Site icon Vistara News

Health Tips: ನಮ್ಮ ಆಹಾರದಲ್ಲಿ ಪ್ರೊಟೀನ್‌ ಎಷ್ಟಿರಬೇಕು?

Health Tips, How much need protein in our food

ತಿನ್ನುವುದೆಲ್ಲವೂ ಪ್ರೊಟೀನ್‌ ಆಗಿರಬೇಕೆಂದು ಬಯಸುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದಕ್ಕೆ ಒಬ್ಬೊಬ್ಬರು ನೀಡುವ ಕಾರಣ ಒಂದೊಂದು. ಕೆಲವರು ತೂಕ ಇಳಿಸುವ ಉದ್ದೇಶಕ್ಕೆ ಅತಿಯಾದ ಪ್ರೊಟೀನ್‌ ತಿನ್ನುತ್ತಿದ್ದರೆ, ಕೆಲವರಿಗೆ ರಟ್ಟೆ ಬೆಳೆಸುವ ಕಾರಣಕ್ಕೆ ಪ್ರೊಟೀನ್‌ ಭೂತ ಹಿಡಿದಿರುತ್ತದೆ. ಇನ್ನೂ ಕೆಲವರಿಗೆ ಕ್ರೀಡಾಪಟುಗಳು ಎನ್ನುವ ಕಾರಣಕ್ಕೆ ಹೆಚ್ಚಿನ ಪ್ರೊಟೀನ್‌ (protein) ಬೇಕಾದರೆ, ಇನ್ನಷ್ಟು ಜನ ಇದರ ಪರಿವೆಯೇ ಇಲ್ಲದಂತೆ ಸಿಕ್ಕಿದ್ದೆಲ್ಲಾ ತಿನ್ನುತ್ತಿರುತ್ತಾರೆ. ಅದರಲ್ಲೂ ಮಕ್ಕಳಿಗೆ ಒಂದೋ ಅತಿಯಾಗಿ ಪನೀರ್‌, ಚೀಸ್‌, ಮೊಟ್ಟೆ ಅಥವಾ ಚಿಕನ್‌ ತಿನ್ನಿಸುವುದು ಇಲ್ಲವೇ ಪ್ರೊಟೀನ್‌ ಕೊರತೆಯಾಗುವ ಆಹಾರಗಳನ್ನು ನೀಡುವುದು ಕಂಡುಬರುತ್ತದೆ. ಸಮತೋಲಿತ ಅಥವಾ ಒಟ್ಟಂದದ ಪೌಷ್ಟಿಕತೆಯ ಬಗ್ಗೆ ಅರಿವು (health tips) ಕಡಿಮೆಯೇ ಎಂಬ ಪ್ರಶ್ನೆ ಇವುಗಳನ್ನು ನೋಡಿದಾಗಲೆಲ್ಲಾ ಎದುರಾಗುತ್ತದೆ. ಹಾಗಾದರೆ ಬೆಳೆಯುವ ಮಗುವೊಂದಕ್ಕೆ ದಿನಕ್ಕೆ ಎಷ್ಟು ಪ್ರೊಟೀನ್‌ ಬೇಕಾಗುತ್ತದೆ?

ಎಲ್ಲಾ ವಯೋಮಾನ ಮತ್ತು ಚಟುವಟಿಕೆಯವರಿಗೆ ಆಹಾರದ ಅಗತ್ಯ ಭಿನ್ನವಾಗಿರುವಂತೆ ಪ್ರೊಟೀನ್ ಅಗತ್ಯವೂ ವ್ಯತ್ಯಾಸವಾಗುತ್ತದೆ. ಈ ಪ್ರಮಾಣ ಸಹಜವಾಗಿ ಮಕ್ಕಳನ್ನೂ ಭಿನ್ನವಾಗಿರುತ್ತದೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಬೇಕಾದ ಮಹತ್ವದ ಅಮೈನೋ ಆಮ್ಲಗಳನ್ನು ಪ್ರೊಟೀನ್‌ಗಳ ಮೂಲಕ ದೇಹ ಪಡೆಯುತ್ತದೆ. ಹಾಗಾಗಿ ಹಾಲು-ಮೊಸರು-ಬೇಳೆ ಮುಂತಾದವನ್ನು ಅವರು ತಟ್ಟೆಯಲ್ಲಿದ್ದಷ್ಟು ತಿಂದು ಮುಗಿಸಲು ನೀವೊಂದಿಷ್ಟು ಒದ್ದಾಡಬೇಕೆಂದಾದರೂ ಸರಿಯೆ, ಅದು ಮಕ್ಕಳಿಗೇ ಲಾಭ. ಮಕ್ಕಳಿಗೆ ಸೂಕ್ತ ಪ್ರಮಾಣದಲ್ಲಿ ಪ್ರೊಟೀನ್‌ ದೊರೆಯದಿದ್ದರೆ ಆಯಾಸ, ಏಕಾಗ್ರತೆಯ ಕೊರತೆ, ಬೆಳವಣಿಗೆ ಸರಿಯಾಗಿ ಆಗದಿರುವುದು, ಪ್ರತಿರೋಧಕ ಶಕ್ತಿಯ ಕೊರತೆ- ಇಂಥವೆಲ್ಲಾ ಕಾಣಿಸಿಕೊಳ್ಳುತ್ತದೆ. ಹಾಗೆಂದು ಅಗತ್ಯಕ್ಕಿಂತ ಪ್ರೊಟೀನ್‌ ಹೆಚ್ಚಾದರೂ ಅದು ದೇಹದಲ್ಲಿ ಅಡಗುವುದು ಕೊಬ್ಬಿನ ರೂಪದಲ್ಲಿ. ಅದೇ ಹೆಚ್ಚಾಗುತ್ತಾ ಹೋದರೆ ಕಿಡ್ನಿ ಸೇರಿದಂತೆ ಹಲವು ಅಂಗಗಳಿಗೆ ತೊಂದರೆ ತಂದೊಡ್ಡುತ್ತದೆ.

