Site icon Vistara News

Health Benefits of Flaxseed: ಅಗಸೆ ಬೀಜ ಸಣ್ಣದಾದರೂ ಆರೋಗ್ಯ ಗುಣ ದೊಡ್ಡದು!

Flaxseed

ತ್ತೀಚಿಗೆ ʻಸೂಪರ್‌ ಫುಡ್‌ʼ ಎನಿಸಿಕೊಂಡಂಥವು ಬಹಳಷ್ಟು ನಮಗೆ ಮೊದಲಿನಿಂದ ಗೊತ್ತಿರುವಂಥವೇ. ಭಾರತೀಯ ಅಡುಗೆಮನೆಗಳಲ್ಲಿ ಲಾಗಾಯ್ತಿನಿಂದಲೂ ಇದ್ದಂಥವು. ಆದರೆ ಅವುಗಳನ್ನು ಯಾಕಾಗಿ ಬಳಸುತ್ತಿದ್ದೇವೆ ಎಂಬ ಆರೋಗ್ಯದ ಮರ್ಮ ವೈಜ್ಞಾನಿಕವಾಗಿ ಗೊತ್ತಿರಲಿಲ್ಲವಷ್ಟೇ. ಈಗೀಗ ಅದೂ ಪ್ರಚುರಗೊಳ್ಳುತ್ತಿದೆ. ಉದಾಹರಣೆಗೆ ಹೇಳುವುದಾದರೆ, ಅಗಸೆ ಬೀಜ. ಮೊದಲಿನಿಂದಲೂ ಭಾರತೀಯ ಪಾರಂಪರಿಕ ಅಡುಗೆ ಪದ್ಧತಿಯಲ್ಲಿ ಇದರ ಬಳಕೆ ಇದ್ದರೂ, ಇತ್ತೀಚೆಗೆ ಕಡಿಮೆಯಾಗಿತ್ತು. ಪ್ರಾದೇಶಿಕವಾಗಿ ಕೆಲವು ಕಡೆಗಳಲ್ಲಷ್ಟೇ ಹೆಚ್ಚಾಗಿ ಇದು ಬಳಕೆಯಲ್ಲಿ ಇದ್ದಿದ್ದೂ ಕಾರಣವಾಗಿರಬಹುದು. ಆದರೀಗ ಈ ಕಿರುಬೀಜಗಳು ʻಸೂಪರ್‌ ಫುಡ್‌ʼಗಳ ಸಾಲಿಗೆ ಸೇರಿವೆ. ಹಾಗಾದರೆ ಅಗಸೆ ಬೀಜದ ಬಳಕೆಯ (health benefits of flaxseed) ಲಾಭಗಳೇನು?

ಬಹಳಷ್ಟು ಖಾದ್ಯಗಳ ರುಚಿಯನ್ನು ಹೆಚ್ಚಿಸುವ ಸಾಧ್ಯತೆ (health benefits of flaxseed) ಅಗಸೆ ಬೀಜಗಳಿಗಿದೆ. ಮೊಟ್ಟೆ ರಹಿತವಾಗಿ ಕೇಕ್‌ ಮಾಡುವಂಥ ಎಷ್ಟೋ ಮಂದಿ ಅಗಸೆ ಪುಡಿಯನ್ನೇ ಬೆಚ್ಚನೆಯ ನೀರಿಗೆ ಹಾಕಿ ನೆನೆಸಿ ಬಳಸುತ್ತಾರೆ. ಮೊಟ್ಟೆಯ ಲೋಳೆಯಂತೆಯೇ ಜೆಲ್‌ ಮಾದರಿಯಲ್ಲಿ ಅಗಸೆ ಪುಡಿಯ ಮಿಶ್ರಣವೂ ಒದಗಿ ಬರುತ್ತದೆ. ಭಾರತೀಯ ಆಹಾರಗಳಲ್ಲಿ ಚೆಟ್ಣಿ ಪುಡಿ ಅಥವಾ ಒಗ್ಗರಣೆಯ ವ್ಯಂಜನವಾಗಿ ಧಾರಾಳವಾಗಿ ಬಳಸಬಹುದು. ಮಕ್ಕಳಿಗೆ ಸ್ಮೂದಿಯಂಥವುಗಳ ಜೊತೆಗೆ ಬೆರೆಸಬಹುದು. ಬಳಸುವುದಕ್ಕೆ ಮನಸ್ಸಿದ್ದರೆ ಮಾರ್ಗ ತಾನಾಗೆ ದೊರೆಯುತ್ತದೆ

ಅಗಸೆ ಬೀಜಗಳಲ್ಲಿ ಸತ್ವಗಳೇನಿವೆ?

