ಪ್ರತಿಯೊಬ್ಬರಿಗೂ ಹಣ್ಣು ನಮ್ಮ ಆರೋಗ್ಯಕ್ಕೆ ಒಳ್ಳೆಯದೆಂದು ಗೊತ್ತು. ದೇಹದ ಆರೋಗ್ಯವನ್ನು ಹೆಚ್ಚಿಸಿ, ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸಿ, ನಮ್ಮ ಸಣ್ಣಪುಟ್ಟ ಕಾಯಿಲೆಗಳಿಗೆ ಪರಿಹಾರ ಒದಗಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಹಣ್ಣುಗಳ ಪಾತ್ರ ದೊಡ್ಡದು (Fruit diet). ಆದರೆ, ಬಹಳಷ್ಟು ಸಾರಿ ನಮಗೆ ಈ ಹಣ್ಣುಗಳನ್ನು ಯಾವ ಹೊತ್ತಿನಲ್ಲಿ ತಿಂದರೆ ಇದರ ಸಂಪೂರ್ಣ ಲಾಭ ಪಡೆಯಬಹುದು (Best Time to Eat Fruit) ಎಂಬ ಬಗ್ಗೆ ಮಾತ್ರ ಗೊಂದಲಗಳಾಗುತ್ತವೆ. ಹಣ್ಣುಗಳು ಒಳ್ಳೆಯದೆಂದು ಯಥೇಚ್ಛ ಹಣ್ಣು ತಿಂದರೆ ಲಾಭವಾಗುವುದಿಲ್ಲ, ನಷ್ಟವೇ ಹೆಚ್ಚು. ಪ್ರತಿಯೊಂದಕ್ಕೂ ಅದರದ್ದೇ ಆದ ಪ್ರಕೃತಿ ನಿಯಮಗಳಿವೆ. ಜೊತೆಗೆ ಎಷ್ಟು ಹಣ್ಣು ಯಾವಾಗ ದೇಹಕ್ಕೆ ಸೇರಿದರೆ ಒಳ್ಳೆಯದು ಎಂಬುದೂ ನಮಗೆ ತಿಳಿದಿರಬೇಕು.
೧. ಯಾವಾಗ ತಿನ್ನಬೇಕು?: ಕೆಲವರ ಪ್ರಕಾರ ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಎದ್ದ ಕೂಡಲೇ ಹಣ್ಣು ತಿನ್ನುವುದು ಒಳ್ಳೆಯದು ಎಂಬ ನಂಬಿಕೆಯಿದೆ. ಇದು, ದೇಹದಲ್ಲಿ ಪಚನಕ್ರಿಯೆಗೆ ವೇಗವನ್ನು ಒದಗಿಸಿ, ತೂಕವನ್ನು ಸರಿಯಾಗಿಟ್ಟು, ದೇಹದ ಕಶ್ಮಲಗಳನ್ನು ಹೊರಗೆ ಕಳಿಸಿ ಅರೋಗ್ಯದ ಕಡೆಗೆ ಹೆಜ್ಜೆಯಿಡುವಂತೆ ಮಾಡುತ್ತದೆ ಎಂಬುದು ಆ ವಾದ. ಇನ್ನೂ ಕೆಲವರು ಹಣ್ಣುಗಳನ್ನು ಮಧ್ಯಾಹ್ನದ ಮೇಲೆ ತಿನ್ನುವುದು ಒಳ್ಳೆಯದು ಎಂದೂ ವಾದ ಮಾಡುತ್ತಾರೆ. ಆದರೆ ಇದಕ್ಕೆ ವೈಜ್ಞಾನಿಕ ಹುರುಳಿಲ್ಲ. ಆದರೆ, ಮಧ್ಯಾಹ್ನವಿರಲಿ ಬೆಳಗ್ಗೇ ಇರಲಿ, ಹಣ್ಣು ತಿನ್ನುವುದರಿಂದ ಪಚನಕ್ರಿಯೆ ವೇಗವನ್ನು ಪಡೆಯುತ್ತದೆ ಎಂಬುದಂತೂ ನಿಜ. ಯಾವುದೇ ಹೊತ್ತಿನಲ್ಲಿ ಖಾಲಿ ಹೊಟ್ಟೆಯಲ್ಲಿ ಹಣ್ಣು ತಿನ್ನುವುದರಿಂದ ಸುಲಭವಾಗಿ ಜೀರ್ಣವಾಗಿ, ದೇಹಕ್ಕೆ ಬೇಕಾದ ಶಕ್ತಿಯನ್ನು ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಬೆಳಗ್ಗೆ ಹಣ್ಣು ತಿಂದರೆ, ದಿನವಿಡೀ ಉಲ್ಲಾಸದಾಯಕವಾಗಿ ಕಳೆಯುವುದೂ ಹೌದು.
