Site icon Vistara News

Fried Chicken: ಹೊಂಬಣ್ಣದ ಗರಿ ಗರಿ ಫ್ರೈಡ್‌ ಚಿಕನ್‌ ಮನೆಯಲ್ಲೇ ಮಾಡಲು ಐದು ಸೂತ್ರಗಳು!

fried chicken

ಚಿಕನ್‌ ಎಂದ ತಕ್ಷಣ ಬಹುತೇಕರ ಕಿವಿ ನೆಟ್ಟಗಾಗುತ್ತದೆ. ಬೋರಾದ ಸಂಜೆಯೊಂದರಲ್ಲಿ ಏನಾದರೊಂದು ತಿನ್ನಬೇಕು ಅನಿಸಿದಾಗ ಚಿಕನ್‌ ಪ್ರಿಯರಲ್ಲನೇಕರಿಗೆ ನೆನಪಾಗುವುದು ಫ್ರೈಡ್‌ ಚಿಕನ್‌. ಹೊಂಬಣ್ಣದ ಕ್ರಿಸ್ಪೀ ಫ್ರೈಡ್‌ ಚಿಕನ್‌ ಮಾಡಿ ತಿನ್ನಲು ಹೊರಡುವ ಅನೇಕರಿಗೆ ಹೊರಟಾಗ ಇರುವ ಉತ್ಸಾಹ ಮಾಡಿದ ಮೇಲೆ ಇರುವುದಿಲ್ಲ. ಯಾಕೆಂದರೆ, ಮಾರುಕಟ್ಟೆಯಲ್ಲಿ ಸಿಗುವ ಫ್ರೈಡ್‌ ಚಿಕನ್‌ನಂತೆ ನಾವು ಮಾಡಿದ ಫ್ರೈಡ್‌ ಚಿಕನ್‌ ಯಾಕೆ ಕ್ರಿಸ್ಪೀಯಾಗಿ ಬಂದಿಲ್ಲ ಎಂಬ ಬೇಸರವೇ ಹೆಚ್ಚು ಕಾಡುತ್ತದೆ. ಭಾನುವಾರ ಮನೆಯಿಂದ ಹೊರಗೆಲ್ಲೂ ಹೋಗಲು ಇಷ್ಟವಿಲ್ಲವಾದಾಗ ಮನೆಯಲ್ಲೇ ಚಿಕನ್‌ ನೆನಪಾದರೆ, ರುಚಿಯಾದ ಕ್ರಿಸ್ಪೀಯಾದ ಫ್ರೈಡ್‌ ಚಿಕನ್‌ ಮಾಡಲು ಏನು ಮಾಡಬೇಕು ಎಂಬ ಸರಳ ಟಿಪ್ಸ್‌ ಇಲ್ಲಿವೆ.

1. ಸೋಡಾ ಹಾಕಿ: ಫ್ರೈಡ್‌ ಚಿಕನ್‌ ಹಿಟ್ಟು ಸಿದ್ಧ ಮಾಡುತ್ತೀರಲ್ಲಾ? ಅದಕ್ಕೆ ಚಿಟಿಕೆ ಸೋಡಾ ಸೇರಿಸಿ. ಸೋಡಾ ಹಾಕಿ ಮಾಡಿದ ಫ್ರೈಡ್‌ ಚಿಕನ್‌ ಒಂದು ಹದವಾದ ಹೊಂಬಣ್ಣಕ್ಕೆ ತಿರುಗುವುದಷ್ಟೇ ಅಲ್ಲ, ಗರಿಗರಿಯಾಗಿ ಬಾಯಲ್ಲಿಟ್ಟರೆ ಕರಗುವಂಥಾ ಮತ್ತೆ ಮತ್ತೆ ಬೇಕೆನಿಸುವಂಥ ನಿಮ್ಮ ಕನಸಿನ ಫ್ರೈಡ್‌ ಚಿಕನ್‌ ಸಿದ್ಧವಾಗುತ್ತದೆ.

2. ಮಜ್ಜಿಗೆ ಸೇರಿಸಿ: ಮಜ್ಜಿಗೆ ಚಿಕನ್‌ನ ರುಚಿ ಹೆಚ್ಚಿಸುತ್ತದೆ ಎಂದರೆ ನಂಬುತ್ತೀರಾ? ಹೌದು. ಚೆನ್ನಾಗಿ ಹುಳಿ ಬಂದ ಮಜ್ಜಿಗೆಯನ್ನು ಹಿಟ್ಟಿಗೆ ಸೇರಿಸಿದರೆ, ಅದರ ರುಚಿಯೇ ಬೇರೆ. ಜೊತೆಗೆ ಯಾವ ಹೊಟೇಲ್‌ನ ರುಚಿಗೂ ಸಾಟಿಯಿಲ್ಲದ ಹೊಂಬಣ್ಣದ ಗರಿಗರಿ ಫ್ರೈಡ್‌ ಚಿಕನ್‌ ನಿಮ್ಮ ಮನೆಯಲ್ಲೇ ಸಿದ್ಧ.

