Site icon Vistara News

Study Superfoods: ಪರೀಕ್ಷೆಗೆ ಓದುವ ಮಕ್ಕಳ ಆಹಾರ ಹೇಗಿರಬೇಕು?

Study Superfoods

ತಟ್ಟಿದ್ದು ಮುಟ್ಟಿದ್ದಕ್ಕೆಲ್ಲಾ ಸೂಪರ್‌ಫುಡ್‌ಗಳ ಬಗ್ಗೆ ಮಾತಾಡುವ ಕಾಲವಿದು. ದೇಹದ ಫಿಟ್‌ನೆಸ್‌ಗೆ ಸೂಪರ್‌ಫುಡ್‌ಗಳು ಬೇಕಾಗುವಂತೆ ಮೆದುಳಿನ ದಾರ್ಢ್ಯತೆಗೂ ಸೂಪರ್‌ಫುಡ್‌ಗಳು ಬೇಕೆ? ಹೌದೆನ್ನುತ್ತಾರೆ ತಜ್ಞರು. ಮೆದುಳಿನ ಕ್ಷಮತೆಯನ್ನು ಹೆಚ್ಚಿಸುವಂಥ ಆಹಾರಗಳು ಪರೀಕ್ಷೆಯ ಸಮಯದಲ್ಲಿ ಮಕ್ಕಳ ಕ್ಷಮತೆಯನ್ನೂ ಹೆಚ್ಚಿಸಬಲ್ಲವು. ಇದರರ್ಥ, ಈ ಆಹಾರಗಳನ್ನು ಮಕ್ಕಳು ತಿಂದುಬಿಟ್ಟರೆ ಓದದಿದ್ದರೂ ಪರೀಕ್ಷೆಯಲ್ಲಿ ಬರೆಯಬಲ್ಲರು ಎಂದಲ್ಲ. ಆದರೆ ಓದುವ ಒತ್ತಡವನ್ನು ತಾಳಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು ಹೌದು.
ಏಕಾಗ್ರತೆ, ನೆನಪು ಮತ್ತು ಒತ್ತಡ ಭರಣೆಯನ್ನು ಮೆದುಳು ಹೊಂದುವುದಕ್ಕೆ ಸರಿಯಾದ ಆಹಾರದ ಜೊತೆಗೆ ಸಾಕಷ್ಟು ನಿದ್ದೆ ಬೇಕು; ಆಗಾಗ ಓದಿನಿಂದ ಸ‍ಣ್ಣ ಬಿಡುವೂ ಬೇಕು. ಈ ಕ್ರಮಗಳನ್ನು ಮಕ್ಕಳಲ್ಲಿ ಪಾಲಕರು ಅಭ್ಯಾಸ ಮಾಡಿದರೆ ಪರೀಕ್ಷೆಯ ಸಂದರ್ಭಗಳಲ್ಲಿ ಮಾತ್ರವಲ್ಲ, ಜೀವನದುದ್ದಕ್ಕೂ ಇವು ಮಕ್ಕಳನ್ನು ಗುರಿ ಮುಟ್ಟಿಸಲು ಜೊತೆ ನೀಡುತ್ತವೆ. ಆಹಾರದ ವಿಷಯಕ್ಕೆ ಬಂದರೆ, ಸಾಕಷ್ಟು ಪ್ರೊಟೀನ್‌, ನಾರು, ಸಂಕೀರ್ಣ ಪಿಷ್ಟಗಳು, ನೀರು ಮತ್ತು ಸೂಕ್ಷ್ಮ ಪೋಷಕಾಂಶಗಳು ಅಗತ್ಯ. ಜೊತೆಗೆ ಒಮೇಗಾ 3 ಕೊಬ್ಬಿನಾಮ್ಲವಿರುವ ಆಹಾರಗಳು ಈ ಹಂತದಲ್ಲಿ ಅಗತ್ಯವಾಗಿ ಬೇಕು. ಯಾವೆಲ್ಲ (Study Superfoods) ಆಹಾರಗಳಲ್ಲಿ ಈ ಅಂಶಗಳಿವೆ?

