ಎಡೆಬಿಡದೆ ಸುರಿವ ಮಳೆಗೂ ಚಹಾಕ್ಕೂ (Tea time) ಗಳಸ್ಯ ಕಂಠಸ್ಯ ಸಂಬಂಧ. ಮಳೆ ಸುರಿವಾಗ ಬಿಸಿಬಿಸಿ ಮಸಾಲೆ ಚಹಾವನ್ನೋ, ಶುಂಠಿ ಹಾಕಿದ ಚಹಾವನ್ನೋ ಮಾಡಿ ಹಬೆಯಾಡುವಂತೆ ಕಪ್ಪಿನಲ್ಲಿ ಹಿಡಿದುಕೊಂಡು ಕಿಟಕಿಗೆ ತಲೆಯಾನಿಸಿ ಸುರಿವ ಮಳೆಯನ್ನೇ ನೋಡಿಕೊಂಡು ಗುಟುಕು ಗುಟುಕಾಗಿ ಚಹಾ ಹೀರುತ್ತಿದ್ದರೆ ಆ ಸುಖಕ್ಕೆ ಹೋಲಿಕೆ ಎಲ್ಲಿದೆ! ಆದರೆ, ಈ ಮಳೆಗಾಲವನ್ನು ನೆಪವಾಗಿಸಿ ಹಂಡೆಗಟ್ಟಲೆ ಚಹಾ ನೀವು ಸವಿಸವಿದು ಕುಡಿಯುವ ಮೊದಲು ಕೆಲವು ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳಿ. ಮಳೆಗಾಲದಲ್ಲಿ ಮನಸ್ಸಲ್ಲೇ ಕುಣಿಯುತ್ತಾ ಚಹಾ ಮಾಡಿಕೊಳ್ಳುವಾಗ ಈ ಕೆಳಗಿನ ತಪ್ಪುಗಳನ್ನು (kitchen tips) ಮಾಡಬೇಡಿ.
೧. ಚಹಾದಲ್ಲಿ ಟ್ಯಾನಿನ್ ಇದೆ. ಇದು ಅತಿಯಾದರೆ, ನಮ್ಮ ದೇಹ ಕಬ್ಬಿಣಾಂಶವನ್ನು ಆಹಾರದಿಂದ ಸರಿಯಾಗಿ ಹೀರಿಕೊಳ್ಳಲು ತಡೆಯಾಗುತ್ತದೆ. ಅಷ್ಟೇ ಅಲ್ಲ, ಚಹಾದಲ್ಲಿ ಕೆಫಿನ್ ಇರುವುದು ಎಲ್ಲರಿಗೂ ಗೊತ್ತಿದೆ. ಅತಿಯಾದ ಕೆಫಿನ್ ಸೇವನೆ, ದೇಹದಲ್ಲಿರುವ ನೀರಿನಂಶವನ್ನು ಹೊರಹಾಕುತ್ತದೆ. ಇದರಿಂದ ನಿರ್ಜಲೀಕರಣದ ಸಮಸ್ಯೆ ಬರಬಹುದು. ಹಾಗಾಗಿ, ಹೊರಗೆ ವಾತಾವರಣ ಹೇಗೆಯೇ ಇರಲಿ, ಆ ಸಂತಸದ ಪರಾಕಾಷ್ಠೆಯಲ್ಲಿ ಲೀಟರುಗಟ್ಟಲೆ ಚಹಾ ಮಾಡಿಕೊಂಡು ಚೊಂಬು ತುಂಬ ಚಹಾ ಸುರಿದುಕೊಂಡು ಚಹಾ ಕುಡಿಯಬೇಡಿ. ದಿನಕ್ಕೆ ಎರಡು ಕಪ್ ಚಹಾಕ್ಕಿಂತ ಹೆಚ್ಚು ಕುಡಿಯುವುದು ಖಂಡಿತ ಒಳ್ಳೆಯದಲ್ಲ ಎಂಬುದನ್ನು ಸದಾಕಾಲ ನೆನಪಿಡಿ.
