ದೇಹವು ಪೂರ್ಣಾರೋಗ್ಯದಲ್ಲಿ ಇರಬೇಕೆಂದಾದರೆ ಆವಶ್ಯಕ ಪೌಷ್ಟಿಕಾಂಶಗಳೆಲ್ಲ ಪೂರ್ಣ ಪ್ರಮಾಣದಲ್ಲಿ ದೊರೆಯಬೇಕು. ಉದಾ, ಒಮೇಗಾ ೩ ಕೊಬ್ಬಿನಾಮ್ಲ ಹಲವು ಕಾರಣಗಳಿಂದಾಗಿ ದೇಹಕ್ಕೆ ಬೇಕೆಬೇಕು. ಮುಖ್ಯವಾಗಿ ಹೃದಯದ ಆರೋಗ್ಯ ರಕ್ಷಣೆಗೆ ಮತ್ತು ಮೆದುಳಿನ ಸಂರಕ್ಷಣೆಗೆ ಒಮೇಗಾ ೩ ಕೊಬ್ಬಿನಾಮ್ಲ ಅಗತ್ಯವಾಗಿ ಬೇಕು. ಮೀನಿನಲ್ಲಿ ಈ ಅಂಶ ಯಥೇಚ್ಛವಾಗಿ ದೊರೆಯುತ್ತದೆ. ಆದರೆ ಸಸ್ಯಾಹಾರಿಗಳಿಗೆ? ಅವರೇನು ತಿಂದರೆ ಒಮೇಗಾ ೩ ಕೊಬ್ಬಿನಾಮ್ಲವನ್ನು ಸಾಕಷ್ಟು ಪ್ರಮಾಣದಲ್ಲಿ (Food Tips Kannada) ಪಡೆಯುವುದಕ್ಕ್ ಸಾಧ್ಯ?
ಅಗಸೆ ಬೀಜ
ಸಸ್ಯಾದಿಗಳಲ್ಲಿ ದೊರೆಯುವ ಒಮೇಗಾ 3 ಕೊಬ್ಬಿನಾಮ್ಲದ ಮೂಲಗಳ ಪೈಕಿ ಅಗಸೆ ಬೀಜ ಅತ್ಯಂತ ಹೆಚ್ಚಿನದ್ದು. ಆಲ್ಫಲಿನೊಲೆನಿಕ್ ಆಮ್ಲವು ಈ ಸಣ್ಣ ಬೀಜಗಳಲ್ಲಿ ಸಾಂದ್ರವಾಗಿದೆ. ಇದಲ್ಲದೆ, ನಾರು, ಪ್ರೊಟೀನ್, ಹಲವು ರೀತಿಯ ವಿಟಮಿನ್‌ಗಳು, ಖನಿಜಗಳು ಇದರಲ್ಲಿ ಹೇರಳವಾಗಿವೆ. ಹಾಗಾಗಿ ಈ ಬೀಜದ ಚಟ್ಣಿಪುಡಿಯಿಂದ ತೊಡಗಿ, ಎಣ್ಣೆಯವರೆಗೆ ಹಲವು ರೀತಿಯಲ್ಲಿ ಇದನ್ನು ನಿತ್ಯವೂ ಆಹಾರದಲ್ಲಿ ಉಪಯೋಗಿಸುವುದು ಶ್ರೇಷ್ಠ.
ಚಿಯಾ ಬೀಜ
ಈ ಬೀಜಗಳಂತೂ ಅಗಸೆ ಬೀಜಕ್ಕಿಂತಲೂ ಸಣ್ಣವು. ಆದರೆ ಒಮೇಗಾ 3 ಕೊಬ್ಬಿನಾಮ್ಲದ ವಿಷಯಕ್ಕೆ ಬಂದರೆ ಮಾತ್ರ ಸಣ್ಣವಲ್ಲ. ಇದರಲ್ಲೂ ಆಲ್ಫ ಲಿನೋಲೆನಿಕ್ ಆಮ್ಲ ಧಾರಾಳವಾಗಿದೆ. ಇದನ್ನು ಆಹಾರದಲ್ಲಿ ಬಳಸುವುದೂ ಸಹ ಕಷ್ಟವಲ್ಲ. ನಿತ್ಯವೂ ನೀರಿಗೆ ಹಾಕಿ ಕುಡಿದರೂ ಸಾಕಾಗುತ್ತದೆ. ಇದರಿಂದ ಜೀರ್ಣಾಂಗಗಳ ಆರೋಗ್ಯ ವೃದ್ಧಿಸುತ್ತದೆ, ತೂಕ ನಿರ್ವಹಣೆಗೆ ಸಹಾಯವಾಗುತ್ತದೆ, ಹೃದಯದ ಆರೋಗ್ಯ ರಕ್ಷಣೆಗೂ ನೆರವಾಗುತ್ತದೆ.
ಹೆಂಪ್ ಬೀಜಗಳು
ಭಾರತದಲ್ಲಿ ಅಷ್ಟಾಗಿ ಪ್ರಚಲಿತವಿಲ್ಲದ ಬೀಜಗಳಿವು. ಆದರೆ ಸತ್ವಗಳ ವಿಷಯದಲ್ಲಿ ಕಡಿಮೆಯಿಲ್ಲ. ಇದರಲ್ಲಿಯೂ ಒಮೇಗಾ 3 ಕೊಬ್ಬಿನಾಮ್ಲ ಸಾಂದ್ರವಾಗಿದೆ. ಜೊತೆಗೆ ಹಲವು ರೀತಿಯ ಅಮೈನೊ ಆಮ್ಲಗಳು, ಖನಿಜಗಳು ದೇಹಕ್ಕೆ ದೊರೆಯುತ್ತವೆ. ಇದರ ತೈಲವೂ ಲಭ್ಯವಿದ್ದು, ಅಡುಗೆಗೆ ಬಳಸಲು ಸಾಧ್ಯವಿದೆ. ಗೋಡಂಬಿಯಂತೆಯೇ ಹೆಂಪ್ ಬೀಜಗಳನ್ನು ಸಹ ನಾನಾ ಖಾದ್ಯಗಳಿಗೆ ಉಪಯೋಗಿಸಬಹುದು.
