ಬಹಳಷ್ಟು ಮಂದಿಯ ಬಾಯಿಯಲ್ಲಿ ಈಗ ಬರುವ ಮಾತು ಒಂದೇ: ಏನು ಸೆಖೆಯಪ್ಪಾ ಈ ಬಾರಿ! ಸೂರ್ಯ ಉದಯಿಸಿದ ಕೆಲವೇ ಗಂಟೆಗಳಲ್ಲಿ ಧಗಧಗಿಸಿ ಉರಿದು ಈ ಬಾರಿಯ ಬಿಸಿಲನ್ನು ಇನ್ನಷ್ಟು ತೀವ್ರಗೊಳಿಸಿದ್ದು ಸುಳ್ಳಲ್ಲ. ಬೆಂಗಳೂರಿಗರೂ ಕೂಡ ಈ ಬಾರಿಯ ಸೆಖೆಯಿಂದ ತತ್ತರಿಸಿ ಹೋಗಿದ್ದಾರೆ. ಹೊರಗೆ ಕಾಲಿಟ್ಟರೆ ಸಾಕು, ಸ್ನಾನ ಮಾಡಿದಂತೆ ಬೆವರಿನಿಂದಲೇ ತೊಯ್ದು ಹೋಗುವ ಮಂದಿ ಬಿಸಿಲನ್ನು ನೋಡಿ ಉಸ್ಸಪ್ಪ ಎನ್ನುತ್ತಿದ್ದಾರೆ. ಇಂತಹ ಬಿಸಿಲಿನ ವಿರುದ್ಧ ನಮ್ಮ ದೇಹವನ್ನು ಶಕ್ತವನ್ನಾಗಿ ಮಾಡಲು, ದೇಹವನ್ನು ತಂಪಾಗಿರಿಸಲು ಸೂಕ್ತ ಆಹಾರ (summer food tips) ಸೇವನೆಯೂ ಕೂಡ ಮುಖ್ಯ. ಹಾಗೆ ನೋಡಿದರೆ ನಾವು ಸಾಂಪ್ರದಾಯಿಕ ಶೈಲಿಯತ್ತ ಮುಖ ಮಾಡಿದರೆ ನಮ್ಮ ಪೂರ್ವಜರು, ಹಿರಿಯರು, ಋತುಮಾನಕ್ಕೆ ಅನುಗುಣವಾಗಿ ಆಹಾರವನ್ನು ತೆಗೆದುಕೊಳ್ಳುವ ಬಗೆಯನ್ನು ನಮಗೆ ದಾಟಿಸಿದ್ದಾರೆ. ಆದರೆ ಬಹಳಷ್ಟು ಬಾರಿ ಅವರ ಅಂತಹ ಸಂದೇಶವನ್ನು ನಾವು ನಿರಾಕರಿಸಿ ನಮ್ಮದೇ ಹಾದಿಯಲ್ಲಿ ಸಾಗಿದ್ದೂ ಕೂಡ ಇಂತಹ ಸಮಸ್ಯೆಗಳಿಗೆ ಕಾರಣವೇನೋ ಅನ್ನಬಹುದು. ನಾವು ಎಸಿ ಸ್ವಿಚ್ ಆನ್ ಮಾಡಿ ದೇಹವನ್ನು ಹೊರಗಿನಿಂದ ತಂಪಾಗಿಸಬಹುದು ನಿಜವೇ ಆಗಿದ್ದರೂ, ಒಳಗಿನಿಂದ ದೇಹವನ್ನು ತಂಪಾಗಿರಿಸಲು ಕೆಲವು ಆಹಾರ ಸೇವನೆಯ ಮೊರೆ ಹೋಗಲೇಬೇಕು. ಬನ್ನಿ, ಯಾವೆಲ್ಲ ಸರಳ ಆಹಾರಕ್ರಮ ನಮ್ಮ ದೇಹವನ್ನು ತಂಪಾಗಿರಿಸುತ್ತದೆ ಎಂಬುದನ್ನು ನೋಡೋಣ. ಈ ಆಹಾರ ಸೇವನೆಯಿಂದ ಬೇಸಿಗೆಯಲ್ಲಿ ನೀವು ಅಸಿಡಿಟಿ, ತಲೆಸುತ್ತು, ನಿತ್ರಾಣ, ನಿದ್ರಾಹೀನತೆ, ಹಸಿವಿನ ಕೊರತೆಯಂತ ಸಮಸ್ಯೆಗಳ ವಿರುದ್ಧ ಹೋರಾಡಿ ಫಲವನ್ನೂ ಕಾಣಬಹುದು.
