Site icon Vistara News

ದಕ್ಷಿಣ ಕೊರಿಯಾದಲ್ಲಿ ಸೃಷ್ಟಿಯಾಗುತ್ತಿದೆ ಸ್ವಾವಲಂಬಿ ʼತೇಲುವ ನಗರʼ

ಸುಮಾರು 12,000 ಜನ ವಾಸಿಸಬಲ್ಲ, ತನ್ನ ಬಹುತೇಕ ಅವಶ್ಯಕತೆಗಳನ್ನು ತಾನೇ ಪೂರೈಸಿಕೊಳ್ಳಬಲ್ಲ ಸುಸ್ಥಿರ “ತೇಲುವ ನಗರʼ ಒಂದನ್ನು ದಕ್ಷಿಣ ಕೊರಿಯಾ ಸಮುದ್ರದ ಮೇಲೆ ನಿರ್ಮಿಸುತ್ತಿದೆ. ನಿರೀಕ್ಷೆಯಂತೆ ನಿರ್ಮಾಣ ನಡೆದರೆ ಮುಂದಿನ ವರ್ಷವೇ ಸಿದ್ಧವಾಗಲಿದೆ.

ದಕ್ಷಿಣ ಕೊರಿಯಾದ ಎರಡನೇ ಅತಿ ದೊಡ್ಡ ನಗರ, ಅತಿದೊಡ್ಡ ಬಂದರು ನಗರ ಬುಸಾನ್‌ನಲ್ಲಿ ಸ್ಥಾಪನೆಯಾಗಲಿರುವ ಈ ನಗರದ ಹೆಸರು ಓಶಿಯಾನಿಕ್ಸ್‌ ಬುಸಾನ್.‌ ಇದರ ನಿರ್ಮಾಣಕ್ಕೆ ವಿಶ್ವಸಂಸ್ಥೆ ಕೂಡ ಕೈಜೋಡಿಸಲಿದೆ. ಸುಮಾರು 15.5 ಎಕರೆ ಜಾಗದಲ್ಲಿ ಇದು ಹರಡಿಕೊಳ್ಳಲಿದೆ.

ನಗರಗಳಲ್ಲಿ ಇರುವ ಎಲ್ಲವೂ ಇಲ್ಲಿರಲಿದೆ- ಅಪಾರ್ಟ್‌ಮೆಂಟ್‌ಗಳು, ಮಾರುಕಟ್ಟೆಗಳು, ಆಫೀಸ್‌ಗಳು, ಪಾರ್ಕ್‌ಗಳು, ಹಸಿರು ಇಂಧನ ಗ್ರಿಡ್‌ಗಳು ಇತ್ಯಾದಿ. ಈ ನಗರ ತನ್ನ ವಿದ್ಯುತ್‌ ಹಾಗೂ ನೀರಿನ ವ್ಯವಸ್ಥೆಯನ್ನು ತಾನೇ ನೋಡಿಕೊಳ್ಳಲಿದೆ.

ಡ್ಯಾನಿಶ್‌ ಆರ್ಕೆಟೆಕ್ಟ್‌ ಜೇರ್ಕ್‌ ಇಂಗೆಲ್ಸ್‌ ಎಂಬಾತ ಈ ಪರಿಕಲ್ಪನೆಯ ರೂವಾರಿ. 2019ರಲ್ಲಿ ಒಂದು ಟೆಡ್‌ ಟಾಕ್‌ನಲ್ಲಿ ತನ್ನ ಚಿಂತನೆಯನ್ನು ಈತ ಹಂಚಿಕೊಂಡಿದ್ದ. ಅವನ ಪ್ರಕಾರ, ಸಮುದ್ರದ ಅಲೆಗಳ ಶಕ್ತಿ, ಸಮುದ್ರದ ಒತ್ತಡ, ಶಾಖ ಹಾಗೂ ಸೌರ ಶಾಖ ಎಲ್ಲವನ್ನೂ ವಿದ್ಯುತ್‌ ಉತ್ಪಾದನೆಗೆ ಈ ನಗರ ಬಳಸಿಕೊಳ್ಳಲಿದೆ.

ಇಲ್ಲಿ ಬೀಳುವ ಮಳೆಯ ಒಂದು ಹನಿಯೂ ವ್ಯರ್ಥವಾಗದಂತೆ ಸಂಗ್ರಹಿಸಲಾಗುತ್ತದೆ. ಸಾಧ್ಯವಾದಷ್ಟು ತನ್ನ ಆಹಾರವನ್ನು ತಾನೇ ಬೆಳೆದುಕೊಳ್ಳಲಿದೆ. ಪ್ರತಿ ಮನೆಯ ಪ್ರತಿ ಕಸವೂ ರಿಸೈಕಲ್‌ಗೆ ಬಳಕೆಯಾಗುವಂತೆ ವ್ಯವಸ್ಥೆ. ಕಸ ಸೃಷ್ಟಿಯ ಪ್ರಮಾಣ ಹೊಂದಿಕೊಂಡು ಶುಲ್ಕ ವಿಧಿಸಲಾಗುತ್ತದೆ.

ಇನ್ನೂ ನೂರು ವರ್ಷಗಳ ಕಾಲ, ಸಮುದ್ರದ ಮಟ್ಟ ಏರಿದರೂ ಈ ನಗರಕ್ಕೆ ಏನೂ ಆಗಬಾರದು- ಪ್ಲಾನು ಹಾಗಿರಲಿದೆಯಂತೆ.

ನಗರವನ್ನು ಬಲವಾದ ಸ್ತಂಭಗಳ ಮೇಲೆ ನಿರ್ಮಿಸಲಾಗುತ್ತದೆ. ಆದರೆ ಕಟ್ಟಡಗಳನ್ನು ಹಗುರವಾದ ಮರ, ಬಿದಿರು, ಸುಣ್ಣದ ಕಲ್ಲಿನ ಬಯೋರಾಕ್‌ಗಳಿಂದ ನಿರ್ಮಿಸಲಾಗುತ್ತದಂತೆ. ಐದು ಮಹಡಿಗಿಂತ ಹೆಚ್ಚಿನ ಎತ್ತರದ ಕಟ್ಟಡಗಳಿಲ್ಲ. ಇಲ್ಲಿನ ಜನ ಕಾರು, ಬಸ್ಸು ಬಳಸುವುದಿಲ್ಲ, ಬದಲಾಗಿ ಬೈಸಿಕಲ್ಲುಗಳ ಮೇಲೆ ಓಡಾಡುತ್ತಾರೆ, ಅಥವಾ ವಾಕಿಂಗ್.‌
ಇಂಥದೇ ಹತ್ತಾರು ನಗರಗಳನ್ನು ಜಗತ್ತಿನ ವಿವಿಧ ಕಡೆ ನಿರ್ಮಿಸುವ ಚಿಂತನೆ ಇಂಗೆಲ್ಸ್‌ಗೆ ಇದೆ. ಸದ್ಯ ವಿಶ್ವಸಂಸ್ಥೆಯ ಯೋಜನೆಯಡಿ ನಿರಾಶ್ರಿತರ ವಸತಿ ಸೌಲಭ್ಯಕ್ಕಾಗಿ ಈ ನಗರ ಮೀಸಲಾಗಿರಲಿದೆ.

ಇದನ್ನೂ ಓದಿ: Explainer: ಹಿಂದಿ ರಾಷ್ಟ್ರಭಾಷೆ ಹೌದೋ, ಅಲ್ಲವೋ?

Exit mobile version