ಒಂದು ಟೇಬಲ್‌ ಚಮಚ ಅಗಸೆ ಪುಡಿಯಲ್ಲಿ ಅಂದಾಜು ೩೭ ಕ್ಯಾಲರಿಗಳು ದೊರೆಯಬಹುದು. ಅದದಲ್ಲಿ ಕಾರ್ಬ್‌ ಬಹುತೇಕ ಇಲ್ಲ ಎಂಬಂತಿದ್ದರೆ, ಆರೋಗ್ಯಕರ ಕೊಬ್ಬು ೩ ಗ್ರಾಂ, ನಾರು, ೨ ಗ್ರಾಂ, ಪ್ರೊಟೀನ್‌ ೧.೩ ಗ್ರಾಂ ದೊರೆಯುತ್ತವೆ. ಇದಲ್ಲದೆ, ಥಿಯಾಮಿನ್‌, ತಾಮ್ರ, ಮ್ಯಾಂಗನೀಸ್‌, ಮೆಗ್ನೀಶಿಯಂ, ಫಾಸ್ಫರಸ್‌, ಸೆಲೆನಿಯಂ, ಜಿಂಕ್‌, ವಿಟಮಿನ್‌ ಬಿ೬, ಕಬ್ಬಿಣ ಮತ್ತು ಫೋಲೇಟ್‌ಗಳು ಇದರಲ್ಲಿವೆ.

ಅಗಸೆ ಬೀಜಗಳಲ್ಲಿ ಒಮೇಗಾ 3

ಆಲ್ಫ ಲಿನೊಲೆನಿಕ್‌ ಆಮ್ಲ ಎನ್ನುವ ಉತ್ಕೃಷ್ಟ ಮಟ್ಟದ ಒಮೇಗಾ 3 ಫ್ಯಾಟಿ ಆಮ್ಲ ಇದರಲ್ಲಿದೆ. ಈ ಸತ್ವವನ್ನು ನಮ್ಮ ದೇಹ ತಯಾರಿಸಿಕೊಳ್ಳುವುದಿಲ್ಲ, ಆಹಾರದಿಂದಲೇ ದೊರೆಯಬೇಕು. ದೇಹದ ರಕ್ತನಾಳಗಳಲ್ಲಿ ಕೊಬ್ಬಿನಂಶ ಶೇಖರವಾಗದಂತೆ ಕಾಪಾಡಲು ಇದು ಅಗತ್ಯ. ಮಾತ್ರವಲ್ಲ, ಉರಿಯೂತವನ್ನೂ ಶಮನ ಮಾಡುತ್ತದೆ.

ಅಗಸೆ ಬೀಜ ನಾರಿನಿಂದ ಸಮೃದ್ಧ

ಜೀರ್ಣಾಂಗದ ಆರೋಗ್ಯ ಕಾಪಾಡಲು ಅಗತ್ಯವಾದ ನಾರು ಇದರಲ್ಲಿದೆ. ಕರಗಬಲ್ಲ ಮತ್ತು ಕರಗಲಾರದ ನಾರುಗಳೆರಡೂ ಇದರಲ್ಲಿದ್ದು, ಆರೋಗ್ಯಕ್ಕೆ ಎರಡೂ ರೀತಿಯಲ್ಲಿ ಲಾಭ ತರುತ್ತವೆ. ಕರಗಬಲ್ಲ ನಾರುಗಳು ಪಚನಕ್ರಿಯೆಯನ್ನು ನಿಧಾನ ಮಾಡಿ, ಹಸಿವನ್ನು ಮುಂದೂಡಿ, ತೂಕ ಏರದಂತೆ ನೆರವಾಗುತ್ತವೆ. ಜೊತೆಗೆ, ರಕ್ತದಲ್ಲಿ ಸಕ್ಕರೆಯಂಶ ಏರದಂತೆ ನಿಗಾ ವಹಿಸುತ್ತವೆ. ಕರಗಲಾರದ ನಾರುಗಳು ಹೊಟ್ಟೆಯ ಸಫಾಯಿ ಕೆಲಸಕ್ಕೆ ಅಗತ್ಯ.

