ಆಹಾರವನ್ನು ಆಕರ್ಷಕ ವಿನ್ಯಾಸದಲ್ಲಿ ಗ್ರಾಹಕರೆದುರು ಪ್ರಸ್ತುತ ಪಡಿಸುವುದು ಹೇಗೆ ಒಂದು ಕಲೆಯೋ ಹಾಗೆಯೇ ಆಹಾರದ(Food) ಸ್ವರೂಪವನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಿಯೋ ಅಥವಾ ಬೇರೆ ಬಗೆಯ ಆಕಾರದಲ್ಲೋ ಅಥವಾ ಅದನ್ನೇ ಬೇರೆಯ ಆಕರ್ಷಕ ಹೆಸರಿನಲ್ಲಿ ಗ್ರಾಹಕರನ್ನು ಸೆಳೆಯುವುದೂ ಕೂಡಾ ಒಂದು ತಂತ್ರವೇ. ಸಾದಾ ದೋಸೆಗೇ ರಮ್ಯಾಕರ್ಷಕ ಹೆಸರಿಟ್ಟು ಮೆನು ಪಟ್ಟಿಯಲ್ಲಿ ಸೇರಿಸಿದರೆ, ಯಾರದ್ದೇ ಆಗಲಿ ಗಮನ ಅಲ್ಲಿಗೆ ಹೋಗದೆ ಇರುವುದಿಲ್ಲ. ಏನಿದು, ಹೊಸ ಹೆಸರು ಎಂದು ವಿವರಣೆ ಓದಿ, ಓಹೋ ಇದಾ ಎಂದು ಮೂಗು ಮುರಿದರೆ, ಇನ್ನೂ ಕೆಲವೊಮ್ಮೆ ಚಿತ್ತಾಕರ್ಷಕ ಹೆಸರು ಕೇಳಿ ಆರ್ಡರ್ ಮಾಡಿ ಕೂತು, ಅವರು ತಂದಿಟ್ಟ ತಿಂಡಿ ನಾವು ಮೂಗು ಮುರಿವ ಉಪ್ಪಿಟ್ಟಾಗಿ ಬಿಟ್ಟು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕುವಂಥ ಪ್ರಸಂಗಗಳೂ ಬದುಕಿನಲ್ಲಿ ನಡೆಯುತ್ತವೆ!
ಇಲ್ಲೂ ಆಗಿರುವುದು ಅದೇ. ಯುಎಸ್‌ನ ಸೀಟಲ್ ನಗರದ ಇಂಡಿಯನ್ ಕ್ರೇಪ್ ಕೋ ಹೆಸರಿನ ರೆಸ್ಟೋರೆಂಟ್ ಒಂದು ನಮ್ಮ ದಕ್ಷಿಣ ಭಾರತೀಯ ಪ್ರತಿಮನೆಯ ಆರಾಧ್ಯದೈವವಾದ ಸಾದಾ ದೋಸೆಯನ್ನು ʻನೇಕೆಡ್ ಕ್ರೇಪ್ʼ ಎಂದು ಹೆಸರಿಸಿ ತನ್ನ ಮೆನು ಪಟ್ಟಿಯಲ್ಲಿ ಸೇರಿಸಿದ್ದು ಇದೀಗ ಅಂತರ್ಜಾಲದಲ್ಲಿ ಭಾರೀ ಹುಯಿಲೆಬ್ಬಿಸಿದೆ.
ಇದನ್ನೂ ಓದಿ | Motivational story: ಆವತ್ತು ಆ ಹೋಟೆಲಿನಲ್ಲಿ ಕೊಟ್ಟಿದ್ದು ಬರೀ ಮಸಾಲೆ ದೋಸೆ ಆಗಿರಲಿಲ್ಲ!
