ದೀಪಾವಳಿ ಹಬ್ಬದ (deepavali 2023) ಸಂಭ್ರಮ ಕಳೆಗಟ್ಟಲು ಮನೆಯಲ್ಲಿಯೇ ಬಗೆಬಗೆಯ ಭಕ್ಷ್ಯಗಳು (Festival foods) ತಯಾರಾಗಬೇಕು. ಸಿಹಿತಿಂಡಿಗಳು ಬಿಸಿಬಿಸಿಯಾಗಿ ರೆಡಿಯಾಗಿ ದೇವರಿಗೆ ನೈವೇದ್ಯವಾಗಿ, ನಾವು ಖುಷಿಯಿಂದ ತಿಂದು, ಇತರರಿಗೂ ಹಂಚಿದರೆ ಹಬ್ಬದ ಸಾರ್ಥಕ್ಯ (deepavali special) ಮೂಡುತ್ತದೆ ಎಂಬುದು ಸತ್ಯವಾದ ವಿಚಾರ. ಆದರೆ, ಈಗೆಲ್ಲ ಬದಲಾದ ಯುಗದಲ್ಲಿ ಬಹಳಷ್ಟು ಮಂದಿಗೆ ಹಬ್ಬದ ತಯಾರಿ ಮುಂಚಿತವಾಗಿ ಮಾಡಿಕೊಳ್ಳಲಾಗುವುದಿಲ್ಲ. ಬಗೆಬಗೆಯ ತಿಂಡಿಗಳನ್ನು ಮಾಡಲು ಮೊದಲೇ ತಯಾರಿ ಆರಂಭವಾದರಷ್ಟೇ ಹಿಂದಿನ ಕಾಲದಲ್ಲಿ ನಮ್ಮ ಅಜ್ಜಿ, ಅಮ್ಮಂದಿರಂತೆ ಹಬ್ಬದ ದಿನ ಬಗೆಬಗೆಯ ಭಕ್ಷ್ಯಗಳು ತಯಾರಾಗುತ್ತದೆ. ಆದರೆ, ಒಂದೇ ದಿನ ಮ್ಯಾಜಿಕ್ ಮಾಡಿ ಹಬ್ಬಕ್ಕೆ ಇಷ್ಟೆಲ್ಲ ರೆಡಿ ಮಾಡುವುದು ಈಗ ಉದ್ಯೋಗದಲ್ಲಿ ಬ್ಯುಸಿಯಾಗಿರುವ ಬಹುತೇಕ ಹೆಣ್ಣುಮಕ್ಕಳಿಗೆ ಸಾಧ್ಯವಾಗುವುದಿಲ್ಲ. ಹಾಗಂತ ಹಬ್ಬವನ್ನು ಹಾಗೆಯೇ ಹೋಗಲು ಬಿಡಲೂ ಮನಸ್ಸಾಗುವುದಿಲ್ಲ. ಮಾರುಕಟ್ಟೆಯಿಂದ ತಂದ ಸಿಹಿತಿಂಡಿಗಳು ಮನೆಯಲ್ಲಿ ಮಾಡಿದ ಅಡುಗೆಯ ಭಾವ ಕೊಡುವುದಿಲ್ಲ. ಮನೆಯಲ್ಲೇ ಕೈಲಾದಷ್ಟು ಸಿಹಿ, ಭಕ್ಷ್ಯ ಅಡುಗೆಗಳನ್ನು ಮಾಡಿಕೊಂಡರೆ ಸಂತೃಪ್ತಿಯ ಭಾವ. ನಮ್ಮ ಮುಂದಿನ ಪೀಳಿಗೆಗೂ ಹಬ್ಬದ ಖುಷಿಯನ್ನು ದಾಟಿಸಿದ ನೆಮ್ಮದಿ. ಹಾಗಾದರೆ, ಕಡಿಮೆ ಅವಧಿಯಲ್ಲಿ ಮಾಡಬಹುದಾದ ಸಿಹಿತಿಂಡಿಗಳನ್ನು ಹುಡುಕಿ ಮಾಡುವುದೂ ಕೂಡಾ ಒಂದು ಕಲೆಯೇ. ಹೆಚ್ಚುವರಿ ಒಂದೆರಡು ಗಂಟೆಗಳನ್ನು ದೀಪಾವಳಿಗೆ ಮೀಸಲಿಟ್ಟರೆ ಮನೆಯಲ್ಲೇ ಮೂರ್ನಾಲ್ಕು ಬಗೆಯ ಸಿಹಿತಿಂಡಿಗಳನ್ನು ಮಾಡಬಹುದು. ಆದರೆ, ಮುಂಚಿತವಾಗಿ, ಈ ಬಗ್ಗೆ ಯೋಚಿಸಿ ಇಟ್ಟುಕೊಂಡರೆ ಕಲಸ ಸುಲಭವಾಗುತ್ತದೆ. ಹಾಗಾದರೆ ಬನ್ನಿ, ಮೊದಲು, ಹತ್ತೇ ನಿಮಿಷದಲ್ಲೊಂದು ಹಲ್ವಾ ಮಾಡಿ (making halwa, halwa recipe) ದೀಪಾವಳಿಯ ಖುಷಿಗೆ ಇನ್ನಷ್ಟು ಖುಷಿಯನ್ನು ಸೇರಿಸೋಣ.
