ಆಹಾರ/ಅಡುಗೆ
Fried Chicken: ಹೊಂಬಣ್ಣದ ಗರಿ ಗರಿ ಫ್ರೈಡ್ ಚಿಕನ್ ಮನೆಯಲ್ಲೇ ಮಾಡಲು ಐದು ಸೂತ್ರಗಳು!
ಭಾನುವಾರ ಮನೆಯಿಂದ ಹೊರಗೆಲ್ಲೂ ಹೋಗಲು ಇಷ್ಟವಿಲ್ಲವಾದಾಗ ಮನೆಯಲ್ಲೇ ಚಿಕನ್ ನೆನಪಾದರೆ, ರುಚಿಯಾದ ಕ್ರಿಸ್ಪೀಯಾದ ಫ್ರೈಡ್ ಚಿಕನ್ ಮಾಡಲು ಏನು ಮಾಡಬೇಕು ಎಂಬ ಸರಳ ಟಿಪ್ಸ್ ಇಲ್ಲಿವೆ.
ಚಿಕನ್ ಎಂದ ತಕ್ಷಣ ಬಹುತೇಕರ ಕಿವಿ ನೆಟ್ಟಗಾಗುತ್ತದೆ. ಬೋರಾದ ಸಂಜೆಯೊಂದರಲ್ಲಿ ಏನಾದರೊಂದು ತಿನ್ನಬೇಕು ಅನಿಸಿದಾಗ ಚಿಕನ್ ಪ್ರಿಯರಲ್ಲನೇಕರಿಗೆ ನೆನಪಾಗುವುದು ಫ್ರೈಡ್ ಚಿಕನ್. ಹೊಂಬಣ್ಣದ ಕ್ರಿಸ್ಪೀ ಫ್ರೈಡ್ ಚಿಕನ್ ಮಾಡಿ ತಿನ್ನಲು ಹೊರಡುವ ಅನೇಕರಿಗೆ ಹೊರಟಾಗ ಇರುವ ಉತ್ಸಾಹ ಮಾಡಿದ ಮೇಲೆ ಇರುವುದಿಲ್ಲ. ಯಾಕೆಂದರೆ, ಮಾರುಕಟ್ಟೆಯಲ್ಲಿ ಸಿಗುವ ಫ್ರೈಡ್ ಚಿಕನ್‌ನಂತೆ ನಾವು ಮಾಡಿದ ಫ್ರೈಡ್ ಚಿಕನ್ ಯಾಕೆ ಕ್ರಿಸ್ಪೀಯಾಗಿ ಬಂದಿಲ್ಲ ಎಂಬ ಬೇಸರವೇ ಹೆಚ್ಚು ಕಾಡುತ್ತದೆ. ಭಾನುವಾರ ಮನೆಯಿಂದ ಹೊರಗೆಲ್ಲೂ ಹೋಗಲು ಇಷ್ಟವಿಲ್ಲವಾದಾಗ ಮನೆಯಲ್ಲೇ ಚಿಕನ್ ನೆನಪಾದರೆ, ರುಚಿಯಾದ ಕ್ರಿಸ್ಪೀಯಾದ ಫ್ರೈಡ್ ಚಿಕನ್ ಮಾಡಲು ಏನು ಮಾಡಬೇಕು ಎಂಬ ಸರಳ ಟಿಪ್ಸ್ ಇಲ್ಲಿವೆ.
1. ಸೋಡಾ ಹಾಕಿ: ಫ್ರೈಡ್ ಚಿಕನ್ ಹಿಟ್ಟು ಸಿದ್ಧ ಮಾಡುತ್ತೀರಲ್ಲಾ? ಅದಕ್ಕೆ ಚಿಟಿಕೆ ಸೋಡಾ ಸೇರಿಸಿ. ಸೋಡಾ ಹಾಕಿ ಮಾಡಿದ ಫ್ರೈಡ್ ಚಿಕನ್ ಒಂದು ಹದವಾದ ಹೊಂಬಣ್ಣಕ್ಕೆ ತಿರುಗುವುದಷ್ಟೇ ಅಲ್ಲ, ಗರಿಗರಿಯಾಗಿ ಬಾಯಲ್ಲಿಟ್ಟರೆ ಕರಗುವಂಥಾ ಮತ್ತೆ ಮತ್ತೆ ಬೇಕೆನಿಸುವಂಥ ನಿಮ್ಮ ಕನಸಿನ ಫ್ರೈಡ್ ಚಿಕನ್ ಸಿದ್ಧವಾಗುತ್ತದೆ.
2. ಮಜ್ಜಿಗೆ ಸೇರಿಸಿ: ಮಜ್ಜಿಗೆ ಚಿಕನ್‌ನ ರುಚಿ ಹೆಚ್ಚಿಸುತ್ತದೆ ಎಂದರೆ ನಂಬುತ್ತೀರಾ? ಹೌದು. ಚೆನ್ನಾಗಿ ಹುಳಿ ಬಂದ ಮಜ್ಜಿಗೆಯನ್ನು ಹಿಟ್ಟಿಗೆ ಸೇರಿಸಿದರೆ, ಅದರ ರುಚಿಯೇ ಬೇರೆ. ಜೊತೆಗೆ ಯಾವ ಹೊಟೇಲ್‌ನ ರುಚಿಗೂ ಸಾಟಿಯಿಲ್ಲದ ಹೊಂಬಣ್ಣದ ಗರಿಗರಿ ಫ್ರೈಡ್ ಚಿಕನ್ ನಿಮ್ಮ ಮನೆಯಲ್ಲೇ ಸಿದ್ಧ.
ಇದನ್ನೂ ಓದಿ: Food Care For Health: ತಿಂದಿದ್ದು ಸಿಕ್ಕಾಪಟ್ಟೆಯಾಯ್ತೇ? ರಿಪೇರಿ ಹೀಗೆ ಮಾಡಬಹುದು!
3. ಆಲ್ಕೋಹಾಲ್ ಬಳಸಿ!: ಹೌಹಾರಬೇಡಿ! ನಿಜ. ವಿಚಿತ್ರವಾಗಿ ಅನಿಸಬಹುದು. ಆದರೆ ಇದೊಂದು ಅದ್ಭುತ ತಂತ್ರ. ನೀವು ಯಾವ ಆಲ್ಕೋಹಾಳ ಭಳಸುತ್ತೀರೋ ಎಂಬುದು ನಿಮಗೆ ಬಿಟ್ಟಿದ್ದು. ಆದರೆ, ಆಲ್ಕೋಹಾಲನ್ನು ಫ್ರೈಡ್ ಜಿಕನ್ ಹಿಟ್ಟಿಗೆ ಸೇರಿಸಿ ಕರಿದರೆ ಅದ್ಭುತ ರುಚಿ. ಸಕತ್ ಕ್ರಿಸ್ಪೀ ಕೂಡಾ.
4. ಬ್ರೆಡ್ ಪುಡಿಯಲ್ಲಿ ಅದ್ದಿ: ಕೆಲವೊಮ್ಮೆ ಹಳೆಯ ಸೂತ್ರಗಳೇ ನಮ್ಮನ್ನು ಕೈ ಹಿಡಿಯುವುದುಂಟು. ಜೋಳದ ಹುಡಿ ಹಾಗೂ ಬ್ರೆಡ್ ಪುಡಿಯನ್ನು ಮಿಕ್ಸ್ ಮಾಡಿ ಚಿಕನನ್ನು ಅದರಲ್ಲಿ ಹೊರಳಿಸಿ ಕರಿದರೆ ಗರಿಗರಿಯಾದ ಕ್ರಿಸ್ಪೀ ಹಾಗೂ ಹೊಂಬಣ್ಣದ ಫ್ರೈಡ್ ಚಿಕನ್ ರೆಡಿ. ಆದರೆ, ಎಣ್ಣೆಗೆ ಹಾಕುವ ಮೊದಲು, ಬ್ರೆಡ್ ಪುಡಿಗಳು ಸರಿಯಾಗಿ ಚಿಕನ್ ಯುಂಡಿನ ಮೇಲೆ ಮೆತ್ತಿಕೊಳ್ಳುವಂತೆ ನೋಡಿಕೊಳ್ಳಿ.
5. ಮೊಟ್ಟೆಯ ಬಿಳಿ ಲೋಳೆ ಬಳಸಿ: ಹೊಟೇಲಿನ ಶೈಲಿಯ ರುಚಿಯ ಫ್ರೈಡ್ ಚಿಕನ್ ಬೇಕಾದರೆ, ಒಂದೆರಡು ಮೊಟ್ಟೆಯ ಬಿಳಿ ಲೋಳೆಯನ್ನು ವಿಪ್ ಮಾಡಿ ಅದರಲ್ಲಿ ಚಿಕನ್ ಅನ್ನು ಅದ್ದಿ ತೆಗೆದು ಫ್ರೈ ಮಾಡಿ. ಹೊಂಬಣ್ಣದ ಗರಿಗರಿಯಾದ ಅದ್ಭುತ ರುಚಿಯ ರೆಸ್ಟೊರೆಂಟ್ ಶೈಲಿಯ ಫ್ರೈಡ್ ಚಿಕನ್ ಸಿದ್ಧ.