ತಜ್ಞರ ಪ್ರಕಾರ, ತಿನ್ನುವ ಆಹಾರದಲ್ಲಿ ಕನಿಷ್ಟ ೧೫ ಮತ್ತು ಗರಿಷ್ಟ ೩೫ರಷ್ಟು ಕ್ಯಾಲರಿಗಳು ಪ್ರೊಟೀನ್‌ನಿಂದಲೇ (health tips) ದೇಹಕ್ಕೆ ಬರಬೇಕು. ಆದರೆ ನಾವು ತಿನ್ನುವ ಕ್ಯಾಲರಿಗಳ ಲೆಕ್ಕ ಇಟ್ಟವರಾರು? ಇದರಲ್ಲಿ ಪ್ರೊಟೀನ್‌ ಎಷ್ಟೆಂದು ಪೆನ್ನು ಹಿಡಿದು ಚೀಟಿ ಅಂಟಿಸಿದವರಾರು? ಇವನ್ನೆಲ್ಲಾ ತಿಳಿಯುವುದಕ್ಕೆ ದಾರಿ ಇದೆಯೇ? ಹೌದೆನ್ನುತ್ತಾರೆ ತಜ್ಞರು.

ಪ್ರೊಟೀನ್‌ ಅಗತ್ಯ ಹೀಗಿರುತ್ತದೆ

೬ ತಿಂಗಳ ಒಳಗಿನ ಶಿಶುಗಳಿಗೆ ದಿನಕ್ಕೆ ೯ ಗ್ರಾಂ ಪ್ರೊಟೀನ್‌, ೭-೧೨ ತಿಂಗಳ ಶಿಶುಗಳಿಗೆ ದಿನಕ್ಕೆ ೧೧ ಗ್ರಾಂ, ೧-೩ ವರ್ಷದ ಮಕ್ಕಳಿಗೆ ದಿನಕ್ಕೆ ೧೩ ಗ್ರಾಂ, ೪-೮ ವರ್ಷದ ಚಿಣ್ಣರಿಗೆ ೧೯ ಗ್ರಾಂ, ೯-೧೩ ವರ್ಷದ ಹುಡುಗರು ಮತ್ತು ಹುಡುಗಿಯರಿಗೆ ೩೪ ಗ್ರಾಂ, ೧೪-೧೮ ವರ್ಷದ ಕಿಶೋರರಿಗೆ ದಿನಕ್ಕೆ ೫೨ ಗ್ರಾಂ, ಇದೇ ವಯಸ್ಸಿನ ಕಿಶೋರಿಯರಿಗೆ ದಿನಕ್ಕೆ ೪೬ ಗ್ರಾಂ ಪ್ರೊಟೀನ್‌ ಬೇಕು ಎಂಬುದು ಒಂದು ಅಂದಾಜು. ಈ ವಯಸ್ಸಿನ ನಂತರದವರಿಗೆ- ಪುರುಷರಿಗೆ ದಿನಕ್ಕೆ ೫೬ ಗ್ರಾಂ ಮಹಿಳೆಯರಿಗೆ ೪೬ ಗ್ರಾಂ, ಗರ್ಭಿಣಿಯರಿಗೆ ದಿನಕ್ಕೆ ೬೦ ಗ್ರಾಂ, ಹಾಲುಣಿಸುವ ತಾಯಂದಿರಿಗೆ ೭೦ ಗ್ರಾಂ ಪ್ರೊಟೀನ್‌ ಬೇಕಾಗುತ್ತದೆಂಬುದು ಅಂದಾಜು. ಕ್ರೀಡಾಪಟುಗಳಿಗೆ ಅಥವಾ ದೇಹಧಾರ್ಡ್ಯ ಪಟುಗಳಿಗೆ ಇದು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ.

