Site icon Vistara News

ಮನುಷ್ಯನ ಮಾಂಸದ ರುಚಿ ಸವಿಯೋ ಆಸೆ ಇದೆಯಾ? ಈ ಬರ್ಗರ್ ತಿನ್ನಿ!

human burger

ಯಾವತ್ತಾದರೂ ಮನುಷ್ಯನ ಮಾಂಸದ ರುಚಿ ಹೇಗಿದ್ದೀತೆಂದು ಯೋಚಿಸಿದ್ದೀರಾ? ಹಾಗೊಂದು ಯೋಚನೆ ನಿಮ್ಮ ಬಳಿ ಸುಳಿಯದೇ ಇದ್ದರೂ, ಮನುಷ್ಯನ ಮಾಂಸದ ರುಚಿ ಹೇಗಿದ್ದೀತಪ್ಪಾ ಅಂತ ಸಣ್ಣದೊಂದು ಸಂಶಯ ಈಗ ತಲೆಯೊಳಗೆ ಬಂದರೆ ನೀವು ಈ ಬರ್ಗರ್‌ ತಿನ್ನಬಹುದು!

ಹೌದು. ಇಂಥದ್ದೊಂದು ಬರ್ಗರ್‌ ಇದೀಗ ಭಾರೀ ಸುದ್ದಿಯಾಗುತ್ತಿದೆ. ಜೊತೆಗೆ ಪ್ರತಿಷ್ಠಿತ ಪ್ರಶಸ್ತಿಯೊಂದನ್ನೂ ಗೆದ್ದುಕೊಂಡಿದೆ.

ಇದೆಂಥ ಕರ್ಮ! ಮನುಷ್ಯನಿಗೆ ತನ್ನದೇ ಮಾಂಸ ತಿನ್ನುವ ಪರಿಸ್ಥಿತಿ ಯಾಕೆ ಬಂತು? ಇದೆಂಥ ಅನಾಗರಿಕತೆ? ಇದೆಂಥಾ ವಿಕೃತಿ! ಇದಕ್ಕೂ ಪ್ರಶಸ್ತಿಯಾ! ಎಂದೆಲ್ಲ ಮೂಗು ಮುರಿಯಬೇಡಿ. ಇದು ಮನುಷ್ಯನ ಮಾಂಸದ ರುಚಿಯೇನೋ ಹೌದು. ಆದರೆ ಇದಕ್ಕಾಗಿ ಮನುಷ್ಯನ ಮಾಂಸವನ್ನು ಬಳಸಿಲ್ಲ. ವಿಚಿತ್ರವೆನಿಸಿದರೂ ಸತ್ಯವೇ. ಮನುಷ್ಯನ ಮಾಂಸದ ರುಚಿಯನ್ನೇ ಹೋಲುವ ಸಸ್ಯಾಧಾರಿತ ಆಹಾರವಿದು. ಈ ಬರ್ಗರ್‌ ೧೦೦% ವೆಜಿಟೇರಿಯನ್‌/ವೀಗನ್‌ ಆಗಿದ್ದು ಯಾರು ಬೇಕಾದರೂ ಹೆಚ್ಚು ಯೋಚನೆಯಿಲ್ಲದೆ ತಿನ್ನಬಹುದು. ಆ ಮೂಲಕ ಮನುಷ್ಯನ ಮಾಂಸದ ರುಚಿ ಹೇಗಿದ್ದೀತು ಎಂಬ ಕುತೂಹಲವೇನಾದರೂ ಇದ್ದರೆ ತಣಿಸಿಕೊಳ್ಳಬಹುದು.