ಇದನ್ನೂ ಓದಿ: Food Tips: ಇಡ್ಲಿ ಎಂಬ ಆರಾಧ್ಯ ದೈವ: ಇಲ್ಲಿದೆ ಹಬೆಯಾಡುವ ಬಗೆಬಗೆಯ ಇಡ್ಲಿಗಳು!
ಅಂಕಣ
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
ಗೋವಿನ ಮಹತ್ವ ಮತ್ತು ವಿಚಾರಗಳನ್ನು ತಿಳಿಸುವ ಲೇಖನ ಮಾಲೆ “ಗೋ ಸಂಪತ್ತು” ನಲ್ಲಿ ಈ ವಾರ ದೇಶಿ ಗೋವಿನ ಮಜ್ಜಿಗೆಯ ಮಹತ್ವವನ್ನು (importance of buttermilk) ತಿಳಿಸಿಕೊಡಲಾಗಿದೆ.
ದಿನಾಂತೇ ಚ ಪಿಬೇದ್‌ದುಗ್ಧಂ ನಿಶಾಂತೇ ಚ ಪಿಬೇತ್ವಯಃ|
ಭೋಜನಾಂತೇ ಪಿಬೇತ್ತಕ್ರಂ ಕಿಂ ವೈದ್ಯಸ್ಯ ಪ್ರಯೋಜನಮ್||
ವೇದದ ಈ ಎರಡು ಸಾಲಿನಲ್ಲಿ ಆಹಾರ ವ್ಯವಸ್ಥೆಯೇ ಅಡಗಿದೆ. ಇದರರ್ಥ ಸಾಯಂಕಾಲ ಹಾಲನ್ನು ಕುಡಿಯಬೇಕು, ಬೆಳಿಗ್ಗೆ ನೀರನ್ನು ಕುಡಿಯಬೇಕು, ಊಟದ ಕೊನೆಯಲ್ಲಿ ಮಜ್ಜಿಗೆಯನ್ನು ಸೇವಿಸಬೇಕು. ಹೀಗೆ ಮಾಡಿದರೆ ವೈದ್ಯನಿಗೆ ಕೆಲಸವಿರುವುದಿಲ್ಲ ಎನ್ನುವುದೇ ಆಗಿದೆ. ಇದರಿಂದ ಬಡವರ ಪಾನೀಯವೆಂದೇ ಹೇಳಲಾಗುವ ಮಜ್ಜಿಗೆ ವೇದ ಕಾಲದಿಂದಲೂ ಬಹು ಪ್ರಾಮುಖ್ಯತೆಯನ್ನು ಪಡೆದ ಒಂದು ಪೇಯ ಎನ್ನುವುದು ದೃಢವಾಗುತ್ತದೆ.
ಮನುಷ್ಯನಿಗೆ ಅಮೃತ, ದೇವತೆಗಳಿಗೆ ನೀರು, ಪಿತೃಗಳಿಗೆ ಮಗ ಹೇಗೆ ಮುಖ್ಯವೋ ಹಾಗೆಯೇ ದೇವೇಂದ್ರನಿಗೆ ಮಜ್ಜಿಗೆ ದುರ್ಲಭ ಎನ್ನುತ್ತದೆ ಸಂಸ್ಕೃತ ಶ್ಲೋಕವೊಂದು. ಮತ್ತೊಂದು ಶ್ಲೋಕದಲ್ಲಿ ಸ್ವರ್ಗದಲ್ಲಿ ದೇವತೆಗಳು ಅಮೃತಪಾನದಿಂದ ಅಮರತ್ವ ಹೊಂದುವಂತೆ, ಭೂಮಿಯಲ್ಲಿ ಮಜ್ಜಿಗೆಯಿಂದ ಮನುಷ್ಯರು ದೀರ್ಘಾಯುಷ್ಯವನ್ನು ಹೊಂದುತ್ತಾರೆಂದು ಹೇಳಲಾಗಿದೆ.
ದೇವರಿಗೆ ಅಮೃತ ಹೇಗೆ ಮಹತ್ವವೋ ಹಾಗೆಯೇ ಮಾನವರಿಗೆ ಮಜ್ಜಿಗೆ ಶ್ರೇಷ್ಠ ಎಂದು ಹೇಳಲಾಗಿದೆ. ಹೀಗಾಗಿ ವೇದ ಕಾಲದಿಂದಲೂ ಮಜ್ಜಿಗೆಯನ್ನು ಜನರು ಬಳಸುತ್ತಾ ಅದರ ಲಾಭವನ್ನು ಪಡೆದುಕೊಂಡು ಬಂದಿರುವುದು ಸ್ಪಷ್ಟವಾಗುತ್ತದೆ.
ವೇದಗಳಲ್ಲಿ ಮಜ್ಜಿಗೆಯ ಮಹತ್ವವನ್ನು ಬಹಳವಾಗಿ ಹಲವು ಕಡೆಗಳಲ್ಲಿ ವರ್ಣಿಸಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಜ್ಜಿಗೆಯನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಬಹಳವಾಗಿ ಉಪಯೋಗಿಸುವ ಹಲವು ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದು ಎಂದು ಪರಿಗಣಿಸಿರುವುದೇ ಆಗಿದೆ. ಇಂತಹ ಮಜ್ಜಿಗೆಯನ್ನು ಆಯುರ್ವೇದದಲ್ಲಿ ರೋಗಿಗಳ ಚಿಕಿತ್ಸೆಗಷ್ಟೇ ಅಲ್ಲದೆ ರೋಗವನ್ನು ತಡೆಯುವ ಉದ್ದೇಶದಿಂದ ರೋಗಿಗಳಿಗೆ ಆಹಾರದ ರೂಪದಲ್ಲಿ ಬಳಸಲು ಸೂಚಿಸಿರುವುದು ಕಂಡುಬರುತ್ತದೆ. ಹಾಗೆಯೇ ಆಯುರ್ವೇದದಲ್ಲಿ ಐದು ಪ್ರಕಾರದ ಮಜ್ಜಿಗೆಯನ್ನು ನಿರ್ದೇಶಿಸಲಾಗಿದೆ. ಅಂತೆಯೇ ಮಜ್ಜಿಗೆಯಲ್ಲಿನ ನೀರಿನ ಆಧಾರ ಮೇಲೂ ನಾನಾ ಭೇದಗಳನ್ನು ಆಯುರ್ವೇದದಲ್ಲಿ ವರ್ಣಿಸಲಾಗಿದೆ. ಹುಳಿ, ಅತಿಯಾದ ಹುಳಿ, ಒಗರು ಎಂಬ ರುಚಿಯ ಆಧಾರದ ಮೇಲೂ ಮಜ್ಜಿಗೆಯನ್ನು ಮೂರು ರೀತಿ ವಿಭಜಿಸಲಾಗಿದೆ.
ಪಿತ್ತ ಕಡಿಮೆ ಮಾಡುವ ಮಜ್ಜಿಗೆ
ನಾವು ನಿತ್ಯ ಬಳಸುವ ಮಜ್ಜಿಗೆ ಹುಳಿ ಅಥವಾ ಸಿಹಿಯಾಗಿರುತ್ತದೆ. ಸಿಹಿ ಮಜ್ಜಿಗೆಯು ಪಿತ್ತವನ್ನು ಕಡಿಮೆ ಮಾಡುವುದರೊಂದಿಗೆ ಕಫವನ್ನು ಹೆಚ್ಚಿಸಿದರೆ, ಹುಳಿ ಮಜ್ಜಿಗೆಯು ವಾತವನ್ನು ನಾಶ ಮಾಡುವುದರೊಂದಿಗೆ ರಕ್ತ ಪಿತ್ತವನ್ನು ವರ್ಧಿಸುತ್ತದೆ. ಇನ್ನು ಒಗರು ಮಜ್ಜಿಗೆಯು ಕಫಶಾಮಕವಾಗಿದೆ. ಹೀಗೆ ಮಜ್ಜಿಗೆಯು ತ್ರಿದೋಷ ನಿವಾರಕ ಎಂದೆನಿಸಿಕೊಂಡಿದೆ.