೨. ಊಟದ ಜೊತೆಗೆ ಹಣ್ಣು ಒಳ್ಳೆದೋ ಕೆಟ್ಟದ್ದೋ?: ಊಟದ ಜೊತೆಗೆ ಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ ಹಾಗೂ ತಿಂದ ಆಹಾರ ಹುಳಿ ಬಂದು ಹೊಟ್ಟೆಯಲ್ಲಿ ಕೊಳೆತಂತಾಗುತ್ತದೆ ಎಂಬ ನಂಬಿಕೆಯಿದೆ. ಅಸಿಡಿಟಿ, ಹೊಟ್ಟೆನೋವು, ಹಾಗೂ ಜೀರ್ಣಕ್ರಿಯೆ ಸಂಬಂಧಿಸಿದ ತೊಂದರೆಗಳು ಇದರಿಂದ ಉಂಟಾಗಬಹುದು. ಹಣ್ಣಿನಲ್ಲಿರುವ ಅಧಿಕ ನಾರಿನಂಶದಿಂದಾಗಿ ಊಟದ ಜೊತೆ ತಿನ್ನುವುದರಿಂದಾಗಿ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಆದರೆ ಹಣ್ಣು ಊಟದ ಜೊತೆ ತಿನ್ನುವುದರಿಂದ ಹೊಟ್ಟೆಯಲ್ಲಿ ಹೆಚ್ಚು ಹೊತ್ತು ಕರಗದೆ ಇರುತ್ತದೆ ಎಂಬುದಕ್ಕೆ ಆಧಾರಗಳಿಲ್ಲ. ಬದಲಾಗಿ, ಹಣ್ಣು ಹೊಟ್ಟೆ ಬೇಗ ತುಂಬಲು ಸಹಾಯ ಮಾಡುತ್ತದೆ ಹಾಗೂ ಹೆಚ್ಚು ಹೊತ್ತು ಕೆಲಸ ಮಾಡಲು ಶಕ್ತಿ ನೀಡುತ್ತದೆ.
ಇದನ್ನೂ ಓದಿ: Health Tips | ತೂಕ ಇಳಿಸಿ, ಹಸಿವು ನಿಯಂತ್ರಿಸಲು ಬೇಕು ಮಸಾಲೆ ಚಹಾ!
೩. ಮಧುಮೇಹಿಗಳೂ, ಹಣ್ಣುಗಳೂ: ಮಧುಮೇಹಿಗಳಿಗೆ ಅನ್ವಯಿಸಿ ಹೇಳುವುದಾದರೆ, ಹಣ್ಣು ತಿನ್ನುವ ಸಮಯ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಖಾಲಿ ಹೊಟ್ಟೆಯಲ್ಲಿ ಅಥವಾ ಹಣ್ಣುಗಳನ್ನು ಮಾತ್ರ ತಿನ್ನುವುದರಿಂದ ಮಧುಮೇಹದ ತೊಂದರೆ ಇರುವ ಮಂದಿಯಲ್ಲಿ ಬಹಳ ವೇಗವಾಗಿ ಹಣ್ಣಿನಲ್ಲಿರುವ ಕಾರ್ಬೋಹೈಡ್ರೇಟ್ ಹಾಗೂ ಸಕ್ಕರೆ ದೇಃಕ್ಕೆ ಸೇರುವುದರಿಂದ ಸಕ್ಕರೆಯ ಪ್ರಮಾಣ ದಿಢೀರ್ ಏರುವ ಸಾಧ್ಯತೆಗಳೇ ಹೆಚ್ಚು. ಅದಕ್ಕಾಗಿ ಮಧುಮೇಹಿಗಳು ಹಣ್ಣುಗಳನ್ನು ತಿನ್ನುವಾಗ ಊಟದ ಜೊತೆಗೆ, ಅಥವಾ ಪ್ರೊಟೀನ್, ಕೊಬ್ಬು ಹಾಗೂ ನಾರಿನಂಶ ಅಧಿಕವಾಗಿರುವ ಇತರ ಯಾವುದೇ ಆಹಾರದ ಜೊತೆಗೆ ತಿನ್ನಬಹುದು.
