Site icon Vistara News

Health Tips | ಹಬ್ಬ ಮುಗೀತಾ? ಇನ್ನು ತಿಂದಿದ್ದನ್ನು ಕರಗಿಸಲು ಶುರು ಮಾಡಿ!

Health Tips

ಹಬ್ಬಗಳ ಸಾಲು ಮುಗಿದಿದೆ. ಹಬ್ಬಗಳ, ಪೂಜೆ-ಸಂಭ್ರಮಗಳ ಹೆಸರಿನಲ್ಲಿ ಬಂಧು-ಬಳಗವನನ್ನೆಲ್ಲಾ ಕಂಡು ಬೀಗಿದ್ದೇವೆ. ಬೇಕಾದ್ದು, ಬೇಡದ್ದು ಎಲ್ಲವನ್ನೂ ತಿಂದು ತೇಗಿದ್ದೇವೆ. ಇನ್ನೀಗ ತಿಂದಿದ್ದನ್ನು ಕರಗಿಸುವ ಸರದಿ. ಅರೆ! ಅದಕ್ಕೇನೂ ಮಾಡಬೇಕಿಲ್ಲ, ತನ್ನಷ್ಟಕ್ಕೆ ತಾನೇ ಕರಗುತ್ತದೆ ಎನ್ನುವವರು ಬಹಳಷ್ಟು ಮಂದಿ ಇದ್ದಾರೆ. ನಿಜ, ಏನು ಮಾಡದಿದ್ದರೂ ಉಂಡಿದ್ದು ಅರಗಬಹುದು. ಆದರೆ ದೇಹಕ್ಕೆ ಸೇರಿದ ಕಶ್ಮಲಗಳನ್ನು ಹೊರಹಾಕಿ ಶುದ್ಧ ಮಾಡಬೇಕಲ್ಲ. ಅಂದರೆ, ಹಬ್ಬಗಳ ಹೆಸರಿನಲ್ಲಿ ಅತಿಯಾಗಿ ದೇಹ ಸೇರಿರುವ ಸಕ್ಕರೆ, ಕೊಬ್ಬು ((Health Tips) ಇತ್ಯಾದಿಗಳಿಗೆ ದಾರಿ ತೋರಿಸಬೇಡವೇ? ಇವುಗಳಿಂದ ದೇಹಕ್ಕಾಗಿರಬಹುದಾದ ತೊಂದರೆಯನ್ನು ಸರಿ ಮಾಡಬೇಡವೇ? ದೇಹವೆಲ್ಲಾ ಜಡ, ಸೋಮಾರಿತನ ಎಂಬಂಥ ಭಾವನೆಗಳಿಗೆ ಮುಕ್ತಿ ಕಾಣಿಸಬೇಡವೆ?

ನೀರು ಅಗತ್ಯ
ನೀರಿಲ್ಲದೆ ಶುದ್ಧೀಕರಣ ಉಂಟೇ? ನಮ್ಮ ಅಂಗಾಂಗಗಳ ಸಮರ್ಪಕ ಕೆಲಸಕ್ಕೆ, ಸೋಂಕು ನಿಯಂತ್ರಣಕ್ಕೆ, ಆಹಾರ ಸರಬರಾಜಿಗೆ, ದೇಹದ ಉಷ್ಣತೆ ಸರಿದೂಗಿಸಲು, ಕೀಲುಗಳು ಸರಿಯಾಗಿರಲು- ನೀರಿನ ಬಳಕೆ ಇವಿಷ್ಟೇ ಎನ್ನುವಂತಿಲ್ಲ. ಹಾಗೆಯೇ, ದೇಹದಲ್ಲಿರುವ ಬೇಡದ ವಸ್ತುಗಳನ್ನು ಹೊರಹಾಕಲೂ ನೀರು ಬೇಕು. ತಿಂದಿದ್ದು ಹೆಚ್ಚಾಗಿ, ಎದ್ದು ಹೋಗಿ ನೀರು ಕುಡಿಯಲೂ ಸೋಮಾರಿತನ ಎನಿಸಿದರೆ, ಕೈಯಲ್ಲೊಂದು ನೀರಿನ ಬಾಟಲಿ ಇಟ್ಟುಕೊಂಡು ಆಗಾಗ ನೀರು ಕುಡಿಯಿರಿ. ಆದಷ್ಟೂ ಬೇಗ ಬೇಡದ ಪದಾರ್ಥಗಳು ದೇಹದಿಂದ ಹೊರಹೋಗುತ್ತವೆ.