ತೆಳು, ದಪ್ಪ ಹಾಗೂ ತೀರಾ ದಪ್ಪ ಎಂಬ ಸಾಂದ್ರತೆಯ ಆಧಾರದ ಮೇಲೂ ಮಜ್ಜಿಗೆಯನ್ನು ಮೂರು ರೀತಿ ವಿಭಜಿಸಲಾಗಿದೆ. ಇದರಲ್ಲಿ ತೆಳ್ಳನೆ ಮಜ್ಜಿಗೆ ಬಹುಬೇಗ ಜೀರ್ಣವಾಗುವ ಗುಣವನ್ನು ಹೊಂದಿದ್ದರೆ, ದಪ್ಪ ಹಾಗೂ ತೀರ ದಪ್ಪ ಸಾಂದ್ರತೆಯ ಮಜ್ಜಿಗೆಯೂ ಬೇಗ ಜೀರ್ಣವಾಗದ ಗುಣವನ್ನು ಹೊಂದಿದೆ. ಮುಖ್ಯವಾಗಿ ಪಚನಶಕ್ತಿಗೆ ಅನುಕೂಲವಾಗುವಂತೆ ಈ ವಿಂಗಡನೆಯನ್ನು ಮಾಡಲಾಗಿದೆ. ಪೂರ್ತಿ ಜಿಡ್ಡು ತೆಗೆದ, ಅರ್ಧ ಜಿಡ್ಡು ತೆಗೆದ ಹಾಗೂ ಜಿಡ್ಡಿನಾಂಶ ತೆಗೆಯದ ಮಜ್ಜಿಗೆ ಎಂಬುದಾಗಿ ಜಿಡ್ಡಿನ ಅಂಶದ ಆಧಾರದ ಮೇಲೂ ಮಜ್ಜಿಗೆಯನ್ನು ಮೂರು ರೀತಿ ವಿಭಜಿಸಲಾಗಿದೆ. ಇದರಲ್ಲಿ ಪೂರ್ತಿ ಜಿಡ್ಡು ತೆಗೆದ ಮಜ್ಜಿಗೆಯು ಹಗುರವಾಗಿದ್ದು ಬಹುಬೇಗ ಪಚನವಾಗು ವಂತಹುದಾದರೆ, ಅರ್ಧ ಜಿಡ್ಡು ತೆಗೆದ ಮಜ್ಜಿಗೆಯು ಪಚನಕ್ಕೆ ಭಾರವಾದುದಾಗಿದೆ. ಇನ್ನು ಜಿಡ್ಡಿನಾಂಶ ತೆಗೆಯದ ಮಜ್ಜಿಗೆಯು ಅತ್ಯಂತ ವೀರ್ಯ ವರ್ಧಕವಾಗಿರುವುದು ಸಾಬೀತಾಗಿದೆ.
ಮಜ್ಜಿಗೆಯಲ್ಲಿಯೂ ಹಲವು ಬಗೆಯುಂಟು!
ಇನ್ನು ನೀರಿನ ಅಂಶ ಅವಲಂಬಿಸಿ ಮೊಸರಿಗೆ ನೀರು ಸೇರಿಸುವ ಆಧಾರದ ಮೇಲೂ ಮಜ್ಜಿಗೆಯ ಹಲವು ಬಗೆಗಳನ್ನು ಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ಅವುಗಳೆಂದರೆ;
ಘೋಲ: ನೀರು ಸೇರಿಸದೆ ಹಾಗೆಯೇ ಮೊಸರನ್ನು ಕಡೆದು ಉಪಯೋಗಿಸುವಂತಹ ಮಜ್ಜಿಗೆ ಇದು. ಇದು ವಾತಾ, ಪಿತ್ತ ಶಮನ ಮಾಡುವಂತಹದ್ದು.
ಮಥಿತ: ಸಾರ ಭಾಗ ತೆಗೆದು, ನೀರು ಸೇರಿಸಿ ಕಡೆದಿರುವ ಮಜ್ಜಿಗೆ ಇದು. ಇದು ಕಫ ಮತ್ತು ಪಿತ್ತಗಳನ್ನು ಶಮನ ಮಾಡುತ್ತದೆ.
ಶ್ವೇತಮಂಥ: ಸಮಭಾಗ ನೀರು ಸೇರಿಸಿ ಕಡೆದ ಮಜ್ಜಿಗೆ ಇದು. ಇದು ಸಿಹಿಯಾಗಿದ್ದು, ಪಚನಕ್ಕೆ ಹಗುರವಾಗಿದ್ದು, ರಕ್ತಪಿತ್ತವನ್ನು ಕಡಿಮೆ ಮಾಡುತ್ತದೆ.
ಉದಶ್ವಿತ್: ಅರ್ಧ ಭಾಗ ನೀರು ಸೇರಿಸಿ ಪಡೆಯುವ ಮಜ್ಜಿಗೆ ಇದು. ಇಂತಹ ಮಜ್ಜಿಗೆ ಬಲವರ್ಧಕವಾದುದು ಎನ್ನಲಾಗಿದೆ.
ತಕ್ರ: ಮೊಸರಿನ ಕಾಲು ಭಾಗ ಅಥವಾ ಅರ್ಧ ಭಾಗ ನೀರು ಸೇರಿಸಿ ಕಡೆದಿರುವ ಮಜ್ಜಿಗೆ ಇದು. ಇದು ತ್ರಿದೋಷ ನಿವಾರಕವಾದುದಾಗಿದೆ.
ಕಾಲಶೇಯ: ಮೊಸರಿನ ಎರಡು ಭಾಗ ನೀರು ಸೇರಿಸಿ ಕಡೆದಿರುವ ಮಜ್ಜಿಗೆ ಇದು. ಇದು ಜೀರ್ಣಕ್ಕೆ ಅತ್ಯಂತ ಹಗುರವಾದುದಾಗಿದೆ.
ದಂಡಾಹತ: ಮೊಸರಿನ ಒಂದೂವರೆ ಭಾಗ ನೀರು ಸೇರಿಸಿ ಕಡೆದಿರುವಂತಹ ಮಜ್ಜಿಗೆ ಇದು.
ಕರಮಂಥ: ಕೈಯಿಂದ ಕಡೆದಿರುವ ಮಜ್ಜಿಗೆ ಇದು. ಇದು ಅತಿಸಾರದಂತಹ ಕಾಯಿಲೆಗೆ ಅತಿ ಉಪಯುಕ್ತ ವಾದುದಾಗಿದೆ.
ಚಚ್ಚಿಕ: ಮೊಸರಿಗೆ ನೀರು ಹಾಕದೇ ಕಡೆದು, ಕೆನೆ ತೆಗೆದು ನಂತರ ನೀರು ಹಾಕಿ ಕಡೆದ ಮಜ್ಜಿಗೆ ಇದು.
ಗಾಲಿತ: ವಸ್ತ್ರದಿಂದ ಸೋಸಿದ ಮಜ್ಜಿಗೆ ಇದು.
ಷೌಡವ: ನಾನಾ ಹಣ್ಣುಗಳನ್ನು ಸೇರಿಸಿ ಕಡೆದಿರುವಂತಹ ಮಜ್ಜಿಗೆ ಇದು.
ಹೀಗೆ ಗೋವಿನ ಉತ್ಪನ್ನಗಳಲ್ಲಿ ಹಾಲು, ಮೊಸರು, ತುಪ್ಪದಂತೆ ಮಜ್ಜಿಗೆಯನ್ನು ಕೂಡ ವೇದ ಶಾಸ್ತ್ರಗಳಲ್ಲಿ ಮಾನವನ ದೇಹಕ್ಕೆ ಅತಿ ಅವಶ್ಯಕವಾಗಿ ಬೇಕಾದ ಒಂದು ಪೇಯ ಎಂದು ಹೇಳಲಾಗಿದೆ.
ಮಜ್ಜಿಗೆ ತಯಾರಿಸಲು ಎರಡು ವಿಧಾನ
ಇಂತಹ ಬಹುಪಯೋಗಿ ಮಜ್ಜಿಗೆಯನ್ನು ಸಾಮಾನ್ಯವಾಗಿ ಎರಡು ವಿಧಾನಗಳಲ್ಲಿ ತಯಾರಿಸಲಾಗುತ್ತದೆ. ಮೊದಲನೆಯದು ಮೊಸರನ್ನು ಕಡೆದು, ಅದರಿಂದ ಬೆಣ್ಣೆ ತೆಗೆದಾದ ಬಳಿಕ ಉಳಿದದ್ದು ಮಜ್ಜಿಗೆಯಾದರೆ, ಎರಡನೆಯದು ಮೊಸರಿಗೆ ನೇರವಾಗಿ ಹೆಚ್ಚು ನೀರನ್ನು ಸೇರಿಸಿ ಬೆಣ್ಣೆ ಸಹಿತ ಮಜ್ಜಿಗೆಯನ್ನು ಸಿದ್ಧಪಡಿಸುವುದಾಗಿದೆ.
ಮೊಸರಿಗೆ ನೀರನ್ನು ಬೆರೆಸಿ ಚೆನ್ನಾಗಿ ಕಡೆದಾಗ ಶಾಖ ಉತ್ಪತ್ತಿಯಾಗಿ ಹಲವು ಗುಣಗಳ ಪರಿವರ್ತನೆಯೊಂದಿಗೆ ಬೆಣ್ಣೆಯು ಬೇರ್ಪಡುತ್ತದೆ. ಹೀಗೆ ಬೆಣ್ಣೆಯಿಂದ ಬೇರ್ಪಟ್ಟ ಉಳಿದ ಭಾಗವನ್ನು ಮಜ್ಜಿಗೆಯಾಗಿ ಉಪಯೋಗಿಸಬೇಕು ಎಂದು ಹೇಳಲಾಗಿದೆ. ಇಂತಹ ಮಜ್ಜಿಗೆಯನ್ನು ಮಟ್ಟಾ ಎಂದು ಕರೆಯಲಾಗಿದೆ. ಸಂಸ್ಕೃತ ಭಾಷೆಯಲ್ಲಿ ಇದನ್ನು ಶಕ್ರಂ ಅಥವಾ ತಕ್ರ ಎಂದು ಹೇಳಲಾಗಿದೆ. ಉತ್ತರ ಹಿಂದೂಸ್ತಾನದಲ್ಲಿ ಇದನ್ನು ಲಸ್ಸಿ ಎಂದು ಸಹ ಕರೆಯುವುದುಂಟು.
