ಸಿಹಿ ತಿಂಡಿಗಳನ್ನು ಬೇಡ ಎನ್ನುವವರು ಕಡಿಮೆ. ಸಿಹಿಯ ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರೂರುವಷ್ಟು ಆಸೆ ಎಲ್ಲರಿಗೂ ಆಗದಿದ್ದರೂ, ನಿರಾಕರಿಸುವ ಮನಸ್ಸಂತೂ ಹೆಚ್ಚಿನವರಿಗೆ ಇರುವುದಿಲ್ಲ. ಆದರೆ ನಿತ್ಯದ ಬಳಕೆಯಲ್ಲಿ ಬಿಳಿ ಸಕ್ಕರೆ ಒಳ್ಳೆಯದಾ ಅಥವಾ ಕಂದು ಸಕ್ಕರೆ (ಬೆಲ್ಲ) ಒಳ್ಳೆಯದಾ ಎಂಬುದು ತಲೆಯಲ್ಲಿ ಗುಂಯ್ ಗುಡುತ್ತಿರುತ್ತದೆ. ಅಂಗಡಿಯಲ್ಲಿ ಖರೀದಿಗೆ ನಿಂತಾಗ, ಸಿಹಿ ತಯಾರಿಸುತ್ತಾ ಒಲೆಯ ಮುಂದೆ ನಿಂತಾಗ, ಫಿಟ್‌ನೆಸ್ ಉತ್ಸಾಹಿಗಳೊಂದಿಗೆ ಮಾತಿಗೆ ನಿಂತಾಗ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ತೋರುವಾಗ… ಹೀಗೆ ನಾನಾ ಸಂದರ್ಭಗಳಲ್ಲಿ ಸಕ್ಕರೆ ಒಳ್ಳೆಯದಾ ಅಥವಾ ಬೆಲ್ಲವಾ ಎಂಬ ಯೋಜನೆ ಪದೇಪದೆ ಬಂದಿರಬಹುದು. ಬೆಲ್ಲವೆಂದರೆ ಹಳೆಯ ಕಾಲದ ಜೋನಿ ಅಥವಾ ಅಚ್ಚು ಬೆಲ್ಲಗಳನ್ನೇ ಹೇಳುತ್ತಿರುವುದಲ್ಲ. ಸಕ್ಕರೆಯಷ್ಟೇ ಸರಾಗವಾಗಿ ಉಪಯೋಗಿಸಲಾಗುವ ಪುಡಿ ಬೆಲ್ಲ, ಹರಳಿನೋಪಾದಿಯ ಕಂದು ಸಕ್ಕರೆ- ಇಂಥ ವಿವಿಧ ಆಯ್ಕೆಗಳು ಮಾರುಕಟ್ಟೆಯಲ್ಲಿವೆ.
ಮೊದಲಿಗೆ ಈ ಬೆಲ್ಲ ಅಥವಾ ಸಕ್ಕರೆಗಳೆಂದರೇನು ಎನ್ನುವುದರಿಂದ ಪ್ರಾರಂಭಿಸೋಣ. ಈ ಎರಡೂ ವಸ್ತುಗಳು ತಯಾರಾಗುವುದು ಕಬ್ಬಿನಿಂದ. ಬಿಳಿಯ ಬಣ್ಣದ ಸಕ್ಕರೆ ತಯಾರಿಸಲು, ಕಬ್ಬಿನ ರಸವನ್ನು ಹಿಂಡಿ ತೆಗೆದು, ಶುದ್ಧೀಕರಿಸಲಾಗುತ್ತದೆ. ಈ ರಸವನ್ನು ಆವಿಯಾಗಿಸುವುದು, ಪಾಕಮಾಡುವುದು ಮತ್ತು ಹರಳಾಗಿಸುವುದು ಮುಂದಿನ ಹಂತಗಳು. ಹರಳಾದ ಸಕ್ಕರೆಗೆ ಬೇಕಾದ ಆಕಾರ ನೀಡಲಾಗುತ್ತದೆ. ಬಿಳಿ ಸಕ್ಕರೆ ಕಟುವಾದ ಸಿಹಿ ರುಚಿಯನ್ನು ಹೊಂದಿದ್ದು, ತೇವವಿಲ್ಲದಂತೆ ಒಣಗಿರುತ್ತದೆ.