ಅಗಸೆ ಬೀಜಗಳಿಂದ ಕ್ಯಾನ್ಸರ್‌ ತಡೆ

ಸಸ್ಯಜನ್ಯ ಲಿಗ್ನನ್‌ಗಳು ಇವುಗಳಲ್ಲಿ ಸಮೃದ್ಧವಾಗಿವೆ. ಕ್ಯಾನ್ಸರ್‌ನೊಂದಿಗೆ ಹೋರಾಡುವ ಗುಣ ಈ ಅಂಶಗಳಿಗಿದೆ. ಉಳಿದೆಲ್ಲಾ ಸಸ್ಯಜನ್ಯ ಲಿಗ್ನನ್‌ಗಳಿಗೆ ಹೋಲಿಸಿದಲ್ಲಿ ಅಗಸೆ ಬೀಜದಲ್ಲಿ ಇವು ಅಗಾಧವಾಗಿವೆ. ಹಾಗಾಗಿಯೇ ರಜೋನಿವೃತ್ತಿಯ ನಂತರ ಮಹಿಳೆಯರು ಇವುಗಳನ್ನು ಸೇವಿಸುವುದು ಲಾಭದಾಯಕ ಎನ್ನಲಾಗಿದ್ದು, ಸ್ತನ ಕ್ಯಾನ್ಸರ್‌ನ ಭೀತಿ ಇದರಿಂದ ಕಡಿಮೆ ಎನ್ನುತ್ತವೆ ಕೆಲವು ಅಧ್ಯಯನಗಳು.

ಬಿಪಿ ನಿಯಂತ್ರಣ

ಕೊಲೆಸ್ಟ್ರಾಲ್‌ ಕಡಿಮೆ ಮಾಡುವುದು ಮಾತ್ರವಲ್ಲದೆ, ರಕ್ತದೊತ್ತಡ ನಿಯಂತ್ರಣದಲ್ಲಿ ಇರಿಸುವ ಸಾಮರ್ಥ್ಯವೂ ಇದಕ್ಕಿದೆ. ಈ ಎಲ್ಲವುಗಳ ನಿಯಂತ್ರಣವೆಂದರೆ ಹೃದ್ರೋಗ ಮತ್ತು ಪಾರ್ಶ್ವವಾಯುವಿನಂಥ ಮಾರಕ ರೋಗಗಳಿಂದ ದೂರವಾಗುವುದೂ ಹೌದು.

ಮಧುಮೇಹ

ಟೈಪ್‌ 2 ಮಧುಮೇಹ ಇದ್ದರೆ ಇದರ ಸೇವನೆ ಹೆಚ್ಚಿನ ಲಾಭ ತರುತ್ತದೆ. ಇದರಲ್ಲಿರುವ ಕರಗಬಲ್ಲ ನಾರುಗಳಿಂದ ರಕ್ತಕ್ಕೆ ಸಕ್ಕರೆಯಂಶ ಸೇರುವುದು ನಿಧಾನವಾಗುತ್ತದೆ. ಈ ರೀತಿಯ ಪ್ರಯೋಜನಗಳಿಗಾಗಿ ಅಗಸೆ ಎಣ್ಣೆಯ ಬದಲು, ನೇರವಾಗಿ ಅಗಸೆ ಬೀಜವನ್ನೇ ಅಥವಾ ಅದರ ಪುಡಿಯನ್ನೇ ಸೇವಿಸುವುದು ಅಗತ್ಯ. ಅಗಸೆ ಎಣ್ಣೆಯಲ್ಲಿ ನಾರಿನಂಶ ಇರುವುದಿಲ್ಲ

