Site icon Vistara News

Healthy breakfast | ಬೆಳಗಿನ ತಿಂಡಿಗಳು: ನಮ್ಮಲ್ಲೇ ಇದೆ, ನಮ್ಮ ಆರೋಗ್ಯದ ಸೀಕ್ರೆಟ್‌!

healthy breakfast

ಬಹಳಷ್ಟು ಸಾರಿ ಆಹಾರದ ವಿಷಯದಲ್ಲಿ ಗೊಂದಲಕ್ಕೆ ಬೀಳುವುದು ಸಹಜ. ಕ್ಯಾಲರಿ, ಕೊಬ್ಬು, ಕಾರ್ಬೋಹೈಡ್ರೇಟು, ಪ್ರೊಟೀನು ಇವೆಲ್ಲ ಲೆಕ್ಕಾಚಾರಗಳ ನಡುವೆ ಹೈರಾಣಾಗಿ, ನಾವು ದಿನಕ್ಕೆಷ್ಟು ಕ್ಯಾಲರಿ ತಿನ್ನಬೇಕು. ಇದರಲ್ಲಿ ಪ್ರೊಟೀನು ಎಷ್ಟಿದ್ದರೆ ಒಳ್ಳೆಯದು, ನಾವು ಅತಿಯಾಗಿ ಕಾರ್ಬೋಹೈಡ್ರೇಟನ್ನೇ ಅವಲಂಬಿಸುತ್ತಿದ್ದೇವಾ? ಕೊಬ್ಬು ಅತಿಯಾಗಿ ಹೊಟ್ಟೆಗೆ ಹೋಗುತ್ತಿದೆಯಾ? ಯಾವ ಎಣ್ಣೆ ಅಡುಗೆಗೆ ಬಳಸಿದರೆ ಒಳ್ಳೆಯದಿತ್ತು, ಸಕ್ಕರೆಯ ಬದಲು ಬೆಲ್ಲ ಉಪಯೋಗಿಸಿದರೆ ಯಾವ ತೊಂದರೆಯೂ ಇಲ್ಲವಾ? ಇದ್ದರೆ ಅದು ಎಂಥದ್ದು ಇತ್ಯಾದಿ ಇತ್ಯಾದಿ ಪ್ರಶ್ನೆಗಳಿಗೆ ಕಾಲಕಾಲಕ್ಕೆ ಉತ್ತರ ಸಿಕ್ಕರೂ, ಆಗಾಗ ಸಂಶೋಧನೆಗಳು ಈ ಬಗ್ಗೆ ಜ್ಞಾನ ವೃದ್ಧಿ ಮಾಡುತ್ತಿದ್ದರೂ, ಇದೊಂದು ಎಂದಿಗೂ ಮುಗಿಯದ ಗೊಂದಲ.