ಹಲ್ವಾದಲ್ಲಿ ನಾನಾ ಬಗೆಗಳಿವೆ. ಕೆಲವು ದಿಢೀರ್ ಹಲ್ವಾಗಳಾದರೆ, ಇನ್ನೂ ಕೆಲವು ಚಾಕಚಕ್ಯತೆ, ಸಮಯ, ಕೌಶಲ, ತಾಳ್ಮೆ ಎಲ್ಲವನ್ನೂ ಬೇಡುವ ಹಲ್ವಾಗಳು. ಕೆಲವೇ ಕೆಲವು ವಸ್ತುಗಳನ್ನು ಬಳಸಿ ಹಲ್ವಾ ಎಂಬ ಅದ್ಭುತ ಸಿಹಿತಿಂಡಿ ನಿಜವಾಗಿಯೂ ಹಲವು ಬಾರಿ ನಮ್ಮ ಮನೆಗಳಲ್ಲಿ ಹಬ್ಬದ ಸಂಭ್ರಮವನ್ನು ಕಳೆಗಟ್ಟಿಸುತ್ತದೆ. ದಿಢೀರ್ ಯಾರೋ ಬಂದರೆ, ಇನ್ನೇನೋ ಖುಷಿಗೆ, ಮತ್ಯಾವುದೋ ಸಂಭ್ರಮಕ್ಕೆ ಈ ಹಲ್ವಾಗಳೆಂಬ ಸಿಹಿ ಇನ್ನಷ್ಟು ನಮ್ಮ ಸಂಭ್ರಮವನ್ನು ಇನ್ನಷ್ಟು ಸಿಹಿಯಾಗಿಸುವುದು ಸುಳ್ಳಲ್ಲ.
೧. ಮೊದಲು ನೀವಿಲ್ಲಿ ನಿರ್ಧಾರ ಮಾಡಬೇಕಿರುವುದು ಯಾವುದರ ಹಲ್ವಾ ಮಾಡಬೇಕು ಎಂಬುದು. ಗೋಧಿ, ದಲಿಯಾ (ಗೋಧಿ ನುಚ್ಚು), ರಾಗಿ (ಪುಡಿ), ರವೆ, ಕ್ಯಾರೆಟ್, ಕುಂಬಳಕಾಯಿ ಹೀಗೆ ಇಂತಹ ಹಲವು ಬಗೆಗಳನ್ನು ಸುಲಭವಾಗಿ ಹಲ್ವಾ ಮಾಡಬಹುದು.
೨. ಮೊದಲು, ಮಾಡಬೇಕಿರುವ ಹಲ್ವಾದ ಮುಖ್ಯ ಸಾಮಗ್ರಿ ರೆಡಿ ಮಾಡಿಕೊಳ್ಳುವುದು ಮುಖ್ಯ. ಬಾಣಲೆ ಬಿಸಿಯಾಗಲು ಬಿಟ್ಟು ಸಾಮಗ್ರಿ ಹುಡುಕುವಷ್ಟು ಗಡಿಬಿಡಿ ಮಾಡಬಾರದು. ಅದಕ್ಕಾಗಿ ಮೊದಲೇ ಸಾಮಗ್ರಿಯನ್ನು ರೆಡಿ ಮಾಡಿ ಇಟ್ಟುಕೊಳ್ಳಿ. ಮೊದಲೇ ಹುರಿಯದೇ ಇಟ್ಟಿದ್ದಾದರೆ ಅದನ್ನು ಹದವಾಗಿ ಹುರಿದುಕೊಳ್ಳಿ.