ಬಿಳಿ ಸಕ್ಕರೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮೊಲಾಸಿಸ್ ಹೊಂದಿರುವ ಬೆಲ್ಲ ಅಥವಾ ಕಂದು ಸಕ್ಕರೆ ರುಚಿಯಲ್ಲಿ ಸಕ್ಕರೆಯಷ್ಟು ಕಟುವಾದ ಸಿಹಿ ಇರುವುದಿಲ್ಲ. ಜೋನಿ ಬೆಲ್ಲವಂತೂ ಕೇವಲ ಕಬ್ಬಿನ ರಸದ ಶೋಧಿಸಿದ ಪಾಕವಷ್ಟೇ ಹೊರತಾಗಿ ಇನ್ನಾವ ಪ್ರಕ್ರಿಯೆಗೂ ಒಳಪಟ್ಟಿರುವುದಿಲ್ಲ. ಉಳಿದ ಆಕಾರದಲ್ಲಿರುವ ಬೆಲ್ಲಗಳಾದರೂ ಸಕ್ಕರೆಯಷ್ಟು ಒಣಗಿರದೆ, ಸ್ವಲ್ಪ ಪ್ರಮಾಣದ ತೇವವನ್ನು ಹೊಂದಿರುತ್ತದೆ.
ಇವಿಷ್ಟು ಬೆಲ್ಲ-ಸಕ್ಕರೆಗಳ ಸಂಕ್ಷಿಪ್ತ ಪೂರ್ವಾಪರ. ಈ ಎರಡೂ ವಸ್ತುಗಳ ಆಕಾರ ಮತ್ತು ರುಚಿಯಲ್ಲಿ ವ್ಯತ್ಯಾಸ ಬರುವುದು ಅವುಗಳು ಒಳಪಡುವ ರಾಸಾಯನಿಕ ಪ್ರಕ್ರಿಯೆಗಳಿಂದ. ಹೆಚ್ಚಿನ ಪ್ರಮಾಣದ ಮೊಲಾಸಿಸ್ ಇದ್ದಷ್ಟೂ ಅದರ ಬಣ್ಣ ಹೆಚ್ಚೆಚ್ಚು ಕಂದುತ್ತಾ ಹೋಗುತ್ತದೆ. ಹಾಗಾಗಿಯೇ ಎಷ್ಟೋ ಮಂದಿ ಸಿಹಿ ತಿನಿಸುಗಳ ತಯಾರಿಕೆಯಲ್ಲಿ ಬೆಲ್ಲದ ಬದಲು ಸಕ್ಕರೆ ಬಳಸುತ್ತಾರೆ. ಬೆಲ್ಲ ಹಾಕುವುದರಿಂದ ರುಚಿ ಕೆಡುವುದಿಲ್ಲ ಎಂಬುದು ನಿಜವಾದರೂ, ತಿಂಡಿಯ ಬಣ್ಣ ಬದಲಾಗುವುದು ಹೌದು. ಹಾಗಾಗಿ ವ್ಯಂಜನಗಳ ಬಣ್ಣ ಮತ್ತು ಸ್ವರೂಪ ಮೂಲರೂಪದಲ್ಲೇ ಇರಬೇಕೆಂದು ಬಯಸುವವರು ಸಕ್ಕರೆಯನ್ನೇ ಆಯ್ಕೆ ಮಾಡುತ್ತಾರೆ.
