ನಾವು ಎಂಥಾ ಕಾಲದಲ್ಲಿ ಜೀವಿಸುತ್ತಿದೇವೆ ಎಂದರೆ ನಮ್ಮ ಬಯಸಿದಾಗ ಕ್ಷಣ ಮಾತ್ರದಲ್ಲಿ ನಮ್ಮ ಬೆರಳತುದಿಯಲ್ಲೇ ಜ್ಞಾನಸಂಪತ್ತು ಉದ್ಭವವಾಗುತ್ತದೆ. ಹೀಗಾಗಿ ಪ್ರತಿಯೋಬ್ಬರೂ ಜ್ಞಾನಿಗಳೇ. ತಮ್ಮದೇ ವಿಧಗಳಲ್ಲಿ ತಾವೇ ತೀರ್ಮಾನ ನೀಡಬಲ್ಲಷ್ಟು ಮುಂದುವರಿಯುವ ಪ್ರಸಂಗ ಇಲ್ಲದಿಲ್ಲ. ಮುಖ್ಯವಾಗಿ ಪೇರೆಂಟಿಂಗ್ ವಿಚಾರದಲ್ಲಿ. ಲೋಕದಲ್ಲಿ ಎಲ್ಲರೂ ಮಕ್ಕಳನ್ನು ಹೊಂದಿರುವವರೇ ಆದ್ದರಿಂದ ಈ ವಿಷಯದಲ್ಲಿ ಎಲ್ಲರೂ ತಜ್ಞರೇ, ಪಂಡಿತರೇ.
ಬಹಳಷ್ಟು ಸಾರಿ ಎಲ್ಲ ಮಕ್ಕಳಿಗೂ ಇದನ್ನೇ ಮಾಡಿ ಬೆಳೆಸಿದ್ದು, ನಿಮಗೂ ಇದನ್ನೇ ಮಾಡಿದ್ದು ಎಂದು ತೀರ್ಪು ಕೊಟ್ಟು ಮಕ್ಕಳನ್ನು ಹಾಗೆ ಬೆಳೆಸಿ ಹೀಗೆ ಬೆಳೆಸಿ ಎಂಬ ಉಪದೇಶಗಳನ್ನು ಹೊಸ ಅಪ್ಪ ಅಮ್ಮಂದಿರಿಗೆ, ಹಾಗೂ ಜೀವನಪೂರ್ತಿ ಹೆತ್ತವರಿಗೆ ಮಕ್ಕಳ ವಿಷಯದಲ್ಲಿ ಸಲಹೆ ಸೂಚನೆಗಳು ಬರುತ್ತಲೇ ಇರುತ್ತವೆ. ʻನಮ್ಮ ಮಕ್ಕಳಿಗೆ ನಾವು ಹೀಗೆ ಮಾಡುತ್ತೇವೆ, ನೀವೂ ಅದನ್ನೇ ಮಾಡಿʼ ಎಂದು ಸುಲಭವಾಗಿ ತಮ್ಮ ಜ್ಞಾನಸಂಪತ್ತನ್ನು ಇನ್ನೊಬ್ಬರಿಗೆ ಎರೆದುಬಿಡುವ ಪಾಂಡಿತ್ಯ ಪ್ರದರ್ಶನ ಸುಲಭ.
