Site icon Vistara News

Health Tips: ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸುವುದರಿಂದ ಇವು ದೇಹಕ್ಕೆ ವಿಷವಾಗಬಹುದು ಎಚ್ಚರ!

Health Tips

ಬೆಳಗ್ಗೆ ಮಾಡಿರುವ ಅನ್ನ, ಸಾಂಬಾರ್ ಬಿಸಿಬಿಸಿಯಾಗಿರಬೇಕು ಎಂದು ಹಲವಾರು ಮನೆಗಳಲ್ಲಿ ಪದೇಪದೇ ಬಿಸಿ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ರಾತ್ರಿ ಉಳಿದ ಅಡುಗೆಯನ್ನು (food) ಬಿಸಿ ಮಾಡಿ (reheat) ಮರುದಿನ ಸೇವಿಸುತ್ತಾರೆ. ಹೀಗೆ ಆಹಾರ ಬಿಸಿ ಮಾಡಿ ತಿನ್ನುವುದು ಅದರಲ್ಲೂ ವಿಶೇಷವಾಗಿ ಕೆಲವೊಂದು ಆಹಾರಗಳನ್ನು ಎರಡನೇ ಬಾರಿ ಬಿಸಿ ಮಾಡುವುದು ಆರೋಗ್ಯಕ್ಕೆ (Health Tips) ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.

ಕೆಲವು ಆಹಾರವನ್ನು ಬಿಸಿ ಮಾಡಿದಾಗ ಅದು ವಿಷವಾಗಬಹುದು. ಇನ್ನು ಕೆಲವು ಆಹಾರಗಳಲ್ಲಿರುವ ಪೌಷ್ಟಿಕಾಂಶ ನಷ್ಟವಾಗಬಹುದು ಎನ್ನುತ್ತಾರೆ ಆಹಾರ ಪರಿಣತರು. ಕೆಲವು ಆಹಾರ ಪದಾರ್ಥಗಳನ್ನು ಎರಡನೇ ಬಾರಿ ಬಿಸಿ ಮಾಡಲೇಬಾರದು. ಅವು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.


ಚಹಾ

ಚಹಾದಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಪಾಲಿಫಿನಾಲ್‌ಗಳಂತಹ ಸೂಕ್ಷ್ಮ ಸಂಯುಕ್ತಗಳಿರುತ್ತವೆ. ಇದು ಚಹಾಕ್ಕೆ ಸುವಾಸನೆ ಮತ್ತು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕೊಡುತ್ತದೆ. ಚಹಾವನ್ನು ಆರಂಭದಲ್ಲಿ ತಯಾರಿಸಿದಾಗ ಇದು ಟ್ಯಾನಿನ್‌ ಮತ್ತು ಕ್ಯಾಟೆಚಿನ್‌ಗಳನ್ನು ಒಳಗೊಂಡಂತೆ ವಿವಿಧ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತದೆ. ಚಹಾವನ್ನು ಮತ್ತೆ ಬಿಸಿ ಮಾಡುವುದರಿಂದ ಈ ಸಂಯುಕ್ತಗಳು ನಷ್ಟವಾಗುತ್ತದೆ. ಇದರಿಂದ ಚಹಾ ಸುವಾಸನೆಯನ್ನು ಕಳೆದುಕೊಳ್ಳುತ್ತದೆ ಮತ್ತು ಅದರಲ್ಲಿರುವ ಒಳ್ಳೆಯ ಅಂಶಗಳು ನಷ್ಟವಾಗುತ್ತದೆ.

ಚಹಾವು ಕೆಫೀನ್ ಅನ್ನು ಹೊಂದಿರುತ್ತದೆ. ಇದನ್ನು ಪುನಃ ಬಿಸಿ ಮಾಡುವುದರಿಂದ ಇದು ಹೆಚ್ಚಾಗಿ ಜಿಗುಪ್ಸೆ, ನಿದ್ರಾಹೀನತೆಯಂತಹ ಅಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ಚಹಾವನ್ನು ಮತ್ತೆ ಬಿಸಿ ಮಾಡಿ ಸೇವಿಸುವುದು ಆಮ್ಲೀಯತೆಯನ್ನು ಹೆಚ್ಚಿಸಬಹುದು.