ಸ್ಥಳೀಯ ಹಣ್ಣುಗಳು
ಬೆಳಗ್ಗಿನ ತಿಂಡಿಯ ನಂತರ ಮಧ್ಯಾಹ್ನದೂಟದ ಮೊದಲು ಏನಾದರೂ ಸ್ನ್ಯಾಕ್ಸ್ ತಿನ್ನುವ ಅಭ್ಯಾಸ ನಿಮಗಿದೆ ಎಂದಾದಲ್ಲಿ ಬೇಸಿಗೆಯಲ್ಲಿ ನಿಮ್ಮ ಸ್ಥಳೀಯ ಹಣ್ಣುಗಳನ್ನು ತಿನ್ನಲು ಮರೆಯಬೇಡಿ. ಸ್ಥಳೀಯವಾಗಿ ಸಿಗುವ, ಬೇಸಿಗೆಯಲ್ಲಿ ಮಾತ್ರ ಲಭ್ಯವಿರುವ ಹಣ್ಣುಗಳನ್ನು ಹೊಟ್ಟೆಗಿಳಿಸಿದರೆ ನಿಮ್ಮ ದೇಹ ತಂಪಾಗುತ್ತದೆ. ಬಿಸಿಲಿನಲ್ಲಿ ಓಡಾಡಿದರೂ ದೇಹಕ್ಕೆ ಶಕ್ತಿ ಸಾಮರ್ಥ್ಯ ಬರುತ್ತದೆ. ನಿತ್ರಾಣಗೊಳ್ಳುವ, ತಲೆಸುತ್ತಿ ಬವಳಿ ಬೀಳುವಂಥ ಸಮಸ್ಯೆಗಳು ನಿಮ್ಮನ್ನು ಕಾಡದು. ಉದಾಹರಣೆಗೆ, ತಾಳೆಹಣ್ಣು ಅಥವಾ ತಾಟಿನಿಂಗು, ಕಲ್ಲಂಗಡಿ ಹಣ್ಣು, ಖರ್‌ಬೂಜ, ಸೌತೆಕಾಯಿ ಇತ್ಯಾದಿಗಳ ಸೇವನೆ ಚೈತನ್ಯ ನೀಡುತ್ತದೆ. ಯಾವುದೇ ರಸಭರಿತವಾಗಿರುವ ಹಣ್ಣು ನೀವು ತಿನ್ನಬಹುದು. ಇವು ನಿಮ್ಮ ದೇಹವನ್ನು ಅಷ್ಟೇ ಅಲ್ಲ, ಮನಸ್ಸನ್ನೂ ತಂಪಾಗಿಯೇ ಇರಿಸುತ್ತದೆ. ಯಾವಾಗಲೂ ತಾಜಾ ಆಗಿರಿಸಲು ಸಹಾಯ ಮಾಡುತ್ತದೆ.