ಆದರೆ ಪ್ರತಿಯೊಂದು ಮಗುವೂ ಭಿನ್ನ. ಪ್ರತಿ ಅಮ್ಮ ಅಪ್ಪನಿಗೂ ತಮ್ಮ ಮಗು ಹೇಗೆ ಎಂಬುದು ತಿಳಿದಿರುತ್ತದೆ. ಕೆಲವೊಮ್ಮೆ ಹೊರಗಿನವರ ಉಪದೇಶ ಎಷ್ಟು ತೀವ್ರತರದ್ದಾಗಿರುತ್ತದೆಂದರೆ, ಹೆತ್ತವರ ಕಣ್ಣಂಚನ್ನೂ ಒದ್ದೆ ಮಾಡಿಬಿಡುತ್ತದೆ. ತಮ್ಮ ಮಗುವಿನ ಸಮಸ್ಯೆಗೆ ತಾವು ಯಾವ ರೀತಿ ಸ್ಪಂದಿಸಬೇಕೆಂಬುದು ಪ್ರತಿ ಅಪ್ಪ ಅಮ್ಮನಿಂತ ಹೆಚ್ಚಾಗಿ ಹೊರಗಿನವರು ಕಂಡುಹಿಡಿಯಲಾಗುವುದಿಲ್ಲ ಎಂಬುದು ನೆನಪಿಡಿ. ಹಾಗಾದರೆ, ಸಾಮಾನ್ಯವಾಗಿ ಹೊರಗಿನವರಿಂದ ಕೇಳಿ ಬರುವ ಉಪದೇಶಗಳ ಬಗ್ಗೆ ನೋಡೋಣ ಬನ್ನಿ.
೧. ʻಮಕ್ಕಳು ಊಟ ಮುಗಿಸದ ಹೊರತು ಅವರಿಗೆ ಬೇರೇನನ್ನೂ ಕೊಡಬೇಡಿʼ. ಈ ಉಪದೇಶ ಸಾಮಾನ್ಯ ಎಲ್ಲರೂ ಕೇಳಿರುತ್ತೇವೆ. ಹೌದು. ಮಕ್ಕಳು ಊಟ ಮುಗಿಸದಿದ್ದರೆ, ಅವರಿಷ್ಟವಾದ ಟ್ರೀಟ್ ಸಿಕ್ಕರೆ ಆಮೇಲೆ ಊಟ ಮಾಡುವುದಿಲ್ಲ ಎಂಬುದು ಎಲ್ಲರ ಕಾಳಜಿ. ಒಪ್ಪೋಣ. ಆದರೂ, ಆಗೀಗೊಮ್ಮೆ, ಇಂತಹ ಕಟು ನಿಯಮ ಮುರಿಯಬಾರದೆಂದೇನಿಲ್ಲ. ಮಕ್ಕಳು, ತಮಗಿಷ್ಟ ಬಂದ ಐಸ್‌ಕ್ರೀಂ, ಸಿಹಿ ತಿನ್ನಲಿ. ತಿಂದ ಮೇಲೆ ಆ ದಿನ ಚೆನ್ನಾಗಿ ಮಲಗುವ ಮುನ್ನ ಚೆನ್ನಾಗಿ ಹಲ್ಲುಜ್ಜುವಂತೆ ನೋಡಿಕೊಳ್ಳಿ, ಅಷ್ಟೇ. ಸಿಂಪಲ್.
೨. ʻಮಕ್ಕಳಲ್ಲಿ ಸಣ್ಣವರಿದ್ದಾಗಲೇ ಹಂಚಿ ತಿನ್ನುವ ಗುಣ ಬೆಳೆಸಿʼ. ಈ ಉಪದೇಶವೂ ಅತ್ಯಂತ ಸಾಮಾನ್ಯ ಉಪದೇಶ. ನಿಜ ಒಳ್ಳೆಯದೂ ಕೂಡಾ. ಆದರೆ, ಪ್ರತಿನಿತ್ಯವೂ ಪಾಲನೆ ಕಷ್ಟ ಸಾಧ್ಯ. ಇಂದಿನ ಪುಟ್ಟಪುಟ್ಟ ಕುಟುಂಬಗಳಲ್ಲಿ ದಿನವೂ ಇದನ್ನು ಕಟುವಾಗಿ ಪಾಲನೆ ಮಾಡಲಾಗುವುದಿಲ್ಲ. ಹಾಗಾಗಿ, ಮಕ್ಕಳಿಗೆ, ಎಂಥ ಸಂದರ್ಭ ಹಂಚಿ ತಿನ್ನಬೇಕು ಎಂಬ ಸಾಮಾನ್ಯಜ್ಞಾನ ಗೊತ್ತಿರಲಿ ಅಷ್ಟೇ.