ಈ ಸುದ್ದಿಯನ್ನೂ ಓದಿ: Health Care Of Women After Thirty: ಮೂವತ್ತರ ನಂತರ ಮಹಿಳೆಯರ ಆರೋಗ್ಯ ಕಾಳಜಿ ಹೀಗಿರಲಿ

ತೂಕ ಇಳಿಕೆ

ನಾರಿನಂಶ ಹೆಚ್ಚಿದ್ದಷ್ಟೂ ಹಸಿವೆಯನ್ನು ಮುಂದೂಡಬಹುದು. ಅಂದರೆ, ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನೇ ಇದು ನೀಡುತ್ತದೆ. ಹಾಗಾಗಿ ಕಳ್ಳ-ಸುಳ್ಳು ಹಸಿವೆಗಳಿಗಿಲ್ಲಿ ಅವಕಾಶವೇ ಇಲ್ಲ. ತೂಕ ಇಳಿಸುವವರಿಗೆ ಅಗಸೆ ಬೀಜಗಳು ಈ ರೀತಿಯಲ್ಲಿ ನೆರವಾಗುತ್ತವೆ.

FAQ

ಇದನ್ನು ಹೇಗೆಲ್ಲಾ ಉಪಯೋಗಿಸಬಹುದು?

ಹೇಗೆ ಬಳಸಿದರೂ ಇದು ರುಚಿಯೇ! ಅಗಸೆ ಎಣ್ಣೆಯನ್ನು ನಿತ್ಯ ಬಳಸಬಹುದು. ಇದನ್ನು ಇಡಿಯಾಗಿ ಅಥವಾ ಪುಡಿ ಮಾಡಿ ನೆನೆಸಿ, ಪುಡ್ಡಿಂಗ್‌, ಸ್ಮೂದಿ ಮುಂತಾದವುಗಳ ಜೊತೆ ಉಪಯೋಗಿಸಬಹುದು. ಬೀಜವನ್ನು ಅಂತೆಯೇ ಒಗ್ಗರಣೆಗೆ ಅಥವಾ ಒಣ ಪುಡಿಯನ್ನು ಚಟ್ಣಿಪುಡಿಗಾಗಿ ಬಳಸಬಹುದು. ಇದರ ಪುಡಿಯನ್ನು ಅಥವಾ ಇಡಿಯಾಗಿ ಬೇಕ್‌ ಮಾಡುವಾಗ ಹಾಕಿ ಪ್ರಯತ್ನಿಸಬಹುದು.

ಅಗಸೆ ಬೀಜವನ್ನು ಎಷ್ಟು ಬಳಸಬಹುದು?

ದಿನಕ್ಕೆ ೨-೩ ಚಮಚ ಅಗಸೆ ಬೀಜವನ್ನು ಬಳಸಬಹುದು. ಅದಕ್ಕಿಂತ ಹೆಚ್ಚಾದರೆ ನಾರು ಅಧಿಕವಾಗಿ ಹೊಟ್ಟೆಯುಬ್ಬರದಂಥ ಸಮಸ್ಯೆಗಳು ತಲೆದೋರಬಹುದು.

ಇದನ್ನು ಎಲ್ಲರೂ ತಿನ್ನಬಹುದೇ?

ಹೌದು, ಹಾಗೆ ಇದು ನಿರಪಾಯಕಾರಿಯೇ. ಆದರೆ ರಕ್ತ ನೀರಾಗಿಸುವ ಮಾತ್ರೆಗಳು, ಆಂಟಿ-ಪ್ಲೇಟ್ಲೆಟ್‌ ಔಷಧಗಳನ್ನು ತೆಗೆದುಕೊಳ್ಳುವವರು ವೈದ್ಯರಲ್ಲಿ ಸಲಹೆ ಕೇಳುವುದು ಒಳ್ಳೆಯದು.

Exit mobile version