Site icon Vistara News

Drumstick: ಹಿತ್ತಿಲ ಗಿಡ ನುಗ್ಗೆಸೊಪ್ಪಿನಲ್ಲಿದೆ ಸರ್ವರೋಗಗಳಿಗೂ ಪರಿಹಾರ!

drumstick leaves

ಕೆಲವೊಮ್ಮೆ ನಮ್ಮ ಸುತ್ತಮುತ್ತಲಿರುವ ಗಿಡಮೂಲಿಕೆಗಳ ನಿಜವಾದ ಮಹತ್ವವೇ ನಮಗೆ ಅರಿವಿರುವುದಿಲ್ಲ. ಅವುಗಳಲ್ಲಿ ನಮ್ಮ ಕೆಲವು ಆರೋಗ್ಯ ಸಮಸ್ಯೆಗಳಿಗೆ ಮ್ಯಾಜಿಕ್ಕಿನಂತಹ ಪರಿಹಾರ ಇದ್ದರೂ ನಮಗೆ ಅವುಗಳ ಬಗ್ಗೆ ತಿಳಿದೇ ಇರುವುದಿಲ್ಲ. ಅಂತಹುಗಳ ಪೈಕಿ ನುಗ್ಗೆಸೊಪ್ಪು ಕೂಡಾ ಒಂದು. ನಮ್ಮ ಹಿತ್ತಿಲಲ್ಲೇ ನುಗ್ಗೆಮರ ಇದ್ದರೂ, ನಮಗಿದರಲ್ಲಿ ಅಡಗಿರುವ ಸತ್ವದ ಬಗೆಗೆ ಭರವಸೆಗಳೇ ಇಲ್ಲ. ಅದಕ್ಕಾಗಿಯೇ ಇಂದು ನುಗ್ಗೆಸೊಪ್ಪು ಅತ್ಯಂತ ಅವಗಣನೆಗೆ ಒಳಗಾಗಿರುವ ಸೊಪ್ಪುಗಳಲ್ಲಿ ಒಂದಾಗಿದೆ.

ನುಗ್ಗೆಸೊಪ್ಪಿನಲ್ಲಿ ಇಲ್ಲದ ಪೋಷಕಾಂಶಗಳಿಲ್ಲ. ಇದರಲ್ಲಿ ಅಮೈನೋ ಆಸಿಡ್‌, ವಿಟಮಿನ್‌ ಸಿ, ಎ ಹಾಗೂ ಖನಿಜಾಂಶಗಳು ಎಲ್ಲವೂ ಹೇರಳವಾಗಿವೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಅಧಿಕ ರಕ್ತದೊತ್ತಡ ಇರುವ ಮಂದಿಗೆ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ಹೃದಯಕ್ಕೆ ರಕ್ತಪೂರಣ ಮಾಡುವ ಹಾಗೂ ರಕ್ತವನ್ನು ದೇಹದ ಇತರ ಭಾಗಗಳಿಗೆ ಕಳುಹಿಸುವ ರಕ್ತನಾಳಗಳು ಕುಗ್ಗದಂತೆ ಹಾಗೂ ಹಿಗ್ಗದಂತೆಯೂ ಇದು ನೋಡಿಕೊಳ್ಳುತ್ತದೆ. ಹೀಗಾಗಿ ಸರಿಯಾದ ರಕ್ತಪರಿಚಲನೆ ಆಗುತ್ತದೆ.