ವಾಲ್‌ನಟ್
ಒಮೇಗಾ 3 ಕೊಬ್ಬಿನಾಮ್ಲವನ್ನು ನೈಸರ್ಗಿಕವಾಗಿಯೇ ಯಥೇಚ್ಛವಾಗಿ ಹೊಂದಿರುವ ಇನ್ನೊಂದು ವಸ್ತುವಿದು. ನೋಡಿದಾಗ ಮೆದುಳನ್ನು ನೆನಪಿಸುವ ವಾಲ್‌ನಟ್‌ನಲ್ಲಿ ಪ್ರೊಟೀನ್, ನಾರು ಮತ್ತು ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿವೆ. ಇವುಗಳನ್ನು ಹಾಗೆಯೇ ಬಾಯಾಡಬಹುದು ಅಥವಾ ಸಲಾಡ್‌ಗಳಿಗೆ, ಬ್ರೆಡ್, ಓಟ್‌ಮೀಲ್ ಮುಂತಾದ ಹಲವು ತಿನಿಸುಗಳೊಂದಿಗೆ ಇದನ್ನು ಸೇರಿಸಲೂಬಹುದು.
ಕ್ಯಾನೊಲ ಎಣ್ಣೆ
ಅಡುಗೆಗೆ ಬಳಸುವ ಎಣ್ಣೆಯನ್ನು ಉಳಿದೆಲ್ಲದರ ಬದಲಿಗೆ ಕ್ಯಾನೊಲ ಎಣ್ಣೆಯನ್ನು ಬಳಸಬಹುದು. ಇದರಲ್ಲೂ ಒಮೇಗಾ 3 ಕೊಬ್ಬಿನಾಮ್ಲ ಧಾರಾಳವಾಗಿದೆ. ಗಾಣದಲ್ಲಿ ತೆಗೆದ ಅಥವಾ ಕೋಲ್ಡ್ ಪ್ರೆಸ್ಡ್ ರೀತಿಯಿಂದ ತೆಗೆದ ಕ್ಯಾನೊಲ ಎಣ್ಣೆಯನ್ನು ಬಳಸುವುದು ಸೂಕ್ತ. ಇದನ್ನು ಒಗ್ಗರಣೆಗೆ, ಹುರಿಯಲು, ಕರಿಯಲು ಹಾಗೂ ಉಳಿದ ಎಲ್ಲ ರೀತಿಯಲ್ಲೂ ಬಳಸಬಹುದು.
ಸೋಯಾ ಉತ್ಪನ್ನಗಳು
ತೋಫು, ಎಡಮೇಮ್ ಮುಂತಾದ ಎಲ್ಲ ರೀತಿಯ ಸೋಯಾ ಉತ್ಪನ್ನಗಳಲ್ಲಿ ಒಮೇಗಾ 3 ಕೊಬ್ಬಿನಾಮ್ಲ ದೊರೆಯುತ್ತದೆ. ಸೋಯಾ ಹಾಲನ್ನು ಕೂಡ ಈ ಪಟ್ಟಿಗೆ ಸೇರಿಸಬಹುದು. ಪನೀರ್‌ನಂತೆಯೇ ತೋಫು ಬಳಕೆಗೆ ಬರುತ್ತದೆ. ಉಳಿದೆಲ್ಲ ಕಾಳುಗಳಂತೆ ಎಡಮೇಮ್ ಬಳಸಬಹುದು. ಸೋಯಾ ಚಂಕ್‌ಗಳನ್ನು ತರಕಾರಿಗಳ ಜೊತೆಗೆ ಬೇಯಿಸಲು ಸಾಧ್ಯವಿದೆ.
ಇದನ್ನೂ ಓದಿ: Digestion Tips: ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದು ಹೇಗೆ?
ಇತರ ಮೂಲಗಳು
ಲಘುವಾದ ಅಡಿಕೆಯಂಥ ಘಮವನ್ನು ಹೊಂದಿರುವ ಸೆಣಬಿನ ಬೀಜಗಳು, ಪಾಚಿಯೊಂದರಿಂದ ಸಿದ್ಧಪಡಿಸುವ ಆಲ್ಗಲ್ ಎಣ್ಣೆ, ಬ್ರಸೆಲ್ ಸ್ಪ್ರೌಟ್ ಮುಂತಾದ ಆಹಾರಗಳಲ್ಲೂ ಒಮೇಗಾ 3 ಕೊಬ್ಬಿನಾಮ್ಲ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಹೀಗೆ ಸಸ್ಯಾಹಾರಿಗಳಿಗೂ ಒಮೇಗಾ ೩ ಕೊಬ್ಬಿನಾಮ್ಲ ದೇಹಕ್ಕೆ ಅಗತ್ಯವಾದಷ್ಟು ದೊರೆಯುವುದಕ್ಕೆ ಸಾಧ್ಯವಿದೆ. ಇದಕ್ಕಾಗಿ ಇದಿಷ್ಟೂ ರೀತಿಯ ಆಹಾರಗಳನ್ನು ನಿಯಮಿತವಾಗಿ ಬಳಕೆ ಮಾಡುವುದು ಆವಶ್ಯಕ.