ಬೇಸಿಗೆಯನ್ನು ದೂರುವವರು (History Of Ice Cream) ಇರುವಂತೆಯೇ ಅದನ್ನು ಇಷ್ಟ ಪಡುವವರೂ ಇದ್ದಾರೆ. ಯಾಕೆ ಇಷ್ಟ ಬೇಸಿಗೆ ಎಂದು ಕೇಳಿದರೆ ಜ್ಯೂಸ್, ಎಳನೀರು ಮುಂತಾದ ತಂಪು ಪೇಯಗಳನ್ನು ಕುಡಿಯುವುದಕ್ಕೆ ಎನ್ನುವವರಿರಬಹುದು; ಆದರೆ ಐಸ್‌ಕ್ರೀಮ್ (Ice Cream) ಮೆಲ್ಲುವುದಕ್ಕೆ ಎನ್ನುವವರದ್ದೇ ಬಹುಮತ. ತರಹೇವಾರಿ ಬಣ್ಣ, ಆಕಾರ, ರುಚಿಗಳಲ್ಲಿ ದೊರೆಯುವ ಇವುಗಳನ್ನೇ ನಂಬಿ-ನೆಚ್ಚಿ ಬದುಕಿದವರಿದ್ದಾರೆ. ಹಾಗಾಗಿ ಉಳಿದೆಲ್ಲ ತಿನಿಸುಗಳನ್ನೂ ಮೀರಿಸಿದ್ದು ಇವುಗಳ ಜನಪ್ರಿಯತೆ. ಹಾಗೆಂದೇ ಐಸ್‌ಕ್ರೀಮ್ ಪ್ರಿಯರಿಗೆ ಕಾಲ-ದೇಶ-ಪಾತ್ರಗಳ ಹಂಗಿಲ್ಲ. ಚಳಿ-ಮಳೆ-ಬಿಸಿಲು ಎಂಬ ಭೇದವಿಲ್ಲದೆ, ಹಗಲು-ರಾತ್ರಿಗಳ ಲಕ್ಷ್ಯವಿಲ್ಲದಂತೆ ಐಸ್‌ಕ್ರೀಮ್ ತಿನ್ನಬಲ್ಲರು. ವಯಸ್ಸಿನ ಭೇದವನ್ನೂ ಮೀರಿ ಇಷ್ಟೊಂದು ಮೆಚ್ಚಾಗಿರುವ ಐಸ್‌ಕ್ರೀಮ್ ಹುಟ್ಟಿದ್ದು (Ice Cream) ಯಾವಾಗ? ಶತಮಾನಗಳಿಂದ ವಿಕಾಸಕೊಳ್ಳುತ್ತಲೇ ಬಂದಿರುವ ಇದು ನಡೆದಿರುವ ಹಾದಿ ಹೇಗಿದೆ ಎಂಬ ಕುತೂಹಲದ ನೋಟವಿದು.
ಹುಟ್ಟಿದ್ದು ಎಲ್ಲಿ?
ಹಳೆಯ ಮೆಸಪೊಟೇಮಿಯ ನಾಗರಿಕತೆಯಲ್ಲಿ ಯೂಫ್ರೆಟಿಸ್ ನದಿಯ ದಂಡೆಯಲ್ಲಿ ಐಸ್ ಮನೆಗಳಂತೆ ಮಾಡಿ, ಅಲ್ಲಿ ವಸ್ತುಗಳನ್ನು ತಣ್ಣಗೆ ಇರಿಸಿಕೊಳ್ಳುತ್ತಿದ್ದಂತೆ. ಇದೀಗ ಕ್ರಿ.ಪೂ. 4000 ವರ್ಷಗಳ ಹಿಂದಿನ ಕಥೆ! ಅಂದರೆ, ತಣ್ಣಗಿನ ವಸ್ತುಗಳನ್ನು ತಿನ್ನುವ ಖಯಾಲಿ ಅಷ್ಟೊಂದು ಸಾವಿರ ವರ್ಷಗಳ ಹಿಂದೆಯೇ ಮನುಷ್ಯರಿಗಿತ್ತು ಎಂದಾಯಿತು. ಹಳೆಯ ಅಥೆನ್ಸ್‌ನಲ್ಲಿ ವೈನ್‌ಗಳನ್ನು ತಣ್ಣಗಿರಿಸಲು ಐಸ್ ಬಳಸುತ್ತಿದ್ದ ಕಥೆಗಳಿವೆ. ಪ್ರಾಚೀನ ಚೀನಾದಲ್ಲಿ ಟಾಂಗ್ ರಾಜವಂಶದವರು ಹಾಲಿನಿಂದ ಮಾಡಿದ ಖಾದ್ಯಗಳನ್ನು ಹೀಗೆ ತಣ್ಣಗಾಗಿಸಿ ತಿನ್ನುತ್ತಿದ್ದ ಉಲ್ಲೇಖಗಳಿವೆ. ಭಾರತದಲ್ಲಿ ಮೊಘಲರೂ ಗಟ್ಟಿಯಾದ ಕೆನೆಭರಿತ ಹಾಲಿನಲ್ಲಿ ಕುಲ್ಫಿಯಂಥವನ್ನು ಮಾಡಿ ಸವಿಯುತ್ತಿದ್ದರಂತೆ. ಇವೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಇಂದಿನ ಐಸ್‌ಕ್ರೀಮಿನ ಪೂರ್ವಸ್ಥಿತಿಗಳು ಎಂದು ಹೇಳಲಾಗುತ್ತದೆ.