ಜೀರ್ಣಕ್ರಿಯೆ ಸಮಸ್ಯೆ ನಿಮಗಿದ್ದರೆ ಅಂಥವರು ನುಗ್ಗೆ ಸೊಪ್ಪು ತಿನ್ನಿ. ಇದು ನಿದ್ದೆಯನ್ನು ಉತ್ತಮಗೊಳಿಸುವುದಷ್ಟೇ ಅಲ್ಲ, ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಹೃದಯದ ಆರೋಗ್ಯಕ್ಕೂ ಇದು ಬಹಳ ಒಳ್ಳೆಯದು. ಕೊಲೆಸ್ಟೆರಾಲ್‌ ಹೆಚ್ಚಿರುವ ಮಂದಿಗೂ ನುಗ್ಗೆಸೊಪ್ಪು ಒಳ್ಳೆಯ ಪರಿಹಾರ. ನುಗ್ಗೆಸೊಪ್ಪಿನಲ್ಲಿ ಕ್ಯಾನ್ಸರ್‌ನಾಶದ ಗುಣವೂ ಹೊಂದಿದ್ದು, ಇದು ಕ್ಯಾನ್ಸರ್‌ ಕೂಡಾ ಬರದಂತೆ ತಡೆಗಟ್ಟುತ್ತದೆ ಎನ್ನಲಾಗಿದೆ. ಪಿತ್ತಕೋಶದ ಸಮಸ್ಯೆ ಇರುವ ಮಂದಿಗೆ, ಮಧುಮೇಹಿಗಳಿಗೆ ಇದು ಅತ್ಯಂತ ಒಳ್ಳೆಯದು. ತಾಜಾ ನುಗ್ಗೆಸೊಪ್ಪು ಸೇವಿಸುವುದರಿಂದ ಚರ್ಮ ಹಾಗೂ ಕೂದಲ ಆರೋಗ್ಯವನ್ನು ಚೆನ್ನಾಗಿಟ್ಟಿರಬಹುದು. ಎಲುಬನ್ನು ಗಟ್ಟಿಗೊಳಿಸಿ, ಕಣ್ಣಿಗೂ ಒಳ್ಳೆಯದನ್ನೇ ಬಯಸುತ್ತದೆ. ಒತ್ತಡದಂತಹ ಮಾನಸಿಕ ಸಮಸ್ಯೆ ಇರುವ ಮಂದಿಯೂ ನುಗ್ಗೆ ಸೊಪ್ಪು ತಿಂದರೆ ಕೊಂಚ ಪರಿಹಾರ ಕಾಣಬಹುದು. ಮಾಂಸಖಂಢಗಳ ಬಲವರ್ಧನೆಗೆ, ದೇಹದಾರ್ಢ್ಯ ಬೆಳೆಸಲು ಇದು ನೈಸರ್ಗಿಕ ಉಪಾಯ.

೧. ನುಗ್ಗೆಸೊಪ್ಪಿನ ಟೀ: ನುಗ್ಗೆ ಸೊಪ್ಪು ಕಡಿಮೆ ಕ್ಯಾಲರಿಯ ಹಾಗೂ ಕಡಿಮೆ ಕೊಬ್ಬಿರುವ ಸೊಪ್ಪು. ಇದರಲ್ಲಿ ಪೋಷಕಾಂಶಗಳು ಹೇರಳವಾಗಿರುವುದರಿಂದ ಇದನ್ನು ನೀರಿನಲ್ಲಿ ಹಾಕಿ ಬಿಸಿ ಮಾಡಿ ಸೋಸಿ ಕುಡಿಯಬಹುದು. ತಾಜಾ ಸೊಪ್ಪನ್ನು ನೀರಿನಲ್ಲಿ ನೆನೆ ಹಾಕಿ ಅದರ ನೀರನ್ನೂ ಕುಡಿಯಬಹುದು.

೨. ನುಗ್ಗೆಸೊಪ್ಪಿನ ಚಟ್ನಿಪುಡಿ: ದಕ್ಷಿಣ ಭಾರತೀಯರು ನುಗ್ಗೆಕಾಯಿ ಬಳಸುವುದು ಹೆಚ್ಚಾದ್ದರಿಂದ ಅಲ್ಲಿ ನುಗ್ಗೆಸೊಪ್ಪಿನ ಪುಡಿಯ ಬಳಕೆಯನ್ನೂ ಮಾಡುತ್ತಾರೆ. ನುಗ್ಗೆಸೊಪ್ಪನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಬಳಸಬಹುದು. ದೋಸೆ, ಇಡ್ಲಿ ಅಥವಾ ಯಾವುದೇ ತಿಂಡಿಯ ಮೇಲೆ ಈ ಪುಡಿಯನ್ನು ಉದುರಿಸಿಕೊಂಡು ತಿನ್ನಬಹುದು. ದೇಹಕ್ಕೆ ತಾನೇ ತಾನಾಗಿ ನುಗ್ಗೆಸೊಪ್ಪಿನ ಸತ್ವ ಸೇರುತ್ತದೆ. ನುಗ್ಗೆಸೊಪ್ಪನ್ನು ಚಟ್ನಿಪುಡಿಯನ್ನಾಗಿ ಮಾಡಿಯೂ ನಿತ್ಯವೂ ಊಟದ ಸಂದರ್ಭ ಅಥವಾ ದೋಸೆಯ ಜೊತೆಗೆ ತಿನ್ನಲು ಬಳಸಬಹುದು.

