ಬಹಳಷ್ಟು ಮಂದಿಯ ಸಮಸ್ಯೆ ಎಂದರೆ ಮಧ್ಯರಾತ್ರಿಯ ಹಸಿವು (Midnight hunger). ಹೌದು. ಇಡೀ ದಿನ ಒಂದು ಶಿಸ್ತುಬದ್ಧ ಆಹಾರ ಕ್ರಮದಲ್ಲಿ ದಿನ ಕಳೆದ ಮೇಲೆ, ಅದ್ಯಾಕೋ ಮಧ್ಯರಾತ್ರಿಯ ಹೊತ್ತು ಏನಾದರೂ ತಿನ್ನಬೇಕೆಂಬ ಚಪಲ ಹೆಚ್ಚುತ್ತದೆ. ಇಡೀ ದಿನದ ತಪಸ್ಸು ನೀರಿನಲ್ಲಿ ಮಾಡಿದ ಹೋಮದಂತಾಗಿಬಿಡುತ್ತದೆ. ರಾತ್ರಿಯ ವೇಳೆಗೆ, ಕೆಲಸದ ನಿಮಿತ್ತವೋ ಅಥವಾ ಇನ್ನೇನಾದರೂ ಸಿನಿಮಾ ನೋಡುತ್ತಲೋ ತಡರಾತ್ರಿಯವರೆಗೆ ಕುಳಿತಿದ್ದರೆ ಕತೆ ಮುಗಿದಂತೆಯೇ. ಬೇಗ ಉಂಡ ಪರಿಣಾಮವೋ, ಕಡಿಮೆ ಉಂಡ ಪರಿಣಾಮವೋ, ಮಧ್ಯರಾತ್ರಿಯ ವೇಳೆಗೆ ಹೊಟ್ಟೆ ತಾಳ ಹಾಕಲಾರಂಭಿಸುತ್ತದೆ. ಏನಾದರೊಂದು ತಿನ್ನಬೇಕೆಂಬ ತುಡಿತ ಹೆಚ್ಚಾಗುತ್ತದೆ. ಇದರ ಪರಿಣಾಮ ಅನಾರೋಗ್ಯಕರ ಕುರುಕಲು ತಿನಿಸುಗಳೇ ಹೊಟ್ಟೆ ಸೇರುತ್ತದೆ. ಹಾಗಾದರೆ, ಈ ಮಧ್ಯರಾತ್ರಿಯ ತಿನ್ನುವ ಚಪಲವನ್ನು (Midnight hunger) ಮೀರುವುದು ಹೇಗೆ? ಇದರಿಂದ ಹೊರಬರುವುದು ಹೇಗೆ ಎಂಬ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬಯಸುವವರಿಗೆ ಇಲ್ಲಿ ಕೆಲವು ಸಲಹೆಗಳಿವೆ.
ರಾತ್ರಿಯೂಟ ಪ್ರೊಟೀನ್‌ನಿಂದ ಶ್ರೀಮಂತವಾಗಿರಲಿ
ಹೌದು. ರಾತ್ರಿಯ ಊಟವನ್ನು ಬೇಗ ಮುಗಿಸುವವರೂ ಸೇರಿದಂತೆ ಒಂದು ಬಹುಮುಖ್ಯ ಉಪಾಯವೆಂದರೆ, ರಾತ್ರಿಯ ಊಟದ ಆಯ್ಕೆ. ನಿಮ್ಮ ರಾತ್ರಿಯ ಊಟದಲ್ಲಿ ಪ್ರೊಟೀನ್ ಹೆಚ್ಚಿರಲಿ. ಪ್ರೊಟೀನ್‌ನಿಂದ ಕೂಡಿದ ಆಹಾರ ಹೊಟ್ಟೆ ತುಂಬಿಸಿದ ಅನುಭವ ಕೊಡುತ್ತದೆ. ಪರಿಣಾಮವಾಗಿ ಹಸಿವಾಗುವುದಿಲ್ಲವಾದ್ದರಿಂದ ತಡರಾತ್ರಿ ತಿನ್ನಬೇಕೆಂಬ ತುಡಿತ ಕಾಡುವುದಿಲ್ಲ. ಹಾಗಾಗಿ ರಾತ್ರಿಯ ಊಟವನ್ನೇ ಯೋಚಿಸಿ ಮಾಡಿ. ಆಗ ಏನೇನೋ ಹಾಳುಮೂಳು ತಡರಾತ್ರಿ ತಿನ್ನುವುದು ತಪ್ಪುತ್ತದೆ.