ಇದನ್ನೂ ಓದಿ: Food Care For Health: ತಿಂದಿದ್ದು ಸಿಕ್ಕಾಪಟ್ಟೆಯಾಯ್ತೇ? ರಿಪೇರಿ ಹೀಗೆ ಮಾಡಬಹುದು!

3. ಆಲ್ಕೋಹಾಲ್‌ ಬಳಸಿ!: ಹೌಹಾರಬೇಡಿ! ನಿಜ. ವಿಚಿತ್ರವಾಗಿ ಅನಿಸಬಹುದು. ಆದರೆ ಇದೊಂದು ಅದ್ಭುತ ತಂತ್ರ. ನೀವು ಯಾವ ಆಲ್ಕೋಹಾಳ ಭಳಸುತ್ತೀರೋ ಎಂಬುದು ನಿಮಗೆ ಬಿಟ್ಟಿದ್ದು. ಆದರೆ, ಆಲ್ಕೋಹಾಲನ್ನು ಫ್ರೈಡ್‌ ಜಿಕನ್‌ ಹಿಟ್ಟಿಗೆ ಸೇರಿಸಿ ಕರಿದರೆ ಅದ್ಭುತ ರುಚಿ. ಸಕತ್‌ ಕ್ರಿಸ್ಪೀ ಕೂಡಾ.

4. ಬ್ರೆಡ್‌ ಪುಡಿಯಲ್ಲಿ ಅದ್ದಿ: ಕೆಲವೊಮ್ಮೆ ಹಳೆಯ ಸೂತ್ರಗಳೇ ನಮ್ಮನ್ನು ಕೈ ಹಿಡಿಯುವುದುಂಟು. ಜೋಳದ ಹುಡಿ ಹಾಗೂ ಬ್ರೆಡ್‌ ಪುಡಿಯನ್ನು ಮಿಕ್ಸ್‌ ಮಾಡಿ ಚಿಕನನ್ನು ಅದರಲ್ಲಿ ಹೊರಳಿಸಿ ಕರಿದರೆ ಗರಿಗರಿಯಾದ ಕ್ರಿಸ್ಪೀ ಹಾಗೂ ಹೊಂಬಣ್ಣದ ಫ್ರೈಡ್‌ ಚಿಕನ್‌ ರೆಡಿ. ಆದರೆ, ಎಣ್ಣೆಗೆ ಹಾಕುವ ಮೊದಲು, ಬ್ರೆಡ್‌ ಪುಡಿಗಳು ಸರಿಯಾಗಿ ಚಿಕನ್‌ ಯುಂಡಿನ ಮೇಲೆ ಮೆತ್ತಿಕೊಳ್ಳುವಂತೆ ನೋಡಿಕೊಳ್ಳಿ.

5. ಮೊಟ್ಟೆಯ ಬಿಳಿ ಲೋಳೆ ಬಳಸಿ: ಹೊಟೇಲಿನ ಶೈಲಿಯ ರುಚಿಯ ಫ್ರೈಡ್‌ ಚಿಕನ್‌ ಬೇಕಾದರೆ, ಒಂದೆರಡು ಮೊಟ್ಟೆಯ ಬಿಳಿ ಲೋಳೆಯನ್ನು ವಿಪ್‌ ಮಾಡಿ ಅದರಲ್ಲಿ ಚಿಕನ್‌ ಅನ್ನು ಅದ್ದಿ ತೆಗೆದು ಫ್ರೈ ಮಾಡಿ. ಹೊಂಬಣ್ಣದ ಗರಿಗರಿಯಾದ ಅದ್ಭುತ ರುಚಿಯ ರೆಸ್ಟೊರೆಂಟ್‌ ಶೈಲಿಯ ಫ್ರೈಡ್‌ ಚಿಕನ್‌ ಸಿದ್ಧ.

ಇದನ್ನೂ ಓದಿ: Food Tips: ಇಡ್ಲಿ ಎಂಬ ಆರಾಧ್ಯ ದೈವ: ಇಲ್ಲಿದೆ ಹಬೆಯಾಡುವ ಬಗೆಬಗೆಯ ಇಡ್ಲಿಗಳು!

Exit mobile version