ರೆಸ್ಟೋರೆಂಟಿನ ಭಾರತೀಯ ಅಡುಗೆಯ ವಿಭಾಗದ ಮೆನು ಕಾರ್ಡಿನಲ್ಲಿ ಸಾಧಾರಣ ದೋಸೆಯ ಹೆಸರನ್ನೇ ಬದಲಾಯಿಸಿ ವಿವಿಧ ಹೊಸ ಬಗೆಯ ಹೆಸರುಗಳನ್ನೇ ಕೊಟ್ಟು ಗ್ರಾಹಕರಿಂದ ಭಾರೀ ಪ್ರಮಾಣದ ದುಡ್ಡನ್ನು ಪೀಕಿಸುವ ಹೊಸ ತಂತ್ರ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಟ್ವಿಟರಿನಲ್ಲಿ ಈ ಮೆನು ಕಾರ್ಡಿನ ಸ್ಕ್ರೀನ್‌ಶಾಟ್ ಹಂಚಲಾಗಿದ್ದು, ಇದಕ್ಕೆ ನೂರಾರು ಮಂದಿ ಕಮೆಂಟುಗಳನ್ನೂ ಮಾಡಿದ್ದು, ಸಾವಿರಾರು ಬಾರಿ ಶೇರ್ ಕೂಡಾ ಮಾಡಲಾಗಿದೆ. ದಕ್ಷಿಣ ಭಾರತೀಯರ ಎಲ್ಲ ತಿಂಡಿಗಳಿಗೂ ಇವರು ವಿನೂತನ ಹೆಸರುಗಳನ್ನು ಇರಿಸಿದ್ದು, ಪ್ರತಿಯೊಂದಕ್ಕೂ ಮುಗಿಲೆತ್ತರದ ಬೆಲೆಯೂ ಇದೆ.
ಸಾಂಬಾರ್ ವಡಾಕ್ಕೆ ಇವರಿಟ್ಟ ಹೆಸರು ʻಡಂಕ್ಡ್ ಡೋನಟ್ ಡಿಲೈಟ್ʼ ಹಾಗೂ ಇದರ ಬೆಲೆ ೧೬.೪೯ ಡಾಲರ್! ಸಾಂಬಾರ್ ಇಡ್ಲಿಗೆ ʻಡಂಕ್ಡ್ ರೈಸ್ ಕೇಕ್ ಡಿಲೈಟ್ʼ ಎಂಬ ಹೆಸರಿಟ್ಟಿದ್ದರೆ, ಸಾದಾ ದೋಸೆ ʻನೇಕೆಡ್ ಕ್ರೇಪ್ʼ ಆಗಿ ಬದಲಾಗಿದೆ. ಮಸಾಲೆ ದೋಸೆ ʻಸ್ಮ್ಯಾಶ್ಡ್ ಪೊಟೇಟೋ ಕ್ರೇಪ್ʼ ಆಗಿ ರೂಪಾಂತರ ಹೊಂದಿದೆ. ನಮ್ಮೆಲ್ಲರ ಉತ್ತಪ್ಪ ದೇಸೀ ಹೆಸರನ್ನು ಬಿಟ್ಟು ʻಕ್ಲಾಸಿಕ್ ಲೆಂಟಿಲ್ ಪ್ಯಾನ್‌ಕೇಕ್ʼ ಎಂಬ ಹೊಸ ಹೆಸರನ್ನು ನಾಮಕರಣ ಮಾಡಿಸಿಕೊಂಡಿದ್ದಾನೆ. ಒಂದು ಸಾದಾ ದೋಸೆಗೆ ೧೭.೫೯ ಡಾಲರ್ ಆದರೆ, ಮಸಾಲೆ ದೋಸೆಗೆ ಸಾದಾಕ್ಕಿಂತ ಇನ್ನೂ ಒಂದು ಡಾಲರ್ ಹೆಚ್ಚು ಬೆಲೆ ನಮೂದಿಸಲಾಗಿದೆ.
