Site icon Vistara News

Gym Tips: ಜಿಮ್‌‌ ರೋಗಾಣುಗಳಿಂದ ಪಾರಾಗಲು ಏನು ಮಾಡಬೇಕು?

Gym Tips: What to do to get rid of gym germs?

ಜಿಮ್‌ನಲ್ಲಿ (Gym Tips) ಬೆವರಿಳಿಸುವುದು ಇಂದಿನ ಬಹಳಷ್ಟು ಜನರ ಮೆಚ್ಚಿನ ಹವ್ಯಾಸ. ದೇಹ ಹುರಿಗಟ್ಟಿಸುವುದಕ್ಕೋ, ಆರೋಗ್ಯ ಸುಧಾರಿಸಿಕೊಳ್ಳಲೋ, ತೂಕ ಇಳಿಸಲೋ, ಖಯಾಲಿಗೋ, ಸಂಗಾತಿಯನ್ನು ಮೆಚ್ಚಿಸಲೋ- ಅಂತೂ ಜಿಮ್‌ಗೆ ಎಡತಾಕುವುದಕ್ಕೆ ಒಬ್ಬೊಬ್ಬರಿಗೆ ಒಂದೊಂದು ಕಾರಣಗಳು ಇರಬಹುದು. ಆದರೆ ಅಲ್ಲಿಂದ ಅಂಟಿಕೊಂಡು ಬರಬಹುದಾದ ರೋಗಾಣುಗಳ ಬಗ್ಗೆ ಎಲ್ಲರೂ ಒಂದೇ ತೆರನಾದ ಎಚ್ಚರಿಕೆಯನ್ನು ವಹಿಸಬೇಕಾಗಿರುವುದು ಸತ್ಯ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಇತ್ತೀಚಿನ ಕೆಲವು ಅಧ್ಯಯನಗಳ ಪ್ರಕಾರ, ಟ್ರೆಡ್‌ಮಿಲ್‌ಗಳ ಮೇಲಿನ ಬ್ಯಾಕ್ಟೀರಿಯಾಗಳ ಪ್ರಮಾಣ ಸಾರ್ವಜನಿಕ ಬಾತ್‌ರೂಮುಗಳ 74 ಪಟ್ಟು ಮತ್ತು ರಟ್ಟೆ ಗಟ್ಟಿಮಾಡುವ ತೂಕದ ಬಟ್ಟುಗಳ ಮೇಲಿನ ರೋಗಾಣುಗಳ ಪ್ರಮಾಣ ಟಾಯ್ಲೆಟ್‌ ಆಸನಗಳ ಮೇಲಿನ 362 ಪಟ್ಟು!

ಈ ವಿಷಯ ತಿಳಿದೇ ತಲೆ ಸುತ್ತಿದರೆ ಅಚ್ಚರಿಯಿಲ್ಲ. ಇದರಲ್ಲಿ ಇಂದಿಷ್ಟು ಉತ್ಪ್ರೇಕ್ಷೆಯಿದೆ ಎಂದುಕೊಂಡರೂ, ನಮ್ಮ ಆರೋಗ್ಯ ಸುಧಾರಿಸುವುದಕ್ಕೆ ನಾವು ಬಳಸುವ ವಸ್ತುಗಳ ಮೇಲಿನ ರೋಗಾಣುಗಳ ಪ್ರಮಾಣವನ್ನು ಟಾಯ್ಲೆಟ್‌ ಆಸನದೊಂದಿಗೆ ಹೋಲಿಸುವುದೇ ವಾಕರಿಕೆ ತರುವಂಥದ್ದು. ಜಿಮ್‌ನಲ್ಲಿ ಸರ್ವವ್ಯಾಪಿಯಾಗಿರುವ ಬೆವರು ಮತ್ತು ಬಿಸಿಯುಸಿರಿನ ಅತಿರೇಕದ ಪ್ರಮಾಣವೇ ಈ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣ. ಅದರಲ್ಲೂ, ಕೆಲವು ಜಿಮ್‌ಗಳು ಸದಾ ಕಾಲ ಹವಾನಿಯಂತ್ರಣಗಳಲ್ಲೇ ಉಸಿರಾಡುತ್ತಿರುತ್ತವೆ. ಕಿಟಕಿಯಿಂದ ಬೇಕಾದಷ್ಟು ತಾಜಾ ಗಾಳಿಯೂ ಇಲ್ಲದ ಇಂಥಾ ಸ್ಥಳಗಳನ್ನು ಬಳಸುವ ಅಥ್ಲೀಟ್‌ಗಳಿಗೆ ಕಾಲು ಮತ್ತು ಉಗುರುಗಳಲ್ಲಿ ಫಂಗಸ್‌ ಸೋಂಕು ಉಂಟಾದರೆ ಆಶ್ಚರ್ಯ ಪಡುವಂಥದ್ದೇನಿಲ್ಲ. ಈಗಂತೂ ಕೊರೊನಾ ಸೋಂಕು ಮತ್ತೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಮ್‌ ಬಳಕೆದಾರರು ಇನ್ನಷ್ಟು ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ.

