ಕೆಲವು ತಿನಿಸುಗಳನ್ನು ಗರಿಗರಿಯಾಗಿದ್ದಾಗ ತಿಂದರೇನೆ ರುಚಿ. ಮಾಡಿದ ಕೂಡಲೇ ತಾಜಾ ಆಗಿ ತಿಂದರೆ ರುಚಿ ಹೆಚ್ಚು. ಹೆಚ್ಚು ಹೊತ್ತು ಇಟ್ಟರೆ ಅದು ತನ್ನ ತಾಜಾತನವನ್ನು ಕಳೆದುಕೊಂಡು ಮೆತ್ತಗಾಗಿಬಿಡುತ್ತದೆ. ಗರಿಗರಿಯಾಗಿ ಮಾಡಿದ ಫ್ರೆಂಚ್‌ಫ್ರೈಸ್, ಪೊಟೇಟೋ ವೆಜಸ್, ಅಥವಾ ಇನ್ಯಾವುದೋ ಪಕೋಡಾ ಹೊರತೆಗೆದ ನಿಮಿಷದಲ್ಲಿ ಮೆತ್ತಗಾಗಿ, ನೀರಸವೆನಿಸಿಬಿಡುತ್ತದೆ. ಎಷ್ಟೇ ರುಚಿಯಾದ ತಿನಿಸೂ ಸ್ವಲ್ಪ ಹೊತ್ತಿನಲ್ಲಿ ತನ್ನ ಮೊದಲ ರುಚಿಯನ್ನು ಕಳೆದುಕೊಳ್ಳುತ್ತದೆ. ಆದರೆ, ಕೆಲವೊಮ್ಮೆ, ಮಾಡಿದ ತಕ್ಷಣ ತಿನ್ನಲು ಸಾಧ್ಯವಾಗುವುದಿಲ್ಲ. ಸ್ವಲ್ಪ ಹೊತ್ತಾದರೂ ಇಡಲೇಬೇಕಾಗುತ್ತದೆ. ಹಾಗಾದರೆ, ಅಂತಹ ಆಹಾರಗಳನ್ನು ತಾಜಾ ಆಗಿ ಉಳಿಯುವಂತೆ ಹೆಚ್ಚು ಕಾಲ ಗರಿಗರಿಯಾಗಿ ಉಳಿಯುವಂತೆ, ತನ್ನ ಕ್ರಿಸ್ಪೀ ಗುಣವನ್ನು ಕಳೆದುಕೊಳ್ಳದಂತೆ ಇಡಲು ಕೆಲವು ಸ್ಮಾರ್ಟ್ ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ಬನ್ನಿ, ಆ ಸ್ಮಾರ್ಟ್ ಉಪಾಯಗಳೇನು (food hacks) ಎಂಬುದನ್ನು ನೋಡೋಣ.
ನೀವು ಏರ್ ಫ್ರೈ ಅಥವಾ ಸಾಂಪ್ರದಾಯಿಕ ಮಾದರಿಯಲ್ಲಿ ಎಣ್ಣೆಯಲ್ಲಿ ಕರಿದು ಮಾಡಿರುವ ತಿನಿಸು ಹೆಚ್ಚು ಹೊತ್ತು ಹಾಗೆಯೇ ಗರಿಗರಿಯಾಗಿ ಉಳಿಯಬೇಕೆಂದರೆ ವೈರ್ ರ್ಯಾಕ್ ಬಳಸಿ. ಎಲ್ಲ ಬದಿಗಳಲ್ಲೂ ಗಾಳಿಯಾಡುವ ಅವಕಾಶ ಇದರಲ್ಲಿ ಸಿಗುತ್ತದೆ. ಅಥವಾ ತೂತುಗಳಿರುವ ಮೆಶ್‌ನಂಥ ಡಬ್ಬ ಇದ್ದರೆ ಅದರಲ್ಲಿ ಹಾಕಿಡಿ. ಆಗ ಕರಿದ ತುಂಡಿತ ಹಬೆ ಮತ್ತೆ ಅದರ ಮೇಲೆ ಕೂರುವುದಿಲ್ಲ. ಎಲ್ಲ ಬದಿಯಿಂದಲೂ ಗಾಳಿ ತಾಗುವ ಕಾರಣ, ತಣ್ಣಗಾದರೂ ಹೆಚ್ಚು ಹೊತ್ತು ಹಾಗೆಯೇ ಗರಿಯಾಗಿಯೇ ಇರುತ್ತದೆ.