೩. ʻಮಕ್ಕಳು ಅವರ ಪಾತ್ರೆಗಳನ್ನು ಅವರೇ ತೊಳೆಯಲಿ.ʼ ಈ ಉಪದೇಶವನ್ನು ಹೇಳುವುದು ಸುಲಭ. ಹಾಗಂತ ದಿನವೂ ಪಾತ್ರೆ ತೊಳಿ ಎಂದು ಒತ್ತಡ ಹಾಕುತ್ತಾ ಕೂರುವುದು ಸರ್ವಥಾ ಸಲ್ಲ. ತಮಗೇ ಜವಾಬ್ದಾರಿಗಳು ಬರುವಾಗ ಮಕ್ಕಳು ಕಲಿತುಕೊಳ್ಳುತ್ತಾರೆ. ಆದರೆ, ಈ ಬಗ್ಗೆ ಉಡಾಫೆಯ ಗುಣ ಬೆಳೆಸಿಕೊಳ್ಳದಂತೆ ನೋಡಿಕೊಳ್ಳಿ ಅಷ್ಟೇ.
೪. ʻಮಕ್ಕಳು ಮಲಗುವಾಗಲೇ ನೀವೂ ಮಲಗಿಬಿಡಿʼ. ಇದೂ ಅಷ್ಟೇ ಸಾರ್ವತ್ರೀಕರಿಸುವ ಉಪದೇಶಗಳಲ್ಲಿ ಒಂದು. ಎಷ್ಟೋ ಕೆಲಸಗಳು ಬಾಕಿ ಇರುತ್ತವೆ. ಮಕ್ಕಳನ್ನು ನಿಗದಿತ ಸಮಯಕ್ಕೆ ಮಲಗಿಸಬೇಕಾಗಿರುತ್ತದೆ. ಹಾಗಾಗಿ ಇದು ಫೈನ್. ಮಕ್ಕಳನ್ನು ಮಲಗಿಸಿ, ನಿಮ್ಮ ಕೆಲಸಗಳನ್ನು ಮುಗಿಸಿ ಮಲಗಿ. ನಿಮ್ಮ ವಿಶ್ರಾಂತಿ ನಿಮಗೆ ಸಿಕ್ಕಿತೆಂದರೆ ತೊಂದರೆಯೇನಿಲ್ಲ.
೫. ʻಮಕ್ಕಳನ್ನು ಅತಿಯಾಗಿ ಅಪ್ಪಿ ಮುದ್ದಾಡಬಾರದುʼ. ಇಂತಹ ಉಪದೇಶ ಹಿರಿಯರಿಂದ, ಬಂಧುಬಳಗದವರಿಂದ ಬರುತ್ತಲೇ ಇರುತ್ತದೆ. ಆದರೆ, ಚೆನ್ನಾಗಿ, ಅಪ್ಪಿ ಮುದ್ದುಮಾಡಿ ಬೆಳೆಸಿದ ಮಕ್ಕಳು ಸ್ಮಾರ್ಟ್ ಆಗಿ, ಭಾವನಾತ್ಮಕವಾಗಿ ಸ್ಟ್ರಾಂಗ್ ಆಗಿ ಬೆಳೆಯುತ್ತಾರೆ ಎಂಬುದಂತೂ ಸತ್ಯ.