ಸಿಹಿ ಸಾಕು
ಇಷ್ಟೂ ದಿನಗಳಲ್ಲಿ ಸಾಕಷ್ಟು ಸಿಹಿ ತಿನಿಸುಗಳು ಹೊಟ್ಟೆ ಸೇರಿವೆ. ತಿಂದಷ್ಟೂ ಸಾಕು ಎನಿಸದಂಥ ಮಾಯೆಯದು ಎಂಬುದು ನಿಜವಾದರೂ, ಇನ್ನೊಂದೆರಡು ವಾರಗಳ ಕಾಲ ಸಿಹಿ ತಿಂಡಿಗಳಿಗೆ ಕಡಿವಾಣ ಹಾಕಿ. ಮಾತ್ರವಲ್ಲ, ಬೇಕರಿ ತಿಂಡಿಗಳು, ಕೋಲಾ, ಬಾಟಲಿಯ ಬಣ್ಣದ ಪಾನೀಯಗಳು- ಇವೂ ಅದೇ ಪಟ್ಟಿಯಲ್ಲಿವೆ. ಆಹಾರಗಳು ಲಘುವಾಗಿರಲಿ, ಎಣ್ಣೆ ತಿಂಡಿಗಳಿಗೂ ಸ್ವಲ್ಪ ಬಿಡುವು ಕೊಡಿ. ಅರೆದು ಸುಸ್ತಾಗಿರುವ ಹೊಟ್ಟೆಗೆ ಸ್ವಲ್ಪವಾದರೂ ವಿಶ್ರಾಂತಿ ಬೇಡವೇ?

ವ್ಯಾಯಾಮ
ಇದಿಲ್ಲದಿದ್ದರೆ ಹೇಗೆ? ಹಬ್ಬಗಳ ಓಡಾಟ- ಒತ್ತಡಗಳ ನಡುವೆ ವ್ಯಾಯಾಮಕ್ಕೆ ಖಂಡಿತ ದೊಡ್ಡ ಬಿಡುವ ಸಿಕ್ಕಿರುವ ಸಾ‍ಧ್ಯತೆಯೇ ಹೆಚ್ಚು. ಅದನ್ನೀಗ ದಾರಿಗೆ ತರಬೇಕಲ್ಲ. ಪ್ರತಿದಿನ ಕಡ್ಡಾಯವಾಗಿ ವ್ಯಾಯಾಮ- ಹೀಗೆಯೇ ಅಂತಿಲ್ಲ, ನಿಮ್ಮಿಷ್ಟ ಯಾವುದಾದರೂ- ಮಾಡಿ. ವಾಕಿಂಗ್‌, ಜಾಗಿಂಗ್‌, ಯೋಗ, ಸೈಕಲ್‌ ಹೊಡೆಯುವುದು ಅಥವಾ (ಹೋಗುವವರಾಗಿದ್ದರೆ) ಜಿಮ್-‌ ಯಾವುದೂ ಆದೀತು. ನೆನಪಿಡಿ, ದೇಹ ಬೆವರಿದಷ್ಟೂ ನಿರ್ಮಲವಾಗುತ್ತದೆ. ಇದರಿಂದ ಜಡವಾಗಿರುವ ದೇಹ-ಮನಸ್ಸುಗಳೆರಡೂ ಚುರುಕಾಗುತ್ತವೆ

ಆಹಾರ
ಮೊದಲೇ ಹೇಳಿದಂತೆ ಲಘುವಾಗಿರಲಿ, ಸಾಕಷ್ಟು ನಾರಿನಿಂದ ಕೂಡಿದರಲಿ. ಸೊಪ್ಪು, ತರಕಾರಿಗಳು, ಹಣ್ಣುಗಳು ಆಹಾರದ ಮುಖ್ಯ ಭಾಗವಾಗಿರಲಿ. ಪ್ರೊಟೀನ್‌ ಕೊರತೆಯಾಗದಂತೆ ನೋಡಿಕೊಳ್ಳಿ. ಇನ್ನೆರಡು ವಾರಗಳಲ್ಲಿ ದೇಹ ಮೊದಲಿನಂತೆಯೇ ಆಗಬೇಕೆಂಬುದು ನಮ್ಮ ಗುರಿಯಾಗಿದ್ದರೆ, ಇದಾವುದೂ ಕಷ್ಟವಲ್ಲ.

ನಿದ್ದೆ
ಹಬ್ಬದ ಹೆಸರಿನಲ್ಲಿ ನಿದ್ದೆಗೆಟ್ಟಿದ್ದು ಸಾಕಾಗಿದ್ದರೆ, ಇದೀಗ ಕಣ್ತುಂಬಾ ನಿದ್ದೆ ಮಾಡಿ. ವಿಶ್ರಾಂತ ದೇಹದ ಕ್ಷಮತೆ ಯಾವತ್ತೂ ಹೆಚ್ಚಿರುತ್ತದೆ. ನಮ್ಮ ದೈನಂದಿನ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ಮರಳಿದಷ್ಟೂ ಶೀಘ್ರ ನಮ್ಮ ದೇಹ-ಮನಸ್ಸುಗಳೂ ಮೊದಲಿನಂತಾಗುತ್ತವೆ.

ಇದನ್ನೂ ಓದಿ | ಸುವಿಚಾರ ಅಂಕಣ | ಅನ್ನವೇ ಆರೋಗ್ಯ, ಆರೋಗ್ಯವೇ ಸೌಭಾಗ್ಯ

Exit mobile version