ಇದಲ್ಲದೇ ಚಹಾವನ್ನು ಕುದಿಸಿದ ಬಳಿಕ ದೀರ್ಘಕಾಲದವರೆಗೆ ಇಡುವುದು ಕೂಡ ಒಳ್ಳೆಯದಲ್ಲ. ಚಹಾವನ್ನು ಮಾಡಿ ಹತ್ತು ನಿಮಿಷಗಳ ಒಳಗೆ ಸೇವಿಸಬೇಕು. ಇಲ್ಲವಾದರೆ ಅದು ಹೆಚ್ಚು ಆಮ್ಲೀಯವಾಗಬಹುದು. ಇದು ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.


ಪಾಲಕ್

ಪಾಲಕ್ ಸೊಪ್ಪು ನೈಟ್ರೇಟ್‌ಗಳನ್ನು ಹೊಂದಿರುತ್ತದೆ. ಇದನ್ನು ಮತ್ತೆ ಬಿಸಿ ಮಾಡಿದಾಗ ನೈಟ್ರೈಟ್‌ಗಳಾಗಿ ಪರಿವರ್ತನೆಯಾಗುತ್ತದೆ. ನೈಟ್ರೈಟ್‌ಗಳು ಅನಂತರ ಅಮೈನೋ ಆಮ್ಲಗಳೊಂದಿಗೆ ಪ್ರತಿಕ್ರಿಯಿಸಿ ನೈಟ್ರೊಸಮೈನ್‌ ಗಳಾಗುತ್ತವೆ. ಅವುಗಳು ಕ್ಯಾನ್ಸರ್ ಜನಕಗಳಾಗಿವೆ. ಪಾಲಕ್ ಅನ್ನು ಮತ್ತೆ ಬಿಸಿ ಮಾಡುವುದರಿಂದ ವಿಟಮಿನ್ ಸಿ ಮತ್ತು ಬಿ ವಿಟಮಿನ್‌ಗಳು ನಷ್ಟವಾಗುತ್ತದೆ. ಅದರ ಪೌಷ್ಟಿಕಾಂಶದ ಮೌಲ್ಯ ಕುಗ್ಗುತ್ತದೆ.

ಪಾಲಕ್ ಕಬ್ಬಿಣದ ಸಮೃದ್ಧ ಮೂಲವಾಗಿದೆ. ಪಾಲಕ್ ಸೊಪ್ಪನ್ನು ಬೇಯಿಸಿ ಮತ್ತೆ ಬಿಸಿ ಮಾಡಿದಾಗ ಕಬ್ಬಿಣವು ಗಾಳಿಯಲ್ಲಿ ಆಮ್ಲಜನಕದ ಸಂಪರ್ಕಕ್ಕೆ ಬಂದಾಗ ರಾಸಾಯನಿಕ ಕ್ರಿಯೆಯು ಸಂಭವಿಸಿ ಕಬ್ಬಿಣದ ಆಕ್ಸೈಡ್‌ಗಳ ರಚನೆಗೆ ಕಾರಣವಾಗಬಹುದು. ಇದು ಪಾಲಕ್ ನ ಬಣ್ಣ ಮತ್ತು ರುಚಿಯನ್ನು ಬದಲಾಯಿಸುತ್ತದೆ.

ಪಾಲಕ್ ನಲ್ಲಿರುವ ಕಬ್ಬಿನಾಂಶದ ಆಕ್ಸಿಡೀಕರಣವು ಅದರ ಪೌಷ್ಟಿಕಾಂಶದ ಮೌಲ್ಯದ ಮೇಲೆ ಪರಿಣಾಮ ಬೀರಬಹುದು. ಆಕ್ಸಿಡೀಕೃತ ಕಬ್ಬಿಣವು ದೇಹದಲ್ಲಿ ಸುಲಭವಾಗಿ ಹೀರಲ್ಪಡುವುದಿಲ್ಲ. ಮತ್ತೆ ಮತ್ತೆ ಪಾಲಕ್ ಅನ್ನು ಬಿಸಿ ಮಾಡುವುದು ಲೋಳೆಯ ರಚನೆ ಮತ್ತು ಕಹಿ ರುಚಿಯನ್ನು ಉಂಟು ಮಾಡುತ್ತದೆ. ಹೀಗಾಗಿ ಪಾಲಕ್‌ನಲ್ಲಿರುವ ಪೋಷಕಾಂಶಗಳನ್ನು ಪಡೆಯಲು ಅದನ್ನು ತಾಜಾ ಆಗಿ ಸೇವಿಸುವುದು ಉತ್ತಮ.