ಐಸ್‌ಕ್ರೀಮ್‌ನ ಆಧುನಿಕ ರೂಪ
ಈ ತಿನಿಸಿಗಿರುವ ಇಂದಿನ ರೂಪದ ಸಮೀಪಕ್ಕೆ ಮೊದಲು ಬಂದಿದ್ದು ಇಟಲಿಯಲ್ಲಿ, ಹದಿನೇಳನೇ ಶತಮಾನದ ನಡುವಿಗೆ. ನಂತರ, ಫ್ರಾನ್ಸ್, ಸ್ಪೇನ್ ಸೇರಿದಂತೆ ಯುರೋಪ್‌ನೆಲ್ಲೆಡೆ ಮೇಜವಾನಿಗಳ ಮೋಜು ಹೆಚ್ಚಿಸುವ ನೆಚ್ಚಿನ ವಸ್ತುವಾಯಿತು ಇದು. 1671ರಲ್ಲಿ ಬ್ರಿಟನ್‌ನ ರಾಜ ಎರಡನೇ ಚಾರ್ಲ್ಸ್ ಮೊದಲಿಗೆ ಐಸ್‌ಕ್ರೀಮ್ ಸವಿದ ದಾಖಲೆಗಳಿವೆ. ಆದರೆ ಇದರಿಂದಲೇ ಆರೋಗ್ಯದ ತುರ್ತು ಪರಿಸ್ಥಿತಿ ಇಂಗ್ಲೆಂಡ್‌ನಲ್ಲಿ ಉದ್ಭವವಾಗಿತ್ತು ಮಾತ್ರ ಕುತೂಹಲಕರ ಸಂಗತಿ.
ʻಪೆನ್ನಿ ಲಿಕ್ʼ
19ನೇ ಶತಮಾನದ ಹೊತ್ತಿಗೆ ಇಂಗ್ಲೆಂಡ್‌ನಲ್ಲಿ ಇದೆಷ್ಟು ಜನಪ್ರಿಯವಾಯಿತೆಂದರೆ, ರಾಜರ, ಶ್ರೀಮಂತರ ಊಟದ ಟೇಬಲ್‌ನ ಸೀಮೆಯನ್ನು ಮೀರಿ, ಬೀದಿಬೀದಿಗಳಲ್ಲಿ ಮಾರಾಟವಾಗತೊಡಗಿತು. ಒಂದು ʻಪೆನ್ನಿʼಗೆ (ಅಲ್ಲಿನ ಪೈಸೆ) ಪುಟ್ಟ ಕಪ್‌ನಲ್ಲಿ ಐಸ್‌ಕ್ರೀಮ್ ತುಂಬಿಸಿ ಕೊಡಲಾಗುತ್ತಿತ್ತು. ಇದನ್ನು ನೆಕ್ಕಿ ಸ್ವಚ್ಛ ಮಾಡಿ ಗ್ರಾಹಕರು ಮರಳಿ ನೀಡುತ್ತಿದ್ದರು. ಇದು ʻಪೆನ್ನಿ ಲಿಕ್ʼ ಎಂದೇ ಪ್ರಸಿದ್ಧವಾಯಿತು. ಇದೆಷ್ಟು ಜನಪ್ರಿಯವಾಯಿತೆಂದರೆ ಬರುವ ಗ್ರಾಹಕರಿಗೆ ಐಸ್‌ಕ್ರೀಮ್ ಕಪ್‌ಗಳನ್ನು ತೊಳೆದು ತುಂಬಿಸಿಕೊಡುವಷ್ಟು ವ್ಯವಧಾನವಿಲ್ಲದ ವ್ಯಾಪಾರಿಗಳು, ಸ್ವಚ್ಛತೆಯನ್ನು ಕಡೆಗಣಿಸಿದರು. ಇದರಿಂದ ಕಾಲರಾ, ಕ್ಷಯದಂಥ ರೋಗಗಳು ತೀವ್ರವಾಗಿ ಹರಡಲಾರಂಭಿಸಿದವು. 1879ರಲ್ಲಿ ಕಾಲರಾ ಸಾಂಕ್ರಾಮಿಕ ಹರಡಿದ್ದು ʻಪೆನ್ನಿ ಲಿಕ್ʼನಿಂದಾಗಿಯೇ ಎಂದು ಅಲ್ಲಿನ ಆರೋಗ್ಯ ದಾಖಲೆಗಳು ಹೇಳುತ್ತವೆ.