೩. ಸಕ್ಕರೆ ಪುಡಿಯನ್ನು ಬಳಸಿ. ಸಕ್ಕರೆಯನ್ನು ಯಾವಾಗಲೂ ಒಂದು ಡಬ್ಬದಲ್ಲಿ ಪುಡಿ ಮಾಡಿ ಇಟ್ಟುಕೊಂಡಿದ್ದರೆ, ಇಂಥ ದಿಢೀರ್ ಅಡುಗೆಗಳ ಸಂದರ್ಭ ಬಹಳ ಉಪಯೋಗಕ್ಕೆ ಬರುತ್ತದೆ. ಹಾಗಾಗಿ ಸಕ್ಕರೆ ಪುಡಿಯನ್ನು ರೆಡಿ ಮಾಡಿ. ಸಕ್ಕರೆಯ ಬದಲು ಬೆಲ್ಲ ಬಳಸುತ್ತಿದ್ದರೆ, ಅದನ್ನೂ ಹೀಗೆ ರೆಡಿ ಮಾಡಿಟ್ಟಿರಿ.
೪. ಬಿಸಿ ನೀರು ಅಥವಾ ಬಿಸಿಯಾಗಿರುವ ಹಾಲನ್ನೇ ಸೇರಿಸಿದರೆ, ಬಹುಬೇಗನೆ ಹಲ್ವಾ ರೆಡಿಯಾಗುತ್ತದೆ. ಯಾವ ಹಲ್ವಾ ಎಂಬುದರ ಮೇಲೆ, ಹಾಲು ಅಥವಾ ನೀರನ್ನು ನೀವು ಆಯ್ಕೆ ಮಾಡಿ. ಉದಾಹರಣೆಗೆ ನೀವು ಕ್ಯಾರೆಟ್ ಹಲ್ವಾ ಮಾಡುತ್ತಿದ್ದರೆ, ಹಾಲಲ್ಲಿ ಬೇಯಲು ಬಿಟ್ಟ ಕ್ಯಾರೆಟ್‌ಗೆ ತೇವಾಂಶ ಆರಿದ ಮೇಲೆ ಮಿಲ್ಕ್‌ಮೈಯ್ಡ್ ಸೇರಿಸಬಹುದು. ಆಗ ಹಲ್ವಾದ ರುಚಿ ಹೆಚ್ಚುತ್ತದೆ. ಕೆಲಸವೂ ಬೇಗನೆ ಆಗುತ್ತದೆ. (ಕ್ಯಾರೆಟ್ ಹಲ್ವಾಕ್ಕೆ ಅರ್ಧ ಗಂಟೆಯಾದರೂ ಬೇಕು. ರವೆ, ಗೋಧಿಪುಡಿ, ರಾಗಿ ಪುಡಿ ಹಲ್ವಾಗಳನ್ನು ಹತ್ತಿಪ್ಪತು ನಿಮಿಷದೊಳಗೆ ಮಾಡಬಹುದು)
೫. ತುಂಬ ದೊಡ್ಡ ಪ್ರಮಾಣದಲ್ಲಿ ಮಾಡುವ ಬದಲು ಸಣ್ಣ ಪ್ರಮಾಣದಲ್ಲಿ ಮಾಡಿ. ಆಯಾ ದಿನವೇ ಮುಗಿದರೂ, ಹಬ್ಬಕ್ಕೆ ಸಿಹಿಯಂತೂ ಆಗುತ್ತದೆ. ಸ್ವಲ್ಪವೇ ಮಾಡಿದರೆ ಬೇಗನೆ ಆಗುತ್ತದೆ. ಅಥವಾ ಬ್ಯಾಚ್‌ಗಳಲ್ಲಿ ಮಾಡಬಹುದು.
ಇದನ್ನೂ ಓದಿ: Diwali sweets | ಹಬ್ಬವೊಂದು ಸಿಹಿ ಹಲವು: ದೀಪಾವಳಿಗೆ ವಿವಿಧ ರಾಜ್ಯಗಳ ಸಿಹಿತಿಂಡಿ ಸ್ಪೆಷಲ್!