ಯಾವುದು ಒಳ್ಳೆಯದು?: ಇದೀಗ ನಮ್ಮೆದುರಿಗಿರುವ ಪ್ರಶ್ನೆ. ಮೊಲಾಸಿಸ್ ಹೆಚ್ಚಿದಂತೆ ಅದರಲ್ಲಿ ಕಬ್ಬಿಣ, ಮೆಗ್ನೀಶಿಯಂ, ಕ್ಯಾಲ್ಶಿಯಂನಂಥ ಖನಿಜಗಳ ಸಾಂದ್ರತೆ ಹೆಚ್ಚುತ್ತದೆ. ಹಾಗೆಂದ ಮಾತ್ರಕ್ಕೆ ಬೆಲ್ಲ ಬಳಸಿ ʻಆರೋಗ್ಯಕರ ಸಿಹಿʼ ತಯಾರಿಸಬಹುದೆಂದು ಎಂದು ಭಾವಿಸುವ ಅಗತ್ಯವಿಲ್ಲ. ಕಾರಣ, ಈ ಎರಡೂ ಆಯ್ಕೆಗಳಲ್ಲಿ ಕ್ಯಾಲರಿ ಕಡಿಮೆಯೇನಿಲ್ಲ. ಸುಮಾರು ೧೦೦ ಗ್ರಾಂ ಸಕ್ಕರೆಯಲ್ಲಿ ೩೮೭ ಕ್ಯಾಲರಿ ಇದ್ದರೆ, ಅಷ್ಟೇ ಪ್ರಮಾಣದ ಬೆಲ್ಲದಲ್ಲಿ ೩೭೭ ಕ್ಯಾಲರಿ ದೊರೆಯುತ್ತದೆ. ಹಾಗಾಗಿ ʻಲೋ-ಕ್ಯಾಲರಿ ಶುಗರ್ʼ ಎಂದೆಲ್ಲಾ ಯಾರಾದರೂ ಹೇಳಿದರೆ ನಂಬುವ ಮುನ್ನ ಯೋಚಿಸಬೇಕು.
ಇಷ್ಟೊತ್ತು ಏನು ಹೇಳಿದ್ದಾಯಿತು ಎಂಬ ಗೊಂದಲ ಇನ್ನೂ ಇದ್ದರೆ- ಇಲ್ಲಿ ಕೇಳಿ. ಸಕ್ಕರೆಗಿಂತ ಬೆಲ್ಲದಲ್ಲಿ ಸ್ವಲ್ಪ ಕ್ಯಾಲರಿ ಕಡಿಮೆ ಇರುತ್ತದೆ. ಮೊಲಾಸಿಸ್ ಹೆಚ್ಚಿರುವುದರಿಂದ ಸ್ವಲ್ಪ ಖನಿಜಾಂಶಗಳೂ ಬೆಲ್ಲದಲ್ಲಿ ಸಾಂದ್ರವಾಗಿರುತ್ತವೆ. ಸಕ್ಕರೆಗಿಂತ ಕಡಿಮೆ ಪ್ರಮಾಣದಲ್ಲಿ ರಾಸಾಯನಿಕ ಪ್ರಕ್ರಿಯೆಗಳಿಗೆ ಬೆಲ್ಲ ಒಳಪಟ್ಟಿರುತ್ತದೆ. ಹಾಗೆಂದ ಮಾತ್ರಕ್ಕೆ ಬೆಲ್ಲದ ಸಿಹಿಗಳನ್ನು ಸರಿಯಾಗಿ ಬಾರಿಸಬಹುದು ಎಂದು ಖಂಡಿತಾ ಭಾವಿಸುವ ಅಗತ್ಯವಿಲ್ಲ. ಬೆಲ್ಲವಾಗಲೀ ಸಕ್ಕರೆಯಾಗಲಿ- ಸಿಹಿ ತಿನ್ನುವುದಕ್ಕೆ ಮಿತಿ ಇರಲಿ.