ಮಜ್ಜಿಗೆಯನ್ನು ಕೇವಲ ಪಾನಕ ಅಥವಾ ಒಂದು ಪೇಯ ಎಂದು ಹೇಳುವುದು ಕಷ್ಟ. ಭಾರತೀಯರ ಭೋಜನವು ಮಜ್ಜಿಗೆಯ ಸೇವನೆಯೊಂದಿಗೆ ಕೊನೆಗೊಳ್ಳದಿದ್ದರೆ, ಅದು ಅಪೂರ್ಣ ಎಂದು ಹೇಳಲಾಗುತ್ತದೆ. ಇದು ಕೇವಲ ಮಾತಿಗಲ್ಲದೆ, ಮಜ್ಜಿಗೆಯ ಸೇವನೆ ಆರೋಗ್ಯಕ್ಕೆ ಬಹು ಮುಖ್ಯವಾದುದಾಗಿದೆ. ಹೀಗಾಗಿ ನಮ್ಮ ಪೂರ್ವಜರು ಮಜ್ಜಿಗೆಯನ್ನು ಕೇವಲ ಒಂದು ಆಹಾರ ಪದಾರ್ಥವೆಂದು ಪರಿಗಣಿಸಿರಲಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮಜ್ಜಿಗೆಯಲ್ಲಿರುವ ಸಾಕಷ್ಟು ಔಷಧೀಯ ಗುಣಗಳನ್ನು ವೈಜ್ಞಾನಿಕ ಜಗತ್ತು ಕಂಡುಕೊಂಡಿದೆ. ಹೀಗಾಗಿ ಮಜ್ಜಿಗೆಯು ಮಾನವನಿಗೆ ಅಮೃತ ಸಮಾನವಾದುದು ಎಂದೇ ಹೇಳಲಾಗುತ್ತದೆ.
ಔಷಧಿಯಾಗಿ ಮಜ್ಜಿಗೆ ಬಳಕೆ
ಇಂತಹ ಮಜ್ಜಿಗೆಯ ಸೇವನೆಯಿಂದ ತೆರೆದ ಗಾಯ, ಬಾಯಿ ಹುಣ್ಣು, ರಕ್ತಸ್ರಾವದಂತಹ ರೋಗಗಳು ಬಹುಬೇಗ ಗುಣವಾಗುವುದು ಸಾಬೀತಾಗಿದೆ. ಹೀಗಾಗಿಯೇ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಸೋರಿಯಾಸಿಸ್‌ನಂತಹ ಚರ್ಮ ರೋಗದಿಂದ ಬಳಲುತ್ತಿರುವವರಿಗೆ ನೀಡುವ ತಕ್ರಧಾರ ಎಂಬ ಪಂಚಕರ್ಮ ಚಿಕಿತ್ಸೆಗೆ ಮಜ್ಜಿಗೆಯನ್ನು ಇಂದಿಗೂ ಬಳಸಲಾಗುತ್ತದೆ. ಮುಖ್ಯವಾಗಿ ಇದರಲ್ಲಿ ಕ್ಯಾಲ್ಸಿಯಂ ಹಾಗೂ ಫಾಸ್ಪರಸ್ ಅಂಶ ಹೆಚ್ಚಾಗಿದ್ದು ಮೂಳೆಗಳಿಗೆ ಅಗತ್ಯವಾದ ಶಕ್ತಿಯನ್ನು ಸಹ ನೀಡುತ್ತದೆ.
ಸ್ವಾಸ್ಥ್ಯ ಜೀವನಕ್ಕಾಗಿ ರಾತ್ರಿ ಮಲಗುವ ಮುನ್ನು ಒಂದು ಲೋಟ ಹಾಲನ್ನು ಕುಡಿಯಬೇಕು, ಬೆಳಗ್ಗೆ ಎದ್ದು ಶೌಚಕ್ಕೆ ಹೋಗಿ ಬಂದ ನಂತರ ನೀರನ್ನು ಕುಡಿಯಬೇಕು, ಹಾಗೆಯೇ ಊಟದ ಮಧ್ಯೆ ನೀರನ್ನು ಕುಡಿಯದೆ ಊಟದ ಕೊನೆಯಲ್ಲಿ ಮಜ್ಜಿಗೆಯನ್ನು ಕುಡಿಯಬೇಕು ಎಂಬುದಾಗಿ ನಮ್ಮ ಆರೋಗ್ಯ ಗ್ರಂಥಗಳಲ್ಲಿ ಹಲವೆಡೆ ಸೂಚಿಸಲಾಗಿದೆ. ಹೀಗಾಗಿ ಇದು ನಮಗೆ ನಮ್ಮ ಪೂರ್ವಜರು ಹೇಳಿಕೊಟ್ಟಿರುವ ಆರೋಗ್ಯ ಸೂತ್ರ ಎಂದೇ ಹೇಳಬಹುದು.
ಕೆಲವು ಸಂದರ್ಭಗಳಲ್ಲಿ ಮಜ್ಜಿಗೆಯ ಸೇವನೆ ಯೋಗ್ಯವಲ್ಲವೆಂದು ಹೇಳಲಾಗಿದೆ. ಉಷ್ಣ ಕಾಲದಲ್ಲಿ ದುರ್ಬಲ ರೋಗಿಗಳು ಸೇರಿದಂತೆ ಮೂರ್ಚೆ ಮತ್ತು ತಲೆ ತಿರುಗುವಿಕೆಯ ಸಂದರ್ಭದಲ್ಲಿ ಹಾಗೂ ರಕ್ತ ಮತ್ತು ಪಿತ್ತ ವಿಕಾರಗಳಲ್ಲಿ ಮಜ್ಜಿಗೆಯನ್ನು ಉಪಯೋಗಿಸಬಾರದು ಎಂದು ಹೇಳಲಾಗಿದೆ. ಹಾಗೆಯೇ ಸಂಧಿವಾತದವರು ಮತ್ತು ಅಸ್ತಮಾ ಇರುವವರು ಮಜ್ಜಿಗೆಯನ್ನು ಸೇವಿಸಬಾರದೆಂದು ಹೇಳಲಾಗಿದೆ. ಮುಖ್ಯವಾಗಿ ವಾಣಿಜ್ಯ ದೃಷ್ಟಿಕೋನದಿಂದ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಮಾರಾಟವಾಗುತ್ತಿರುವ ಮತ್ತು ಶೇಖರಿಸಿದ ಮಸಾಲೆ ಮಜ್ಜಿಗೆ ಎಂದಿಗೂ ಆರೋಗ್ಯಕರವಲ್ಲ ಎಂಬುದನ್ನು ಅರಿಯಬೇಕಾಗಿದೆ.
ಇದನ್ನೂ ಓದಿ : ಗೋ ಸಂಪತ್ತು: ಬೆಣ್ಣೆಯೆಂಬ ನವನೀತದ ಅನಿಯಮಿತ ಉಪಯೋಗ!
ಆಹಾರ/ಅಡುಗೆ
Food Guide: ಬೆಂಗಳೂರಿನ ತಿಂಡಿಪೋತರಿಗೆ 10 ತಿಂಡಿ ಅಡ್ಡಾಗಳು!
ಬೆಂಗಳೂರಿನಲ್ಲಿ ಟ್ರೈ ಮಾಡಲೇಬೇಕಾದ ತಿಂಡಿ ಅಡ್ಡಾಗಳು ಯಾವುದು ಎಂದರೆ ಪಟ್ಟಿ ಹನುಮಂತನ ಬಾಲದ ಹಾಗೆ ಉದ್ದ ಬೆಳೆದೀತು. ಹನುಮಂತನ ಬಾಲ ಉದ್ದವಿದ್ದರೂ ಕಷ್ಟಪಟ್ಟು ಕೆಲವನ್ನು ಇಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ.
ಬೆಂಗಳೂರಿನಲ್ಲಿ ಸಂಜೆಯಾದರೆ ಸಾಕು, ಅದೂ ಸಂಜೆಮಳೆ ಸುರಿದು ನಿಂತು ತಂಪಾದ ಗಾಳಿ ಬೀಸುತ್ತಿರಲು, ಮನೆಯೊಳಗೆ ಬಂಧಿಯಾಗಿ ಕೂರಲು ಯಾರಿಗೆ ತಾನೇ ಮನಸ್ಸಾದೀತು. ತಣ್ಣಗಿನ ಗಾಳಿಗೆ ಮೈಯೊಡ್ಡಿ ಸಂಜೆ ಗಲ್ಲಿಯೊಂದರಲ್ಲಿ ಇಷ್ಟದ್ದನ್ನು ಇಷ್ಟಪಟ್ಟವರೊಡನೆ ಕೂತು ತಿಂದರೆ ಮನಸ್ಸು ಹಗುರ, ಹೊಟ್ಟೆ ಭಾರ.