ಮೊಸರನ್ನ
ಬಹಳಷ್ಟು ಮಂದಿ ಬೇಸಿಗೆಯಲ್ಲಿ ಹಸಿವನ್ನೇ ಕಳೆದುಕೊಳ್ಳುತ್ತಾರೆ. ಏನಾದರೂ ಕುಡಿದರೆ ಸಾಕು, ತಿನ್ನುವ ಮನಸ್ಸಾಗುವುದೇ ಇಲ್ಲ ಎನ್ನುತ್ತಾರೆ. ಬೇಸಿಗೆಯ ಬಿಸಿಲಿಗೆ ಇದು ಸಹಜ ಕೂಡಾ. ಆದರೆ, ಇಂತಹ ಸಂದರ್ಭ ಬೇಸಿಗೆಯಲ್ಲಿ ನಿಮಗೆ ಒಳ್ಳೆಯದನ್ನೇ ಬಯಸುವ ಅತ್ಯುತ್ತಮ ಮಧ್ಯಾಹ್ನದೂಟ ಎಂದರೆ ಅದು ಮೊಸರನ್ನ. ಮೊಸರನ್ನಕ್ಕೆ ಒಂದಿಷ್ಟು ಉಪ್ಪಿನಕಾಯಿ, ಹಪ್ಪಳ ಸೇರಿಸಿಕೊಂಡು ತಿಂದರೆ ಸ್ವರ್ಗಸುಖ. ಇದಲ್ಲವಾದರೆ ಗಂಜಿ ಉಪ್ಪಿನಕಾಯಿಯ ಊಟವಾದರೂ ಸರಿ, ಒಡನೆಯೇ ದೇಹಕ್ಕೆ ಶಕ್ತಿ ಚೈತನ್ಯವನ್ನು ನೀಡುತ್ತದೆ. ಹೊಟ್ಟೆಯನ್ನು ತಂಪಾಗಿರಿಸುತ್ತದೆ. ಮೊಸರನ್ನ ಒಳ್ಳೆಯ ಪ್ರೊಬಯಾಟಿಕ್ ಕೂಡಾ ಆಗಿರುವುದರಿಂದ ಇದು ಉತ್ತಮ ಅನುಭವ ನೀಡುತ್ತದೆ. ಹೊಟ್ಟೆಗೆ ಆರಾಮದಾಯಕ ಆಹಾರದ ಅನುಭವ ನೀಡುತ್ತದೆ.
ಇದನ್ನೂ ಓದಿ: Summer Health Tips: ಬಿಸಿಲ ಬೇಗೆ ತಣಿಸಿಕೊಳ್ಳಲು ಬೇಕು ನೆಲ್ಲಿಕಾಯಿ!
ಗುಲ್ಕಂಡ್ ನೀರು
ಬೇಸಿಗೆಯಲ್ಲಿ ಅಸಿಡಿಟಿ, ಹೊಟ್ಟೆಯಲ್ಲಿ ಬೆಂಕಿ ಬಿದ್ದಂತೆ ಉರಿ ಇತ್ಯಾದಿ ಸಮಸ್ಯೆಗಳು ಕಾಣಿಸುತ್ತಿದ್ದರೆ ಹಾಗೂ ನಿಮ್ಮ ನಿದ್ರೆಯ ಗುಣಮಟ್ಟ, ಕಣ್ಣು ಊದಿದಂತಾಗುವುದು, ಕೈಕಾಲು ಜೋಮು ಹಿಡಿದಂತಾಗುವುದು, ಅಲ್ಲಲ್ಲಿ ನೋವು, ಉರಿಯೂತ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಬೇಕೆಂದರೆ ಒಂದು ಚಮಚ ಗುಲ್ಕಂಡ್ ಅನ್ನು ನೀರಿನಲ್ಲಿ ಬೆರೆಸಿ ಮಲಗುವ ಮುನ್ನ ಕುಡಿಯಿರಿ. ಈ ಗುಲಾಬಿಯ ದಳದ ಡ್ರಿಂಕ್ ನಿಮ್ಮ ಈ ಸಮಸ್ಯೆಗಳಿಂದ ಬಚಾವು ಮಾಡುವುದಷ್ಟೇ ಅಲ್ಲ, ಒಂದು ರಿಲ್ಯಾಕ್ಸ್ ಅನುಭವವನ್ನೂ ನೀಡುತ್ತದೆ.