ನಾವು ದಕ್ಷಿಣ ಭಾರತೀಯರು ಅನ್ನ ಪ್ರಿಯರೆಂದೂ, ನಾವು ಅಗತ್ಯಕ್ಕಿಂತ ಹೆಚ್ಚು ಕಾರ್ಬೋಹೈಡ್ರೇಟನ್ನು ನಿತ್ಯ ಸೇವಿಸುತ್ತೇವೆಂದು ಜನರು ಆಡಿಕೊಳ್ಳುವುದೂ ಸಾಮಾನ್ಯ. ಹಾಗಂತ ಉತ್ತರ ಭಾರತೀಯರಂತೆ ಚಪಾತಿ ತಿನ್ನಿ ಎಂದವರೆಲ್ಲ ಈಗ ಗ್ಲುಟೆನ್‌ ಫ್ರೀ ಡಯಟ್‌ ಎಂದು ಚಪಾತಿಗೇ ಟಾಟಾ ಹೇಳುತ್ತಿದ್ದಾರೆ. ಹೀಗೆ ಗೊಂದಲವಾಗಿ ಕೆಲವರು ಸಿರಿದಾನ್ಯದೆಡೆಗೂ, ಇನ್ನೂ ಕೆಲವರು, ಏನೇನೋ ಪ್ರಯೋಗಗಳನ್ನು ಮಾಡಿ ಮತ್ತೆ ತಮ್ಮ ಹಳೆಯ ಪದ್ಧತಿಗೇ ಮರಳಿದವರೂ ಇದ್ದಾರೆ. ತೆಂಗಿನೆಣ್ಣೆ ಬೇಡ ಎಂದು ಬಿಟ್ಟವರೆಲ್ಲ ಮತ್ತೆ ತೆಂಗಿನೆಣ್ಣೆಗೇ ಮರಳಿದ್ದಾರೆ. ಆಹಾರದ ವಿಷಯದಲ್ಲಿ ಆಗಾಗ ಹೊರಬರುವ ಇಂತಹ ವರದಿಗಳಲ್ಲಿ ಸತ್ಯ ಯಾವುದು ಮಿಥ್ಯ ಯಾವುದು ಎಂದು ತಿಳಿಯಲಾರದೆ ಜನಸಾಮಾನ್ಯ ಒದ್ದಾಡಿಬಿಡುತ್ತಾನೆ. ತಿಳುವಳಿಕೆ ಹೆಚ್ಚಾಗುತ್ತಿರುವ ಹೆಸರಿನಲ್ಲಿ ಗೊಂದಲಗಳು ಹೆಚ್ಚಾಗುತ್ತಿರುವುದೂ ಸತ್ಯವೇ.

ಹಾಗಾದರೆ, ಏನು ಮಾಡಬೇಕು? ಆರೋಗ್ಯವಂತ ಮನುಷ್ಯನೊಬ್ಬ ಫಿಟ್‌ ಆಗಿರಲು ಇರುವ ಆಹಾರ ಕ್ರಮದಲ್ಲೇ ಕೊಂಚ ಬದಲಾವಣೆ ಮಾಡಿಕೊಂಡು, ದೇಹಕ್ಕೆ ಬೇಕಾದ ಅವಶ್ಯಕ ಪೋಷಕಾಂಶಗಳನ್ನು ಹೇಗೆ ಸೇವಿಸಬಹುದು? ನಮ್ಮ ನಿತ್ಯದ ಆಹಾರ ಪದ್ಧತಿಯಲ್ಲೇ, ಕಡಿಮೆ ಕ್ಯಾಲರಿ, ಅವಶ್ಯಕತೆಗೆ ಬೇಕಾಗುವಷ್ಟು ಪ್ರೊಟೀನನ್ನು ನಾವು ಪಡೆದುಕೊಳ್ಳಲು ಖಂಡಿತ ಸಾದ್ಯವಿದೆಯಾ ಎಂದರೆ ಎಲ್ಲವೂ ಸಾಧ್ಯವಿದೆ. ಹಾಗಾದರೆ, ದಕ್ಷಿಣ ಭಾರತೀಯ ಆಹಾರ ಕ್ರಮದಲ್ಲೇ ಆರೋಗ್ಯದ ಸೂತ್ರಗಳನ್ನು ನಾವು ನಮಗೇ ಹಾಕಿಕೊಂಡು ಕಡಿಮೆ ಕ್ಯಾಲರಿಯ ದೇಹಕ್ಕೆ ಅಗತ್ಯ ಬೇಕಾಗುವ ಪೋಷಕಾಂಶಯುಕ್ತ ಉಪಾಹಾರಗಳ ಆಯ್ಕೆಗಳನ್ನು ನೋಡೋಣ.