ಹಾಗಾದರೆ ಬೆಂಗಳೂರಿನಲ್ಲಿ ಟ್ರೈ ಮಾಡಲೇಬೇಕಾದ ತಿಂಡಿ ಅಡ್ಡಾಗಳು ಯಾವುದು ಎಂದರೆ ಹೆಸರಿಸುವ ಕಷ್ಟ ಯಾರಿಗೂ ಬೇಡ. ಪಟ್ಟಿ ಹನುಮಂತನ ಬಾಲದ ಹಾಗೆ ಉದ್ದ ಬೆಳೆದೀತು. ಒಂದೊಂದು ಏರಿಯಾದಲ್ಲೇ ಕನಿಷ್ಟ ಐದಾರು ಪ್ರಸಿದ್ಧ ತಿಂಡಿ ಅಡ್ಡಾಗಳು ಖಂಡಿತ ಇದ್ದೇ ಇರುತ್ತದೆ. ಹನುಮಂತನ ಬಾಲ ಉದ್ದವಿದ್ದರೂ ಕಷ್ಟಪಟ್ಟು ಕೆಲವನ್ನು ಇಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ.
1. ವಿವಿ ಪುರಂ ತಿಂಡಿಬೀದಿ: ಈ ಹೆಸರು ಕೇಳದವರು ಬೆಂಗಳೂರಿನಲ್ಲಿ ಇದ್ದರೆ ಅವರದ್ದೂ ಒಂದು ಜನ್ಮವಾ ಎಂದು ತಿಂಡಿಪ್ರಿಯರು ಬಾಯಿ ಬಡಕೊಂಡಾರು. ದಶಕಗಳಿಂದ ವಿವಿ ಪುರಂಗೆ ಅಂಥ ಹೆಸರು. ಜೇಬಿನಲ್ಲಿ ದುಡ್ಡಿಲ್ಲದಿದ್ರೂ, ಚಿಲ್ಲರೆ ಕಾಸು ಎಣಿಸಿಕೊಂಡು ಇಲ್ಲಿ ಬಂದರೂ ಹೊಟ್ಟೆ ಬಿರಿಯುವಷ್ಟು ತಿಂದುಕೊಂಡು ಹೋಗಬಹುದು. ಇಲ್ಲಿನ ಪೊಟೇಟೋ ಟ್ವಿಸ್ಟರ್, ಸಿಹಿ ಬೇಳೆ ಹೋಳಿಗೆ, ಮಸಾಲೆ ದೋಸೆ, ಶಿವಣ್ಣ ಗುಲ್ಕಂದ್ ಸೆಂಟರಿನ ರೋಸ್ ಗುಲ್ಕಂದ್ ಮಾತ್ರ ಮರೆಯದೆ ತಿನ್ನಲೇಬೇಕು.
2. ಶ್ರೀಸಾಗರ್-ಸಿಟಿಆರ್, ಮಲ್ಲೇಶ್ವರಂ: ಬಾಯಲ್ಲಿ ನೀರೂರಿಸುವ ಕ್ರಿಸ್ಪಿ ಬೆಣ್ಣೆ ಮಸಾಲೆ ದೋಸೆ ತಿನ್ನಬೇಕೆಂದರೆ ಸಿಟಿಆರ್‌ಗೆ ಭೇಟಿ ಕೊಡಲೇಬೇಕು. ಆರು ದಶಕಗಳಿಂದ ದೋಸೆಗೆ ಹೆಸರುವಾಸಿಯಾಗಿರುವ ಇಲ್ಲಿ ಇಡ್ಲಿ ವಡೆ, ಕೇಸರಿಭಾತ್, ಪೂರಿ ಸಾಗು ಕೂಡಾ ಚೆನ್ನಾಗಿರುತ್ತದೆ.
3. ಹರಿ ಸೂಪರ್ ಸ್ಯಾಂಡ್‌ವಿಚ್, ಜಯನಗರ: ಜಯನಗರದಲ್ಲಿ ಆ ತುದಿಯಿಂದ ಈ ತುದಿಗೆ ಅಡ್ಡಾಡಿದರೆ ತಿನ್ನಲು ಎಷ್ಟೆಲ್ಲ ಅವಕಾಶಗಳಿವೆ! ಜಯನಗರ ಮೂರನೇ ಬ್ಲಾಕಿನ ಹರಿ ಸೂಪರ್ ಸ್ಯಾಂಡ್‌ವಿಚ್ ಕೂಡಾ ಅಂಥದ್ದೇ ಒಂದು. ಇಲ್ಲಿ ಬಗೆಬಗೆಯ ಸ್ಯಾಂಡ್‌ವಿಚ್‌ಗಳೂ, ಚಾಟ್‌ಗಳೂ ದೊರೆಯುತ್ತವೆ.
4. ಖಾನ್ ಸಾಹೇಬ್ ಗ್ರಿಲ್ಸ್ ಅಂಡ್ ರೋಲ್ಸ್, ಇಂದಿರಾನಗರ: ಕ್ರಂಚೀ ರೋಲ್‌ಗಳು ಹಾಗೂ ಗ್ರಿಲ್‌ಗಳಲ್ಲಿ ವೈರೈಟಿ ತಿನ್ನಬೇಕಾದಲ್ಲಿ ಇಂದಿರಾನಗರ ಎರಡನೇ ಹಂತದಲ್ಲಿರುವ ಖಾನ್ ಸಾಹೇಬರಲ್ಲಿಗೆ ಭೇಟಿ ಕೊಡಬೇಕು. ಇಲ್ಲಿನ ಕಟಿ ರೋಲ್ಸ್, ಚಿಕನ್ ಸೀಖ್ ರೋಲ್ ಅದ್ಭುತ.
5.ಪುಚ್ಕಾಸ್, ಮಾರತ್‌ಹಳ್ಳಿ: ಮಾರತ್ ಹಳ್ಳಿಯ ಸಿಲ್ವರ್ ಸ್ಪ್ರಿಂಗ್ ಲೇಔಟ್‌ನ ಪುಚ್ಕಾಸ್ ಪಾನಿಪುರಿಗೆ ಹೇಳಿ ಮಾಡಿಸಿದ್ದು. ಇಲ್ಲಿನ ಪಾನಿಪುರಿಯ ಜೊತೆಗೆ ಬಿಸಿಬಿಸಿ ಜಿಲೇಬಿ ಕೂಡಾ ಎಲ್ಲರ ಹಾಟ್ ಫೇವರಿಟ್.
6. ಚಟರ್ ಪಟರ್, ಬನಶಂಕರಿ: ಚಾಟ್‌ನಲ್ಲೂ ವೆರೈಟಿ ಬೇಕೆಂದರೆ ಇಲ್ಲಿಗೆ ಬರಬೇಕು. ಬೇಲ್‌ಪುರಿ, ದಬೇಲಿ, ಬಗೆಬಗೆಯ ಫ್ಲೇವರ್ಡ್ ಪಾನಿಪುರಿಗಳು, ಬ್ಲ್ಯಾಕ್‌ಕರೆಂಟ್ ಗಪಾಗಪ್ ಸೇರಿದಂತೆ ತರಹೇವಾರಿ ಹೆಸರಿನ ಚಾಟ್‌ಗಳು ಇಲ್ಲಿ ಲಭ್ಯ. ಹೆಸರಿಗೆ ತಕ್ಕಂತೆ ಚಟರ್ ಪಟರ್!
7. ದಾದರ್ ವಡಾಪಾವ್, ಇಂದಿರಾನಗರ: ಹೆಸರೇ ಹೇಳುವಂತೆ ಮುಂಬೈ ಶೈಲಿಯ ವಡಾಪಾವ್ ತಿನ್ನಬೇಕೆನಿಸಿದರೆ ಇದು ಹೇಳಿ ಮಾಡಿಸಿದ ಜಾಗ. ಇಲ್ಲಿ ಸೆಝ್ವಾನ್, ಆಲೂ, ಪನೀರ್ ಮತ್ತಿತರ ಹಲವು ಬಗೆಯ ವಡಾಪಾವ್ ಇವೆ. ಇಲ್ಲಿನ ಚಟ್ ಪಟಾ ವಡಾಪಾವ್, ಚಟ್ನಿ ಗ್ರಿಲ್ಡ್ ಸ್ಯಾಂಡ್‌ವಿಚ್ ಎಲ್ಲರ ಹಾಟ್ ಫೇವರಿಟ್.