ಬೀಜಗಳು ಮತ್ತು ಕಾಯಿಗಳು

ಅಗಸೆಬೀಜ, ಬಾದಾಮಿ, ವಾಲ್‌ನಟ್‌, ಸೂರ್ಯಕಾಂತಿ ಬೀಜಗಳು, ಕುಂಬಳಕಾಯಿ ಬೀಜಗಳು ಹಾಗೂ ಬ್ಲಾಕ್‌ಕರೆಂಟ್‌ಗಳಲ್ಲಿ ಒಮೇಗಾ ೩ ಕೊಬ್ಬಿನಾಮ್ಲಗಳು ಸಾಂದ್ರವಾಗಿವೆ. ಜೊತೆಗೆ ವಿಟಮಿನ್‌ ಇ ಹಾಗೂ ಜಿಂಕ್‌ ಸಹ ದೊರೆತು, ಮೆದುಳಿನ ಸಾಮರ್ಥ್ಯ ಹೆಚ್ಚಳಕ್ಕೆ ಅನುಕೂಲಕರ ಅಂಶಗಳು ದೇಹ ಸೇರುತ್ತವೆ. ಇದಲ್ಲದೆ ಕೊಬ್ಬಿನ ಮೀನುಗಳು ಗರಿಷ್ಠ ಪ್ರಮಾಣದಲ್ಲಿ ಒಮೇಗಾ ೩ ಕೊಬ್ಬಿನಾಮ್ಲ ಮತ್ತು ಖನಿಜಗಳನ್ನು ಹೊಂದಿರುತ್ತವೆ.

ಸೊಪ್ಪುಗಳು

ಹಲವು ರೀತಿಯ ಬಿ ವಿಟಮಿನ್‌ಗಳಿಂದ ಸೊಪ್ಪುಗಳು ಸಮೃದ್ಧವಾಗಿವೆ. ಇವು ನರಮಂಡಲ ಚೆನ್ನಾಗಿ ಕೆಲಸ ಮಾಡಲು ಸಹಾಯ ಮಾಡುತ್ತವೆ. ಜೊತೆಗೆ ನೆನಪಿನ ಶಕ್ತಿ ಹೆಚ್ಚಲು ಮತ್ತು ಮೆದುಳನ್ನು ಜಾಗೃತ ಸ್ಥಿತಿಯಲ್ಲಿ ಇರಿಸಲು ಈ ಅಂಶಗಳು ಪೂರಕ. ಇದಲ್ಲದೆ, ಪಾಲಕ್‌ ಸೊಪ್ಪು, ಬ್ರೊಕೊಲಿಯಂಥವು ಫೋಲೇಟ್‌ಗಳನ್ನು ಹೊಂದಿದ್ದು, ಬೌದ್ಧಿಕ ವಿಕಾಸಕ್ಕೆ ಈ ಅಂಶ ಅಗತ್ಯ.

ಓಟ್ಸ್‌

ಇದರಲ್ಲಿ ನಾರಿನಂಶ ಹೇರಳವಾಗಿದೆ. ಇದರಲ್ಲಿ ಗ್ಲೈಸೆಮಿಕ್‌ ಸೂಚಿ ಕಡಿಮೆಯಿದ್ದು, ದೀರ್ಘ ಕಾಲದವರೆಗೆ ನಿಧಾನವಾಗಿ ಶಕ್ತಿಯನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದರಿಂದ ಆಹಾರ ಸೇವಿಸಿದ ನಂತರ ಬಹಳ ಹೊತ್ತಿನವರೆಗೆ ದೇಹ ಬಳಲದಂತೆ ಉಳಿಯುತ್ತದೆ. ಶಕ್ತಿಯ ಮಟ್ಟ ದೇಹದಲ್ಲಿ ಏರಿಳಿತವಾಗುತ್ತಿದ್ದರೆ, ಅದು ಮಕ್ಕಳ ಏಕಾಗ್ರತೆಗೂ ಭಂಗ ತರಬಹುದು. ಹಾಗಾಗಿ ಬೆಳಗಿನ ತಿಂಡಿಗೆ ಸೂಕ್ತವಾದಂಥ ಆಹಾರವಿದು.

ಬೇಳೆ-ಕಾಳುಗಳು

ಮೊಳಕೆ ಕಾಳುಗಳು, ರಾಜ್ಮ ಮತ್ತು ಕಡಲೆಯಂಥ ಧಾನ್ಯಗಳು ಸಹ ಈ ದಿನಗಳಲ್ಲಿ ಮಕ್ಕಳಿಗೆ ಅಗತ್ಯ ಪೌಷ್ಟಿಕಾಂಶಗಳನ್ನು ಒದಗಿಸುತ್ತವೆ. ಇವುಗಳಲ್ಲಿ ಪ್ರೊಟೀನ್‌ ಜೊತೆಗೆ ಸಂಕೀರ್ಣ ಪಿಷ್ಟಗಳಿದ್ದು, ರಾತ್ರಿ ದೀರ್ಘಕಾಲದವರೆಗೆ ಓದುವ ಮಕ್ಕಳಿಗೆ ನಡುರಾತ್ರಿಯಲ್ಲಿ ಕಳ್ಳಹಸಿವಾಗದಂತೆ ತಡೆಯುತ್ತವೆ. ಇವುಗಳಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ಮೆದುಳನ್ನು ಚುರುಕು ಮಾಡುತ್ತವೆ.