ಸ್ವೀಡನ್‌ ದೇಶದ ಆಹಾರ ತಯಾರಿಕಾ ಸಂಸ್ಥೆಯೊಂದು ಈ ಹೊಸ ಬರ್ಗರ್‌ ತಯಾರಿಸಿದ್ದು, ೧೦೦% ಸಸ್ಯಾಧಾರಿತ ಆಹಾರ ಇದಾಗಿದ್ದು, ಇದಕ್ಕಾಗಿ ಯಾವ ಮನುಷ್ಯನಿಗೂ ಸಣ್ಣ ಗಾಯವೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದು ವಿಶ್ವದ ಮೊದಲ ಸಸ್ಯಾಧಾರಿತ ಮಾಂಸದ ರುಚಿಯಿರುವ ಬರ್ಗರ್‌ ಆಗಿದ್ದು, ಇದಕ್ಕೆ ಊಂಫ್‌ ಬರ್ಗರ್‌ ಎಂದು ಹೆಸರಿಡಲಾಗಿದೆ. ಸಸ್ಯಜನ್ಯ ಮೂಲಗಳಿಂದಲೇ ಮಾಂಸದ ರುಚಿಯಿರುವ ಆಹಾರವನ್ನೂ ತಯಾರಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದ್ದು, ಇದು ನಮ್ಮ ಅತ್ಯಂತ ಹೆಮ್ಮೆಯ ಉತ್ಪನ್ನ ಎಂದು ಸಂಸ್ಥೆ ಹೇಳಿಕೊಂಡಿದೆ. ಜೊತೆಯಲ್ಲಿ, ಇದನ್ನು ಯಾರು ಬೇಕಾದರೂ ರುಚಿ ನೋಡಬಹುದಾಗಿದ್ದು ಇದೊಂದು ರೋಮಾಂಚನ ಹುಟ್ಟಿಸಬಲ್ಲ ಅದ್ಭುತ ಬರ್ಗರ್‌ ಎಂದೂ ವಿವರಿಸಿದೆ.

ಕಳೆದ ವಾರದ ಕ್ಯಾನ್‌ ಲಯನ್ಸ್‌ ಫೆಸ್ಟಿವಲ್‌ನಲ್ಲಿ ಈ ಬರ್ಗರ್‌ ಬೆಳ್ಳಿ ಪದಕವನ್ನೂ ಪಡೆದಿದ್ದು, ಹರ್ಷ ವ್ಯಕ್ತಪಡಿಸಿದೆ. ಊಂಫ್‌ ಬರ್ಗರ್‌ನ ರಾಯಭಾರಿ ಹೆನ್ರಿಕ್‌ ಕೆರ್‌ಮೆನ್‌ ಪ್ರಶಸ್ತಿ ಪಡೆದ ಸಂತೋಷವನ್ನು ಹಂಚಿಕೊಂಡಿದ್ದು, ಇಂಥದ್ದೊಂದು ಹೊಸ ಬರ್ಗರ್‌ ತಯಾರಿಸಿದ್ದು ನಮಗೆ ಹೆಮ್ಮೆಯ ವಿಚಾರ. ನಾವು ಈ ಮೂಲಕ ಮನುಷ್ಯನ ಮಾಂಸದ ರುಚಿಯನ್ನು ಜಗತ್ತಿಗೆ ತಿಳಿಸಬಯಸುವುದು ಉದ್ದೇಶವಲ್ಲ. ಬದಲಾಗಿ, ಸಸ್ಯಜನ್ಯ ಮೂಲಗಳಿಂದ ಎಂತಹ ರುಚಿಕಟ್ಟಾದ ಆಹಾರವನ್ನಾದರೂ ತಯಾರಿಸಬಹುದು. ಮಾಂಸಾಧಾರಿತ ಆಹಾರದ ಬದಲಾಗಿ ಸಸ್ಯಾಧಾರಿತ ಇಂತಹ ಆಹಾರವನ್ನೂ ರುಚಿಗಾಗಿ ತಿನ್ನಬಹುದು ಎಂಬುದನ್ನು ಪ್ರಪಂಚಕ್ಕೆ ಅರ್ಥ ಮಾಡಿಸಲು ಬಯಸುತ್ತೇವೆ ಎಂದಿದ್ದಾರೆ.

ಮನುಷ್ಯನ ಮಾಂಸದ ರುಚಿಯನ್ನು ಬರ್ಗರ್‌ ಮೂಲಕ ಪರಿಚಯಿಸುವಂಥ ರಿಸ್ಕೀ ಐಡಿಯಾವನ್ನು ಅತ್ಯಂತ ಯಶಸ್ವಿಯಾಗಿ ತಂದಿರುವುದು ಈ ಉತ್ಸವದಲ್ಲಿ ಚಪ್ಪಾಳೆಗೆ ಪಾತ್ರವಾಗಿದೆ.‌

ಇದನ್ನೂ ಓದಿ: 40 ವರ್ಷ ವಯಸ್ಸಾದ ಮೇಲೆ ಆಹಾರದಲ್ಲಿ ಇವು ಇರಲೇಬೇಕು!