ಇದನ್ನೂ ಓದಿ: ಒಲಿಂಪಿಕ್ಸ್‌ಗೆ ಸೇರಿಸಿ: ವಿದ್ಯಾರ್ಥಿ ಭವನದ ವೇಯ್ಟರ್ ಬಗ್ಗೆ ಆನಂದ್ ಮಹೀಂದ್ರ ಟ್ವೀಟ್
8. ಶಾಹಿ ದರ್ಬಾರ್, ಯಶವಂತಪುರ: ಮತ್ತೀಕೆರೆಯ ಎಂ ಎಸ್ ರಾಮಯ್ಯ ಮೈದಾನದ ಪಕ್ಕದಲ್ಲೇ ಇರುವ ಶಾಹಿ ದರ್ಬಾರ್ ಬಗೆಬಗೆಯ ರೋಲ್‌ಗಳಿಗೆ ಫೇಮಸ್ಸು. ಎಗ್ ರೋಲ್, ವೆಜ್ ರೋಲ್, ಪನೀರ್ ರೋಲ್, ಚಿಕನ್ ರೋಲ್ ಇಲ್ಲಿನ ಕೆಲವು ತಿನ್ನಲೇಬೇಕಾದ ವೆರೈಟಿಗಳು.
9. ಆರ್ ಆರ್ಸ್ ಬ್ಲೂ ಮೌಂಟ್ ಅಂಡ್ ಬಾಂಬೆ ಸ್ಯಾಂಡ್‌ವಿಚ್, ವಸಂತನಗರ: ವಸಂತನಗರದ ಎಂಟನೇ ಮುಖ್ಯರಸ್ತೆಯಲ್ಲಿರುವ ಈ ಅಂಗಡಿಯ ಸುತ್ತಮುತ್ತ ಹಲವಾರು ಇಂಥದ್ದೇ ಬಗೆಯ ಅಂಗಡಿಗಳಿರುವುದರಿಂದ ಈ ಏರಿಯಾವನ್ನೇ ಲೋಫರ್ಸ್ ಲೇನ್ ಎಂದೂ ಕರೆಯುತ್ತಾರಂತೆ. ಇಲ್ಲಿನ ಚಿಕನ್ ಬೋಟ್, ಮೆಕ್ಸಿಕನ್ ಚಾಟ್ ಬಹಳ ರುಚಿ.
10. ಚೆಟ್ಟೀಸ್ ಕಾರ್ನರ್, ಕುಮಾರಪಾರ್ಕ್ ವೆಸ್ಟ್: ನೀವು ಹೊಸ ತಲೆಮಾರಿನ ಸ್ಟ್ರೀಟ್ ಫುಡ್ ಪ್ರಿಯರಾದಲ್ಲಿ ಈ ಶಾಪ್ ನಿಮಗಾಗಿಯೇ ಇದೆ. ನಾನಾ ಪ್ರಯೋಗಗಳಿಗೆ ಸದಾ ತೆರೆದ ಮನಸ್ಸಿರುವ ಸಹೋದರರಿಬ್ಬರು ೧೯೯೭ರಲ್ಲಿ ಶುರುಮಾಡಿದ ಇದರಲ್ಲಿ ಪಾಶ್ಚಿಮಾತ್ಯ ಹಾಗೂ ಭಾರತೀಯ ರುಚಿಗಳ ಸಂಗಮವಿದೆ. ಬೆಂಗಳೂರಿಗೆ ಮೊದಲ ಬಾರಿಗೆ ಪೊಟೇಟೋ ಟ್ವಿಸ್ಟರ್ ಪರಿಚಯಿಸಿದ ಕೀರ್ತಿಯೂ ಇವರಿಗೇ ಸಲ್ಲುತ್ತದೆ. ಬನ್ ನಿಪ್ಪಟ್ ಮಸಾಲಾ, ಮಸಾಲಾ ಸೋಡಾ ಇಲ್ಲಿ ಬಲು ರುಚಿ.
ಇದನ್ನೂ ಓದಿ: Healthy breakfast | ಬೆಳಗಿನ ತಿಂಡಿಗಳು: ನಮ್ಮಲ್ಲೇ ಇದೆ, ನಮ್ಮ ಆರೋಗ್ಯದ ಸೀಕ್ರೆಟ್!
ಆಹಾರ/ಅಡುಗೆ
Food Tips: ಬೇಸಿಗೆಯಲ್ಲಿ ನೀವು ಟ್ರೈ ಮಾಡಲೇಬೇಕಾದ ಐಸ್‌ಕ್ರೀಂ ಜೋಡಿಗಳಿವು!
ಐಸ್‌ಕ್ರೀಂ ಪ್ರಿಯರು ಐಸ್‌ಕ್ರೀಂ ಜೊತೆಗೆ ವಿವಿಧ ಬಗೆಯ ಸಿಹಿತಿಂಡಿಗಳನ್ನು ಸವಿದು ಐಸ್‌ಕ್ರೀಂ ಜುಗಲ್‌ಬಂದಿಯ ಸವಿಯನ್ನೂ ಅನುಭವಿಸುವುದುಂಟು. ಐಸ್‌ಕ್ರೀಂ ಪ್ರಿಯರು ಬೇಸಿಗೆಯಲ್ಲಿ ಟ್ರೈ ಮಾಡಲೇಬೇಕಾದ ಗಳಸ್ಯ ಕಂಠಸ್ಯ ಐಸ್‌ಕ್ರೀಂ ಜೋಡಿ ಕಾಂಬಿನೇಶನ್‌ಗಳು ಇಂತಿವೆ.
ಬೇಸಿಗೆ ಬರುತ್ತಿದ್ದ ಹಾಗೆ ಬಹುಮುಖ್ಯವಾಗಿ ಭೂಮಿಯ ಮೇಲಿನ ವಸ್ತುಗಳ ಪೈಕಿ ಪ್ರಿಯವಾಗುವುದು ಐಸ್‌ಕ್ರೀಂ. ಬೇಸಿಗೆಯ ಬಿಸಿಲಿಗೆ ಮೈಯಲ್ಲಿ ಬೆವರ ಮಳೆ ಸುರಿಯುತ್ತಿದ್ದರೆ ಐಸ್‌ಕ್ರೀಂ (Ice cream) ಸಿಕ್ಕರೆ ಆಹಾ ಎಂಬ ಸ್ವರ್ಗ ಸುಖ. ಲೋಕದಲ್ಲಿ ಲಭ್ಯವಿರುವ ಐಸ್‌ಕ್ರೀಂಗಳ ಪೈಕಿ ದಿನವೂ ಒಂದೊಂದು ರುಚಿಯ, ಬಗೆಯ ಐಸ್‌ಕ್ರೀಂ ರುಚಿ ನೋಡಿದರೂ ಬೇಸಿಗೆ ಪೂರ್ತಿ ಮುಗಿದರೂ ಐಸ್‌ಕ್ರೀಂಗಳ ವೆರೈಟಿ ಮುಗಿಯಲಿಕ್ಕಿಲ್ಲ. ಅದರಲ್ಲೂ ಐಸ್‌ಕ್ರೀಂ ಪ್ರಿಯರು ಐಸ್‌ಕ್ರೀಂ ಜೊತೆಗೆ ವಿವಿಧ ಬಗೆಯ ಸಿಹಿತಿಂಡಿಗಳನ್ನು ಸವಿದು ಐಸ್‌ಕ್ರೀಂ ಜುಗಲ್‌ಬಂದಿಯ ಸವಿಯನ್ನೂ ಅನುಭವಿಸುವುದುಂಟು. ಐಸ್‌ಕ್ರೀಂ ಪ್ರಿಯರು ಬೇಸಿಗೆಯಲ್ಲಿ ಟ್ರೈ ಮಾಡಲೇಬೇಕಾದ ಗಳಸ್ಯ ಕಂಠಸ್ಯ ಐಸ್‌ಕ್ರೀಂ ಜೋಡಿ ಕಾಂಬಿನೇಶನ್‌ಗಳು ಇಂತಿವೆ.
1. ವೆನಿಲ್ಲಾ ಐಸ್‌ಕ್ರೀಂ ಹಾಗೂ ಗುಲಾಬ್ ಜಾಮೂನು: ಗುಲಾಬ್ ಜಾಮೂನನ್ನು ಹಾಗೆಯೇ ತಿನ್ನುವ ಬದಲು ಅದರ ಮೇಲೊಂದು ಸ್ಕೂಪ್ ವೆನಿಲ್ಲಾ ಐಸ್‌ಕ್ರೀಂ ಸುರುವಿಕೊಂಡು ತಿಂದರೆ ಅದು ಸ್ವರ್ಗ ಸುಖ. ಬಿಸಿಯಾದ ಗುಲಾಬ್ ಜಾಮೂನಿನ ಮೇಲೆ ತಣ್ಣಗಿನ ಐಸ್‌ಕ್ರೀಂ ಬೆಣ್ಣೆಯ ಹಾಗೆ ಕರಗುತ್ತಿದ್ದರೆ, ಇವೆರಡೂ ನಮ್ಮ ಬಾಯಿಯಲ್ಲಿ ಹಾಲು ಜೇನಿನಂತೆ ಒಂದಾಗುತ್ತಿದ್ದರೆ ನಿಜವಾದ ಮಜಾ ಸಿಗುವುದು ನಮಗೆ! ಜಾಮೂನಿನ ಸಕ್ಕರೆಯ ಪಾಕದ ಜೊತೆ ಐಸ್‌ಕ್ರೀಂ ಜೋಡಿಯಾಗುವ ರಸಮಯ ಗಳಿಗೆಯೇ ಅದ್ಭುತ. ಐಸ್‌ಕ್ರೀಂ ಪ್ರಿಯರೆಲ್ಲರೂ ಮರೆಯದೆ ರುಚಿ ನೋಡಲೇಬೇಕಾದ ಕಾಂಬಿನೇಶನ್ ಇದು.
