ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಸಮೀಪಿಸುತ್ತಿರುವಂತೆಯೇ ಎಲ್ಲೆಡೆ ಶಾಪಿಂಗ್ ಮೇನಿಯಾ ಶುರುವಾಗಿದೆ. ಹಬ್ಬಕ್ಕೆ ಅಗತ್ಯವಿರುವ ಎಳ್ಳು-ಬೆಲ್ಲ, ಸಕ್ಕರೆ ಅಚ್ಚು ಸೇರಿದಂತೆ ಅಲಂಕಾರಿಕ ಸಾಮಗ್ರಿಗಳ ಮಾರಾಟ ಭರದಿಂದ ಸಾಗಿದೆ. ನಮ್ಮ ಜೀವನಶೈಲಿ ಎಷ್ಟೇ ಆಧುನಿಕ ಆದರೂ ಜನರು ಮಾತ್ರ ಹಬ್ಬಗಳ ಆಚರಣೆಯನ್ನು ಮರೆತಿಲ್ಲ. ಸಮಯದ ಅಭಾವದಿಂದ ಎಲ್ಲರೂ ರೆಡಿಮೇಡ್ ಹಾಗೂ ಇನ್ಸ್ಟಂಟ್ ಹಬ್ಬದ ತಯಾರಿಗೆ ಮೊರೆ ಹೋಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾಗಿರುವ ಎಲ್ಲಾ ಸಾಮಗ್ರಿಗಳು ಸುಲಭವಾಗಿ ದೊರೆಯುತ್ತಿವೆ. ಪರಿಣಾಮವಾಗಿ ಮಾರಾಟ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಎಳ್ಳು-ಬೆಲ್ಲದ ಪ್ಯಾಕೆಟ್
ಹಬ್ಬಕ್ಕೆ ಒಂದು ವಾರ ಮುನ್ನವೇ ಮಾರುಕಟ್ಟೆಯಲ್ಲಿ ನಾನಾ ಬಗೆಯ ಎಳ್ಳು-ಬೆಲ್ಲದ ರೆಡಿಮೇಡ್ ಪ್ಯಾಕೇಟ್‌ಗಳು ದೊರೆಯುತ್ತಿವೆ. ಅರ್ಗಾನಿಕ್ ಶೈಲಿಯವು ಕೂಡ ಪ್ಯಾಕೆಟ್‌ನಲ್ಲಿ ಲಭ್ಯ. ಹುರಿದ ಎಳ್ಳು, ಬೆಲ್ಲ, ಕೊಬ್ಬರಿ, ಜೀರಿಗೆ ಪೆಪ್ಪರ್‌ಮೆಂಟ್‌ಗಳನ್ನು ಬೆರೆಸಿದ ಹಾಗೂ ಪ್ರತ್ಯೇಕವಾಗಿರಿಸಿದ ಪ್ಯಾಕೆಟ್‌ಗಳು ಲಭ್ಯ. ತಿಂಗಳುಗಟ್ಟಲೇ ಶೇಖರಿಸಿಡಬಹುದಾದಂತಹ ಹೋಮ್‌ಮೇಡ್ ಎಳ್ಳು-ಬೆಲ್ಲ ಪ್ಯಾಕೆಟ್‌ಗಳು ಕೂಡ ಬೇಡಿಕೆ ಹೆಚ್ಚಿಸಿಕೊಂಡಿವೆ.
ಬಣ್ಣಬಣ್ಣದ ಸಕ್ಕರೆ ಅಚ್ಚು
ಇನ್ನು ಗುಲಾಬಿ, ಹಳದಿ, ಬಿಳಿ, ಹಸಿರು ಹೀಗೆ ನಾನಾ ಬಗೆಯ ಬಣ್ಣ ಬಣ್ಣದ ಸಕ್ಕರೆ ಅಚ್ಚು ಮಾರುಕಟ್ಟೆಯಲ್ಲಿ ಆಕರ್ಷಕ ಡಿಸೈನ್‌ಗಳಲ್ಲಿ ದೊರೆಯುತ್ತಿವೆ. ಕೆಜಿಗಟ್ಟಲೆ ಹಾಗೂ ಗ್ರಾಂ ಲೆಕ್ಕದಲ್ಲಿ ಬಾಕ್ಸ್‌ಗಳಲ್ಲಿ ದೊರೆಯುತ್ತಿವೆ. ಕೆಲವೆಡೆ ಡಿಸೈನ್ ಇರುವ ಬೆಲ್ಲದ ಅಚ್ಚನ್ನು ಕಾಣಬಹುದು. ಇವು ಡಯಟ್ ಪ್ರೇಮಿಗಳನ್ನು ಸೆಳೆಯುತ್ತಿವೆ.
ಕೃತಕ ತೋರಣಗಳು
ಇದರೊಂದಿಗೆ ಕೃತಕ ಹಸಿರು ತೋರಣಗಳು ಹಾಗೂ ಹೂವುಗಳು ಹಬ್ಬದ ರಂಗು ಹೆಚ್ಚಿಸಲು ಸಜ್ಜಾಗಿವೆ. ಸಂಕ್ರಾಂತಿಯ ಅಲಂಕಾರಕ್ಕೆ ಪೂರಕವಾಗುವ ಬಗೆಬಗೆಯ ಹೂವುಗಳ ತೋರಣ ಹಾಗೂ ಮಾವಿನ ಸೊಪ್ಪಿನಂತೆ ಕಂಗೊಳಿಸುವ ಮಾವಿನ ಎಲೆಗಳ ಕೃತಕ ತೋರಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. “ ಪ್ರತಿ ಹಬ್ಬಕ್ಕೂ ಮಾರುಕಟ್ಟೆಗೆ ತೆರಳಿ ತಂದು ಅಲಂಕಾರ ಮಾಡಲಾಗದಿದ್ದವರೂ ಇಂತಹ ತೋರಣಗಳನ್ನು ಕೊಳ್ಳುತ್ತಾರೆ. ಮನೆಯನ್ನು ಅಲಂಕರಿಸುತ್ತಾರೆ. ಇವನ್ನು ವಾಶ್ ಮಾಡಿ ತೆಗೆದಿಟ್ಟಲ್ಲಿ ಮುಂದಿನ ಹಬ್ಬಕ್ಕೂ ಮರು ಬಳಕೆ ಮಾಡಬಹುದು ಎನ್ನುತ್ತಾರೆ ಮಾರಾಟಗಾರರು.
ಎಳ್ಳು-ಬೆಲ್ಲ ನೀಡುವ ಗಿಫ್ಟ್ ಬಾಕ್ಸ್
ಇನ್ನು ಎಳ್ಳು-ಬೆಲ್ಲವನ್ನು ನೀಡುವ ಗಿಫ್ಟ್ ಬಾಕ್ಸ್‌ಗಳಿಗೂ ಸಾಕಷ್ಟು ಬೇಡಿಕೆಯಿದೆ. ಈ ಸೀಸನ್‌ನಲ್ಲಿ ಇದರೊಳಗೆ ಎಳ್ಳು-ಬೆಲ್ಲ ತುಂಬಿ ನೀಡಬಹುದಾದಂತಹ ಲೆಕ್ಕವಿಲ್ಲದಷ್ಟು ಡಿಸೈನರ್ ಬಾಕ್ಸ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ ಎನ್ನುತ್ತಾರೆ ಮಾರಾಟಗಾರರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Winter Fashion | ಚಳಿಗಾಲದ ಡ್ರೆಸ್‌ಕೋಡ್‌ಗೆ ಸಾಥ್ ನೀಡುವ ಸ್ಟೋಲ್ ಸ್ಟೈಲ್