ಅಂತಿಮವಾಗಿ ʻಪೆನ್ನಿ ಲಿಕ್ʼ ಮೇಲೆ ನಿಷೇಧ ಹೇರಲಾಯಿತು. ಇದರ ಪರಿಣಾಮವೆಂದರೆ ಹೊಸ ಆವಿಷ್ಕಾರಗಳನ್ನು ವರ್ತಕರು ಮಾಡಿದ್ದು. ಐಸ್‌ಕ್ರೀಮ್ ಕೋನ್‌ಗಳು ರೂಪುಗೊಂಡಿದ್ದು ಹೀಗೆ. ಸ್ವಚ್ಛತೆಯ ರಗಳೆಯಿಲ್ಲದೆ, ಕಪ್ ತೊಳೆದಿದ್ದಾರೋ ಇಲ್ಲವೋ ಎಂಬ ಹೆದರಿಕೆಗೆ ಅವಕಾಶವಿಲ್ಲದಂತೆ ಯಾರು, ಎಲ್ಲಿ ಬೇಕಾದರೂ ಸೇವಿಸಬೇಕಾದಂತೆ ಕೋನ್‌ಗಳನ್ನು ಸಿದ್ಧಪಡಿಸಲಾಯಿತು. ಹಾಗೆಯೇ ಕಡ್ಡಿ ಚುಚ್ಚಿ ಕೊಡುವ ಇನ್ನೂ ಅಗ್ಗದ ಕ್ಯಾಂಡಿಗಳು ಸಹ ಪ್ರಚಾರಕ್ಕೆ ಬಂದವು.
ಇದನ್ನೂ ಓದಿ: Food Tips Kannada: ಸಸ್ಯಾಹಾರಿಗಳಿಗೆ ಒಮೇಗಾ 3 ಕೊಬ್ಬಿನಾಮ್ಲ ಯಾವುದರಲ್ಲಿ ದೊರೆಯುತ್ತದೆ?
ಅಲ್ಲಿಂದ ಮುಂದುವರಿದು, ಹೊಸ ರುಚಿಗಳು, ಫ್ಲೇವರ್‌ಗಳು ರೂಪುಗೊಂಡವು. ಸರಳವಾದ ವೆನಿಲಾದಿಂದ ಹಿಡಿದು, ನಾನಾ ರೀತಿಯ ʻಸಂಡೇʼ ಫ್ಲೇವರ್‌ಗಳು, ಕಾಯಿ-ಬೀಜಗಳನ್ನು ಒಳಗೊಂಡ ದುಬಾರಿ ಬೆಲೆಯವು, ಎಲ್ಲೆಲ್ಲೋ ಬೆಳೆಯುವ ಹಣ್ಣುಗಳನ್ನು ಸೇರಿಸಿಕೊಂಡವು- ಹೀಗೆ ಲೆಕ್ಕವಿಲ್ಲದಷ್ಟು ನಮೂನೆಯ ಐಸ್‌ಕ್ರೀಮ್‌ಗಳು ಈಗ ಲಭ್ಯವಾಗುತ್ತವೆ. ಸುಡು ಬೇಸಿಗೆಯನ್ನು ಸಹನೀಯವಾಗಿಸಿ, ಮಕ್ಕಳಿಗೆ ಮೋಜು ನೀಡುತ್ತಿವೆ. ಆದರೆ ಅದು ಬೆಳೆದುಬಂದ ಚರಿತ್ರೆಯನ್ನು ನೋಡಿದಾಗ, ಎಷ್ಟೊಂದು ಶತಮಾನಗಳ ಹಿಂದೆ ಐಸ್‌ಕ್ರೀಮ್‌ನ ಈ ಪಯಣ ಆರಂಭವಾಯಿತು ಎಂಬುದು ತಿಳಿಯುತ್ತದೆ. ಜೊತೆಗೆ, ಸದಾಕಾಲ ವಿಕಾಸಗೊಳ್ಳುತ್ತಲೇ ಇರುವ ಮಾನವನ ಜಿಹ್ವಾ ಚಾಪಲ್ಯದ ಇತಿಹಾಸವೂ ಅನಾವರಣಗೊಳ್ಳುತ್ತದೆ.