ಸದ್ಯ ಸಸ್ಯಜನ್ಯ ಆಹಾರಗಳು ಟ್ರೆಂಡ್‌ನಲ್ಲಿದ್ದು, ಸಸ್ಯಮೂಲದಲ್ಲೇ ಮಾಂಸಾಹಾರದ ವಿವಿಧ ರುಚಿಗಳನ್ನು ಪರಿಚಯಿಸುವ ಕಾರ್ಯ ವ್ಯಾಪಕವಾಗಿ ಆಗುತ್ತಿದೆ. ಆಹಾರ ಉದ್ಯಮದಲ್ಲಿ ಇದೊಂದು ಕ್ರಾಂತಿಯಾಗಿದ್ದು, ಹೊಸ ಹೊಸ ಬ್ರಾಂಡ್‌ಗಳು ದಿನದಿಂದ ದಿನಕ್ಕೆ ಹೊಸ ಹೊಸ ಆಹಾರಗಳ ಮೂಲಕ ಮಾಂಸ ಪ್ರಿಯರ ಮನಗೆಲ್ಲುತ್ತಿವೆ. ಮನುಷ್ಯನ ಮಾಂಸದ ರುಚಿ ಹೊಸ ಪ್ರಯತ್ನವಾದರೂ, ಈಗಾಗಲೇ ಹಲವು ಮಾಂಸದ ರುಚಿಯ ಸಸ್ಯಜನ್ಯ ಆಹಾರ ಪದಾರ್ಥಗಳು ಬಹಳ ಪ್ರಖ್ಯಾತಿ ಪಡೆಯುತ್ತಿವೆ. ವಿಚಿತ್ರವೆಂದರೆ, ಸಸ್ಯಮೂಲವಾದರೂ, ಗುರುತಿಸಲಾಗದಷ್ಟು ಮಾಂಸದ ರುಚಿಯನ್ನೇ ಹೋಲುವ ತಿನಿಸುಗಳು ಮಾಂಸಪ್ರಿಯರ ದಿನನಿತ್ಯದ ಅಭ್ಯಾಸದಲ್ಲಿ ಇತ್ತೀಚೆಗೆ ಸ್ಥಾನ ಪಡೆಯುತ್ತಿದೆ.

ಊಂಫ್‌ ಬರ್ಗರ್‌ ಸಹ ಸಂಸ್ಥಾಪಕ ಆಂಡರ್ಸ್‌ ಲಿಂಡೆನ್‌, ಈ ೧೦೦% ವೆಜಿಟೇರಿಯನ್‌ ಬರ್ಗರ್‌ ತಯಾರಿಸುವ ಸಂದರ್ಭ ನಮಗೆ ಅತೀವ ಹೆದರಿಕೆಯಿತ್ತು. ಯಾಕೆಂದರೆ, ನಮ್ಮ ಪ್ರಯೋಗ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವಂತದ್ದಲ್ಲ. ಮನುಷ್ಯನ ಮಾಂಸದ ರುಚಿ ಎಂಬ ವಿಕ್ಷಿಪ್ತ ಕಲ್ಪನೆಯನ್ನೇ ಮಾಡಿಕೊಳ್ಳದ ಜಗತ್ತಿನಲ್ಲಿ ಅಂಥದ್ದೊಂದು ರುಚಿಯನ್ನು ಪರಿಚಯಿಸುವುದು ಸಣ್ಣ ವಿಷಯವಲ್ಲ. ಆದರೆ ಆ ಭಯ ಈಗ ನಿವಾರಣೆಯಾಗಿದೆ. ಪ್ರಶಸ್ತಿ ಖುಷಿ ತಂದಿದೆ ಎಂದಿದ್ದಾರೆ.

೧೦೦% ವೆಜಿಟೇರಿಯನ್‌ ಹೆಸರಿನಲ್ಲಿಯೇ ಊಂಫ್‌ ಆಹಾರ ಜಗತ್ತಿಗೆ ಪಾದಾರ್ಪಣೆ ಮಾಡಿದ್ದರೂ, ಮನುಷ್ಯನ ಮಾಂಸದ ರುಚಿಗೆ ಏನನ್ನು ಬಳಸಲಾಗಿದೆ ಎಂಬ ರಹಸ್ಯವನ್ನು ಮಾತ್ರ ಬಿಟ್ಟುಕೊಟ್ಟಿಲ್ಲ!‌

ಇದನ್ನೂ ಓದಿ: ನಳನಳಿಸುವ ಆರೋಗ್ಯಕ್ಕಾಗಿ ಐದು ಸೂಪರ್‌ ಫುಡ್‌ಗಳು

Exit mobile version