Site icon Vistara News

Which Type Of Roti Is Best: ಯಾರಿಗೆ ಯಾವ ರೊಟ್ಟಿ ಸೂಕ್ತ? ತಿನ್ನುವ ಮೊದಲು ತಿಳಿದುಕೊಂಡಿರಿ!

Which Type Of Roti Is Best

ಭಾರತದಲ್ಲಿ ಎಲ್ಲವೂ ವೈವಿಧ್ಯಮಯ, ಊಟವೂ ಸೇರಿ. ಅನ್ನ ಎಂದರೆ ಎಲ್ಲವೂ ಒಂದೇ ಅಲ್ಲ. ಬಿಳಿಯಕ್ಕಿ, ಕೆಂಪಕ್ಕಿ, ಕುಚ್ಚಲಕ್ಕಿ ಮುಂತಾದ ಹಲವು ರೀತಿಯ ಅಕ್ಕಿಗಳಲ್ಲಿ ಅನ್ನ ಮಾಡಲಾಗುತ್ತದೆ. ರೊಟ್ಟಿ ಎಂದರೆ ಅದರಲ್ಲೂ ಭಿನ್ನತೆಯಿದೆ. ಅಕ್ಕಿರೊಟ್ಟಿ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಲಿತ; ಗೋಧಿ ರೊಟ್ಟಿ ಭಾರತದೆಲ್ಲೆಡೆ ಚಾಲ್ತಿಯಲ್ಲಿದೆ; ಜೋಳದ್ದು ಕರ್ನಾಟಕವೂ ಸೇರಿದಂತೆ ಹಲವೆಡೆ ಬಳಕೆಯಲ್ಲಿದೆ; ರಾಗಿ ರೊಟ್ಟಿ ಕರ್ನಾಟಕದಲ್ಲಿ ಹೆಚ್ಚು ಪ್ರಿಯ; ಸಜ್ಜೆ ರೊಟ್ಟಿ ಗುಜರಾತ್‌, ರಾಜಸ್ಥಾನಗಳಲ್ಲಿ ಮುಖ್ಯ ಆಹಾರ; ಪಂಜಾಬ್‌ ಪ್ರಾಂತ್ಯದಲ್ಲಿ ಮೈದಾ ನಾನ್‌ಗಳು ಜನಪ್ರಿಯ. ಆದರೆ ಈ ಎಲ್ಲಾ ರೊಟ್ಟಿಗಳಲ್ಲಿ ತೂಕ ಇಳಿಸುವವರಿಗೆ ಸೂಕ್ತವಾಗಿದ್ದು (Which Type Of Roti Is Best) ಯಾವುದು? ಇತ್ತೀಚಿನ ವರ್ಷಗಳಲ್ಲಿ ಸಿರಿಧಾನ್ಯದ ಬಳಕೆ ಹೆಚ್ಚಿದೆ. ಆರೋಗ್ಯದ ಬಗ್ಗೆ ಕಾಳಜಿಯೂ ಹೆಚ್ಚಿರುವುದರಿಂದ, ಯಾವುದು ಹೆಚ್ಚು ಆರೋಗ್ಯಕರ ಎಂಬ ಚರ್ಚೆಗೆ ಕಾವೇರಿದೆ. ಆಹಾರ ತಜ್ಞರು ಈ ಬಗ್ಗೆ ನಾನಾ ರೀತಿಯ ವಿವರಣೆಗಳನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ರೀತಿಯ ರೊಟ್ಟಿಗಳ ಸತ್ವ ಮತ್ತು ಕ್ಯಾಲೊರಿಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ. ಇವೆಲ್ಲವೂ ಆರೋಗ್ಯಕ್ಕೆ ಒಳ್ಳೆಯದೇ ಆದರೂ ಒಂದೊಂದು ಧಾನ್ಯಗಳಿಗೂ ಅದರದ್ದೇ ಆದ ಅನನ್ಯತೆಯಿದೆ. ಹಾಗಾಗಿ ಅವುಗಳ ಸತ್ವಗಳು ಭಿನ್ನವಾಗುತ್ತವೆ.

