Site icon Vistara News

Festive diet | ಹಬ್ಬದ ನಂತರ ಹೊಟ್ಟೆಯ ಮೇಲೆ ನಿಗಾ ಇಡಲು ಇವನ್ನು ತಿನ್ನಿ!

hydrating diet

ನವರಾತ್ರಿ, ದೀಪಾವಳಿ ಎಂದು ಸಾಲು ಸಾಲು ಹಬ್ಬಗಳು ಬಂದರೆ ಬಹಳಷ್ಟು ಮಂದಿಯ ಡಯಟ್‌ ಧ್ಯಾನವೆಲ್ಲ ಭಂಗವಾಗುವುದು ನಿಜವೇ. ಮನೆಯಲ್ಲೇ ಹಬ್ಬದ ಸಂಭ್ರಮದಲ್ಲಿ ಮಾಡುವ ಸಿಹಿತಿಂಡಿಗಳು, ಬಹಳ ಅಪರೂಪಕ್ಕೆ ವರ್ಷದಲ್ಲೊಮ್ಮೆ ಮಾಡಿ ಸಂಭ್ರಮಿಸುವ ಕರಿದ ತಿಂಡಿಗಳು, ನೆಂಟರಿಷ್ಟರು, ಬಂಧುಬಳಗ ಎಂದೆಲ್ಲ ಮನೆಗೆ ಬಂದವರು ಕೊಟ್ಟ ಸಿಹಿತಿಂಡಿಗಳು ಹೀಗೆ ಹೊಟ್ಟೆ ಸೇರಿದ ತಿನಿಸುಗಳಿಗೆ ಲೆಕ್ಕ ಇಡುವವರಾರು! ವರ್ಷದಲ್ಲೊಮ್ಮೆ ತಾನೇ ಎಂದು ತಿನ್ನುವುದು ನಿಜವೇ ಆಗಿದ್ದರೂ, ಯದ್ವಾತದ್ವಾ ಹೊಟ್ಟೆಗೆ ಸಿಹಿ, ಕುರುಕಲು ಹಾಕಿದ ಪರಿಣಾಮದಿಂದಾಗಿ ಹೊಟ್ಟೆ ಕೆಟ್ಟಿರುತ್ತದೆ. ತೀರಾ ಕೆಡದೇ ಇದ್ದರೂ ಉಬ್ಬರಿಸಿದಂಥ ಅನುಭವವಂತೂ ಬಹುತೇಕ ಎಲ್ಲರದ್ದು. ಹಾಗಾದರೆ, ಈ ಹೊಟ್ಟೆಯನ್ನು ಮರಳಿ ಯಥಾಸ್ಥಿತಿಗೆ ತರಬೇಕಲ್ಲಾ ಎನಿಸಿದರೆ ಈ ಕೆಳಗಿನ ಆಹಾರಗಳನ್ನು ದಿನನಿತ್ಯದ ಬಳಕೆಯಲ್ಲಿ ಸೇರಿಸಿ. ಆರೋಗ್ಯ ಯಥಾಸ್ಥಿತಿಗೆ ಮರಳುತ್ತದೆ.

೧. ಶುಂಠಿ: ಹೊಟ್ಟೆ ಸಂಬಂಧೀ ತೊಂದರೆಗಳಿಗೆ ಶುಂಠಿಯನ್ನು ಅನಾದಿಕಾಲದಿಂದಲೂ ಮನೆಮನೆಗಳಲ್ಲೂ ಬಳಸಿರುವಂಥದ್ದೇ. ಹೊಟ್ಟೆ ಕೆಟ್ಟಾಗ, ಹೊಟ್ಟೆಯಲ್ಲಿ ಜೀರ್ಣ ಸಂಬಂಧೀ ತೊಂದರೆಗಳು ಕಾಡಿದಾಗ ಶುಂಠಿ ಉಪಯೋಗಕ್ಕೆ ಬರುತ್ತದೆ. ಉಬ್ಬರಿಸಿದ ಹೊಟ್ಟೆಯ ಸಮಸ್ಯೆಯಿದ್ದರೆ, ಶುಂಠಿ ತಂಬುಳಿ ಮಾಡಿ ಉಣ್ಣಬಹುದು. ಒಂದಿಷ್ಟು ಕಾಯಿತುರಿ, ಒಂದು ತುಂಡು ಶುಂಠಿ ಹಾಗೂ ಮಜ್ಜಿಗೆ, ರುಚಿಗೆ ತಕ್ಕಷ್ಟು ಉಪ್ಪು ಇವನ್ನು ಸೇರಿಸಿ ರುಬ್ಬಿ ಅನ್ನದ ಜೊತೆಗೆ ಕಲಸಿ ಉಣ್ಣುವ ಮೂಲಕ ಹೊಟ್ಟೆ ಹಗುರಾಗಿಸಬಹುದು. ಅಥವಾ ಶುಂಠಿ ಟೀ ಮಾಡಿ ಸ್ವಲ್ಪ ನಿಂಬೆರಸ ಸೇರಿಸಿ ಕುಡಿಯುವ ಮೂಲಕ ಜೀರ್ಣಕ್ರಿಯೆಯನ್ನು ಚುರುಕುಗೊಳಿಸಬಹುದು.