ಯಾವುದರಲ್ಲಿ ಎಷ್ಟು ಪ್ರೊಟೀನ್?:

· 160 ಮಿ.ಲೀ. ಇರುವ 2 ಗ್ಲಾಸ್‌ ಹಾಲಿನಲ್ಲಿ 16 ಗ್ರಾಂ ಪ್ರೊಟೀನ್‌

· 200 ಗ್ರಾಂ ಮೊಸರಿನಲ್ಲಿ 22 ಗ್ರಾಂ ಪ್ರೊಟೀನ್‌

· 2 ಮೊಟ್ಟೆ- 12 ಗ್ರಾಂ

· 100 ಗ್ರಾಂ ಪನೀರ್‌ ಅಥವಾ ತೋಫು- 14-17 ಗ್ರಾಂ

· 1/4 ಕಪ್‌ ಬಾದಾಮಿಯಂಥ ಬೀಜಗಳು- 6 ಗ್ರಾಂ

· ‌29 ಗ್ರಾಂ ಚೀಸ್- 7 ಗ್ರಾಂ

· ಬೇಯಿಸಿದ ರಾಜ್ಮಾ ಅಥವಾ ಚನಾ ಕಾಳುಗಳು- 8.2 ಗ್ರಾಂ

· 1/3 ಅಕ್ಕಿಯಿಂದ ಮಾಡಿದ ಅನ್ನ- 3 ಗ್ರಾಂ

· 100 ಗ್ರಾಂ ಮೀನು- 18-20 ಗ್ರಾಂ

· 1 ಟೇಬಲ್‌ ಚಮಚ ಶೇಂಗಾ ಬೆಣ್ಣೆ- 4 ಗ್ರಾಂ

ಹೀಗೆ ಲೆಕ್ಕ ಹಾಕುವುದರಿಂದ ಮಕ್ಕಳಿಗೆ (ವಯಸ್ಕರಿಗಾದರೂ ಸೈ) ಅಗತ್ಯವಾದಷ್ಟು ಪ್ರೊಟೀನ್‌ ದೊರೆಯುತ್ತಿದೆಯೇ ಎಂಬುದರ ಅಂದಾಜಾಗಬಹುದು. ಆದರೆ ಒಂದು ವಿಷಯದ ಬಗ್ಗೆ ಅರಿವಿರಲಿ, ಆಹಾರದಲ್ಲಿ ಪ್ರೊಟೀನ್‌ ಯಾವುದೋ ಒಂದೇ ಮೂಲದಿಂದ ದೊರೆಯುವಂತೆ ಆಗಬಾರದು. ಉದಾಹರಣೆಗೆ, ಬರೀ ಹಾಲಿನ ಪ್ರೊಟೀನ್‌ ಅಥವಾ ಚಿಕನ್‌ ಪ್ರೊಟೀನ್‌ ಮಾತ್ರವೇ ಊಟದಲ್ಲಿ ಸೇರಿಸಿಕೊಳ್ಳುವುದಲ್ಲ. ಬದಲಿಗೆ, ತೋಫು, ಚನಾ, ರಾಜ್ಮಾ, ಬಾದಾಮಿ, ಶೇಂಗಾ ಬೆಣ್ಣೆ- ಹೀಗೆ ಸಸ್ಯಮೂಲಗಳಿಂದ ದೊರೆಯುವ ಪ್ರೊಟೀನ್‌ ಸಹ ಮಕ್ಕಳಿಗೆ ಬೇಕು. ವಯಸ್ಕರೂ ಈ ಬಗ್ಗೆ ಎಚ್ಚರ ವಹಿಸುವುದೊಳಿತು.

ಈ ಸುದ್ದಿಯನ್ನೂ ಓದಿ: Health Tips: ನಿಮ್ಮ ಬಾಯಿಚಪಲದ ನಿಗ್ರಹ ನಿಮ್ಮ ಕೈಯಲ್ಲಿದೆಯಾ?

ತೀರಾ ಅಗತ್ಯವಿದ್ದರೆ ಮಾತ್ರವೇ ಪ್ರೊಟೀನ್‌ ಪೂರಕಗಳ ಮೊರೆ ಹೋಗಬೇಕು. ಅದನ್ನೂ ಸ್ವಯಂ ವೈದ್ಯ ಮಾಡದೆ ಅಥವಾ ಜಿಮ್‌ನಲ್ಲಿ ಯಾರದ್ದೋ ಮಾತಿಗೆ ಕಿವಿಕೊಡದೆ ವೈದ್ಯರು ಅಥವಾ ಪೌಷ್ಟಿಕಾಂಶ ತಜ್ಞರ ಸಲಹೆಯನ್ನೇ ಕೇಳಬೇಕು. ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ ಅಥವಾ ಹಲವಾರು ದಿನಗಳವರೆಗೆ ಅನಾರೋಗ್ಯದಿಂದ ನರಳಿದ್ದರೆ ಪೂರಕಗಳ ಅಗತ್ಯ ಬೀಳಬಹುದು- ಅದೂ ಸಹ ಕೆಲವೇ ದಿನಗಳ ಮಟ್ಟಿಗೆ. ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳು ನೈಸರ್ಗಿಕ ಆಹಾರದಿಂದ ದೊರೆಯಬೇಕೆ ಹೊರತು ಮಾತ್ರೆ, ಪುಡಿಗಳಿಂದ ಅಲ್ಲ.

ಆರೋಗ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version