ಏನೆಲ್ಲಾ ಎಚ್ಚರಿಕೆ ವಹಿಸಬಹುದು?

ದಿನನಿತ್ಯ ಜಿಮ್‌ಗಳಿಗೆ ಬರುವ ಜನರ ಸಂಖ್ಯೆ ಮತ್ತು ಅವರವರ ವೈಯಕ್ತಿಕ ಶುಚಿತ್ವದ ಅಭ್ಯಾಸಗಳು ವಿಪರೀತ ಎನ್ನುವಷ್ಟು ವ್ಯತ್ಯಾಸವಾಗುವ ಹಿನ್ನೆಲೆಯಲ್ಲಿ, ದಿನಂಪ್ರತಿ ಸ್ವಚ್ಛಗೊಳಿಸಿದರೂ ಜಿಮ್‌ ಉಪಕರಣಗಳನ್ನು ಸ್ವಚ್ಛವಾಗಿಡುವುದು ಸಾಧ್ಯವಿಲ್ಲ. ಹಾಗಾಗಿ ಟ್ರೆಡ್‌ಮಿಲ್, ಬೈಸಿಕಲ್‌ ಮುಂತಾದ ಉಪಕರಣಗಳನ್ನು ಬಳಸುವಾಗ ಅದರ ಹಿಡಿಕೆಗಳನ್ನು ಸ್ಯಾನಿಟೈಸಿಂಗ್‌ ವೈಪ್‌ನಿಂದ ಶುಚಿ ಮಾಡಿಕೊಳ್ಳಿ. ತೂಕದ ಬಟ್ಟು ಮುಂತಾದ ಸಣ್ಣ ವಸ್ತುಗಳನ್ನು ಪದೇಪದೆ ಸ್ವಚ್ಛ ಮಾಡುವುದು ಅಸಾಧ್ಯವಾದರಿಂದ, ಅವುಗಳನ್ನು ಬಳಸಿದ ಮೇಲೆ ನಿಮ್ಮ ಕೈಗಳನ್ನು ಸ್ಯಾನಿಟೈಸ್‌ ಮಾಡಿಕೊಳ್ಳಿ

