ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಹ್ಯಾಂಡ್‌ಲೂಮ್ ಸೀರೆಗಳು ವಿವಾಹಿತ ಮಹಿಳೆಯರಷ್ಟೇ! ಅಲ್ಲ, ಕಾರ್ಪೋರೇಟ್ ಕ್ಷೇತ್ರದ ಉದ್ಯೋಗಸ್ಥ ಸ್ತ್ರೀಯರನ್ನೂ ಅಲಂಕರಿಸುತ್ತಿವೆ. ಅಷ್ಟ್ಯಾಕೆ! ಕಾಲೇಜು ಯುವತಿಯರು ಕೂಡ ಈ ಸೀರೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಕಾರಣ, ಇದೀಗ ಟ್ರೆಂಡಿಯಾಗಿರುವ ಹ್ಯಾಂಡ್‌ಲೂಮ್ (Handloom Saree Styling) ಸೀರೆಗಳ ಡಿಫರೆಂಟ್ ಡ್ರೇಪಿಂಗ್ ಹಾಗೂ ಸ್ಟೈಲಿಂಗ್ ಕಾನ್ಸೆಪ್ಟ್. ಈ ಮೊದಲು ಕೇವಲ ಡೀಸೆಂಟ್ ಹಾಗೂ ಎಲಿಗೆಂಟ್ ಲುಕ್ ನೀಡುತ್ತಿದ್ದ ಈ ಸೀರೆಗಳನ್ನು ಹೇಗೆಲ್ಲಾ ಸ್ಟೈಲಿಂಗ್ ಮಾಡಬಹುದು ಎಂಬುದರ ಬಗ್ಗೆ ಸೀರೆ ಸ್ಟೈಲಿಸ್ಟ್‌ಗಳು ಇಲ್ಲಿ ಮಾಹಿತಿ ನೀಡಿದ್ದಾರೆ.
ಇಂಡೋ-ವೆಸ್ಟರ್ನ್ ಸ್ಟೈಲಿಂಗ್
ಸಿಲ್ಕ್ ರಹಿತ ಹ್ಯಾಂಡ್‌ಲೂಮ್ ಸೀರೆಗಳು ಇದೀಗ ಇಂಡೋ-ವೆಸ್ಟರ್ನ್ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಕಾರ್ಪೋರೇಟ್ ಕ್ಷೇತ್ರದ ಯುವತಿಯರು ಈ ಸೀರೆಗಳಿಗೆ ಹೊಸ ರೀತಿಯ ಡ್ರೇಪಿಂಗ್ ಲುಕ್ ನೀಡಿದ್ದಾರೆ. ವೆಸ್ಟರ್ನ್ ಲುಕ್ ನೀಡುವ ಕ್ರಾಪ್ ಟಾಪ್‌ಗಳನ್ನು ಧರಿಸಿ, ಸೀರೆಯ ಸೆರಗನ್ನು ಒಂದೆಡೆ ಹಾಕಿಕೊಂಡು ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಸಖತ್ ಪಾಪ್ಯುಲರ್ ಆಗಿದೆ ಕೂಡ. ಕಾಂಟ್ರಾಸ್ಟ್ ಅಲ್ಲದೇ, ಯಾವುದೋ ಪ್ಲೇನ್ ಟಾಪನ್ನು ಸೀರೆಗೆ ಧರಿಸುವುದು ಇದೀಗ ಕಾಮನ್ ಆಗಿದೆ. ಈ ಲುಕ್ಕನ್ನು ಸಾಕಷ್ಟು ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರ ಮೀಟಿಂಗ್‌ಗಳಲ್ಲಿ ಕಾಣಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಮಿಸ್-ಮ್ಯಾಚಿಂಗ್ ಸ್ಟೈಲಿಂಗ್
ಮೊದಲೆಲ್ಲಾ ಹ್ಯಾಂಡ್‌ಲೂಮ್ ಸೀರೆಗಳಿಗೆ ಅದೇ ಸೀರೆಯ ಮ್ಯಾಚಿಂಗ್ ಬ್ಲೌಸ್‌ಗಳನ್ನು ಧರಿಸುವುದು ಕಾಮನ್ ಆಗಿತ್ತು. ಆದರೆ, ಈಗ ಮಹಿಳೆಯರ ಅಭಿರುಚಿ ಬದಲಾಗಿದೆ. ಯಾವುದೇ ಬಣ್ಣದ ಸೀರೆಗೂ ಯಾವುದೋ ಬಣ್ಣದ ಅಥವಾ ಪ್ರಿಂಟ್‌ನ ಬ್ಲೌಸ್ ಧರಿಸುವುದು ಸಾಮಾನ್ಯವಾಗಿದೆ. ಇದಕ್ಕೆ ಮಿಸ್-ಮ್ಯಾಚ್ ಸೀರೆ ಸ್ಟೈಲಿಂಗ್ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಅವರ ಪ್ರಕಾರ, ಈ ಕಾನ್ಸೆಪ್ಟ್ ಸಖತ್ ಪಾಪ್ಯುಲರ್ ಆಗಿರುವುದರಿಂದ ಬ್ಲೌಸ್ ಯಾವುದಾದರೂ ಆಗಿರಲಿ, ಮಗಳು ಅಮ್ಮನ ಸೀರೆಯನ್ನು ಅಥವಾ ಸಹೋದರಿಯ ಸೀರೆಯನ್ನೂ ಉಡಬಹುದು ಎನ್ನುತ್ತಾರೆ.
ವೈಟ್-ಬ್ಲಾಕ್ ಮೆಟಲ್ ಆಕ್ಸೆಸರೀಸ್‌ನೊಂದಿಗೆ ಸಿಂಗಲ್ ಪಿನ್ ಸೆರಗು
ಹ್ಯಾಂಡ್‌ಲೂಮ್ ಸೀರೆ ಪ್ರಿಯರು ಇದೀಗ ಟ್ರೆಂಡಿಯಾಗಿರುವ ವೈಟ್ ಹಾಗೂ ಬ್ಲಾಕ್ ಮೆಟಲ್ ಜ್ಯುವೆಲರಿ ಸೆಟ್‌ನೊಂದಿಗೆ ಸೀರೆಗೆ ಸಿಂಗಲ್ ಪಿನ್ ಸೆರಗು ಮಾಡುವುದು ಇಂದು ಹೆಚ್ಚಾಗಿದೆ. ಇದು ನೋಡಲು ಆಕರ್ಷಕವಾಗಿ ಕಾಣುತ್ತದೆ ಎನ್ನುವ ಸ್ಟೈಲಿಸ್ಟ್‌ಗಳು, ಹ್ಯಾಂಡ್‌ಲೂಮ್ ಸೀರೆಗಳ ಫ್ಯಾಬ್ರಿಕ್ ಆಧಾರದ ಮೇಲೆ ಸ್ಟೈಲಿಂಗ್ ಹಾಗೂ ಡ್ರೇಪಿಂಗ್ ಮಾಡಬೇಕು ಎಂದು ಸಲಹೆ ನೀಡುತ್ತಾರೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Friendship Day Fashion: ಫ್ರೆಂಡ್‌ಶಿಪ್ ಸೆಲೆಬ್ರೇಷನ್‌ಗೂ ಬಂತು ಟ್ರೆಂಡಿ ಫ್ಯಾಷನ್‌ವೇರ್ಸ್