ಭಾರತೀಯ ಅಡುಗೆಗಳಲ್ಲಿ ಎಣ್ಣೆಗೆ ಮುಖ್ಯ ಸ್ಥಾನವಿದೆ. ನಿತ್ಯವೂ ಏನಾದರೊಂದು ಕರಿಯಲು ಎಣ್ಣೆ ಬೇಕೇ ಬೇಕಾಗುತ್ತದೆ. ಭಾರತೀಯ ಅಡುಗೆಯ ಜೀವಾಳವಾದ ಒಗ್ಗರಣೆಗೂ ಎಣ್ಣೆ ಬೇಕೇ ಬೇಕು. ಬಗೆಬಗೆಯ ಖಾದ್ಯಗಳು, ತರಹೇವಾರಿ ಅಡುಗೆಗಳು, ಕುರುಕಲು ತಿಂಡಿಗಳು ಸೇರಿದಂತೆ ಎಲ್ಲವುಗಳ ತಯಾರಿಯಲ್ಲೂ ಎಣ್ಣೆಗೆ ಪ್ರಮುಖ ಸ್ಥಾನವಿದೆ. ಮಾರುಕಟ್ಟೆಯಲ್ಲಿ ಬೇಕಾದಷ್ಟು ಬಗೆಯ ಅಡುಗೆ ಎಣ್ಣೆಗಳು ಲಭ್ಯವಿವೆ. ಪ್ರತಿ ಎಣ್ಣೆಯೂ ಉಳಿದ ಎಣ್ಣೆಗಳಿಗಿಂತ ತಾನೇ ಶ್ರೇಷ್ಠ, ನಿಮ್ಮ ಆರೋಗ್ಯಕ್ಕೆ ನನ್ನನ್ನೇ ಬಳಸಿ ಎನ್ನುವ ಜಾಹಿರಾತುಗಳು ಗ್ರಾಹಕನನ್ನು ಸಂದಿಗ್ಧಕ್ಕೆ ದೂಡುತ್ತದೆ. ಎಂತಹ ಎಣ್ಣೆಯನ್ನು ಖರೀದಿಸಬೇಕು, ನಿಜಕ್ಕೂ ಯಾವ ಎಣ್ಣೆ ಆರೋಗ್ಯಕ್ಕೆ ಯೋಗ್ಯ ಎಂಬ ಗೊಂದಲದಲ್ಲಿ ತಲೆಕೆಡಿಸಿಕೊಳ್ಳುತ್ತಾನೆ. ಬನ್ನಿ, ಭಾರತೀಯ ಅಡುಗೆಗಳಿಗೆ ಸೂಕ್ತವಾದ ಎಣ್ಣೆ ಯಾವುವು ಎಂಬುದನ್ನು ನೋಡೋಣ.
ಎಲ್ಲ ಕೊಬ್ಬೂ ಕೂಡಾ ಸ್ಯಾಚುರೇಟೆಡ್ ಹಾಗೂ ಅನ್ ಸ್ಯಾಚುರೇಟೆಡ್ ಕೊಬ್ಬಿನ ಮಿಶ್ರಣವಾಗಿದ್ದು, ಹೆಚ್ಚು ಸ್ಯಾಚುರೇಟೆಡ್ ಕೊಬ್ಬಿರುವ ಎಣ್ಣೆಗಿಂತ, ಅನ್ ಸ್ಯಾಚುರೇಟೆಡ್ ಕೊಬ್ಬಿರುವ ಎಣ್ಣೆ ಉತ್ತಮ. ಇದು ಕೆಟ್ಟ ಕೊಲೆಸ್ಟೆರಾಲ್ ಅನ್ನು ಕಡಿಮೆ ಮಾಡಿ, ಒಳ್ಳೆಯ ಕೊಬ್ಬನ್ನು ದೇಹಕ್ಕೆ ಸೇರುವಂತೆ ಮಾಡುತ್ತದೆ. ಇದರಿಂದ ಇಂತಹ ಎಣ್ಣೆಗಳು ಹೃದಯಕ್ಕೆ ಹೆಚ್ಚು ಕೆಟ್ಟದನ್ನು ಮಾಡಲಾರವು. ಆದರೆ, ದೇಹಕ್ಕೆ ಒಳ್ಳೆಯ ಕೊಬ್ಬಿನ ಅಗತ್ಯವಿರುವುದು ಹೌದಾದರೂ, ಯಾವುದೇ ಎಣ್ಣೆಯಿರಲಿ, ಅತಿಯಾದ ಸೇವನೆ ಒಳ್ಳೆಯದಲ್ಲ. ಬನ್ನಿ, ಭಾರತೀಯ ಅಡುಗೆಗಳಲ್ಲಿ ಕರಿಯಲು ಯೋಗ್ಯವಾದ ಐದು ಎಣ್ಣೆಗಳು ಯಾವುವು (Cooking Oils) ಎಂಬುದನ್ನು ನೋಡೋಣ.
