ದಕ್ಷಿಣ ಭಾರತೀಯರಿಗೆ ಮೊಸರನ್ನ ಎಂದರೆ ಅಮೃತದ ಹಾಗೆ. ಏನೂ ಇಲ್ಲದ ಹೊತ್ತಲ್ಲಿ, ಹೊಟ್ಟೆ ತಣ್ಣಗಿರಲು ಬಯಸುವ ಹೊತ್ತಲ್ಲಿ, ಬೇಸಿಗೆಯ ಬಿಸಿಲಿಗೆ ದಣಿದು ಬಂದಾಗ ನೆನಪಾಗುವುದು ಮೊಸರನ್ನ. ಮೊಸರನ್ನ ಹೊಟ್ಟೆಗೆ ಮನಸ್ಸಿಗೆ ಹಿತವಾಗಿರುತ್ತದೆ. ತಿಂದ ಮೇಲೆ ಸಂತೃಪ್ತಿಯ ಭಾವ. ಯಾವ ತಳಮಳವೂ ಇಲ್ಲದೆ ಹೊಟ್ಟೆ ಹಗುರಾದ ಭಾವ. ಅದಕ್ಕೇ ಮೊಸರನ್ನವೆಂದರೆ ಕೇವಲ ಆಹಾರವಲ್ಲ. ಅದೊಂದು ಭಾವನೆ. ಆದರೆ ಬಹಳ ಮಂದಿ ಅದ್ಭುತ ರುಚಿಯ ಮೊಸರನ್ನವನ್ನು ಮನೆಯಲ್ಲಿ ಮಾಡುವಲ್ಲಿ ಸೋಲುತ್ತಾರೆ. ಹೊರಗೆ ಹೊಟೇಲಿನಲ್ಲಿ ತಿಂದ ಮೊಸರನ್ನದ ರುಚಿ, ಮನೆಯಲ್ಲಿ ಕೆಲವೊಮ್ಮೆ ಬರದು. ಇಷ್ಟು ಸಿಂಪಲ್ ಮೊಸರನ್ನವನ್ನು ಮಾಡುವುದೂ ಕೂಡಾ ಯಾಕೆ ಬರುವುದಿಲ್ಲ ಎಂದು ಕೆಲವೊಮ್ಮೆ ಗೊಂದಲವೂ ಆಗಬಹುದು. ಆದರೆ, ಎಷ್ಟೇ ಸಿಂಪಲ್ ಆದರೂ ರುಚಿಯಾದ ಮೊಸರನ್ನ ಮಾಡುವುದೂ ಕೂಡಾ ಒಂದು ಕಲೆ. ಯಾಕೆಂದರೆ ರುಚಿಯಾದ ಮೊಸರನ್ನದ ಗುಟ್ಟು ಅಡಗಿರುವುದು ಅದರ ಕ್ರೀಮೀಯಾದ ಸ್ವರೂಪದಲ್ಲಿ. ಅದು ಹೆಚ್ಚು ತೆಳುವೂ ಆಗಿರಬಾರದು, ಗಟ್ಟಿಯೂ ಆಗಿರಬಾರದು. ಹದವಾದ ಕ್ರೀಮಿನಂತೆ ಬಾಯಿಗಿಟ್ಟರೆ ಐಸ್‌ಕ್ರೀಮಿನಂತೆ ಕರಗುವ, ಹೊಟ್ಟೆ ತಂಪೆನಿಸುವ ಮೊಸರನ್ನವನ್ನು ನೀವು ಮನೆಯಲ್ಲಿ ಮಾಡುವುದಿದ್ದರೆ ಈ ಸಿಂಪಲ್ (Curd Rice Recipe) ವಿಚಾರಗಳನ್ನು ಮರೆಯದಿರಿ.
ಅನ್ನ ಒಳ್ಳೆಯ ಗುಣಮಟ್ಟದ್ದಾಗಿರಲಿ
ಯಾವುದೋ ಅನ್ನವನ್ನು ಮೊಸರನ್ನಕ್ಕೆ ಬಳಸಬೇಡಿ. ಮೊಸರನ್ನಕ್ಕೆ ಬಳಸುವ ಅನ್ನ ಒಳ್ಳೆಯ ಗುಣಮಟ್ಟದ್ದಾಗಿರಲಿ. ಯಾಕೆಂದರೆ ಇಲ್ಲಿ ಅನ್ನಕ್ಕೆ ಬಹಳ ಮುಖ್ಯ ಪಾತ್ರವಿದೆ. ಬಾಸುಮತಿ ಅಕ್ಕಿಯ ಅನ್ನವಾದರೆ ಒಳ್ಳೆಯ ಘಮ ಹಾಘೂ ರುಚಿಯೂ ಬರುತ್ತದೆ. ಅಷ್ಟೇ ಅಲ್ಲ, ಅಕ್ಕಿಗೆ ಬೇಯಲು ಸರಿಯಾದ ಸಮಯ ಕೊಡಿ. ಅತಿಯಾಗದಂತೆ, ಹಾಗೆ ಕಡಿಮೆಯೂ ಆಗದಂತೆ ಅಕ್ಕಿಯನ್ನು ಬೇಯಿಸಬೇಕು.