೪. ಎರಡು ಊಟದ ಮಧ್ಯೆ ಹಣ್ಣು: ಎರಡು ಊಟಗಳ ಮಧ್ಯದ ಖಾಲಿ ಸಮಯದಲ್ಲಿ ಹಣ್ಣು ತಿನ್ನುವುದು ಒಳ್ಳೆಯ ಅಭ್ಯಾಸ. ಯಾಕೆಂದರೆ, ಈ ಸಮಯದಲ್ಲಿ ದೇಹ ಈಗಾಗಲೇ ಆಹಾರವನ್ನು ಕರಗಿಸಿ ಒಂದಿಷ್ಟು ಗ್ರಂಥಿಗಳು ಒಂದಿಷ್ಟು ರಸಗಳನ್ನು ದೇಹದಲ್ಲಿ ಬಿಡುಗಡೆ ಮಾಡಿರುತ್ತವೆ. ಇವು ಹಣ್ಣುಗಳನ್ನು ಕರಗಿಸುವಲ್ಲಿ ಸಹಾಯ ಮಾಡುತ್ತವೆ. ಜೊತೆಗೆ ಹೀಗೆ ಹಣ್ಣು ತಿನ್ನುವುದರಿಂದ ಹೊಟ್ಟೆ ಹೆಚ್ಚು ಹಸಿಯದೆ, ಮುಂದಿನ ಊಟದ ಸಮಯಕ್ಕೆ ಅತಿಯಾಗಿ ಉಣ್ಣುವುದು ತಪ್ಪುತ್ತದೆ. ಈ ಹಣ್ಣುಗಳ ಜೊತೆಗೆ ಒಣಬೀಜಗಳನ್ನೂ ಸೇರಿಸಿ ತಿನ್ನುವುದು ಕೂಡಾ ಒಳ್ಳೆಯ ಅಭ್ಯಾಸ.
ಹಣ್ಣುಗಳನ್ನು ಸೇವಿಸುವುದು ಬಹಳ ಒಳ್ಳೆಯ ಅಭ್ಯಾಸ. ಎಷ್ಟೇ ಹೊತ್ತಿಗೆ ಹಣ್ಣು ಸೇವಿಸಿದರೂ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಇವು ನೀಡುತ್ತದೆ. ಇಂಥದ್ದೇ ಸಮಯದಲ್ಲಿ ಹಣ್ಣು ತಿಂದರೆ ಒಳ್ಳೆಯದು ಎಂಬ ನಿಯಮಗಳೇನಿಲ್ಲ. ಸಮತೋಲನದ ಜೀವನಶೈಲಿಯನ್ನು ರೂಪಿಸಿಕೊಂಡು ಹಣ್ಣುಗಳ ಸೇವನೆಯನ್ನು ನಿತ್ಯದ ಜೀವನದಲ್ಲಿ ರೂಢಿಸಿಕೊಂಡರೆ ಆರೋಗ್ಯವಾಗಿರಲು ಸಾಧ್ಯ.
ಇದನ್ನೂ ಓದಿ: Health Tips | ಈ ಕಾಂಬಿನೇಷನ್ ಆಹಾರಗಳು ತೊಂದರೆ ತರಬಹುದು, ಜಾಗ್ರತೆ!