ಇದನ್ನೂ ಓದಿ: Food Tips: ತೂಕ ಇಳಿಕೆಯ ಸಂಗಾತಿ ಓಟ್ಸ್‌ನಲ್ಲೂ ರುಚಿಕರ ಆಯ್ಕೆಗಳು!

೩. ನುಗ್ಗೆಸೊಪ್ಪಿನ ಸ್ಮೂದಿ: ನುಗ್ಗೆಸೊಪ್ಪನ್ನು ಸ್ಮೂದಿ ಮಾಡಿಯೂ ಕುಡಿಯಬಹುದು. ಡೈರಿ ಉತ್ಪನ್ನವಲ್ಲದ ಹಾಲು ಅಂದರೆ ಸಸ್ಯಜನ್ಯ ಹಾಲು, ಬಾಳೆಹಣ್ಣು ಹಾಗೂ ನುಗ್ಗೆಸೊಪ್ಪನ್ನು ಮಿಕ್ಸಿಯಲ್ಲಿ ರುಬ್ಬಿ ಸ್ಮೂದಿ ಮಾಡಿಕೊಳ್ಳಬಹುದು.

೪. ನುಗ್ಗೆಸೊಪ್ಪಿನ ಪಲ್ಯ: ನುಗ್ಗೆಸೊಪ್ಪಿನ ಪಲ್ಯವೂ ಕೂಡಾ ಒಳ್ಳೆಯ ಆಯ್ಕೆ. ನುಗ್ಗೆಸೊಪ್ಪನ್ನು ಬೇರೆಲ್ಲಾ ಸೊಪ್ಪಿನ ಪಲ್ಯದಂತೆ ಮಾಡಬಹುದು. ಅಥವಾ ಆಲೂಗಡ್ಡೆ ಪಲ್ಯ ಅಥವಾ ಇನ್ಯಾವುದೇ ತರಕಾರಿಯ ಪಲ್ಯಕ್ಕೆ ಕೊಂಚ ಸೊಪ್ಪನ್ನು ಕತ್ತರಿಸಿ ಸೇರಿಸಬಹುದು.

೫. ನುಗ್ಗೆಸೊಪ್ಪಿನ ದಾಲ್‌ ಅಥವಾ ಖಿಚಡಿ: ನುಗ್ಗೆಸೊಪ್ಪನ್ನು ದಾಲ್‌ ಪಾಕ್‌ ಮಾಡಿದಂತೆ ಸರಳವಾಗಿ ದಾಲ್‌ ಮಾಡುವಾಗ ಸೇರಿಸಬಹುದು. ಡಯಟ್‌ ಮಾಡುವ ಮಂದಿಗೆ ಇದು ಅತ್ಯಂತ ಒಳ್ಳೆಯದು. ಸಿಂಪಲ್‌ ದಾಲ್‌ ಖಿಚಡಿಗೂ ನುಗ್ಗೆಸೊಪ್ಪನ್ನು ಸೇರಿಸಬಹುದು.

ಇದನ್ನೂ ಓದಿ: Food Tips: ಇಡ್ಲಿ ಎಂಬ ಆರಾಧ್ಯ ದೈವ: ಇಲ್ಲಿದೆ ಹಬೆಯಾಡುವ ಬಗೆಬಗೆಯ ಇಡ್ಲಿಗಳು!

Exit mobile version