೨. ಬೀಟ್‌ರೂಟ್‌: ಹಬ್ಬದ ಸಂದರ್ಭ ಮೂರ್ನಾಲ್ಕು ದಿನ ಸಿಕ್ಕಾಪಟ್ಟೆ ತಿಂದಿದ್ದೇನೆ, ಇನ್ನು ಸ್ವಲ್ಪ ಆಹಾರದ ಬಗ್ಗೆ ಹತೋಟಿ ಬೇಕು ಅನಿಸುತ್ತಿದ್ದರೆ, ಹಬ್ಬದ ನಂತರ ಬೀಟ್‌ರೂಟ್‌ ಅಡುಗೆ ಮಾಡಬಹುದು. ಇದರಲ್ಲಿ ಪೊಟಾಶಿಯಂ ಅಂಶ ಹೆಚ್ಚಿರುವುದರಿಂದ ಇದು, ದೇಹದಲ್ಲಿ ಉಪ್ಪಿನ ಅಂಶವನ್ನು ಸಮತೋಲನಕ್ಕೆ ತರುವುದಲ್ಲದೆ, ಹೊಟ್ಟೆ ಉಬ್ಬರಿಸಿದಂತಾಗುವುದನ್ನೂ ನಿಯಂತ್ರಣಕ್ಕೆ ತರುತ್ತದೆ.

೩. ಬಾಳೆಹಣ್ಣು: ಬಾಳೆಹಣ್ಣು ಪೊಟಾಶಿಯಂನ ಇನ್ನೊಂದು ಮೂಲ. ಇದೂ ಕೂಡಾ ಬೀಟ್‌ರೂಟ್‌ನಂತೆಯೇ ದೇಹದಲ್ಲಿ ಹೆಚ್ಚಿರುವ ಉಪ್ಪಿನಂಶವನ್ನು ಹೊರಗೆ ಕಳಿಸಿ, ದೇಹದಲ್ಲಿ ನೀರಿನಂಶವನ್ನು ಸಮತೋಲನಕ್ಕೆ ತರುತ್ತದೆ. ಹೊಟ್ಟೆಯುಬ್ಬರದಂತ ಸಮಸ್ಯೆ ಬಂದಾಗ ಪೊಟಾಶಿಯಂ ಅಧಿಕವಿರುವ ಆಹಾರ ಒಳ್ಳೆಯದು.

೪. ಮೊಸರು: ಮೊಸರು ಹಾಗೂ ಮಜ್ಜಿಗೆಯಂತಹ ಪ್ರೊಬಯಾಟಿಕ್‌ ಆಹಾರ ಕೂಡಾ ಇಂತಹ ಸಂದರ್ಭ ಒಳ್ಳೆಯದೇ. ಕರುಳಿನ ಆರೋಗ್ಯ ಕಾಪಾಡುವಲ್ಲಿ ಇವುಗಳ ಪಾತ್ರ ದೊಡ್ಡದು. ಹೊಟ್ಟೆಯನ್ನು ತಂಪಾಗಿರಿಸಲು ಇವು ಸಹಕಾರ ನೀಡುವುದಲ್ಲದೆ, ಹೊಟ್ಟೆಯುಬ್ಬರವನ್ನೂ ಶಮನಗೊಳಿಸುವ ತಾಕತ್ತು ಇವಕ್ಕಿದೆ.