ಬೆಂಗಳೂರಿನಲ್ಲಿ ಹೊಟೇಲಿನಲ್ಲಿ ಸಿಗುವ ಒಂದು ಮಸಾಲೆ ದೋಸೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಿಲೋ ಕ್ಯಾಲರಿಯಿದೆಯಂತೆ. ಹಾಗಂತ ಒಂದು ವರದಿ ಈ ಹಿಂದೆ ಪ್ರತಿಯೊಬ್ಬರನ್ನೂ ತಮ್ಮ ಹೆಗಲು ಮುಟ್ಟಿ ನೋಡುವಂತೆ ಮಾಡಿತ್ತು. ಒಬ್ಬ ಆರೋಗ್ಯವಂತ ಮನುಷ್ಯನಿಗೆ ಒಂದು ದಿನಕ್ಕೆ ಬೇಕಾಗುವ ಕ್ಯಾಲರಿಗಳು ೨೦೦೦- ೨,೨೦೦ ಕಿಲೋ ಕ್ಯಾಲರಿಗಳು. ಹಾಗಾದರೆ, ಒಂದು ದಿನದ ಅರ್ಧದಷ್ಟು ಅಗತ್ಯವನ್ನು ನಾವು ಬೆಳಗಿನ ಉಪಾಹಾರಕ್ಕೇ ಮುಗಿಸಿದರೆ, ರಾತ್ರಿಯಾಗುವಷ್ಟರಲ್ಲಿ ನಾವು ತಿಂದಿದ್ದು ೩೦೦೦ ಕಿಲೋ ಕ್ಯಾಲರಿ ಆರಾಮವಾಗಿ ದಾಟಿ ಬಿಡುತ್ತದಲ್ಲವೇ ಎಂಬ ಲೆಕ್ಕಾಚಾರಗಳು ಹಲವರನ್ನು ದಂಗುಬಡಿಸಿತ್ತು. ಆದರೆ, ಇದನ್ನೇ ಆಧಾರವಾಗಿಟ್ಟುಕೊಂಡು, ಕೊಂಚ ಈ ಲೆಕ್ಕಾಚಾರದಲ್ಲಿ ಕಡಿವಾಣ ಹಾಕಿಕೊಂಡರೆ, ನಾವು ದಿನನಿತ್ಯ ಎಷ್ಟು ಆಹಾರ ತೆಗೆದುಕೊಳ್ಳಬಹುದೆಂಬ ಅಂದಾಜು ನಮಗೆ ದಕ್ಕತೊಡಗುತ್ತದೆ.

ಇದನ್ನೂ ಓದಿ | Winter soup | ಚಳಿಗಾಲದಲ್ಲಿ ಬೆಚ್ಚಗಿಡಲು ಇರಲಿ ಈ ಫಟಾಫಟ್ ಸೂಪುಗಳು!

ನಮ್ಮ ಉತ್ತಮ ಆರೋಗ್ಯಕ್ಕೆ ಪುಟವಿಟ್ಟ ಚಿನ್ನ ನಮ್ಮ ಬೆಳಗಿನ ಉಪಹಾರ. ಹಾಗೆ ನೋಡಿದರೆ, ನಮ್ಮ ದಕ್ಷಿಣ ಭಾರತೀಯರ ಬೆಳಗಿನ ಉಪಹಾರ ಸಮೃದ್ಧವಾಗಿದೆ. ಇಡ್ಲಿಯಷ್ಟು ಆರೋಗ್ಯಕರ ಬೆಳಗಿನ ಉಪಹಾರ ಇನ್ನೊಂದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಬೆಳಗಿನ ಉಪಹಾರದ ಆರೋಗ್ಯಕರ ಆಯ್ಕೆಗಳ ಪೈಕಿ ಇಡ್ಲಿಯನ್ನೂ ತನ್ನ ಪಟ್ಟಿಯಲ್ಲಿ ಸೇರಿಸಿದೆ. ಕೇವಲ ೩೯ ಕ್ಯಾಲರಿಯಿರುವ ಇಡ್ಲಿ ಹಬೆಯಲ್ಲಿ ಬೇಯಿಸಿರುವ ಎಣ್ಣೆಯಲ್ಲಿ ಕರಿಯದ ಆರೋಗ್ಯಕರ ಆಯ್ಕೆ. ಪ್ರೊಟೀನ್‌ ಸೇರಿದಂತೆ ಎಲ್ಲ ಪೋಷಕಾಂಶಗಳೂ ಹದವಾಗಿ ಬೆರೆಸಿದ, ಸುಲಭವಾಗಿ ಕರಗಬಲ್ಲ ತಿಂಡಿ ಇಡ್ಲಿ.