ಗೋಧಿ ರೊಟ್ಟಿ

ಒಂದು ಮಧ್ಯಮ ಗಾತ್ರದ ಗೋಧಿ ರೊಟ್ಟಿಯಲ್ಲಿ 70-80 ಕ್ಯಾಲರಿ ಶಕ್ತಿ ದೊರೆಯುತ್ತದೆ. ಇದರಲ್ಲಿ ನಾರು, ಪಿಷ್ಟ, ಅಲ್ಪ ಪ್ರಮಾಣದ ಪ್ರೊಟೀನ್‌ ಮತ್ತು ಕೊಬ್ಬು, ಮ್ಯಾಂಗನೀಸ್‌, ಫಾಸ್ಫರಸ್‌ನಂಥ ಖನಿಜಗಳು, ಹಲವು ರೀತಿಯ ಬಿ ವಿಟಮಿನ್‌ಗಳು ಇದರಲ್ಲಿ ವಿಫುಲವಾಗಿವೆ. ಈ ಧಾನ್ಯ ದೊರೆಯುವುದು, ಇದರಲ್ಲಿ ಆಹಾರ ತಯಾರಿಸುವುದು ಕಷ್ವವಲ್ಲ ಮತ್ತು ಇದರ ರುಚಿಯೂ ಇಷ್ಟವಾಗುವಂಥದ್ದು.

ರಾಗಿ ರೊಟ್ಟಿ

ಒಂದು ರಾಗಿ ರೊಟ್ಟಿಯಲ್ಲಿ 80-90 ಕ್ಯಾಲರಿ ಶಕ್ತಿ ದೊರೆಯುತ್ತದೆ. ಜೊತೆಗೆ, ಕ್ಯಾಲ್ಶಿಯಂ, ಕಬ್ಬಿಣ, ನಾರು, ಪ್ರೊಟೀನ್‌, ಪಿಷ್ಟ, ಉತ್ಕರ್ಷಣ ನಿರೋಧಕಗಳಿಂದ ಭರಿತವಾಗಿದೆ. ಹಲವು ರೀತಿಯ ಖನಿಜಾಂಶಗಳು ಇದರಲ್ಲಿವೆ. ಮೂಳೆಗಳ ಆರೋಗ್ಯಕ್ಕೆ ಇದು ಸೂಕ್ತವಾದದ್ದು ಮಾತ್ರವಲ್ಲ, ಮಧುಮೇಹಿಗಳಿಗೆ ಇದು ಒಳ್ಳೆಯ ಆಹಾರವಾಗಿದ್ದು, ರಕ್ತದಲ್ಲಿ ಸಕ್ಕರೆಯಂಶ ಏರದಂತೆ ಕಾಪಾಡಲು ನೆರವಾಗುತ್ತದೆ. ರಾಗಿ ತಿಂದವ ನಿರೋಗಿ ಎಂಬ ಮಾತು ವ್ಯಾಪಕ ಮನ್ನಣೆ ಪಡೆದಿದೆ.

ಜೋಳದ ರೊಟ್ಟಿ

ಒಂದು ದೊಡ್ಡ ಜೋಳದ ರೊಟ್ಟಿಯಲ್ಲಿ 50-60 ಕ್ಯಾಲರಿ ಶಕ್ತಿ ದೊರೆಯುತ್ತದೆ. ಜೋಳ ತಿಂದವ ತೋಳದಂತಿರಬಹುದು ಎಂಬುದು ಜನಪ್ರಿಯ ಗಾದೆ. ಗ್ಲೂಟೆನ್‌ ರಹಿತವಾದ ಆಹಾರ ಇದಾಗಿದ್ದು, ಮಧುಮೇಹಿಗಳಿಗೆ ಸೂಕ್ತವಾದ ಆಹಾರವಿದು. ಇದರಲ್ಲಿ ಪ್ರೊಟೀನ್‌, ಕೊಬ್ಬು, ನಾರು, ಪಿಷ್ಟ, ಕ್ಯಾಲ್ಶಿಯಂ, ರಂಜಕ, ಕಬ್ಬಿಣ ಮುಂತಾದ ಸೂಕ್ಷ್ಮ ಪೋಷಕಾಂಶಗಳು ಬಹಳಷ್ಟಿವೆ.

