ಬೆಳಗ್ಗೆ ಎದ್ದ ಕೂಡಲೇ ಏನು ತಿನ್ನುತ್ತೇವೆ (Empty Stomach Foods) ಎಂಬುದರ ಮೇಲೆ ಇಡೀ ದಿನ ನಮ್ಮ ದೇಹ ಹೇಗಿರುತ್ತದೆ ಎಂಬುದು ಅವಲಂಬಿತವಾಗುತ್ತದೆ ಎಂಬುದು ತಿಳಿದವರ ಮಾತು. ಆರೋಗ್ಯದ ವಿಚಾರಕ್ಕೆ ಬಂದರೆ ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಯಾಕೆಂದರೆ, ಬೆಳಗ್ಗೆ ಒಳ್ಳೆಯ ಆಹಾರ ತಿಂದರೆ, ಸಹಜವಾಗಿಯೇ ಇಡೀ ದಿನ ನಿಮ್ಮ ದೇಹ ಉಲ್ಲಸಿತವಾಗಿರುತ್ತದೆ. ಇಲ್ಲವಾದರೆ, ಉತ್ಸಾಹ ಕಡಿಮೆಯಾಗುತ್ತದೆ. ದೇಹ ಬಳಸುತ್ತದೆ. ಉದಾಸೀನತೆ, ಮೈಗಳ್ಳತನ ಕಾಡುತ್ತದೆ. ನಿದ್ದೆ, ಸೋಮಾರಿತನ ಎಳೆಯುತ್ತದೆ. ದೇಹ ಚುರುಕಾಗಿರಬೇಕಾದರೆ, ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಏನು ತಿನ್ನಬೇಕು ಎಂಬುದು ನಮಗೆ ಗೊತ್ತಿರಬೇಕು. ಬಹಳಷ್ಟು ಮಂದಿ ಬೆಳಗ್ಗೆದ್ದ ಕೂಡಲೇ ಚಹಾದ ಮೊರೆ ಹೋಗುವುದು ಸಾಮಾನ್ಯವೇ ಆದರೂ, ಅದನ್ನು ಬಿಟ್ಟು ಒಳ್ಳೆಯ ಆಹಾರದತ್ತ ಗಮನ ಹರಿಸುವುದಿದ್ದರೆ, ನೀವು ಖಾಲಿ ಹೊಟ್ಟೆಯಲ್ಲಿ ಏನೇನೆಲ್ಲ ತಿಂದರೆ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಎಂದು ನೋಡೋಣ ಬನ್ನಿ.
ಮೊಟ್ಟೆ
ದಿನದ ಆರಂಭವನ್ನು ಮಾಡುವುದಿದ್ದಲ್ಲಿ ಮೊಟ್ಟೆ ಅತ್ಯುತ್ತಮ ಆಹಾರ. ಮೊಟ್ಟೆಯಲ್ಲಿ ಪ್ರೊಟೀನ್ ಸೇರಿದಂತೆ ದೇಹಕ್ಕೆ ಬೇಕಾದ ಬಹಳಷ್ಟು ಪೋಷಕಾಂಶಗಳು ಇವೆ. ದೇಹ ಜಡವಾಗಿದ್ದಾಗ, ಮಲಗಿ ಎದ್ದ ಕೂಡಲೇ ಚುರುಕುಗೊಳಿಸಲು, ಉಲ್ಲಾಸ ನೀಡಿ ತಕ್ಷಣ ಚಿಗಿತುಕೊಳ್ಳಲು ಮೊಟ್ಟೆ ಬಹಳ ಒಳ್ಳೆಯದು. ಬೇಯಿಸಿ, ಆಮ್ಲೆಟ್ ಮಾಡಿ, ಅಥವಾ ಇನ್ನಾವುದೇ ತಿನಿಸಿನ ರೂಪದಲ್ಲಿ ಅದನ್ನು ನೀವು ತಿನ್ನಬಹುದು. ಹಾಗಾಗಿ ಇದು ಒಂದು ಅತ್ಯುತ್ತಮವಾದ ಬ್ರೇಕ್‌ಫಾಸ್ಟ್ ಆಯ್ಕೆ.