ಅಡುಗೆ ಎಣ್ಣೆ

ಅಡುಗೆ ಎಣ್ಣೆಯನ್ನು ಮತ್ತೆ ಬಿಸಿ ಮಾಡಿದಾಗ ಅದರ ಗುಣಮಟ್ಟ ಮತ್ತು ಸುರಕ್ಷತೆ ಕೆಡಿಸುವ ರಾಸಾಯನಿಕ ಬದಲಾವಣೆಗಳಿಗೆ ಒಳಗಾಗುತ್ತದೆ. ಇದು ಟ್ರಾನ್ಸ್ ಕೊಬ್ಬುಗಳು ಮತ್ತು ಅಲ್ಡಿಹೈಡ್‌ಗಳಂತಹ ಹಾನಿಕಾರಕ ಸಂಯುಕ್ತಗಳ ರಚನೆಗೆ ಕಾರಣವಾಗಬಹುದು. ಇದು ಉರಿಯೂತ ಮತ್ತು ಹೃದಯರಕ್ತನಾಳದ ಕಾಯಿಲೆಯನ್ನು ಉಂಟು ಮಾಡುತ್ತದೆ. ಅಡುಗೆ ಎಣ್ಣೆಯ ಸಮಗ್ರ ಪ್ರಯೋಜನ ಪಡೆಯಲು ಪ್ರತಿ ಬಾರಿಯೂ ತಾಜಾ ಎಣ್ಣೆಯನ್ನು ಬಳಸುವುದು ಮತ್ತು ತೈಲವನ್ನು ಅನೇಕ ಬಾರಿ ಬಿಸಿ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು.


ಅಣಬೆ

ಅಣಬೆಗಳು ಮತ್ತೆ ಬಿಸಿ ಮಾಡುವುದರಿಂದ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆಹಾರದಿಂದ ಹರಡುವ ಅನಾರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಅಣಬೆಗಳು ಪಾಲಿಸ್ಯಾಕರೈಡ್‌ಗಳಂತಹ ಕೆಲವು ಸಂಯುಕ್ತಗಳನ್ನು ಹೊಂದಿರುತ್ತವೆ. ಇದು ಮತ್ತೆ ಬಿಸಿ ಮಾಡಿದಾಗ ಕಿಣ್ವಕ ಪ್ರತಿಕ್ರಿಯೆಗಳಿಗೆ ಒಳಗಾಗಬಹುದು. ಅವುಗಳ ರುಚಿ ಮತ್ತು ವಿನ್ಯಾಸವನ್ನು ಬದಲಾಯಿಸುತ್ತದೆ.

ಮತ್ತೆ ಬಿಸಿ ಮಾಡಿದ ಅಣಬೆಗಳನ್ನು ಸೇವಿಸುವುದರಿಂದ ತಾಜಾತನ ಮತ್ತು ರುಚಿಯನ್ನು ಕಳೆದುಕೊಳ್ಳಬಹುದು. ಅಣಬೆಗಳು ಕಿಣ್ವ, ರಚನಾತ್ಮಕ ಪ್ರೋಟೀನ್‌ಗಳನ್ನು ಒಳಗೊಂಡಂತೆ ವಿವಿಧ ಪ್ರೋಟೀನ್‌ಗಳನ್ನು ಹೊಂದಿರುತ್ತವೆ. ಇದು ಅವುಗಳ ವಿನ್ಯಾಸ ಮತ್ತು ಪೌಷ್ಟಿಕಾಂಶದ ಪ್ರೊಫೈಲ್‌ಗೆ ಕೊಡುಗೆ ನೀಡುತ್ತದೆ. ಅಣಬೆಗಳನ್ನು ಬೇಯಿಸಿದಾಗ, ಈ ಪ್ರೋಟೀನ್ ಗಳು ಡಿನಾಟರೇಶನ್ ಎಂಬ ಪ್ರಕ್ರಿಯೆಯ ಮೂಲಕ ರಚನಾತ್ಮಕ ಬದಲಾವಣೆಗಳಿಗೆ ಒಳಗಾಗುತ್ತವೆ. ಅಣಬೆಗಳನ್ನು ಮತ್ತೆ ಬಿಸಿ ಮಾಡಿದ ಅನಂತರ ಪ್ರೋಟೀನ್ ಸಂಯೋಜನೆಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ಉಂಟುಮಾಡುತ್ತದೆ.