೨. ಚಹಾಕ್ಕೂ ಮಸಾಲೆಗೂ ಒಂದು ಅದ್ಭುತ ಬಾಂಧವ್ಯವಿದೆ ನಿಜ. ಆದರೆ, ಯಾವುದೇ ಬಾಂಧವ್ಯವೂ ಅತಿಯಾಗಬಾರದು ಅಲ್ಲವೇ? ಹಿತಮಿತವಾಗಿದ್ದರೆ ಸಿಹಿಯಾದ ಬಾಂಧವ್ಯದ ಘಮ ಸುತ್ತಲೂ ಹರಡುತ್ತದೆ. ಹಾಗೆಯೇ ಚಹಾವೂ ಕೂಡಾ. ಚಹಾಕ್ಕೆ ಮಸಾಲೆ ಚೆನ್ನಾಗಿರುತ್ತದೆ ಎಂದುಕೊಂಡು ಧಾರಾಳವಾಗಿ ಮಸಾಲೆ ಸುರಿದು ಚಹಾ ಮಾಡಬೇಡಿ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಚಹಾದ ಮಸಾಲೆಯಲ್ಲಿರುವ ಲವಂಗ, ಚೆಕ್ಕೆ, ಏಲಕ್ಕಿ, ಜಾಯಿಕಾಯಿ, ಶುಂಠಿ ಇವೆಲ್ಲ ಅತಿಯಾದರೆ ಇದರಲ್ಲಿರುವ ಉಷ್ಣ ಕೆಲವರಲ್ಲಿ ವಾತ, ಪಿತ್ತ ಅಥವಾ ಕಫದ ಸಮತೋಲನವನ್ನು ಏರುಪೇರಾಗಿಸಿ ಉದ್ರೇಕಿಸಬಹುದು ಎನ್ನುತ್ತದೆ ಆಯುರ್ವೇದ. ಹಾಗಾಗಿ, ಚಹಾಕ್ಕೆ ಮಸಾಲೆ ಹಾಕುವಾಗ, ಸ್ವಲ್ಪವೇ ಸ್ವಲ್ಪ ಹಾಕಿ. ಸರಿಯಾದ ಪ್ರಮಾಣದ ಮಸಾಲೆಯ ಘಮ ಚಹಾದೊಂದಿಗೆ ಹದವಾಗಿ ಬೆರೆತು, ಮೈಮನಕ್ಕೆ ಈ ಮಳೆಗಾಲದಲ್ಲಿ ಅದ್ಭುತ ಚೈತನ್ಯ ಕೊಡಬಹುದು. ಆದರೆ ಅತಿ ಯಾವತ್ತಿಗೂ ಒಳ್ಳೆಯದಲ್ಲ.
೩. ಬಹಳಷ್ಟು ಮಂದಿ ನಾವು ಬೆಳಗ್ಗೆ ಏಳುವಾಗಲೇ ಚಹಾದ ಕಪ್ಪು ಕೈಯಲ್ಲಿರಬೇಕು. ಇನ್ನೂ ಕೆಲವರಿಗೆ ಹಲ್ಲುಜ್ಜುವಷ್ಟು ಪುರುಸೊತ್ತೂ ಇಲ್ಲ, ಅದಕ್ಕೂ ಮೊದಲು ಹಾಸಿಗೆಗೇ ಚಹಾ ಬರಬೇಕು. ಆದರೆ, ನಿಜವಾಗಿ ನೋಡಿದರೆ ಖಾಲಿ ಹೊಟ್ಟೆಯಲ್ಲಿ ಚಹಾ ಹೊಟ್ಟೆಗಿಳಿಸುವುದು ಆರೋಗ್ಯಕರವಲ್ಲ. ಇದು ನಮ್ಮ ಜೀರ್ಣಕ್ರಿಯೆಯ ಸಾಮರ್ಥ್ಯವನ್ನೇ ದುರ್ಬಲಗೊಳಿಸುತ್ತದಂತೆ. ಅದರಲ್ಲೂ ಮಳೆಗಾಲದಲ್ಲಿ ನಮ್ಮ ಜೀರ್ಣಕ್ರಿಯೆ ಮೊದಲೇ ಕೊಂಚ ದುರ್ಬಲವಾಗಿರುವುದರಿಂದ ಈ ಅಭ್ಯಾಸವಿದ್ದರೆ ಖಂಡಿತ ಮುಂದುವರಿಸಬೇಡಿ.