ತಾಜಾ ಮೊಸರನ್ನೇ ಬಳಸಿ
ಯಾವಾಗಲೂ, ಉಳಿದ ಮೊಸರನ್ನು, ಬೇಡವಾದ ಮೊಸರನ್ನು ಮೊಸರನ್ನಕ್ಕೆ ಬಳಸಬೇಡಿ. ತಾಜಾ ಮೊಸರನ್ನೇ ಬಳಸಿ. ಹುಳಿ ಬಂದ ಮೊಸರು ಇದಕ್ಕೆ ಸಲ್ಲ. ಮನೆಯಲ್ಲೇ ಮಾಡಿದ ಮೊಸರಾದರೆ ಒಳ್ಳೆಯದು. ಅನ್ನ ಬೆಂದು ತಣಿದ ಮೇಲಷ್ಟೇ ಮೊಸರನ್ನು ಅನ್ನಕ್ಕೆ ಸೇರಿಸಿ. ಇಷ್ಟು ತಾಳ್ಮೆ ನಿಮ್ಮಲ್ಲಿದ್ದರೆ ರುಚಿಯಾದ ಮೊಸರನ್ನ ಮಾಡಬಹುದು.
ಕೆನೆಯನ್ನೂ ಇದಕ್ಕೆ ಹಾಕಬಹುದು
ಮೊಸರನ್ನ ರುಚಿಯಾಗಿ ಬರಬೇಕೆಂದರೆ ಹಾಲಿನ ಕೆನೆಯನ್ನೂ ಇದಕ್ಕೆ ಹಾಕಬಹುದು. ಫ್ರೆಶ್ ಕ್ರೀಮನ್ನು ಇದಕ್ಕೆ ಹಾಕಿದರೆ ಅಂತಹ ಟೆಕ್ಷ್ಚರ್ ಪಡೆಯಬಹುದು. ಇಷ್ಟವಾಗದೆ ಇದ್ದರೆ ಹಾಕದೆಯೂ ಇರಬಹುದು. ಇದು ಅವರವರ ಆಯ್ಕೆಗೆ ಬಿಟ್ಟದ್ದು. ಆದರೆ, ಕ್ರೀಂ ಹಾಕುವಾಗ ಹಾಲನ್ನೂ ಸ್ವಲ್ಪ ಸೇರಿಸಲು ಮರೆಯದಿರಿ.
ಮೊಸರಿಗೆ ಏನು ಹಾಕಬೇಕು?
ಮೊಸರನ್ನ ಎಂದರೆ ಬಹಳ ಮಂದಿ, ಮೊಸರು ಹಾಗೂ ಅನ್ನ ಎಂದಷ್ಟೇ ತಿಳಿದುಕೊಳ್ಳುವವರಿದ್ದಾರೆ. ಆದರೆ, ಮೊಸರನ್ನ ರುಚಿಯಾಗಲು ಇದು ಬಿಟ್ಟು ಬೇರೆ ಕೆಲವು ವಿಚಾರಗಳೂ ಮುಖ್ಯವಾಗುತ್ತದೆ. ಕೆಲವು ತರಕಾರಿ, ಹಣ್ಣುಗಳನ್ನು ಸೇರಿಸುವ ಮೂಲಕವೂ ಮೊಸರನ್ನ ಅಮೃತವಾಗಿ ಬದಲಾಗುತ್ತದೆ. ಮುಖ್ಯವಾಗಿ, ಕ್ಯಾರೆಟ್, ಸೌತೆಕಾಯಿ, ಮಾವು, ದಾಳಿಂಬೆ ಇತ್ಯಾದಿಗಳು ಮೊಸರನ್ನಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.
ಇದನ್ನೂ ಓದಿ: Hair Growth Tips: ಕೂದಲಿನ ಆರೈಕೆಯಲ್ಲಿ ಮೆಂತೆಯ ಜಾದೂ ಕಂಡಿದ್ದೀರಾ?
ಒಗ್ಗರಣೆ ಮರೆಯಬೇಡಿ
ಒಗ್ಗರಣೆ ಹಾಕುವುದರಲ್ಲಿ ಕಂಜೂಸಿತನ ತೋರಿಸಬೇಡಿ. ಎಣ್ಣೆಯಲ್ಲಿ ಸಾಸಿವೆ, ಉದ್ದಿನಬೇಳೆ, ಗೋಡಂಬಿ, ಕರಿಬೇವನ್ನು ಧಾರಾಳವಾಗಿ ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಯಿಂದ ಮೊಸರನ್ನಕ್ಕೆ ನಿಜವಾದ ಅರ್ಥ ಬರುತ್ತದೆ ಎಂಬುದನ್ನು ನೆನಪಿಡಿ. ಕರಿಬೇವು ಇಲ್ಲವಾದರೆ ಚಿಂತಿಸಬೇಡಿ. ಕೊತ್ತಂಬರಿ ಸೊಪ್ಪಾದರೂ ಸೈ. ಆದರೆ, ಒಗ್ಗರಣೆಯನ್ನು ಎಂದಿಗೂ ಮರೆಯಬೇಡಿ.