ಶೀಲಾ ಸಿ. ಶೆಟ್ಟಿ, ಬೆಂಗಳೂರು
ಉಲ್ಟಾ ಬಾಚುವ ಅಭ್ಯಾಸದಿಂದ ಕೂದಲಿನ ವಾಲ್ಯೂಮ್ ಹೆಚ್ಚುವುದು ಎಂದರೇ ನಂಬುತ್ತೀರಾ! ಖಂಡಿತಾ ಹೌದು, ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ಗಳು. ಸದಾ ಒಂದೇ ರೀತಿಯಲ್ಲಿ ಬಾಚುವುದರಿಂದ ಕೂದಲು ಕೆಲವೊಮ್ಮೆ ಮಲಗಿದಂತೆ ಸ್ಲೊಪಿಯಾಗಿ ತೆಳ್ಳಗಾದಂತೆ ಕಾಣುತ್ತವೆ.
ಇದಕ್ಕೆ ಪರಿಹಾರವೂ ಇದೆ. ಯಾವುದೇ ಕೇಶ ವಿನ್ಯಾಸ ಮಾಡಿಕೊಳ್ಳುವ ಕೆಲವು ನಿಮಿಷಗಳ ಮುಂಚೆ ಉಲ್ಟಾ ಬಾಚುವುದನ್ನು ಪ್ರತಿದಿನ ರೂಢಿಸಿಕೊಳ್ಳಿ. ಇದು ಕೂದಲ ಆರೋಗ್ಯಕ್ಕೂ ಒಳ್ಳೆಯದು ಹಾಗೂ ನೋಡಲು ಕೂದಲ ವಾಲ್ಯೂಮ್ ಹೆಚ್ಚಿದಂತೆ ಬಿಂಬಿಸುತ್ತದೆ ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್(Hair style) ಬಾಬೂ. ಈ ಕುರಿತು ಅವರು ಒಂದಿಷ್ಟು ಸಿಂಪಲ್ ಟ್ರಿಕ್ಸ್ ನೀಡಿದ್ದಾರೆ. ಫಾಲೋ ಮಾಡಿ ನೋಡಿ!
- ಮೊದಲಿಗೆ ಸಿಕ್ಕು ಇಲ್ಲದಂತೆ ಕೂದಲನ್ನು ಬಾಚಿ. ನಂತರ ಕೂದಲನ್ನು ಬೈತಲೆ ಮಾಡಿ, ಬೇರ್ಪಡಿಸಿ. ಶೇ. 30ರಷ್ಟು ಮುಂದಿನ ಭಾಗದ ಕೂದಲನ್ನು ಮಧ್ಯಭಾಗದಿಂದ ಹಿಂದಕ್ಕೆ ವಿಭಾಗಿಸಿಕೊಂಡು ತುದಿಯಿಂದ ಬುಡದವರೆಗೆ ಬಾಚಣಿಗೆಯಲ್ಲಿಉಲ್ಟಾ ಬಾಚಿ. ಕೂದಲು ಉದ್ದವಿದ್ದಲ್ಲಿ,ಅದನ್ನು ಬಿಗಿಯಾಗಿ ಎತ್ತರದಲ್ಲಿ ಹಿಡಿದು ಉಲ್ಟಾ ಬಾಚಿ.
- ಕೂದಲನ್ನು ಉಲ್ಟಾ ಬಾಚಲು ಹಿಡಿಯಿರುವ ಬಾಚಣಿಗೆಯನ್ನೇ ಬಳಸಿ. ಮೇಲ್ಭಾಗದಲ್ಲಿರುವ ಕೇಶವನ್ನು ಬಿಡಿಬಿಡಿಯಾಗಿ ತೆಗೆದುಕೊಂಡು ಉಲ್ಟಾ ಬಾಚಬೇಕು.
- ಸಂಪೂರ್ಣ ಕೂದಲನ್ನು ಕೆಳಗಿಳಿಸಿದ ನಂತರ, ಮಾಮೂಲಿನ ಶೈಲಿಯಲ್ಲಿ ನಿಧಾನವಾಗಿ ಬಾಚಿದಲ್ಲಿ, ಕೂದಲು ದಪ್ಪಗಿರುವಂತೆ ಕಾಣುತ್ತದೆ. ಇದನ್ನು ಹಾಗೇ ಕಾಣುವಂತೆ ಮಾಡಲು ಹೇರ್ ಸ್ಪ್ರೇ ಬಳಸಬಹುದು. ತೆಳ್ಳಗಿರುವ ಕೂದಲನ್ನು ಹೀಗೆ ಉಲ್ಟಾ ಬಾಚಿ ನಂತರ ಕೇಶ ವಿನ್ಯಾಸ ಮಾಡುವುದನ್ನು ಅಭ್ಯಾಸಮಾಡಿಕೊಂಡಲ್ಲಿ ಕಳಾಹೀನ ಕೂದಲಿಗೂ ಗ್ಲಾಮರಸ್ ಲುಕ್ ನೀಡಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)