪಿಂಗ್‌ಗೆ ತೆರಳುವಾಗ ಆರಾಮ ಏನಿಸುವ ಉಡುಪುಗಳನ್ನು ಧರಿಸಿ ಹೊರಡಿ.
– ವೀಕೆಂಡ್‌ನಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆ ಎಂಬುದು ತಿಳಿದಿರಲಿ.
– ಕೊಳ್ಳುವ ಟ್ರೆಂಡಿ ಉಡುಪುಗಳ ಬಗ್ಗೆ ಮೊದಲೇ ತಿಳಿದುಕೊಂಡು ಪ್ಲಾನ್ ಮಾಡಿ.
– ಮೊದಲೇ ಎಲ್ಲಿ ಏನು ಲಭ್ಯ ಎಂಬುದನ್ನು ತಿಳಿದು ಶಾಪಿಂಗ್ ಮಾಡಿ.
– ಫೆಸ್ಟೀವ್ ಸೀಸನ್ ಯೂನಿಕ್ ಎಥ್ನಿಕ್ ಫ್ಯಾಷನ್‌ವೇರ್‌ಗಳಿಗೆ ಪ್ರಾಮುಖ್ಯತೆ ನೀಡಿ.
– ಶ್ರಾವಣದಲ್ಲಿ ಡಿಸ್ಕೌಂಟ್ ಹಾಗೂ ಆಫರ್ಸ್ ಸಿಗುವುದು ವಿರಳ. ಈ ಬಗ್ಗೆ ಖಚಿತಪಡಿಸಿಕೊಂಡು ಶಾಪಿಂಗ್ ಮಾಡಿ.
– ಮಾಲ್‌ಗಳಲ್ಲಿ ಪಾಯಿಂಟ್ ಆಧಾರದ ಮೇಲೆ ಉಡುಪುಗಳ ಮೇಲೆ ಕಡಿತ ನೀಡಲಾಗುತ್ತದೆ. ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Season Fashion: ಮಾನಿನಿಯರ ಮನಗೆದ್ದ ಮನಮೋಹಕ ಶೀರ್ ದುಪಟ್ಟಾ