ಇದನ್ನೂ ಓದಿ | Diabetes Diet | ಮಧುಮೇಹ ನಿಯಂತ್ರಣಕ್ಕೆ ಇದೊಂದು ಸೂತ್ರ ನೆನಪಿಟ್ಟುಕೊಳ್ಳಿ

೫. ಬಸಳೆ: ಬಸಳೆಯಲ್ಲಿರುವ ಜೀವಸತ್ವಗಳು ಹಾಗೂ ನಾರಿನಂಶ, ಹಬ್ಬದ ನಂತರದ ಎಲ್ಲ ಪರಿಣಾಮಗಳಿಗೂ ರಾಮಬಾಣವಾಗುವ ತಾಕತ್ತು ಇದಕ್ಕಿದೆ. ಹೊಟ್ಟೆಯುಬ್ಬರವನ್ನು ತಗ್ಗಿಸುವುದಲ್ಲದೆ, ನಾರಿನಂಶ, ದೇಹದಲ್ಲಿ ಎಲ್ಲವನ್ನೂ ಕರಗಿಸಿ, ಬೇಡದ ಕಶ್ಮಲವನ್ನು ಸುಲಭವಾಗಿ ಹೊರಗೆ ಕಳಿಸಿ ಹೊಟ್ಟೆಯನ್ನು ಶುಚಿಗೊಳಿಸುತ್ತದೆ. ಆರಾಮದಾಯಕ ಅನುಭವ ನೀಡುತ್ತದೆ.

೬. ನಿಂಬೆಹಣ್ಣು: ಅಜೀರ್ಣದಂತಹ ತೊಂದರೆಯಾಗಿದ್ದರೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ದೇಹಕ್ಕೆ ಬೇಕಾದ ನೀರಿನಂಶವನ್ನು ಪೂರೈಕೆ ಮಾಡಿ, ಆಸಿಡ್‌ ಅಂಶವನ್ನೂ ನೀಡಿ ಬೇಗ ಕರಗಿಸುವಿಕೆಯಲ್ಲಿ ಸಹಾಯ ಮಾಡುತ್ತದೆ.

೭. ಗ್ರೀನ್‌ ಟೀ: ಗ್ರೀ ಟೀ ಸೇವನೆ ಇಂತಹ ಸಂದರ್ಭದಲ್ಲಿ ಮಾತ್ರವಲ್ಲ, ಪ್ರತಿನಿತ್ಯವೂ ಒಳ್ಳೆಯದೇ. ಆದರೆ ಇಂತಹ ಸಮಯದಲ್ಲಿ ಇವುಗಳ ಪಾತ್ರ ದೊಡ್ಡದು. ಇದರಲ್ಲಿರುವ ಶಮನಕಾರೀ ಗುಣಗಳು ಹಾಗೂ ಕೆಫಿನ್‌ ಅಂಶ ಹೊಟ್ಟೆಯುಬ್ಬರವನ್ನು ತಗ್ಗಿಸುತ್ತವೆ.

೮. ಸೌತೆಕಾಯಿ: ನೀರಿನಿಂದ ಕೂಡಿರುವ ಸೌತೆಕಾಯಿ ದೇಹದಲ್ಲಿ ನೀರಿನ ಪ್ರಮಾಣವನ್ನು ಸಮತೋಲನಕ್ಕೆ ತರುವ ಮೂಲಕ ಅಜೀರ್ಣ ಹಾಗೂ ಹೊಟ್ಟೆಯುಬ್ಬರವನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಯನ್ನು ಸುಲಭವಾಗಿಸುತ್ತದೆ ಹಾಗೂ ತೂಕ ನಿಯಂತ್ರಣದಲ್ಲೂ ಪಾತ್ರ ವಹಿಸುತ್ತದೆ.

ಇದನ್ನೂ ಓದಿ | Festive diet | ಹಬ್ಬದ ಸವಿ: ಯಾವುದು ಬೇಕು, ಎಷ್ಟು ಸಾಕು?

Exit mobile version