ರೈಸ್ ಬ್ರಾನ್ ಎಣ್ಣೆ
ರೈಸ್ ಬ್ರಾನ್ ಅಥವಾ ಅಕ್ಕಿಯ ಹೊರಕವಚದಿಂದ ತಯಾರಿಸಲ್ಪಡುವ ಈ ಎಣ್ಣೆಯಲ್ಲಿ ಒಳ್ಳೆಯ ಕೊಬ್ಬು ಹೆಚ್ಚಿದೆ. ಆಲಿವ್ ಎಣ್ಣೆ, ಅವಕಾಡೋ ಎಣ್ಣೆಯಂತೆ ಇದು ಹೃದಯ ಸ್ನೇಹಿ. ಜಪಾನ್‌ನ ಸರ್ಕಾರ ಇದನ್ನು ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಸೇರಿಸಿದ್ದು, ಇನ್ಸುಲಿನ್ ಮಟ್ಟದ ಮೇಲೆ ಪರಿಣಾಮ ಬೀರದೆ, ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಇಳಿಸಲೂ ಕೂಡಾ ಇದು ನೆರವಾಗುತ್ತದೆ. ಇದರಲ್ಲಿ ಕ್ಯಾನ್ಸರ್ ನಿರೋಧಕ ಗುಣಗಳೂ ಇದ್ದು, ಇದನ್ನು ಭಾರತೀಯ ಅಡುಗೆಗಳಲ್ಲಿ ಇತ್ತೀಚೆಗೆ ಹೇರಳವಾಗಿ ಬಳಸಲಾಗುತ್ತದೆ.
ಸಾಸಿವೆ ಎಣ್ಣೆ
ಎರುಸಿಕ್ ಆಸಿಡ್ ಎಂಬ ಫ್ಯಾಟಿ ಆಸಿಡ್ ಅನ್ನು ಹೊಂದಿರುವ ಸಾಸಿವೆ ಎಣ್ಣೆಯನ್ನು ಯುರೋಪ್ ಹಾಗೂ ಯುಸ್‌ಗಳಲ್ಲಿ ನಿಷೇಧಿಸಿದ್ದರೂ, ಭಾರತದಲ್ಲಿ ಹೇರಳವಾಗಿ ಬಳಕೆಯಾಗುವ ಎಣ್ಣೆ. ಮುಖ್ಯವಾಗಿ ಉತ್ತರ ಭಾರತದ ಮಂದಿ ಅಡುಗೆಗೆ ಬಳಸುವ ಈ ಸಾಸಿವೆ ಎಣ್ಣೆಯಲ್ಲಿ ಒಮೆಗಾ 3 ಹಾಗೂ ಒಮೆಗಾ 6 ಫ್ಯಾಟಿ ಆಸಿಡ್‌ಗಳಿದ್ದು, ಕಡಿಮೆ ಸ್ಯಾಚುರೆಟೆಡ್ ಫ್ಯಾಟ್ ಹೊಂದಿದೆ. ಇದರಲ್ಲಿ ಆಂಟಿ ಮೈಕ್ರೋಬಿಯಲ್, ಆಂಟಿ ಬಯಾಟಿಕ್ ಗುಣಗಳೂ ಇದ್ದು, ಕೆಲವು ಬಗೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುವ ಶಕ್ತಿಯನ್ನು ಹೊಂದಿದೆ.
ಸೂರ್ಯಕಾಂತಿ ಎಣ್ಣೆ
ಇತ್ತೀಚೆಗಿನ ದಿನಗಳಲ್ಲಿ ಸಾಕಷ್ಟು ಮನೆಗಳಲ್ಲಿ ಸ್ಥಾನ ಪಡೆದಿರುವ ಸೂರ್ಯಕಾಂತಿ ಎಣ್ಣೆಯಲ್ಲಿ ಹೃದಯ ಸ್ನೇಹಿ ಗುಣಗಳಿವೆ. ಇದರಲ್ಲಿ ಪಾಳಿ ಅನ್ ಸ್ಯಾಚುರೇಟೆಡ್ ಕೊಬ್ಬಿನ ಅಂಶಗಳು ಹೆಚ್ಚಿರುವುದರಿಂದ ಒಳ್ಳೆಯ ಕೊಬ್ಬನ್ನು ಪ್ರೋತ್ಸಾಹಿಸುತ್ತದೆ. ವಿಟಮಿನ್ ಇ ಇದರಲ್ಲಿ ಹೇರಳವಾಗಿದ್ದು, ಮಿದುಳಿನ ಆರೋಗ್ಯಕ್ಕೆ ಒಳ್ಳೆಯದು. ಕರಿಯಲು ಈ ಎಣ್ಣೆ ಯೋಗ್ಯವಾಗಿದ್ದು ಬಹಳಷ್ಟು ಮಂದಿ ಇದನ್ನು ನಿತ್ಯವೂ ಬಳಸುತ್ತಾರೆ.