ಇದನ್ನೂ ಓದಿ: Benefits Of Lemongrass Tea: ನಿಂಬೆಹುಲ್ಲಿನ ಚಹಾದ ಪ್ರಯೋಜನಗಳು ಗೊತ್ತೇ?
೪. ಕೆಲವರಿಗೆ ಚಹಾಸೊಪ್ಪನ್ನು ಅಥವಾ ಪುಡಿಯನ್ನು ಬಹಳ ಹೊತ್ತಿನವರೆಗೆ ಕುದಿಸಿ ಚಹಾ ಮಾಡುವ ಅಭ್ಯಾಸವಿರುತ್ತದೆ. ಮಸಾಲೆ ಚಹಾ ಮಾಡುವಾಗ ಹೆಚ್ಚು ಹೊತ್ತು ಕುದಿಸಬೇಕು ಎಂಬುದು ಹಲವರ ಅಭಿಪ್ರಾಯ. ಆದರೆ, ಬಹಳ ಕಾಲದವರೆಗೆ ಕುದಿಸಿದರೆ ಚಹಾ ರುಚಿ ಕಹಿಗೆ ತಿರುಗುತ್ತದೆ. ಅಷ್ಟೇ ಅಲ್ಲ, ಅದರಲ್ಲಿ ಹೆಚ್ಚು ಕೆಫಿನ್ ಅಂಶವಿರುತ್ತದೆ. ಹಾಗಾಗಿ, ಸ್ವಲ್ಪ ಹೊತ್ತು ಕುದಿಸಿದರೆ ಸಾಕು. ತೀರಾ ಹೆಚ್ಚು ಕುದಿಸುವುದು ಒಳ್ಳೆಯದಲ್ಲ.
೫. ಊಟವಾದ ತಕ್ಷಣ ಚಹಾ ಕುಡಿವ ಅಭ್ಯಾಸ ಕೆಲವರಿಗಿರುತ್ತದೆ. ಆದರೆ ಇದೂ ಕೂಡಾ ಒಳ್ಳೆಯದಲ್ಲ. ಚಹಾ ಅಸಿಡಿಕ್ ಆಗಿರುವುದರಿಂದ ಇದು ಜೀರ್ಣಕ್ರಿಯೆಗೆ ಉಪದ್ರವಕಾರಿಯಾಗಿದೆ. ಅಷ್ಟೇ ಅಲಲ, ಆಹಾರದಲ್ಲಿರುವ ಕಬ್ಬಿಣಾಂಶವನ್ನು ದೇಹ ಸರಿಯಾಗಿ ಹೀರಿಕೊಳ್ಳಲು ಚಹಾದಲ್ಲಿರುವ ಟ್ಯಾನಿನ್ ಬಿಡುವುದಿಲ್ಲ. ಹಾಗಾಗಿ ಊಟವಾದ ಮೇಲೆ ಕನಿಷ್ಠವೆಂದರೆ ಒಂದು ಗಂಟೆಯಾದರೂ ಬಿಟ್ಟು ಚಹಾ ಕುಡಿಯಿರಿ.
ಇದನ್ನೂ ಓದಿ: Health Benefits Of Rosemary Tea: ರೋಸ್‌ಮೆರಿ ಚಹಾದಿಂದ ಆರೋಗ್ಯಕ್ಕೇನು ಲಾಭ?