ಇದಕ್ಕೆ ಸಾಕಷ್ಟು ಕಮೆಂಟುಗಳೂ ಬಂದಿದ್ದು ಒಂದಿಷ್ಟು ಮಂದಿ ಅಮೆರಿಕನ್ನರಿಗೆ ದೋಸೆ ಎಂದರೇನು ಎಂದು ಅರ್ಥ ಮಾಡಿಸಲು ಕೊಟ್ಟ ಈ ಹೆಸರು ಸರಿಯಾಗಿದೆ ಎಂದಿದ್ದಾರೆ. ಇನ್ನೂ ಕೆಲವರು, ಎಲ್ಲೆಡೆ ನಾವು ಪಿಜ್ಜಾ ಪಿಜ್ಜಾ ಎಂದು ಬಾಯಿಬಿಡುತ್ತಿರುವಾಗ ದೋಸೆ ಯಾಕಾಗಬಾರದು? ಎಂದು ನಮ್ಮ ದೋಸೆಯ ಬಗ್ಗೆ ಹೆಮ್ಮೆಯ ಮಾತಾಡಿದ್ದಾರೆ.
ಆದರೆ ಬೆಲೆಯ ಬಗ್ಗೆ ಮಾತ್ರ ಬಹಳಷ್ಟು ಜನ ತಗಾದೆ ತೆಗೆದಿದ್ದು, ನಾವೆಲ್ಲ ಭಾರತದ ಬೀದಿಗಳಲ್ಲಿ ೮೦ ರೂಪಾಯಿಗೆ ರುಚಿಯಾದ ಮಸಾಲೆ ದೋಸೆಗಳನ್ನೂ, ಸೆಟ್ ದೋಸೆಗಳನ್ನೂ ಸವಿಯುತ್ತಿರುವಾಗ ಸಾವಿರ ರೂಪಾಯಿಗಿಂತ ಅಧಿಕ ಬೆಲೆಯ ದೋಸೆಯನ್ನು ಯೋಚನೆ ಮಾಡುವುದಕ್ಕೇ ಆಗದು ಎಂದಿದ್ದಾರೆ. ಇನ್ನೂ ಕೆಲವರು ಸಾವಿರಕ್ಕಿಂತ ಅಧಿಕ ಬೆಲೆ ದೋಸೆಗೆ ಇಡುವುದೆಂದರೆ ಅದು ಕ್ಷಮಿಸಲಾಗದ ಅಪರಾಧ. ಎರಡು ಡಾಲರ್‌ಗಿಂತ ಕಡಿಮೆ ಬೆಲೆಯಲ್ಲಿ ತಯಾರಿಸಬಹುದಾದ ದೋಸೆಯನ್ನು ೧೬ ಡಾಲರ್ ಬೆಲೆಗೆ ಮಾರುವುದೆಂದರೆ ಇದೆಂಥಾ ಅನ್ಯಾಯ ಎಂದು ಅಸಮಧಾನವನ್ನೂ ಹೊರ ಹಾಕಿದ್ದಾರೆ.
ಅಂದಹಾಗೆ, ಉತ್ತಪ್ಪನಿಗೂ, ಇಡ್ಲಿ ಸಾಂಬಾರಿಗೂ, ಮಸಾಲೆ ದೋಸೆಗೂ, ವಡಾಗೂ ಸ್ಟೈಲಿಷ್ ಹೆಸರುಗಳನ್ನು ಇಟ್ಟು ತನಗೆ ಮಾತ್ರ ನೇಕೆಡ್ ಎಂಬ ಹೆಸರಿಟ್ಟು ಎಲ್ಲರು ಮಜಾ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಾದಾ ದೋಸೆ ಈಗ ಬಹಳ ಬೇಜಾರು ಮಾಡಿಕೊಂಡಿದೆ ಎಂಬ ಸುದ್ದಿ ಸದ್ಯದಲ್ಲೇ ಬರುವ ಸಂಭವವೂ ಇದೆ!
ಇದನ್ನೂ ಓದಿ | 40 ವರ್ಷ ವಯಸ್ಸಾದ ಮೇಲೆ ಆಹಾರದಲ್ಲಿ ಇವು ಇರಲೇಬೇಕು!