ಕೆಂಪಕ್ಕಿ

ಬಿಳಿಯ ಅಕ್ಕಿಯನ್ನು ಬಳಸುವ ಅಭ್ಯಾಸವನ್ನು ನಿಲ್ಲಿಸುವುದಕ್ಕೆ ಇದು ಒಳ್ಳೆಯ ಸಮಯ. ತೌಡು ಸಮೇತ ಇರುವ ಕೆಂಬಣ್ಣದ ಅಕ್ಕಿಯ ಸೇವನೆಯಿಂದ ದೇಹಕ್ಕೆ ಬೇಕಾದ ನಾರು ಮತ್ತು ಸಂಕೀರ್ಣ ಪಿಷ್ಟಗಳೆರಡೂ ದೊರೆಯುತ್ತವೆ. ತೌಡು ರಹಿತವಾದ ಅಕ್ಕಿಯು ಬೇಗನೇ ಶಕ್ತಿಯನ್ನು ರಕ್ತಕ್ಕೆ ಸೇರಿಸಿ, ನಿದ್ದೆ ಬರುವಂತೆ ಮಾಡುತ್ತದೆ. ಆದರೆ ಕೆಂಪಕ್ಕಿ ಸೇವನೆಯಿಂದ ದೀರ್ಘಕಾಲದವರೆಗೆ ನಿಧಾನವಾಗಿ ದೇಹಕ್ಕೆ ಶಕ್ತಿ ದೊರೆಯುತ್ತಿರುತ್ತದೆ.

ಕಿನೊವಾ

ಕೊಲಿನ್‌ ಅಂಶವನ್ನು ಹೊಂದಿರುವ ಅತ್ಯಂತ ಪೌಷ್ಟಿಕವಾದ ಧಾನ್ಯವಿದು. ಮೆದುಳಿನ ಸಾಮರ್ಥ್ಯ ಮತ್ತು ನರ ಸಂವಾಹಕಗಳ ಕ್ಷಮತೆಯನ್ನು ಹೆಚ್ಚಿಸುವ ಗುಣವನ್ನಿದು ಹೊಂದಿದೆ. ಗೋದಿ, ಅಕ್ಕಿಯ ಬದಲಿಗೆ ಈ ಧಾನ್ಯವನ್ನು ಆಗಾಗ ಬಳಸಬಹುದು. ಇದರಿಂದ ದೇಹ ಮತ್ತು ಮೆದುಳು- ಎರಡಕ್ಕೂ ಉತ್ತಮ ಪೋಷಣೆ ದೊರೆಯುತ್ತದೆ.

ಸಿಟ್ರಸ್‌ ಹಣ್ಣುಗಳು

ವಿಟಮಿನ್‌ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳನ್ನು ಧಾರಾಳವಾಗಿ ಹೊಂದಿರುವ ಕಿತ್ತಳೆ, ಮೂಸಂಬಿ, ದ್ರಾಕ್ಷಿ, ನಿಂಬೆಯಂಥ ಹಣ್ಣುಗಳನ್ನು ಆಹಾರದ ಭಾಗ ಆಗಿಸಿಕೊಳ್ಳುವುದು ಅಗತ್ಯ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿ, ಪರೀಕ್ಷೆಯ ದಿನಗಳಲ್ಲಿ ಸೋಂಕುಗಳ ಕಾಟವನ್ನು ತಡೆಯಬಹುದು. ಇವುಗಳು ಮೆದುಳಿನ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಸಿಹಿ ತಿನ್ನಬೇಕೆಂಬ ಬಯಕೆಯನ್ನು ಹತ್ತಿಕ್ಕಲು ನೆರವಾಗುತ್ತವೆ.

ಇದನ್ನೂ ಓದಿ: Banana Benefits For Pregnant Women: ಗರ್ಭಿಣಿಯರು ಬಾಳೆಹಣ್ಣನ್ನು ತಿನ್ನಲೇಬೇಕು, ಏಕೆಂದರೆ…

Exit mobile version