ಬೀಜಗಳು
ಒಂದು ಮುಷ್ಟಿ ಒಂದು ಬೀಜಗಳನ್ನು ಬೆಳಗ್ಗೆ ಎದ್ದ ಕೂಡಲೇ ಬಾಯಿಗೆ ಹಾಕಿಕೊಳ್ಳುವುದು ಒಳ್ಳೆಯ ಅಭ್ಯಾಸ. ಇದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳಗ್ಗೆ ಬೇಕಾದ ಶಕ್ತಿಯನ್ನು ಇದು ಒಡನೆಯೇ ನೀಡುತ್ತದೆ. ರಾತ್ರಿ ಬೀಜಗಳನ್ನು ನೆನೆ ಹಾಕಿ ಬೆಳಗ್ಗೆ ಎದ್ದ ಕೂಡಲೇ ತಿನ್ನುವುದರಿಂದ ಬೀಜಗಳ ಎಲ್ಲ ಬಗೆಯ ಪೋಷಕಾಂಶಗಳ ಲಾಭವನ್ನೂ ದೇಹ ಪಡೆದುಕೊಳ್ಳುತ್ತದೆ.
ಪಪ್ಪಾಯಿ
ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನುವುದು ಕೂಡಾ ಒಳ್ಳೆಯದು. ಪಪ್ಪಾಯಿಯಲ್ಲಿ ಕಡಿಮೆ ಕ್ಯಾಲರಿಯಿದ್ದು, ಅತ್ಯಂತ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ. ಇದು ಹೊಟ್ಟೆ ಹಾಗೂ ಜೀರ್ಣಾಂಗವ್ಹೂಹಕ್ಕೆ ಒಳ್ಳೆಯದು. ತೂಕ ಇಳಿಸುವ ಮಂದಿಗೂ ಅತ್ಯಂತ ಒಳ್ಳೆಯದು.
ಬೆರ್ರಿ
ಬೆಳಗಿನ ಖಾಲಿ ಹೊಟ್ಟೆಗೆ ಬೆರ್ರಿ ಹಣ್ಣುಗಳು ಉತ್ತಮ. ಬೆರ್ರಿ ಹಣ್ಣುಗಳಲ್ಲಿ ಹೆಚ್ಚು ನಾರಿನಂಶ ಇರುವುದರಿಂದ ಇದು ನಿಮ್ಮನ್ನು ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. ಕಡಿಮೆ ಕ್ಯಾಲರಿಯ ಆಹಾರ ಇದಾಗಿದ್ದು, ಸ್ವಲ್ಪ ಹೆಚ್ಚು ತಿಂದರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಸ್ಟ್ರಾಬೆರ್ರಿ, ಬ್ಲೂಬೆರ್ರಿ ಮತ್ತಿರರ ಯಾವುದೇ ಬೆರ್ರಿ ವಿಧಗಳನ್ನು ಬೆಳಗ್ಗೆ ಸೇವಿಸುವುದು ಉತ್ತಮ.
ಓಟ್ಸ್
ಓಟ್ಸ್ ಅಥವಾ ಓಟ್‌ಮೀಲ್ ಬೆಳಗ್ಗೆ ತಿನ್ನುವುದು ಒಳ್ಳೆಯದು. ಇದರಲ್ಲೂ ನಾರಿನಂಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದ್ದು, ಹೊಟ್ಟೆ ತುಂಬಿಸಲು ಸರಿಯಾದ ಆಹಾರ. ಇದರ ಜೊತೆಗೆ ಒಣ ಬೀಜಗಳು ಹಾಗೂ ನಿಮ್ಮ ಇಷ್ಟ ಹಣ್ಣುಗಳನ್ನೂ ಸೇರಿಸಬಹುದು. ಸಕ್ಕರೆ ಸೇರಿಸದೆ, ಹಾಗೆಯೇ ಹಾಲಿನ ಜೊತೆಗೆ ಮಾಡಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಗ್ಯಾಸ್, ಹೊಟ್ಟೆಯುಬ್ಬರ ಇತ್ಯಾದಿ ಸಮಸ್ಯೆಯಿರುವ ಮಂದಿಗೂ ಇದು ಒಳ್ಳೆಯದು.
ಇದನ್ನೂ ಓದಿ: Menopausal Weight Gain: ಋತುಚಕ್ರ ನಿಂತ ಬಳಿಕ ತೂಕ ಹೆಚ್ಚುವುದನ್ನು ತಡೆಯಬಹುದೇ?