Site icon Vistara News

Fitness Tips: ವಯಸ್ಸಿಗೂ ಮೀರಿದ ಸದೃಢ ಕಾಯಕ್ಕೆ ಮಿಲಿಂದ್‌ ಸೋಮನ್‌ ಫಿಟ್‌ನೆಸ್‌ ಟಿಪ್ಸ್‌!

milind soman

ಸೂಪರ್‌ ಮಾಡೆಲ್‌, ನಟ ಮಿಲಿಂದ್‌ ಸೋಮನ್‌ (Milind Soman) ಫಿಟ್‌ನೆಸ್‌ನಲ್ಲೂ ದೊಡ್ಡ ಹೆಸರು. ವಯಸ್ಸು 58 ದಾಟಿದರೂ ಈಗಲೂ 30ರ ಯುವಕರನ್ನೂ ನಾಚುವ ಫಿಟ್‌ ದೇಹವನ್ನು ಹೊಂದಿರುವ ಅವರಿಗೆ ಅವರದ್ದೇ ಆದ, ಅಭಿಮಾನಿ ಬಳಗವಿದೆ. ಫಿಟ್‌ನೆಸ್‌ ಗುರಿಗಳನ್ನು (Fitness goals) ಹೊತ್ತ ಯುವ ಹೈದರಿಗೂ ಕೂಡಾ ಮಿಲಿಂದ್‌ ರೋಲ್‌ ಮಾಡೆಲ್‌, ಸ್ಪೂರ್ತಿಯ ಚಿಲುಮೆ! ಸುರಸುಂದರಾಂಗ ಎಂಬ ಹೆಸರು ಪಡೆದಿರುವ ಅವರ ಸದೃಢ ಮೈಕಟ್ಟು, ಕಟ್ಟುಮಸ್ತಾದ ದೇಹ ಸುಖಾಸುಮ್ಮನೆ ಅವರಿಗೆ ದಕ್ಕಿಲ್ಲ. ಅದರ ಹಿಂದೆ ಅವರ ಪರಿಶ್ರಮವಿದೆ. ನಿರಂತರ, ನಿಯಮಿತವಾದ ಶಿಸ್ತುಬದ್ಧ ಜೀವನವಿದೆ. ಆಹಾರ ಕ್ರಮವಿದೆ. ವಯಸ್ಸನ್ನೂ ಮೀರಿದ ಫಿಟ್‌ನೆಸ್‌ ಹಾಗೂ ಆರೋಗ್ಯ ಪಡೆಯಲು ವ್ಯಾಯಾಮವನ್ನು ಹೇಗೆ ಸ್ವೀಕರಿಸಬೇಕು ಎಂಬ ಬಗ್ಗೆ ಅವರ ಅಮೂಲ್ಯ ಸಲಹೆಗಳು (Fitness Tips) ಇಲ್ಲಿವೆ.

1. ವ್ಯಾಯಾಮ ನಿಧಾನವಾಗಿ ಆರಂಭಿಸಿ. ಹೌದು. ನಿಧಾನವೇ ಪ್ರಧಾನ ಎಂಬ ಮಾತನ್ನು ನಾವು ಖಂಡಿತವಾಗಿಯೂ ಜೀವನದಲ್ಲಿ ಎಲ್ಲೆಲ್ಲಿ ಬಳಸಬಹುದೋ ಅಲ್ಲಿಗೆ ಸರಿಯಾಗಿ ಬಳಸಬಹುದು. ಅಂದರೆ, ನೀವು ಫಿಟ್‌ ಆಗಿಲ್ಲದೆ ಇದ್ದರೆ, ಫಿಟ್‌ನೆಸ್‌ ಪಡೆಯಲು ಇದ್ದಕ್ಕಿದ್ದಂತೆ ವರ್ಕೌಟ್‌ ಆರಂಭಿಸಬಾರದು. ನಿಧಾನವಾಗಿ ಒಂದೊಂದೇ ಹೆಜ್ಜೆ ಇಟ್ಟರೆ ನಿಮ್ಮ ಗುರಿ ತಲುಪುವಿರಿ. ಕಡಿಮೆ ಸಾಮರ್ಥ್ಯ ಬೇಡುವ ವರ್ಕೌಟ್‌ನಿಂದ ಆರಂಭಿಸಿ. ನಿಧಾನವಾಗಿ ನಿಮ್ಮ ಶಕ್ತಿಗೆ ಅನುಸಾರವಾಗಿ ಒಂದೊಂದೇ ವ್ಯಾಯಾಮಗಳನ್ನು ಹೆಚ್ಚಿಸುವ ಮೂಲಕ ನಿಮ್ಮ ಗುರಿಯತ್ತ ಪಯಣಿಸಬಹುದು. ಒಮ್ಮೆಲೆ ಅತಿಯಾಗಿ ಮಾಡಬೇಡಿ.

2. ನೀವು ಮಾಡುವ ವ್ಯಾಯಾಮ ಎಷ್ಟೇ ಕಡಿಮೆ ಸಾಮರ್ಥ್ಯದ್ದೇ ಆಗಿರಲಿ, ಆರಂಭಿಕ ಹಂತದಲ್ಲೇ ಇರಲಿ, ನಿಯಮಿತವಾಗಿ ಮಾಡುವುದು ಬಹಳ ಮುಖ್ಯ. ದಿನಕ್ಕೆ ಕಡಿಮೆ ಅಂದರೆ ಒಂದರ್ಧ ಗಂಟೆ ಬಿಡುವು ಮಾಡಿಕೊಂಡು ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ. ನಿಮ್ಮ ಸಾಮರ್ಥ್ಯಕ್ಕೆ ನುಗುಣವಾಗಿ ಮಾಡಿ. ಸಾಮರ್ಥ್ಯ ಹೆಚ್ಚಿದ ಮೇಲೆ ನಿಧಾನವಾಗಿ ವ್ಯಾಯಾಮದ ತೀವ್ರತೆಯನ್ನು ಹೆಚ್ಚಿಸಿ.

