ಕೋವಿಡ್ ಸಾಂಕ್ರಾಮಿಕದ ನಂತರ ಎಲ್ಲರ ಬದುಕಿನಲ್ಲಿ ಒಂದಿಷ್ಟು ಬದಲಾವಣೆಗಳು ಆಗಿರುವುದಂತೂ ಹೌದು. ನಮ್ಮ ಆಹಾರ, ಪ್ರವಾಸ, ಶಾಪಿಂಗ್, ವ್ಯಾಯಾಮ… ಹೀಗೆ ವಿಷಯ ಯಾವುದೇ ಇದ್ದರೂ ಕೋವಿಡ್-ಪೂರ್ವದಲ್ಲಿ ಇದ್ದಂತೆ ನಮ್ಮ ಯೋಚನೆಗಳಿರುವುದಿಲ್ಲ. ಉದಾ, ಜಿಮ್ ಪ್ರಿಯರು ಈಗೀಗ ಇಂಡೋರ್ ಜಿಮ್‌ಗಿಂತಲೂ ಪಾರ್ಕ್‌ನಂಥ ಹೊರಾಂಗಣಗಳಲ್ಲಿರುವ ಜಿಮ್ ಇಷ್ಟಪಡುತ್ತಿದ್ದಾರೆ. ಹಾಗಂತ ಒಳಾಂಗಣ ಜಿಮ್‌ಗಳು ಕಡಿಮೆಯಾಗುತ್ತಿವೆ ಎಂದಲ್ಲ. ಹವಾನಿಯಂತ್ರಣ ಮತ್ತು ಟ್ರೇನರ್ ಹೊಂದಿರುವ ಒಳಾಂಗಣ ಜಿಮ್‌ಗಳು ಇವತ್ತಿಗೂ ಬಹುಜನರ ಆಯ್ಕೆ. ಆದರೆ ಹೊರಾಂಗಣ ಜಿಮ್‌ಗಳ ಪ್ರಯೋಜನವನ್ನೂ ಜನ ಕಂಡುಕೊಳ್ಳುತ್ತಿದ್ದಾರೆ. ತಾಜಾ ಗಾಳಿ, ಬೆಳಕು, ಪ್ರಫುಲ್ಲವಾದ ಹಸಿರಿನ ಪಾರ್ಕ್‌ಗಳ ನಡುವೆ ಇರುವ ಜಿಮ್‌ಗಳು ಬೆವರು ಹರಿಸುವ ಜನಪ್ರಿಯ ತಾಣಗಳಾಗಿ ಮಾರ್ಪಾಡಾಗುತ್ತಿವೆ. ಹೊರಾಂಗಣ ಜಿಮ್‌ಗಳು ಜನರಿಗೆ ಪ್ರಿಯವಾಗುತ್ತಿರುವುದು ಹೌದು. ಆದರೆ ಈ ಬಗ್ಗೆ ವೈಜ್ಞಾನಿಕವಾಗಿ ಏನಭಿಪ್ರಾಯವಿದೆ ಎಂಬುದನ್ನೂ ನೋಡಬೇಕಲ್ಲವೇ?