ನಿಮ್ಮದೇ ಟವೆಲ್‌ ಬಳಸಿ

ಬೆವರು ಜಿಮ್‌ನ ಚಟುವಟಿಕೆಯ ಅನಿವಾರ್ಯ ಪ್ರತಿಫಲ. ಅದನ್ನು ಸಿಕ್ಕಸಿಕ್ಕಲ್ಲಿ, ಅಂದರೆ ಕೈ, ಭುಜ, ತೊಟ್ಟ ವಸ್ತ್ರಗಳು ಇಂಥದ್ದರಲ್ಲಿ ಖಂಡಿತಾ ಒರೆಸಿಕೊಳ್ಳಬೇಡಿ. ಅದಕ್ಕಾಗಿ ನಿಮ್ಮದೇ ಪ್ರತ್ಯೇಕ ಟವೆಲ್‌ ಉಪಯೋಗಿಸಿ ಹಾಗೂ ಅದನ್ನು ನಿಮ್ಮದೇ ನಿಗದಿತ ಜಾಗದಲ್ಲಿ ಇರಿಸಿಕೊಳ್ಳಿ. ಇದರಿಂದ ಇರುವ ಉಪಕರಣಗಳಿಗೆ ನಿಮ್ಮ ಬೆವರು ಹತ್ತುವುದು ಮತ್ತು ಈಗಾಗಲೇ ಅಲ್ಲಿರುವ ಬೆವರು ಗುರುತು ನಿಮ್ಮ ಮೈ ಸೋಂಕುವುದು ಕಡಿಮೆಯಾಗುತ್ತದೆ. ಅದರಲ್ಲೂ ಜಿಮ್‌ನಲ್ಲಿರುವ ಶವರ್‌ ಅಥವಾ ಸನಾ ಮುಂತಾದವನ್ನು ಬಳಸುವವರು ನೀವಾದರೆ, ಜಿಮ್‌ನ ವಸ್ತುಗಳ ಬದಲು ಆದಷ್ಟೂ ನಿಮ್ಮ ವಸ್ತುಗಳನ್ನೇ ಉಪಯೋಗಿಸಿ. ಮನೆಗೆ ತೆರಳಿದ ಮೇಲೆ, ತೊಟ್ಟ ವಸ್ತ್ರಗಳ ಸಹಿತ ಜಿಮ್‌ನಲ್ಲಿ ನೀವು ಉಪಯೋಗಿಸಿದ್ದ ನಿಮ್ಮೆಲ್ಲಾ ವಸ್ತುಗಳನ್ನೂ ಪ್ರತ್ಯೇಕವಾಗಿ ಸ್ವಚ್ಛ ಮಾಡಿ.

ಗಾಯಗಳಿವೆಯೇ?

ಮೈ ಮೇಲೆ ಗಾಯಗಳಿವೆಯೇ? ಹಿಮ್ಮಡಿ ಒಡೆದು ಬಿರುಕಾಗಿದೆಯೇ? ಹೌದಾದರೆ ಜಾಗ್ರತೆ ಮಾಡಿ. ಬಾಯೆರೆದುಕೊಂಡಿರುವ ಗಾಯಗಳು, ಬಿರಿದ ಹಿಮ್ಮಡಿಗಳು ರೋಗಾಣುಗಳನ್ನು ಆಹ್ವಾನಿಸುತ್ತವೆ. ಜಿಮ್‌ಗೆ ಹೋಗುವ ಮುನ್ನ ಗಾಯಗಳಿಗೆ ಬ್ಯಾಂಡೇಡ್‌ ಅಂಟಿಸಿ, ಬರಿಗಾಲಿನಲ್ಲಿ ಎಂದಿಗೂ ಜಿಮ್‌ನಲ್ಲಿ ನಡೆಯಬೇಡಿ. ಸುರಿಸಲ್ಪಟ್ಟ ಬೆವರಿನ ಒಂದಿಷ್ಟು ಹನಿಗಳು ನೆಲದ ಮೇಲೂ ಬಿದ್ದಿರುತ್ತವಲ್ಲ.

ಇದನ್ನೂ ಓದಿ: Gym death | ಜಿಮ್‌ ಮಾಡುವಾಗ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ಏಕೆ?

ಶುಚಿತ್ವದತ್ತ ಗಮನ

ಜಿಮ್‌ನಲ್ಲಿ ನೀರು ಕುಡಿಯುವ ನಿಮ್ಮ ಬಾಟಲಿಗಳನ್ನು ಪ್ರತ್ಯೇಕವಾಗಿ ಸ್ವಚ್ಛಗೊಳಿಸಿ. ವರ್ಕೌಟ್‌ ನಂತರ ನೆನಪಿನಲ್ಲಿ ಸೋಪು ಹಾಕಿ ಕೈ ತೊಳೆದುಕೊಳ್ಳಿ. ಶುಚಿತ್ವದ ಬಗ್ಗೆ ಲಕ್ಷ್ಯ ನೀಡಿದಷ್ಟೂ ಸೋಂಕುಗಳನ್ನು ದೂರ ಇರಿಸಬಹುದು. ಆರೋಗ್ಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ನಡೆಸುತ್ತಿರುವ ಜಿಮ್‌ ಯಾತ್ರೆಯನ್ನು ಸಫಲ ಮಾಡಿಕೊಳ್ಳಬಹುದು.

Exit mobile version