2. ಕುಲ್ಫಿ ಮತ್ತು ಜಿಲೇಬಿ: ಬೇಸಿಗೆ ಬರುತ್ತಿದ್ದ ಹಾಗೆ ಕುಲ್ಫಿಯೊಂದನ್ನು ಬಾಯಿಗಿಟ್ಟು ಸಮುದ್ರ ಕಿನಾರೆಯಲ್ಲಿ ನಡೆಯುತ್ತದ್ದರೆ ಆ ಸಮಯ ಆನಂದಮಯ. ಅದನ್ನು ಇನ್ನಷ್ಟು ರಸಮಯವನ್ನಾಗಿ ಮಾಡಬೇಕೆಂದರೆ ಕುಲ್ಫಿಯ ಜೊತೆಗೆ ಜಿಲೇಬಿಯನ್ನೂ ಕೊಂಡುಕೊಳ್ಳಬೇಕು. ಆಗಷ್ಟೇ ಎಣ್ಣೆಯಿಂದ ತೆಗೆದು ಸಕ್ಕರೆ ಪಾಕದಲ್ಲದ್ದಿದ ಬಿಸಿಬಿಸಿ ಜಿಲೇಬಿಗೆ ಚಳಿ ಚಳಿ ಕುಲ್ಫಿ ಜೊತೆಯಾದರೆ ಈ ಜೋಡಿ ಸ್ವರ್ಗದಲ್ಲೇ ನಿಶ್ಚಯವಾದ ಜೋಡಿಯಂತೆ. ಈ ಋಣಾನುಬಂಧವನ್ನು ತಪ್ಪಿಸಲು ನಾವ್ಯಾರು ಎಂದು ತಿನ್ನುವುದಷ್ಟೇ ನಿಮಗಿರುವ ದಾರಿ.
3. ಪಿಸ್ತಾ ಐಸ್‌ಕ್ರೀಂ ಹಾಗೂ ರಸಮಲೈ: ಮೆದುವಾದ ಬಾಯಿಗಿಟ್ಟರೆ ಹತ್ತಿಯಂತೆ ಹಗುರಾಗಿ ನೀರಾಗುವ ರಸಮಲೈಯ ಕೇಸರಿಯ ಘಮಕ್ಕೆ ಮಾರುಹೋಗದವರ್ಯಾರು ಹೇಳಿ! ಇಂತಹ ರಸಮಲೈ ಜೊತೆಗೆ ಎಂದರಾದರೂ ಪಿಸ್ತಾ ಐಸ್‌ಕ್ರೀಂ ಸವಿದಿದ್ದೀರಾ? ಇವೆರಡೂ ಎಂಥ ಅದ್ಭುತ ಕಾಂಬಿನೇಶನ್ ಎಂದರೆ, ನೀವು ನಿಜವಾಗಿಯೂ ಐಸ್‌ಕ್ರೀಂ ಪ್ರಿಯರಾಗಿದ್ದಲ್ಲಿ ಈ ಕಾಂಬಿನೇಶನ್ನನ್ನು ಟ್ರೈ ಮಾಡಲೇಬೇಕು.
4. ಸ್ಟ್ರಾಬೆರಿ ಐಸ್‌ಕ್ರೀಂ ಹಾಗೂ ರಸಗುಲ್ಲ: ರಸಗುಲ್ಲದ ಜೊತೆಗೆ ಎಂದಾದರೂ ಸ್ಟ್ರಾಬೆರಿ ಐಸ್‌ಕ್ರೀಂ ಟ್ರೈ ಮಾಡಿದ್ದೀರಾ? ಮಾಡದೆ ಇದ್ದರೆ ಖಂಡಿತ ಮಾಡಿ. ಯಾಕೆಂದರೆ, ಇವೆರಡೂ ಒಂದಕ್ಕೊಂದು ಎಷ್ಟು ಹೊಂದಿಕೊಳ್ಳುತ್ತವೆ ಎಂದರೆ, ತಿಂದ ಮೇಲೆ, ಅರೆ, ಇದೊಂದು ಅದ್ಭುತ ಜೋಡಿಯನ್ನು ಮೊದಲೇ ಏಕೆ ಟ್ರೈ ಮಾಡಲಿಲ್ಲ ಎಂದು ಅನಿಸೀತು.
5. ಕಾಜು ಬರ್ಫಿ ಹಾಗೂ ಕಸಟ್ಟಾ: ಕಸಟ್ಟಾ ಎಂಬ ಐಸ್‌ಕ್ರೀಂ ಬಗೆಯನ್ನು ನೀವು ಸವಿದಿದ್ದರೆ ಮುಂದಿನ ಬಾರಿ ಅದರ ಜೊತೆಗೆ ಕಾಜು ಬರ್ಫಿಯನ್ನೂ ಸೇರಿಸಿ ತಿನ್ನಿ. ಸ್ಪಾಂಜ್ ಕೇಕ್‌ನ ಜೊತೆಗಿರುವ ಈ ಕಸಟ್ಟಾಗೆ ಕಾಜು ಬರ್ಫಿ ಅತ್ಯಂತ ಸುಂದರ ಜೋಡಿ. ಮಕ್ಕಳಿಗೂ ಇಷ್ಟವಾಗುವ ಡೆಸರ್ಟ್ ಇದು.
6. ವೆನಿಲ್ಲಾ ಐಸ್‌ಕ್ರೀಂ ಹಾಗೂ ಜಿಲೇಬಿ: ಎಲ್ಲ ಟ್ರೈ ಮಾಡಿ ಇದನ್ನೇ ಮಾಡದಿದ್ದರೆ ಹೇಗೆ ಹೇಳಿ! ಹೌದು, ಬಿಸಿಬಿಸಿ ಜಿಲೇಬಿಯ ಮೇಲೆ ವೆನಿಲ್ಲಾ ಐಸ್‌ಕ್ರೀಂ ಸುರಿದರೆ ಅದರ ರುಚಿಯೇ ಪರಮಾದ್ಭುತ. ಇವೆರಡರನ್ನು ಜೊತೆಯಾಗಿ ತಿನ್ನದಿದ್ದರೆ ನೀವು ಐಸ್‌ಕ್ರೀಂ ಪ್ರಿಯರಾಗಿದ್ದಕ್ಕೂ ನ್ಯಾಯ ದೊರಕದು. ಬೇಸಗೆಯಲ್ಲಿ ಬರೀ ನೀರಸ ಐಸ್‌ಕ್ರೀಂ ತಿನ್ನುತ್ತಾ ಕಾಲ ಕಳೆಯದಿರಿ. ಇಂತಹ ಬಗೆಬಗೆಯ ಐಸ್‌ಕ್ರೀಂ ಜೋಡಿಗಳನ್ನು ಟ್ರೈ ಮಾಡಿ ಬೇಸಿಗೆಯನ್ನು ಸುಮಧುರವಾಗಿರಿಸಿ!
ಇದನ್ನೂ ಓದಿ: Food Tips: ಡಯಟ್‌ನಲ್ಲಿದ್ದೂ ಪಾನಿಪುರಿ ತಿನ್ನಬೇಕೇ? ಡಯಟ್ ಫ್ರೆಂಡ್ಲೀ ಪಾನಿಪುರಿಗೆ ಕೆಲವು ಸಲಹೆಗಳು!
ಆಹಾರ/ಅಡುಗೆ
Ram Navami 2023: ನಮ್ಮ ಅಜ್ಜಿಯರು ರಾಮನವಮಿಯ ಪಾನಕ ಹೀಗೆ ಮಾಡುತ್ತಿದ್ದರು!
ಪಾನಕ ಮಾಡಲು ಹಿಂದಿನ ಕಾಲದ ಹಿರಿಯರು ಬೇಕು. ಅವರ ಕೈಯಲ್ಲರಳಿದ ಪಾನಕದ ರುಚಿಯೇ ಬೇರೆ. ಅಜ್ಜಿಯರು ಒಂದು ಕಾಲದಲ್ಲಿ ಈ ಪಾನಕವನ್ನು ಹೇಗೆ ತಯಾರಿಸುತ್ತಿದ್ದರು ಹಾಗೂ ಅದೇ ಹಳೇ ಕಾಲದ ಪಾನಕದ ಶೈಲಿಯನ್ನು ಇಲ್ಲಿ ಇಂದು ತಿಳಿಸಲಾಗಿದೆ.