ಒಳಾಂಗಣ ಜಿಮ್: ನಮ್ಮ ಫಿಟ್‌ನೆಸ್ ಗುರಿಯನ್ನು ತಲುಪಬೇಕೆಂದರೆ ಸರಿಯಾದ ತರಬೇತುದಾರರು ಬೇಕು. ಯಾವುದನ್ನು ಎಷ್ಟು ಮತ್ತು ಹೇಗೆ ಮಾಡಬೇಕು ಎಂಬ ಸರಿಯಾದ ಮಾಹಿತಿಯಿಲ್ಲದಿದ್ದರೆ ಗಾಯಗೊಳ್ಳುವ ಸಂಭವವೂ ಇದೆ. ಇವೆಲ್ಲವಕ್ಕೂ ಒಳಾಂಗಣ ಜಿಮ್‌ಗಳಲ್ಲಿ ಸೌಲಭ್ಯಗಳು ಹೆಚ್ಚು. ಮಾತ್ರವಲ್ಲ, ಹವಾನಿಯಂತ್ರಿತ ವ್ಯವಸ್ಥೆ ಇರುವುದರಿಂದ ಅಭ್ಯಾಸಿಗಳಿಗೆ ದಣಿವು, ಬೆವರು ಕಡಿಮೆ. ಹಾಗಾಗಿ ಕಡಿಮೆ ದಣಿವಿನಲ್ಲಿ ಹೆಚ್ಚಿನ ವ್ಯಾಯಾಮ ಮಾಡಬಹುದು. ಸುಮ್ಮನೆ ಮಜಕ್ಕೆಂದು ಬರುವ ಕಿಡಿಗೇಡಿಗಳ ಕಾಟವಿಲ್ಲ ವಿರಳ. ಹೆಚ್ಚಿನ ಬಾರಿ ಸದಸ್ಯತ್ವ ತೆಗೆದುಕೊಳ್ಳಬೇಕಾಗುವುದರಿಂದ, ನೈಜ ಅಭ್ಯಾಸಿಗಳು ಮತ್ತು ಆಸಕ್ತರು ಮಾತ್ರವೇ ಇಲ್ಲಿ ಬರುತ್ತಾರೆ ಎಂಬುದು ಒಪ್ಪಬಹುದಾದ ಮಾತು. ಆದರೊಂದು ಮಾತು, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಹೆಚ್ಚು ಎಂಬುದನ್ನೂ ಅಲ್ಲಗಳೆಯುವಂತಿಲ್ಲ.
ಹೊರಾಂಗಣ ಜಿಮ್: ಈ ರೀತಿಯ ಜಿಮ್‌ನ ದೊಡ್ಡ ಧನಾತ್ಮಕ ಅಂಶವೆಂದರೆ ಶುದ್ಧವಾದ ಗಾಳಿ ಮತ್ತು ಸೂರ್ಯನ ಬೆಳಕು. ವ್ಯಾಯಾಮದ ಹೊತ್ತಿನಲ್ಲಿ ತನ್ನಷ್ಟಕ್ಕೇ ದೀರ್ಘವಾಗುವ ಉಸಿರಾಟಕ್ಕೆ ಅಗತ್ಯವಾದಷ್ಟೂ ಆಮ್ಲಜನಕವನ್ನು ಇಂಥ ಉದ್ಯಾನವನದ ಜಿಮ್‌ಗಳು ಪೂರೈಸುತ್ತವೆ. ಅದರಲ್ಲೂ ಮುಂಜಾನೆಯ ಹೊತ್ತು ಇಂಥ ಜಿಮ್‌ಗಳಲ್ಲಿ ನಮ್ಮ ಕಸರತ್ತು ಎಂದಾದರೆ, ಶುದ್ಧ ಗಾಳಿಯೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಡಿ ಸಹ ಶರೀರಕ್ಕೆ ಸಲ್ಲುತ್ತದೆ. ಶ್ವಾಸಕೋಶದ ಆರೋಗ್ಯ ಮತ್ತು ಹೃದಯದ ಆರೋಗ್ಯವನ್ನೂ ಈ ಮೂಲಕ ಸಾಧಿಸಬಹುದು. ತಾಜಾ ಗಾಳಿಯ ದೆಸೆಯಿಂದ ಗಾಳಿಯಿಂದ ಅಂಟುವ ರೋಗ ಬಾಧೆಯೂ ಕಡಿಮೆ. ವ್ಯಾಯಾಮ ಮಾಡುವಾಗ ದೇಹ ಸ್ವಾಭಾವಿಕವಾಗಿಯೇ ಬಿಸಿಯಾಗುತ್ತದೆ. ಇದಕ್ಕೆ ಪೂರಕವಾಗಿ ದಣಿವಾಗಿ, ಸಾಕಷ್ಟು ಬೆವರು ಹರಿದು, ದೇಹದಿಂದ ಟಾಕ್ಸಿನ್‌ಗಳು ಹೊರಹೋಗುತ್ತವೆ ಎನ್ನುತ್ತದೆ ವಿಜ್ಞಾನ. ಮಾತ್ರವಲ್ಲ, ಕೆಲವು ಹೊರಾಂಗಣ ಜಿಮ್‌ಗಳಲ್ಲೂ ಈಗ ತರಬೇತುದಾರರು ಲಭ್ಯವಿದ್ದಾರೆ.
ಇದನ್ನೂ ಓದಿ | ಜಿಮ್‌ಗಳಲ್ಲಿ ಪ್ರೋಟೀನ್ ಪೌಡರ್ ಸೇವಿಸಿ ಯುವಕ ಸಾವು: ವಿಧಾನಸಭೆಯಲ್ಲಿ ಸರ್ಕಾರದ ಎಚ್ಚರಿಕೆ
ಯಾವುದು ಸೂಕ್ತ?: ವ್ಯಾಯಾಮ, ಎಲ್ಲಿಯೇ ಮಾಡಿ, ಮಾಡುವುದೇ ಒಳ್ಳೆಯ ವಿಷಯ. ನಮ್ಮ ಹೃದಯಕ್ಕೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ನಿಯಮಿತವಾಗಿ ವ್ಯಾಯಾಮ ಮಾಡುವುದು ಪ್ರಯೋಜನಕಾರಿ. ಹಾಗಾಗಿ ಯಾವುದೇ ರೀತಿಯ ಜಿಮ್‌ನಲ್ಲಿ ಬೆವರು ಹರಿಸುವುದೂ ಉಪಯುಕ್ತವೇ. ಆದರೆ ಗೋಡೆಗಳನ್ನು ನೋಡುತ್ತಾ ಅಥವಾ ಕಿವಿಗೆ ಹಾಡು ಹಾಕಿಕೊಂಡು ವ್ಯಾಯಾಮ ಮಾಡುವುದಕ್ಕಿಂತ ಹಕ್ಕಿಗಳ ನೈಸರ್ಗಿಕ ಸಂಗೀತದ ನಡುವೆ ಲೋಕ ನೋಡುತ್ತಾ ವ್ಯಾಯಾಮ ಮಾಡುವುದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಸೂರ್ಯನ ಬೆಳಕು ಮತ್ತು ನಿಸರ್ಗದೊಂದಿಗಿನ ನಂಟು ನಮ್ಮ ಮಾನಸಿಕ ಸ್ಥಿತಿಯನ್ನು ಉತ್ತಮಪಡಿಸಿ, ಋಣಾತ್ಮಕ ಆಲೋಚನೆಗಳನ್ನು ದೂರ ಮಾಡುತ್ತದೆ ಎನ್ನುವುದು ಸಂಶೋಧಕರ ಮಾತು.
ಹೊರಾಂಗಣ ವ್ಯಾಯಾಮ, ಜಿಮ್ ಅಂತಲೇ ಅಲ್ಲ- ಯಾವುದೇ ರೀತಿಯದ್ದಾಗಿರಲಿ, ಕಣ್ತುಂಬಾ ನಿದ್ದೆ ತರುತ್ತದೆ. ಚನ್ನಾಗಿ ಬೆವರು ಹರಿಸಿ ದಿನಕ್ಕೆಂಟು ತಾಸು ಸೊಂಪಾಗಿ ನಿದ್ರಿಸಿದಿರೋ, ರಕ್ತದೊತ್ತಡ, ಕೊಲೆಸ್ಟ್ರಾಲ್, ಮಧುಮೇಹ ಮತ್ತು ಮಾನಸಿಕ ಒತ್ತಡ ನಿಯಂತ್ರಣದಲ್ಲಿಡಲು ಹೆಚ್ಚಿನ ಪ್ರಯತ್ನ ಬೇಕಾಗುವುದಿಲ್ಲ. ಅಂತೂ ಯಾವುದೇ ರೀತಿಯ ಜಿಮ್ ಪ್ರೇಮಿ ನೀವಾಗಿರಿ, ದಿನವೂ ನಿಯಮಿತವಾಗಿ ವ್ಯಯಾಮ ಮಾಡುವುದನ್ನು ಮಾತ್ರ ಮರೆಯಬೇಡಿ.
ಇದನ್ನೂ ಓದಿ | Aging factor | ಬೇಗನೆ ವಯಸ್ಸಾದವರಂತೆ ಕಾಣುತ್ತಿದ್ದೀರಾ? ನಿಮ್ಮ ಈ 10 ತಪ್ಪುಗಳೇ ಕಾರಣ!