೬. ʻಹೇಳಿದಂತೆ ನಡೆಯದಿದ್ದರೆ ಮಕ್ಕಳಿಗೆರಡು ಬಾರಿಸಿಬಿಡಿʼ. ಇದಂತೂ ಎಲ್ಲರೂ ಧಾರಾಳವಾಗಿ ಹೇಳುವ ಬಿಟ್ಟಿ ಉಪದೇಶ. ಆದರೆ, ಖಂಡಿತವಾಗಿ ಹೊಡೆಯುವುದು ಒಳ್ಳೆಯ ಐಡಿಯಾ ಅಲ್ಲವೇ ಅಲ್ಲ. ಪೆಟ್ಟು ತಿಂದರೆ ಮಕ್ಕಳು ಸರಿಯಾಗುತ್ತಾರೆ ಎಂಬುದು ಸುಳ್ಳು. ಬದಲಾಗಿ ಇದು ಮಕ್ಕಳ ಹಾಗೂ ನಿಮ್ಮ ಮಧ್ಯೆ ಕಂದಕವನ್ನೇ ಸೃಷ್ಟಿಸಬಹುದು. ಅವರನ್ನು ಮಾನಸಿಕವಾಗಿ ಕುಗ್ಗಿಸಬಹುದು. ಹಾಗಾಗಿ ತಪ್ಪುಗಳನ್ನು ಕಂಡಾಗ ಸರಿಯಾದ ರೀತಿಯಲ್ಲಿ ಸಂಯಮದಿಂದ ಅವರನ್ನು ತಿದ್ದಿ.
೭. ʻಅವರ ಆಯ್ಕೆಗಳನ್ನು ಅವರೇ ಮಾಡಲಿʼ. ಈ ಉಪದೇಶ ಒಂದು ರೀತಿಯಲ್ಲಿ ಸರಿಯಾಗಿ ಕಂಡರೂ, ಮಕ್ಕಳಿಗೆ ಯಾವುದೇ ಆಯ್ಕೆಯಲ್ಲಿ ಹೆತ್ತವರ ಸಹಕಾರ ಅಗತ್ಯ. ಅವರು ಆಯ್ಕೆಯಲ್ಲಿ ತಪ್ಪಿದಾಗ ತಿದ್ದಿ ನಡೆಸಲು ಹೆತ್ತವರು ಬೇಕು. ಹಾಗಾಗಿ ಅವರ ಆಯ್ಕೆಯನ್ನು ಗೌರವಿಸುತ್ತಲೇ, ಅಗತ್ಯ ಸಂದರ್ಭಗಳಲ್ಲಿ ಹೆತ್ತವರೇ ಕೈಹಿಡಿದು ಮುನ್ನಡೆಸಬೇಕು.
೮. ʻಮಕ್ಕಳ ಎದುರು ನೀವು ಫೇಲ್ ಆಗಬೇಡಿʼ. ಇದೂ ಕೂಡಾ ಅಂಥದ್ದೇ ಒಂದು ಉಪದೇಶ. ಮಕ್ಕಳ ಎದುರಲ್ಲಿ ಸದಾ ಹೀರೋ ಆಗಿ ಕಾಣಿಸಲು ಸಾಧ್ಯವಿಲ್ಲ. ಹಾಗೆಂದು ಪ್ರತಿ ಬಾರಿಯೂ ಹೀಗೇ ಕಾಣಿಸಿಕೊಳ್ಳಿ ಎಂದಲ್ಲ. ಆದರೂ ಮಕ್ಕಳ ಜೊತೆಗೆ ತಾವು ಮಾಡಿದ ಕೆಲವು ತಪ್ಪುಗಳು, ಎಡವಿದ್ದನ್ನು ಹಂಚಬಹುದು. ಹೀಗಿದ್ದಾಗ ವಾಸ್ತವದ ಅರಿವು ಅವರಿಗಾಗುತ್ತದೆ.
ಇದನ್ನೂ ಓದಿ: Kids food: ಮಕ್ಕಳು ಲಂಬೂಜಿ ಆಗಬೇಕಾದರೆ ಅವರ ಆಹಾರದಲ್ಲಿ ಇವು ಇರಲಿ