ಏರ್‌ಫ್ರೈ ಮಾಡಿದ ಅಥವಾ ಎಣ್ಣೆಯಲ್ಲಿ ಕರಿದ ತಿನಿಸು ಸ್ವಲ್ಪ ಹೊತ್ತಿನಲ್ಲಿ ಮೆತ್ತಗಾಗುತ್ತದೆ ಹಾಗೂ ತನ್ನ ತಾಜಾತನವನ್ನು ಕಳೆದುಕೊಳ್ಳುತ್ತದೆ. ಹೀಗಾಗದಂತೆ ತಡೆಯಲು ಓವನ್‌ನಲ್ಲಿ ವೈರ್ ರ್ಯಾಕ್‌ನ ಮೇಲೆ 15 ನಿಮಿಷಗಳ ಕಾಲ ಹಾಗೆಯೇ ಇಡಿ. ಆಗ ಬಹುಬೇಗನೆ ಮೆತ್ತಗಾಗದು.
ಮೈಕ್ರೋವೇವ್ ಓವನ್‌ನಲ್ಲಿ ಮಾಡಿದ ತಿಂಡಿಯನ್ನು ಮತ್ತೆ ಬಿಸಿ ಮಾಡಬೇಡಿ. ಇದು ಆ ಆಹಾರ ವಸ್ತುವಿನಲ್ಲಿ ಇನ್ನಷ್ಟು ಹೆಚ್ಚು ತೇವಾಂಶ ಸೇರಿಕೊಳ್ಳುವಂತೆ ಮಾಡುತ್ತದೆ. ಇದರಿಂದ ಮತ್ತೆ ಬಹುಬೇಗನೆ ಮೆತ್ತಗಾಗಿಬಿಡುತ್ತದೆ.
ಸಾಸ್ ಅಥವಾ ಕೆಚಪ್‌ಗಳನ್ನು ನಿಮ್ಮ ಕ್ರಿಸ್ಟೀ ತಿನಿಸುಗಳನ್ನು ಮಾಡುವಾಗ ಹಾಕಬೇಡಿ. ಇದರಿಂದ ಇದು ಇನ್ನೂ ಬೇಗ ಮೆತ್ತಗಾಗಿಬಿಡುತ್ತದೆ. ಆದರೆ, ಕೆಲವು ಬಗೆಯಲ್ಲಿ ಹಾಕಲೇಬೇಕಾಗಿದ್ದರೆ, ಕೊನೆಯ ಕ್ಷಣದಲ್ಲಿ ಮಾಡು, ಅವಾಗಲೇ ತಿನ್ನಿ. ಹೆಚ್ಚು ಹೊತ್ತು ಇಡಲು ಹೋಗಬೇಡಿ. ಫಟಾಫಟ್ ತಿನಿಸಿನ ಸಂದರ್ಭ ಮಾತ್ರ ಇವು ಉಪಯೋಗಕ್ಕೆ ಬರುತ್ತವೆ.
ನೀವು ಇಂತಹ ಕರಿದ ತಿನಿಸುಗಳನ್ನು ಆಫೀಸಿಗೆ ಅಥವಾ ಹೊರಗೆ ಹೋಗುವಾಗ ಡಬ್ಬದಲ್ಲಿ ಪ್ಯಾಕ್ ಮಾಡಿ ತೆಗೆದುಕೊಂಡು ಹೋಗಬೇಕಾದ ಸಂದರ್ಭ ಬಂದರೆ ತಿನಿಸನ್ನು ಪೇಪರ್ ಟವಲ್‌ನಲ್ಲಿ ರ್ಯಾಪ್ ಮಾಡಿ ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿ ಮುಚ್ಚು ತೆಗೆದುಕೊಂಡು ಹೋಗಿ. ಆದ ಹೆಚ್ಚಿನ ತೇವಾಂಶ ಪೇಪರ್ ರ್ಯಾಪರ್ ಹೀರಿಕೊಳ್ಳುವುದರಿಂದ ಹೆಚ್ಚು ಮೆತ್ತಗಾಗದು.