ತುಪ್ಪ
ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಿರುವುದು ಹೌದಾದರೂ, ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿರುವ ಹಾಗೂ ಭಾರತೀಯ ಮನೆಗಳ ಅವಿಭಾಜ್ಯ ಅಂಗ. ಇದರಲ್ಲಿ ವಿಟಮಿನ್ ಎ, ಡಿ, ಕೆ ಹಾಗೂ ಇ ಹೇರಳವಾಗಿದ್ದು, ಆಂಟಿ ಕ್ಯಾನ್ಸರ್ ಗುಣಗಳನ್ನೂ ಹೊಂದಿದೆ. ಆಂಟಿ ಆಕ್ಸಿಡೆಂಟ್‌ಗಳೂ ಹೇರಳವಾಗಿರುವ ಸಾಕಷ್ಟು ವೈದ್ಯಕೀಯ ಗುಣಗಳನ್ನು ಹೊಂದಿರುವ ಇದು ಭಾರತೀಯ ಆಯುರ್ವೇದ ಚಿಕಿತ್ಸೆಯಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಹೀಗಾಗಿ. ಇದರ ಬಳಕೆ ಭಾರತೀಯ ಅಡುಗೆಗಳಲ್ಲಿ ನಿರಾಕರಿಸುವುದು ಅಸಾಧ್ಯ. ಹಿತಮಿತವಾಗಿ ಬಳಕೆ ಮಾಡಿದಲ್ಲಿ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು.
ತೆಂಗಿನೆಣ್ಣೆ
ಲಾರಿಕ್ ಆಸಿಡ್ ಎಂಬ ಅಪರೂಪದ ಸ್ಯಾಚುರೇಟೆಡ್ ಫ್ಯಾಟ್ ತೆಂಗಿನೆಣ್ಣೆಯಲ್ಲಿದ್ದರೂ ಸಾಕಷ್ಟು ಉತ್ತಮ ಆರೋಗ್ಯಕರ ಗುಣಗಳ ಮೂಲಕ ತೆಂಗಿನೆಣ್ನೆ ತಲೆತಲಾಂತರಗಳಿಂದ ಮುಖ್ಯವಾಗಿ ದಕ್ಷಿಣ ಭಾರತೀಯರ ಮನೆಗಳಲ್ಲಿ ಅಡುಗೆಯಲ್ಲಿ ಬಹುಮುಖ್ಯ ಸ್ಥಾಣವನ್ನು ಪಡೆದಿದೆ. ಆಂಟಿ ಆಕ್ಸಿಡೆಂಟ್‌ಗಳೂ ಇದರಲ್ಲಿ ಹೇರಳವಾಗಿದೆ. ಚರ್ಮ ಹಾಗೂ ಕೂದಲ ಆರೋಗ್ಯ ಸೇರಿದಂತೆ ಹಲವು ಲಾಭಗಳು ಇದರಲ್ಲಿವೆ.
ನೆಲಗಡಲೆ ಎಣ್ಣೆ
ವಿಟಮಿನ್ ಇ ಯಿಂದ ಸಮೃದ್ಧವಾಗಿರುವ ಈ ಎಣ್ಣೆ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳನ್ನೂ ಹೊಂದಿದೆ. ಸಾಕಷ್ಟು ಪ್ರಮಾಣದಲ್ಲಿ ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬಿದ್ದರೂ, ಇದರ ಇತರ ಆರೋಗ್ಯಕರ ಲಾಭಗಳನ್ನು ಗಮನದಲ್ಲಿಟ್ಟುಕೊಂಡು ಅಡುಗೆಗೆ, ಕರಿಯಲು ಬಳಸಬಹುದು.
ಎಳ್ಳೆಣ್ಣೆ
ಭಾರತೀಯ ಆಯುರ್ವೇದದಲ್ಲಿ ಎಳ್ಳೆಣ್ಣೆಗೆ ಮಹತ್ವದ ಸ್ಥಾನವಿದೆ. ದೇಹದಲ್ಲಿ ಕೆಟ್ಟ ಕೊಲೆಸ್ಟೆರಾಲ್ ಅನ್ನು ಅಡಿಮೆ ಮಾಡಲು ಈ ಎಣ್ಣೆ ಒಳ್ಳೆಯದು ಎಂಬುದನ್ನು ಸಾಕಷ್ಟು ಸಂಶೋಧನೆಗಳು ಪುಷ್ಠೀಕರಿಸಿವೆ. ಹೃದಯಸ್ನೇಹಿ ಗುಣಗಳನ್ನು ಹೊಂದಿರುವ ಈ ಎಣ್ಣೆಯನ್ನು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಹಲವೆಡೆ ಅಡುಗೆಗೆ ಬಳಸಲಾಗುತ್ತದೆ. ಹಲವಾರಿ ಆರೋಗ್ಯದ ಲಾಭಗಳನ್ನೂ ಹೊಂದಿರುವ ಇದು ಚರ್ಮ ಹಾಗೂ ಕೂದಲ ಆರೋಗ್ಯಕ್ಕೂ ಒಳ್ಳೆಯದನ್ನೇ ಮಾಡುತ್ತದೆ.
ನೆನಪಿಡಿ: ಉತ್ತಮ ಆರೋಗ್ಯಕ್ಕೆ ಎಣ್ಣೆಗಳು ಬೇಕೇಬೇಕು. ಆದರೆ, ಅತಿಯಾಗಬಾರದು ಅಷ್ಟೇ.
ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು