Site icon Vistara News

Sago Benefits: ನೀವು ಈ 12 ಕಾರಣಗಳಿಗಾದರೂ ಆಗಾಗ ಸಾಬಕ್ಕಿ ತಿನ್ನಬೇಕು!

sago benefits

ಸಾಬಕ್ಕಿ ಅಥವಾ ಸಬ್ಬಕ್ಕಿ ಎಂದು ಕರೆಯಲ್ಪಡುವ ಸಾಬುದಾನ (sago) ಧಾನ್ಯವೋ, ಬೀಜವೋ ಎಂಬ ಬಗ್ಗೆ ಹಲವರಿಗೆ ನಿಖರ ಮಾಹಿತಿ ತಿಳಿದಿರಲಿಕ್ಕಿಲ್ಲ. ಅಕ್ಕಿ, ಗೋಧಿಯಂತೆಯೇ ಸಾಬಕ್ಕಿ ಕೂಡಾ ಗಿಡದಲ್ಲಿ ಹಾಗೆಯೇ ಬೆಳೆಯುತ್ತದೆ ಎಂದು ನೀವು ತಿಳಿದರೆ ತಪ್ಪಾದೀತು. ಯಾಕೆಂದರೆ ಈ ಸಾಬಕ್ಕಿಯನ್ನು ಮರಗೆಣಸು ಎಂಬ ಗಡ್ಡೆಯಿಂದ ಮಾಡಿದ್ದು ಎಂದರೆ ನೀವು ನಂಬಲೇಬೇಕು.

ಹೌದು. ಮರಗೆಣಸಿನಲ್ಲಿರುವ ಸ್ಟಾರ್ಚ್‌ ಅಂದರೆ ಗಂಜಿಯನ್ನು ಸಂಗ್ರಹಿಸಿ, ಆ ಗಂಜಿಯಿಂದ ಪುಟ್ಟ ಪುಟ್ಟ ಧಾನ್ಯದಂತಹ ಉಂಡೆಗಳನ್ನು ತಯಾರಿಸಲಾಗುತ್ತದೆ. ಇದೇ ಸಾಬಕ್ಕಿ. ಇದರಲ್ಲಿ ಹೇರಳವಾಗಿ ಕಾರ್ಬೋಹೈಡ್ರೇಟ್‌ ಹಾಗೂ ಕ್ಯಾಲರಿ ಇರುವುದರಿಂದ ತೂಕ ಕಡಿಮೆ ಮಾಡಲಿಚ್ಛಿಸುವ ಮಂದಿಗೆ ಇದು ಉತ್ತಮ ಆಹಾರವಲ್ಲ ಎಂದು ಪರಿಗಣಿಸಲಾಗುತ್ತದೆ. ಆದರೆ, ಹಾಗಂತ ನಾವು ಸಾಬಕ್ಕಿಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಯಾಕೆಂದರೆ ಇದರಿಂದ ನಮ್ಮ ದೇಹಕ್ಕೆ ಹಲವಾರು ಲಾಭಗಳಿವೆ. ಮುಖ್ಯವಾಗಿ ದೇಹಕ್ಕೆ ತತ್‌ಕ್ಷಣಕ್ಕೆ ಶಕ್ತಿಯನ್ನು ನೀಡಬಲ್ಲ ಕೆಲವೇ ಆರೋಗ್ಯಕರ ಆಹಾರಗಳ ಪೈಕಿ ಇದೂ ಒಂದು. ಅದಕ್ಕೇ ಉತ್ತರ ಭಾರತದಲ್ಲೆಡೆ ವ್ಯಾಪಕವಾಗಿ ಉಪವಾಸದ ಸಂದರ್ಭ ಬಳಸಲ್ಪಡುವ ಆಹಾರಗಳಲ್ಲಿ ಸಾಬಕ್ಕಿಯೂ ಒಂದು. ಬನ್ನಿ, ಸಾಬಕ್ಕಿಯನ್ನು ಯಾವೆಲ್ಲ ೧೨ ಕಾರಣಗಳಿಗಾದರೂ ನಾವು ಆಗಾಗ ತಿನ್ನಬೇಕು ಎಂಬುದನ್ನು ನೋಡೋಣ.

1. ಸಾಬಕ್ಕಿ ಒಳ್ಳೆಯ ಶಕ್ತಿವರ್ಧಕ. ಇದರಲ್ಲಿ ಹೆಚ್ಚು ಸ್ಟಾರ್ಚ್‌ ಹಾಗೂ ಸಕ್ಕರೆ ಇರುವುದರಿಂದ ಅದು ಬಹುಬೇಗನೆ ಗ್ಲುಕೋಸ್‌ ಆಗಿ ಪರಿವರ್ತನೆಗೊಂಡು ಶಕ್ತಿಯಾಗಿ ಬದಲಾಗುತ್ತದೆ. ಹಾಗಾಗಿ ಉಪವಾಸದ ಸಮಯದಲ್ಲಿ ಇದು ಅತ್ಯುತ್ತಮ ಆಹಾರವಾಗಿ ಬಳಕೆಯಾಗುತ್ತದೆ.

2. ಇದು ಗ್ಲುಟೆನ್‌ ಫ್ರೀ ಆಹಾರವಾಗಿರುವುದರಿಂದ ವಯಸ್ಸಾದವರೂ ಕೂಡಾ ಇದನ್ನು ಸೇವಿಸಬಹುದು. ಗ್ಲುಟೆನ್‌ ಇರುವ ಗೋಧಿ ತಿಂದರೆ ಸಮಸ್ಯೆಯಾಗುವ ಮಂದಿ ಇದನ್ನು ತಿನ್ನಬಹುದು.

3. ಇದರಲ್ಲಿ ನಾರಿನಂಶ ಹೇರಳವಾಗಿರುವುದರಿಂದ ಹೊಟ್ಟೆಯುಬ್ಬರ, ಮಲಬದ್ಧತೆಯಂಥ ಸಮಸ್ಯೆಗಳಿಗೆ ಇದು ಉತ್ತಮ ಪರಿಣಾಮ ಒದಗಿಸುತ್ತದೆ. ತಿಂದ ಆಹಾರ ಜೀರ್ಣವಾಗುವ ಸಮಸ್ಯೆ ಇರುವ ಮಂದಿಗೂ ಇದು ಅತ್ಯುತ್ತಮ ಪರಿಹಾರ ನೀಡುವ ಆಹಾರ.

4. ತೂಕ ಏರಿಸಬೇಕೆಂದು ಬಯಸುವ ಮಂದಿಗೆ ಇದು ಒಳ್ಳೆಯ ಆಹಾರದ ಆಯ್ಕೆ.

5. ಇದರಲ್ಲಿ ಕಬ್ಬಿಣಾಂಶವಿರುವುದರಿಂದ ರಕ್ತಹೀನತೆಯಿಂದ ಬಳಲುವ ಮಂದಿ ಇದನ್ನು ಸೇವಿಸಿದರೆ ಉತ್ತಮ ಪರಿಹಾರ ಕಾಣಬಹುದು.

6. ಇದರಲ್ಲಿ ಪೊಟಾಶಿಯಂ ಅಧಿಕವಾಗಿರುವುದರಿಂದ ಇದಕ್ಕೆ ರಕ್ತದೊತ್ತಡವನ್ನು ಸಮತೋಲನಕ್ಕೆ ತರುವ ಗುಣವನ್ನು ಹೊಂದಿದೆ.

7. ಇದು ಒಳ್ಳೆಯ ಕೊಲೆಸ್ಟೆರಾಲ್‌ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ. ಇದರಲ್ಲಿ ನಾರಿನಂಶ ಹಾಗೂ ವಿಟಮಿನ್‌ ಬಿ ಇರುವುದರಿಂದ ಹೃದಯ ಸಂಬಂಧೀ ತೊಂದರೆಗಳಿಗೆ ಒಳ್ಳೆಯದು.