ಕಡಿಮೆ ತಿನ್ನಿ
ರಾತ್ರಿ ಹೀಗೆ ಪ್ರೊಟೀನ್‌ಭರಿತ ಊಟ ಮಾಡಿದರೂ ಮಧ್ಯರಾತ್ರಿ ಹಸಿವಾಯಿತು ಎಂದೇ ಇಟ್ಟುಕೊಳ್ಳೋಣ. ಆಗ ಏನು ಮಾಡುವುದು, ಏನಾದರೂ ತಿನ್ನದೆ ಇದ್ದರೆ ಅಸಿಡಿಟಿಯ ಸಮಸ್ಯೆ ಕೆಲವರದ್ದು. ಹೀಗಾಗಿ ಏನು ತಿನ್ನಬಹುದು, ಏನು ಮಾಡಬೇಕು ಎಂಬ ಪ್ರಶ್ನೆ ಕೆಲವರದ್ದು. ಇಂಥ ಸಂದರ್ಭ ಖಂಡಿತವಾಗಿಯೂ ತಿನ್ನಿ. ಆದರೆ ಏನು ತಿನ್ನುತ್ತಿದ್ದೀರಿ ಎಂಬ ಬಗ್ಗೆ ಗಮನ ಇರಲಿ. ಜೊತೆಗೆ ಎಷ್ಟು ತಿನ್ನುತ್ತಿದ್ದೀರಿ ಎಂಬ ಗಮನವೂ ಇರಲಿ. ಹಾಗಾಗಿ ಇಂಥ ಸಂದರ್ಭ ತಿನ್ನಲಿಕ್ಕಾಗಿಯೇ ಕೆಲವು ಆರೋಗ್ಯಕರ ಆಹಾರಗಳನ್ನು ಸ್ನ್ಯಾಕ್‌ಗಳನ್ನು ಜೊತೆಗೆ ಇಟ್ಟುಕೊಂಡಿರಿ. ಅಷ್ಟೇ ಅಲ್ಲ, ಹೆಚ್ಚು ತಿನ್ನಬೇಡಿ. ಕಡಿಮೆ ಪ್ರಮಾಣದಲ್ಲಿ ತಿಂದು ಹೊಟ್ಟೆಯನ್ನು ಸಮಾಧಾನಪಡಿಸಿ.
ಒಣಬೀಜಗಳು
ಹೊಟ್ಟೆಯನ್ನು ಸಮಾಧಾನಪಡಿಸುವ ಇಂತಹ ಆರೋಗ್ಯಕರ ಸ್ನ್ಯಾಕ್‌ಗಳು ಏನಿವೆ ಎಂದು ನೀವು ಕೇಳಿದರೆ, ಖಂಡಿತ ಇವೆ. ಒಣಬೀಜಗಳು ಇಂಥ ಸಮಯಕ್ಕೆ ಹೇಳಿ ಮಾಡಿಸಿದ ಸ್ನ್ಯಾಕ್‌ಗಳು. ಕೆಲವು ಹುರಿದ ಧಾನ್ಯಗಳು, ಒಣಬೀಜಗಳು, ಮಖಾನಾದಂತಹ ಕಡಿಮೆ ಕ್ಯಾಲರಿಯ ಸ್ನ್ಯಾಕ್‌ಗಳನ್ನು ಇಟ್ಟುಕೊಳ್ಳಬಹುದು. ಇವು ಕೇವಲ ಆರೋಗ್ಯಕರವಷ್ಟೇ ಅಲ್ಲ, ಇದರಲ್ಲಿರುವ ಕೊಬ್ಬೂ ಕೂಡಾ ದೇಹಕ್ಕೆ ಅಗತ್ಯವಾದ ಆರೋಗ್ಯಕರ ಒಳ್ಳೆಯ ಕೊಬ್ಬೇ ಆಗಿದೆ. ಹೀಗಾಗಿ. ಚಿಪ್ಸ್, ಕುರುಕಲು, ಎಣ್ಣೆ ಪದಾರ್ಥಗಳು, ಜ್ಯೂಸ್‌ಗಳು, ಟೆಟ್ರಾ ಪ್ಯಾಕೆಟ್‌ಗಳು, ಕೆಫಿನ್‌ಯುಕ್ತ ಪೇಯಗಳು ಇತ್ಯಾದಿಗಳನ್ನು ಹೀರುವ ಅಭ್ಯಾಸವಿದ್ದರೆ ಖಂಡಿತಾ ಬಿಡಿ. ಬಹುಮುಖ್ಯವಾಗಿ ಇಂಥವನ್ನು ಖರೀದಿಸುವ ಅಭ್ಯಾಸವನ್ನೇ ಮೊದಲು ಬಿಡಿ. ಉತ್ತಮ ಆರೋಗ್ಯಕರ ಒಣಬೀಜಗಳು, ಹುರುದ ಧಾನ್ಯಗಳು ಇತ್ಯಾದಿಗಳನ್ನು ಪಕ್ಕದಲ್ಲಿಡಿ. ಕೆಲ ದಿನಗಳ ಕಾಲ ಈ ಅಭ್ಯಾಸ ಕಷ್ಟವಾಗಬಹುದು. ಆದರೆ, ಕಷ್ಟವೇನಲ್ಲ. ಪ್ರಯತ್ನ ಪಟ್ಟರೆ ಖಂಡಿತ ಸಾಧ್ಯವಾಗುತ್ತದೆ.
ಇದನ್ನೂ ಓದಿ: Home Remedies For Sunburn: ಬಿಸಿಲಿಗೆ ಚರ್ಮದ ಅಂದಗೆಟ್ಟಿದೆಯೆ? ಇಲ್ಲಿದೆ ಮನೆಮದ್ದು!