ಬಹುಧಾನ್ಯಗಳ ರೊಟ್ಟಿ

ಇದರಲ್ಲಿ ಹಲವಾರು ರೀತಿಯ ಧಾನ್ಯಗಳನ್ನು ಮಿಶ್ರ ಮಾಡಲಾಗುತ್ತದೆ. ಅಂದಾಜಿಗೆ ಹೇಳುವುದಾದರೆ, ಒಂದು ರೊಟ್ಟಿಯಲ್ಲಿ 80-100 ಕ್ಯಾಲರಿ ಶಕ್ತಿ ದೊರೆಯಬಹುದು. ಆದರೆ ಯಾವ್ಯಾವ ಧಾನ್ಯಗಳನ್ನು ಎಷ್ಟು ಪ್ರಮಾಣದಲ್ಲಿ ಮಿಶ್ರ ಮಾಡಲಾಗುತ್ತದೆ ಎನ್ನುವುದರ ಮೇಲೆ, ಇದರ ಕ್ಯಾಲರಿಗಳು ನಿರ್ಧಾರವಾಗುತ್ತದೆ. ಇದರಿಂದ ಹಲವು ರೀತಿಯ ಧಾನ್ಯಗಳು ಮತ್ತು ಸಿರಿಧಾನ್ಯಗಳು ಒಟ್ಟಿಗೇ ದೇಹಕ್ಕೆ ದೊರೆಯುವುದಕ್ಕೆ ಸಾಧ್ಯ. ಇದರಲ್ಲಿ ಹಲವು ರೀತಿಯ ವಿಟಮಿನ್‌ ಮತ್ತು ಖನಿಜಗಳು, ನಾರು ಹೇರಳವಾಗಿ ದೊರೆಯುತ್ತದೆ.

ಇದನ್ನೂ ಓದಿ: Health Benefits Of Tofu: ಪನೀರ್‌ನಂತೆ ಕಾಣುವ ಈ ಆಹಾರದ ಬಗ್ಗೆ ನಿಮಗೆ ಗೊತ್ತೆ?

ಯಾವುದು ಸೂಕ್ತ?

ಗ್ಲೂಟೆನ್‌ ಮುಕ್ತ ಆಹಾರ ಬೇಕೆಂದರೆ ರಾಗಿ ಮತ್ತು ಜೋಳದ ರೊಟ್ಟಿಗಳು ಸೂಕ್ತ. ಬಹುಧಾನ್ಯಗಳಲ್ಲಿ ಗೋಧಿ ಮಿಶ್ರವಾಗಿರುವ ಸಾಧ್ಯತೆ ಹೆಚ್ಚಾಗಿರುವುದರಿಂದ ಇದನ್ನು ಬಿಡುವುದು ಒಳಿತು. ಮಧುಮೇಹ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದರೆ ರಾಗಿ ಮತ್ತು ಜೋಳದ ರೊಟ್ಟಿಗಳು ಒಳ್ಳೆಯದು. ಹೆಚ್ಚು ಸಮತೋಲಿತ ಆಹಾರದ ಬಗ್ಗೆ ಗಮನ ಹೊಂದಿದ್ದರೆ ಬಹುಧಾನ್ಯಗಳ ರೊಟ್ಟಿ ಒಳ್ಳೆಯ ಆಯ್ಕೆ. ತೂಕ ಇಳಿಸುವುದು ಮುಖ್ಯ ಉದ್ದೇಶವಾಗಿದ್ದರೆ ಜೋಳದ ರೊಟ್ಟಿ ಸೂಕ್ತವಾದದ್ದು.

Exit mobile version