ರಾಮನವಮಿ ಎಂದರೆ ಪಾನಕ. ಪಾನಕ ಎಂದರೆ ರಾಮನವಮಿ! ಹೌದು. ಪಾನಕ ಕುಡಿಯಬೇಕು ಎನಿಸಿದಾಗ ರಾಮನವಮಿಯ ನೆನಪಾಗುವುದುಂಟು. ಯಾಕೆಂದರೆ, ರಾಮನವಮಿ ಬಂದಾಕ್ಷಣ ದೇವಸ್ಥಾನಗಳಲ್ಲಿ, ರಾಮ ಮಂದಿರಗಳಲ್ಲಿ, ನಮ್ಮ ಮನೆಗಳಲ್ಲಿ, ನೆಂಟರಿಷ್ಟರ ಮನೆಗಳಲ್ಲಿ ಪಾನಕದ ಮಳೆಯಾಗುತ್ತದೆ. ಚಳಿಗಾಲ ಮುಗಿದು ಬೇಸಗೆ ಬರುವಾಗ ಸೂರ್ಯನ ಝಳ ಮೈಯನ್ನು ತಾಕುವಾಗ ರಾಮನವಮಿಯ ನೆಪದಲ್ಲಿ ಸಿಗುವ ಈ ಪಾನಕ ಕುಡಿದರೆ ಆಹಾ ಎಂಬ ಸ್ವರ್ಗ ಸುಖ. ದಕ್ಷಿಣ ಭಾರತದೆಲ್ಲೆಡೆ, ರಾಮನವಮಿಯ ದಿನದಂದು ಸಿಗುವ ಈ ಸಿಹಿ ಖಾರದ ಈ ಪಾನಕ ಮಾಡುವುದು ಕೂಡಾ ಕಲೆಯೇ. ಬೇರೆ ಶರಬತ್ತುಗಳಿಗಿಂತ ಕೊಂಚ ಭಿನ್ನವಾಗಿ ಕಾಣುವ ಈ ಪಾನಕ ನಮ್ಮ ಹಿರಿಯರು ನಮಗೆ ದಾಟಿಸಿ ಹೋದ ಒಂದು ಅದ್ಭುತ ಪಾನೀಯ. ಹಬ್ಬಗಳ ನೆಪದಲ್ಲಾದರೂ ಇಂತಹ ದೇಸೀ ಪಾನೀಯಗಳನ್ನು ನಾವು ಕುಡಿಯಬೇಕು!
ಪಾನಕ ಸಂಸ್ಕೃತ ಮೂಲದಿಂದ ಬಂದ ಶಬ್ದ. ಅಂದರೆ, ಸಿಹಿಯಾದ ಪಾನೀಯ ಎಂದು ಅರ್ಥ. ಪಾನಕ ದೇಹವನ್ನು ತಂಪು ಮಾಡುವ ಪಾನೀಯವಾದ್ದರಿಂದ ರಾಮನವಮಿ ಬೇಸಿಗೆಯಲ್ಲಿ ಬರುವುದರಿಂದ ದೇಹಕ್ಕೆ ತಂಪು ಎಂಬ ಅರ್ಥದಲ್ಲಿ ರಾಮನವಮಿಯ ದಿನ ಇದನ್ನು ತಯಾರಿಸುವ ಸಂಪ್ರದಾಯ ಬಂದಿದೆ ಎಂಬ ಮಾತಿದೆ. ಪಾನಕದಲ್ಲೂ ಬಹಳ ವಿಧಗಳಿವೆ. ನಿಂಬೆಹಣ್ಣು ಹಿಂಡಿದ ಪಾನಕ, ಒಣ ಶುಂಠೀ ಹಾಕಿದ ಪಾನಕ, ತುಳಸಿ ಹಾಗೂ ಜೇನು ತುಪ್ಪ ಹಾಕಿದ ಪಾನಕ ಎಂಬಿತ್ಯಾದಿ ಬಗೆಗಳು ಸ್ಥಳದಿಂದ ಸ್ಥಳಕ್ಕೆ ಬದಲಾದರೂ ಹೆಸರು ಮಾತ್ರ ಬದಲಾಗುವುದಿಲ್ಲ.
ಪಾನಕ ಮಾಡಲು ಹಿಂದಿನ ಕಾಲದ ಹಿರಿಯರು ಬೇಕು. ಅವರ ಕೈಯಲ್ಲರಳಿದ ಪಾನಕದ ರುಚಿಯೇ ಬೇರೆ. ಅಜ್ಜಿಯರು ಒಂದು ಕಾಲದಲ್ಲಿ ಈ ಪಾನಕವನ್ನು ಹೇಗೆ ತಯಾರಿಸುತ್ತಿದ್ದರು ಹಾಗೂ ಅದೇ ಹಳೇ ಕಾಲದ ಪಾನಕದ ಶೈಲಿಯನ್ನು ಇಲ್ಲಿ ಇಂದು ತಿಳಿಸಲಾಗಿದೆ.
ಹೀಗೆ ಮಾಡಿ: ಎರಡು ಕಪ್ ನೀರು, ನಾಲ್ಕೈದು ಚಮಚ ತುರಿದ ಬೆಲ್ಲ, ಒಂದು ಚಿಟಿಕೆ ಏಲಕ್ಕಿ, ಒಂದು ಚಿಟಿಕೆ ಒಣ ಶುಂಠಿ ಪುಡಿ, ಎರಡು ಚಿಟಿಕೆ ಕರಿಮೆಣಸಿನ ಪುಡಿ ಇಷ್ಟಿದ್ದರೆ ಪಾನಕ ಮಾಡಬಹುದು. ಮೊದಲು ನೀರಿಗೆ ಬೆಲ್ಲದ ಹುಡಿ ಹಾಕಿ ಚೆನ್ನಾಗಿ ಕಲಕಿ. ಬೆಲ್ಲ ಕರಗಿದ ಮೇಲೆ ಅದಕ್ಕೆ ಏಲಕ್ಕಿ, ಶುಂಠಿ ಪುಡಿ, ಹಾಗೂ ಕರಿಮೆಣಸಿನ ಪುಡಿ ಸೇರಿಸಿ. ಕುಟ್ಟಣಿಯಲ್ಲಿ ಕುಟ್ಟಿ ಪುಡಿ ಮಾಡಿದ ಪುಡಿಯಾದರೆ ರುಚಿ ಹೆಚ್ಚು. ಹಿಂದಿನ ಕಾಲದಲ್ಲಿ ಇಂತಹ ಮಸಾಲೆ ಪುಡಿಗಳನ್ನೆಲ್ಲ ಹಿರಿಯರು, ಅಜ್ಜಿಯರು ಮನೆಯಲ್ಲೇ ಕುಟ್ಟಣಿಯಲ್ಲಿ ಕುಟ್ಟಿ ಪುಡಿ ಮಾಡಿ ಬೇಕಾದ ಅಡುಗೆಗೆ ಬಳಸುತ್ತಿದ್ದರು. ಅದಕ್ಕಾಗಿಯೇ, ಕೈಯಲ್ಲೇ ಮಾಡಿದ ಪುಡಿಗಳು ಆಹಾರದ ರುಚಿ ಹಾಗೂ ಘಮವನ್ನು ಹೆಚ್ಚಿಸುತ್ತಿದ್ದವು. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಶುಂಠಿ ಹಾಗೂ ಕರಿಮೆಣಸಿನ ಖಾರ ಬೆಲ್ಲದ ಜೊತೆಗೆ ಚೆನ್ನಾಗಿ ಹೊಂದಿಕೊಂಡು ಸಿಹಿ ಖಾರದ ಪಾನಕ ಸಿದ್ಧ. ಏಲಕ್ಕಿಯ ಘಮ ಇದಕ್ಕೆ ಅಪೂರ್ವ ಸ್ವಾದವನ್ನೂ ನೀಡುತ್ತದೆ. ನಿಂಬೆಹಣ್ಣು ಬೇಕಾದವರು, ಅರ್ಧ ನಿಂಬೆಹಣ್ಣನ್ನೂ ಇದಕ್ಕೆ ಹಿಂಡಿಕೊಳ್ಳಬಹುದು. ಈ ಪಾನಕವನ್ನು ದೇವರ ಮುಂದೆ ನೈವೇದ್ಯ ರೂಪದಲ್ಲಿ ಇಟ್ಟು, ಪೂಜೆಯ ನಂತರ ಪ್ರತಿಯೊಬ್ಬರೂ ಹಂಚಿಕೊಂಡು ಕುಡಿಯುವುದೇ ರಾಮನವಮಿಯ ಖುಷಿಗಳಲ್ಲೊಂದು.
ಇದನ್ನೂ ಓದಿ: Ram Navami 2023 : ರಘುಕುಲತಿಲಕ ಶ್ರೀರಾಮನ ಪೂಜಿಸುವ ಮಹಾಪರ್ವ ರಾಮನವಮಿ
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ7 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಪ್ರಮುಖ ಸುದ್ದಿ16 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕರ್ನಾಟಕ8 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಕ್ರಿಕೆಟ್23 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್23 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ19 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್20 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