3. ವ್ಯಾಯಾಮದಲ್ಲಿ ಬದಲಾವಣೆಯಿರಲಿ. ನಿತ್ಯವೂ ಒಂದೇ ಬಗೆಯ ವ್ಯಾಯಾಮದಿಂದ ಬೇಸರ ಬರಬಹುದು. ಅದಕ್ಕಾಗಿ ಬೇರೆ ಬೇರೆ ಬಗೆಯ ವ್ಯಾಯಾಮದ ಮೊರೆ ಹೋಗಿ. ಒಮ್ಮೆ ಕಾರ್ಡಿಯೋ, ಇನ್ನೊಮ್ಮೆ ಸ್ಟ್ರೆಂಥ್‌ ಟ್ರೈನಿಂಗ್‌ ಹೀಗೆ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವ್ಯಾಯಾಮದಲ್ಲಿ ಬದಲಾವಣೆಯಿರಲಿ.

4. ನಿಮ್ಮ ದೇಹದ ಬಗ್ಗೆ ಕಾಳಜಿಯಿರಲಿ. ನಿಮ್ಮ ದೇಹದ ಮಿತಿಗಳ ಬಗ್ಗೆ ಅರಿವೂ ಇರಲಿ. ಅತಿಯಾಗಿ ದೇಹವನ್ನು ದಂಡಿಸುವುದು ಬೇಡ. ವರ್ಕೌಟ್‌ಗಳ ಮಧ್ಯೆ ಕೊಂಚ ವಿಶ್ರಾಂತಿಯಿರಲಿ. ಕಡಿಮೆ ಅವಧಿಯಲ್ಲಿ ಸಾಮರ್ಥ್ಯಕ್ಕೆ ಮೀರಿದ ಗುರಿಗಳನ್ನು ಹೊಂದಬೇಡಿ. ನಿಧಾನವಾಗಿ ಸಾಗಿ.

5. ಕೆಲವೊಮ್ಮೆ ಒಬ್ಬರೇ ವರ್ಕೌಟ್‌ ಮಾಡುವುದು ಬಹಳ ಉದಾಸೀನತೆಯನ್ನು ತಂದುಕೊಡುತ್ತದೆ. ಅದಕ್ಕಾಗಿ, ಸ್ನೇಹಿತರೊಬ್ಬರು ಜೊತೆಗಿದ್ದರೆ ಸ್ಪೂರ್ತಿಯೂ ಹೆಚ್ಚುತ್ತದೆ. ಒಬ್ಬರಿಗೊಬ್ಬರು ಸ್ಪೂರ್ತಿ ನೀಡುತ್ತಾ ವರ್ಕೌಟ್‌ ಮಾಡುವುದರಿಂದ ಗುರಿಯತ್ತ ಸುಲಭವಾಗಿ ಮುನ್ನಡೆಯಲು ಸಹಾಯವಾಗುತ್ತದೆ.

6. ಹಲವು ಮಾಂಸಖಂಡಗಳ ಮೇಲೆ ಏಕಕಾಲಕ್ಕೆ ಪರಿಣಾಮ ಬೀರುವಂಥ ಕೆಲವು ವ್ಯಾಯಾಮಗಳನ್ನು ನಿಮ್ಮ ವ್ಯಾಯಾಮದಲ್ಲಿ ಸೇರಿಸಿಕೊಳ್ಳಿ. ಉದಾಹರಣೆಗೆ ಪುಶ್‌ ಅಪ್‌, ಸ್ಕ್ಯ್ವಾಟ್ಸ್‌ ಇತ್ಯಾದಿಗಳು. ಆದರೆ, ನಿಮ್ಮ ಸಾಮರ್ಥ್ಯವನ್ನು ಮೀರಿದ್ದನ್ನು ಆರಿಸಬೇಡಿ. ಸ್ಟ್ರೆಂಥ್‌ ಟ್ರೈನಿಂಗ್‌ ಕೂಡಾ ಆಗಾಗ ಅಗತ್ಯ.

7. ಸಮತೋಲಿತ ಆಹಾರವನ್ನು (fitness diet) ಸೇವಿಸಿ. ವ್ಯಾಯಾಮದ ಜೊತೆಜೊತೆಗೆ ಉತ್ತಮ ಪೋಷಕಾಂಶಯುಕ್ತ ಆಹಾರ ಸೇವನೆ ಅತ್ಯಂತ ಅಗತ್ಯ.

8. ಸರಿಯಾಗಿ ನಿದ್ದೆ ಮಾಡಿ. ವ್ಯಾಯಾಮದ ಜೊತೆಗೆ ಆರೋಗ್ಯವೂ ಅತ್ಯಂತ ಮುಖ್ಯ. ಹಾಗಾಗಿ ಪ್ರತಿನಿತ್ಯವೂ ರಾತ್ರಿ ಏಳರಿಂದ ಎಂಟು ಗಂಟೆಗಳ ನಿದ್ದೆ ಅತ್ಯಂತ ಮುಖ್ಯ. ರಾತ್ರಿ ಬೇಗನೆ ಮಲಗಿ ಬೇಗನೆ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಇದನ್ನೂ ಓದಿ: Fitness Tips: ಸಸ್ಯಾಹಾರ ಮಾತ್ರ ತಿಂದು ಕಟ್ಟುಮಸ್ತಾದ ದೇಹ ಹೊಂದಲು ಸಾಧ್ಯವೇ?

Exit mobile version