8. ಗರ್ಭಿಣಿಯರು ಸಾಬಕ್ಕಿ ತಿನ್ನುವುದರಿಂದ ಗರ್ಭದಲ್ಲಿರುವ ಶಿಶುವಿನ ಬೆಳವಣಿಗೆ ಸರಿಯಾಗಿ ಆಗುತ್ತದೆ. ಗರ್ಭಿಣಿಯರಲ್ಲಿ ಹಾಲಿನ ಪ್ರಮಾಣ ಹೆಚ್ಚಾಗುತ್ತದೆ. ಮಗುವಿಗೆ ತಾಯಿಯ ಶರೀರದ ಮೂಲಕ ಕಬ್ಬಿಣಾಂಶ ಹಾಗೂ ಕ್ಯಾಲ್ಶಿಯಂ ಪೂರೈಕೆ ಸರಿಯಾಗಿ ಆಗುತ್ತದೆ.

ಇದನ್ನೂ ಓದಿ: Food Tips: ಇಡ್ಲಿ ಎಂಬ ಆರಾಧ್ಯ ದೈವ: ಇಲ್ಲಿದೆ ಹಬೆಯಾಡುವ ಬಗೆಬಗೆಯ ಇಡ್ಲಿಗಳು!

9. ಇದು ಮೂಳೆ ಸವೆತ ಇರುವ ಮಂದಿಗೆ ಉತ್ತಮ ಆಹಾರ. ಮಹಿಳೆಯರಿಗೆ ಮುಖ್ಯವಾಗಿ ಮೆನೋಪಾಸ್‌ ಸಮಯದಲ್ಲಿ ಮೂಳೆಗಳನ್ನು ಬಲಗೊಳಿಸುತ್ತದೆ.

10. ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹಾಗೂ ಅಮೈನೋ ಆಸಿಡ್‌ಗಳು ಹೇರಳವಾಗಿ ಇರುವುದರಿಂದ ಇದು ಚರ್ಮದ ಆರೋಗ್ಯಕ್ಕೆ ಅತ್ಯುತ್ತಮ. ಸಾಬಕ್ಕಿಯನ್ನು ನೆನೆ ಹಾಕಿ ಅದರ ಪೇಸ್ಟ್‌ ಅನ್ನು ಮುಖಕ್ಕೆ ಹಚ್ಚುವುದರಿಂದ ನುಣುಪಾದ ಚರ್ಮ ನಿಮ್ಮದಾಗುತ್ತದೆ.

11. ಕೂದಲು ಉದುರುವ ಸಮಸ್ಯೆ ಇರುವ ಮಂದಿಗೂ ಸಾಬಕ್ಕಿ ಒಳ್ಳೆಯದು. ತೆಂಗಿನೆಣ್ಣೆಯೊಂದಿಗೆ ಸಾಬಕ್ಕಿ ಮಾಸ್ಕ್‌ ಮಾಡಿ ತಲೆಗೆ ಹಚ್ಚುವ ಮೂಲಕ ಕೂದಲು ಅಕಾಲದಲ್ಲಿ ನೆರೆಯುವುದು ಹಾಗೂ ಉದುರುವುದು ಕಡಿಮೆಯಾಗುತ್ತದೆ. ಕೂದಲ ಹೊಟ್ಟಿನ ಸಮಸ್ಯೆಗೂ ಇದು ರಾಮ ಬಾಣ.

12. ಮಾನಸಿಕ ಒತ್ತಡ, ನಿದ್ರಾಹೀನತೆಯಂತಹ ಮಾನಸಿಕ ಸಮಸ್ಯೆಗಳಿಗೂ ಸಬ್ಬಕ್ಕಿ ಒಳ್ಳೆಯದು.

ಇದನ್ನೂ ಓದಿ: Food Tips: ತೂಕ ಇಳಿಕೆಯ ಸಂಗಾತಿ ಓಟ್ಸ್‌ನಲ್ಲೂ ರುಚಿಕರ ಆಯ್ಕೆಗಳು!

Exit mobile version