ದೋಸೆಗಳು ಕೂಡಾ ಉತ್ತಮ ಉಪಹಾರದ ಆಯ್ಕೆಯೇ. ಆದರೆ ಎಂಥ ದೋಸೆಗಳು ಎಂಬುದನ್ನು ಯೋಚಿಸಬೇಕು. ರವಾ ದೋಸೆ, ರಾಗಿ ದೋಸೆ, ಸೌತೆಕಾಯಿ ಸೋರೆಕಾಯಿ ಕುಂಬಳಕಾಯಿ ಇತ್ಯಾದಿ ವಿವಿಧ ತರಕಾರಿಗಳ ದೋಸೆ, ಉತ್ತಪ್ಪ, ಪಡ್ಡು ಇವೆಲ್ಲ ನಿತ್ಯ ನಮ್ಮ ಮನೆಗಳಲ್ಲಿ ಮಾಡುವ ತಿಂಡಿಗಳು ನಿಜವಾಗಿಯೂ ಆರೋಗ್ಯಕರವೇ.

ಇನ್ನು ಉಪ್ಪಿಟ್ಟೆಂದರೆ ಮೂಗು ಮುರಿಯಬೇಡಿ. ಉಪ್ಪಿಟ್ಟೂ ಕೂಡಾ ಉತ್ತಮ ಆಯ್ಕೆಯೇ. ಉಪ್ಪಿಟ್ಟು ಹಾಗೂ ಅವಲಕ್ಕಿ (ಪೋಹಾ) ನಿಮ್ಮನ್ನು ಹೆಚ್ಚು ಹೊತ್ತಿನ ಕಾಲ ಹಸಿವಾಗದಂತೆ ಹಿಡಿದಿಟ್ಟುಕೊಳ್ಳುವ ಶಕ್ತಿ ಸಾಮರ್ಥ್ಯವನ್ನು ನೀಡುವುದಲ್ಲದೆ, ಸುಲಭವಾಗಿ ಸರಳವಾಗಿ ಜೀರ್ಣವಾಗುವ ತಿಂಡಿ. ಹಾಗಾಗಿ ಉಪ್ಪಿಟ್ಟೆಂದರೆ ದೂರ ನಿಲ್ಲಬೇಡಿ. ಯಾವುದೋ ಬ್ರೆಡ್ಡು, ಬನ್ನುಗಳಂತಹ ಬೇಕರಿ ಸಂಸ್ಕರಿತ ಬೆಳಗಿನ ಉಪಾಹಾರಗಳು ದೇಹಕ್ಕೆ ಒಳ್ಳೆಯದನ್ನು ಬಯಸವು.

ಎಣ್ಣೆಯಲ್ಲಿ ಕರಿದ ತಿಂಡಿಗಳು, ಸಿಹಿ ತಿಂಡಿಗಳೆಲ್ಲ ನಮ್ಮ ಬೆಳಗಿನ ಉಪಾಹಾರದ ಜೊತೆ ಇಲ್ಲದಿರುವುದರಿಂದ ನಾವು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ನಮ್ಮ ಹಿರಿಯರು ನಮಗೆ ದಾಟಿಸಿದ ಬೆಳಗಿನ ಉಪಾಹಾರದಲ್ಲೇ ಎಲ್ಲವೂ ಇರುವುದರಿಂದ ಈಗಿನ ಕೊಂಚ ಮಾರ್ಪಾಡುಗಳೊಂದಿಗೆ, ಅಂತಹ ತಿಂಡಿಗಳನ್ನು ತಿಂದುಂಡು ಆರೋಗ್ಯದೆಡೆಗೆ ಧೈರ್ಯದಿಂದ ಮುಖ ಮಾಡಬಹುದು.

ಇದನ್ನೂ ಓದಿ | ತೂಕ ಇಳಿಸಿಕೊಳ್ಳುವ ಸವಾಲು: ಬೆಳಗಿನ ಉಪಾಹಾರ ಬೇಕೋ? ಬೇಡವೋ?

Exit mobile version