ಇದು ಅಣಬೆಗಳ ವಿನ್ಯಾಸ, ಸುವಾಸನೆ ಮತ್ತು ಪೌಷ್ಟಿಕಾಂಶದ ಗುಣಲಕ್ಷಣಗಳಲ್ಲಿ ವ್ಯತ್ಯಾಸವನ್ನು ಉಂಟು ಮಾಡುತ್ತದೆ. ಅಣಬೆಗಳನ್ನು ಮತ್ತೆ ಬಿಸಿ ಮಾಡುವುದರಿಂದ ಜಲವಿಚ್ಛೇದನೆಯಂತಹ ಪ್ರಕ್ರಿಯೆಗಳ ಮೂಲಕ ಸಣ್ಣ ಪೆಪ್ಟೈಡ್‌ಗಳು ಮತ್ತು ಅಮೈನೋ ಆಮ್ಲಗಳಾಗಿ ಕೆಲವು ಪ್ರೋಟೀನ್ ಅಣುಗಳ ವಿಭಜನೆಗೆ ಕಾರಣವಾಗಬಹುದು. ಇದು ಅಣಬೆಗಳ ಒಟ್ಟಾರೆ ಪ್ರೋಟೀನ್ ಅಂಶ ಮತ್ತು ಸಂಯೋಜನೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಅವುಗಳ ರುಚಿ ಮತ್ತು ಜೀರ್ಣಸಾಧ್ಯತೆಯ ಮೇಲೆ ಪರಿಣಾಮ ಬಿರುವುದು. ಅಣಬೆಗಳ ಗುಣಮಟ್ಟವನ್ನು ಕಾಪಾಡಲು, ಅವುಗಳನ್ನು ದೀರ್ಘಕಾಲದವರೆಗೆ ಬಿಸಿ ಮಾಡದೇ ಇರುವುದು ಒಳ್ಳೆಯದು ಎನ್ನುತ್ತಾರೆ ಆಹಾರ ತಜ್ಞರು.


ಇದನ್ನೂ ಓದಿ: Intermittent Fasting: ಇಂಟರ್‌ ಮಿಟೆಂಟ್‌ ಫಾಸ್ಟಿಂಗ್‌ ಡಯಟ್‌ ಮಾಡುವವರೇ ಹುಷಾರ್! ಈ ಸಂಗತಿ ಗೊತ್ತಿರಲಿ


ಅಕ್ಕಿ

ಅಕ್ಕಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಬ್ಯಾಸಿಲಸ್ ಸೆರಿಯಸ್ ಎಂಬ ಬ್ಯಾಕ್ಟೀರಿಯಂ ಅಡುಗೆ ಪ್ರಕ್ರಿಯೆಯಲ್ಲಿ ಬದುಕುಳಿಯುತ್ತದೆ. ಅನ್ನ ಮಾಡಿ ಅದನ್ನು ದೀರ್ಘಕಾಲದವರೆಗೆ ಇಟ್ಟರೆ ಅದು ದ್ವಿಗುಣವಾಗುತ್ತಾ ಹೋಗುತ್ತದೆ. ಅನ್ನವನ್ನು ಮತ್ತೆ ಬಿಸಿ ಮಾಡುವುದರಿಂದ ಯಾವಾಗಲೂ ಬ್ಯಾಕ್ಟೀರಿಯಾ ಮತ್ತು ಅವುಗಳ ವಿಷಕಾರಿ ಅಂಶಗಳು ಹೋಗುವುದಿಲ್ಲ. ಇದು ಆಹಾರವನ್ನು ವಿಷವಾಗಿಸುತ್ತದೆ. ಬಿಸಿ ಮಾಡಿದ ಅನ್ನ ತೇವಾಂಶ, ಪೌಷ್ಟಿಕಾಂಶ ಕಳೆದುಕೊಳ್ಳುತ್ತದೆ. ಆಹಾರದಿಂದ ಹರಡುವ ಅನಾರೋಗ್ಯವನ್ನು ತಡೆಗಟ್ಟಲು ಬೇಯಿಸಿದ ಅನ್ನವನ್ನು ರೆಫ್ರಿಜರೇಟರ್ ನಲ್ಲಿ ಸರಿಯಾಗಿ ಸಂಗ್ರಹಿಸುವುದು ಮತ್ತು ಒಂದೆರಡು ದಿನಗಳಲ್ಲಿ ಅದನ್ನು ಸೇವಿಸುವುದು ಮುಖ್ಯವಾಗಿದೆ.

Exit mobile version