ಬೆಂಗಳೂರು: ಅಮೆರಿಕದ ಕ್ಯಾಲಿಫೋರ್ನಿಯಾದದಲ್ಲಿ ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ಬಳಸಿದ್ದ ವ್ಯಕ್ತಿಗೆ ಕ್ಯಾನ್ಸರ್ ಬಂದ ಕಾರಣ, ಆತನಿಗೆ ಕಂಪನಿ 18.8 ದಶಲಕ್ಷ ಡಾಲರ್ (154 ಕೋಟಿ ರೂ.) ಪರಿಹಾರ ನೀಡಬೇಕಾಗಿದೆ. (Johnson & Johnson) ಅಮೆರಿಕದ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಇದರ ಪರಿಣಾಮ ಇಂಥ ಸಾವಿರಾರು ಕೇಸ್‌ಗಳನ್ನು ಎದುರಿಸುತ್ತಿರುವ ಜಾನ್ಸನ್ & ಜಾನ್ಸನ್ ಕಂಪನಿಗೆ ತೀವ್ರ ಹಿನ್ನಡೆ ಉಂಟಾಗಿದೆ.
ಕ್ಯಾಲಿಫೋರ್ನಿಯಾದ ಎಮ್ರಾಯ್ ಹರ್ನಾಂಡೀಸ್ ವಾಲಡೆಜ್ ಎಂಬುವರು ಕಳೆದ ವರ್ಷ ಕ್ಯಾಲಿಫೋರ್ನಿಯಾದ ಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದರು. ಕ್ಯಾನ್ಸರ್ ಬಂದಿರುವುದರಿಂದ ನಷ್ಟ ಪರಿಹಾರವನ್ನು ಅವರು ಕಂಪನಿಯಿಂದ ನಿರೀಕ್ಷಿಸಿದ್ದರು. 24 ವರ್ಷ ವಯಸ್ಸಿನ ಹರ್ನಾಂಡೀಸ್ ಅವರಿಗೆ ಮೆಸೊಥಿಲಿಯಾಮಾ ಎಂಬ (mesothelioma) ಡೆಡ್ಲಿ ಕ್ಯಾನ್ಸರ್ ಆವರಿಸಿತ್ತು. ಹೃದಯದ ಸುತ್ತಮುತ್ತಲಿನ ಕೋಶಗಳಲ್ಲಿ ಈ ಕ್ಯಾನ್ಸರ್ ಬೆಳೆದಿತ್ತು. ಜಾನ್ಸನ್ & ಜಾನ್ಸನ್ ಕಂಪನಿಯ ಬೇಬಿ ಪೌಡರ್ ಅನ್ನು ಅವರು ಬಳಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಕೋರ್ಟ್, ಸಂತ್ರಸ್ತ ಹರ್ನಾಂಡೀಸ್ ಅವರಿಗೆ ಜಾನ್ಸನ್ & ಜಾನ್ಸನ್ ಕಂಪನಿಯು ಮೆಡಿಕಲ್ ಬಿಲ್, ನೋವಿನ ಪರಿಹಾರಕ್ಕೆ 154 ಕೋಟಿ ರೂ. ನೀಡಬೇಕು ಎಂದು ಆದೇಶಿಸಿದೆ. ಈ ಆದೇಶಕ್ಕೆ ಪ್ರತಿಯಾಗಿ ಕಂಪನಿಯ ಉಪಾಧ್ಯಕ್ಷ ಎರಿಕ್ ಹ್ಯಾಸ್, ನೀಡಿರುವ ಹೇಳಿಕೆಯಲ್ಲಿ, ಜಾನ್ಸನ್ ಬೇಬಿ ಪೌಡರ್ ಸುರಕ್ಷಿತ ಎಂಬುದು ಈಗಾಗಲೇ ಹಲವು ದಶಕಗಳ ಪರೀಕ್ಷೆಗಳಿಂದ ಸಾಬೀತಾಗಿದೆ. ಇದು ಕ್ಯಾನ್ಸರ್‌ಗೆ ಕಾರಣವಲ್ಲ ಎಂದು ಹೇಳಿದ್ದಾರೆ.
ಹರ್ನಾಂಡೀಸ್ ಅವರ ತಾಯಿ ಅನ್ನಾ ಕ್ಯಾಮ್‌ಚೊ ಕೂಡ ಕೋರ್ಟ್‌ಗೆ ನೀಡಿರುವ ಹೇಳಿಕೆಯಲ್ಲಿ, ಹರ್ನಾಂಡೀಸ್ ಮಗುವಾಗಿದ್ದಾಗಿನಿಂದ ಜಾನ್ಸನ್ ಬೇಬಿ ಪೌಡರ್ ಅನ್ನು ಬಳಸಲಾಗಿತ್ತು. ಇದು ಕ್ಯಾನ್ಸರ್‌ಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ವಿರುದ್ಧ ಸಾವಿರಾರು ಪ್ರಕರಣಗಳು ವರದಿಯಾಗಿವೆ. ಬೇಬಿ ಪೌಡರ್ ತಯಾರಿಕೆಗೆ ಬಳಸುವ ಆಸ್ಬೆಸ್ಟೋಸ್ ಕ್ಯಾನ್ಸರಿಗೆ ಕಾರಣವಾಗುತ್ತದೆ ಎಂಬ ಆರೋಪವಿದೆ.
ಇದನ್ನೂ ಓದಿ: Baby Powder | ಮಹಾರಾಷ್ಟ್ರದಲ್ಲಿ ಜಾನ್ಸನ್ಸ್ ಬೇಬಿ ಪೌಡರ್ ಉತ್ಪಾದನೆಯ ಲೈಸೆನ್ಸ್ ರದ್ದು
ಜಾನ್ಸನ್ & ಜಾನ್ಸನ್ ಕಂಪನಿಯ ಅಧೀನ ಕಂಪನಿಯಾದ ಎಲ್‌ಟಿಎಲ್ ಮ್ಯಾನೇಜ್‌ಮೆಂಟ್ ಕಳೆದ ಏಪ್ರಿಲ್‌ನಲ್ಲಿ ನ್ಯೂಜೆರ್ಸಿಯಲ್ಲಿ ದಿವಾಳಿ ಪ್ರಕ್ರಿಯೆ ಕೋರಿ ಅರ್ಜಿ ಸಲ್ಲಿಸಿತ್ತು. 38,000 ಕೇಸ್‌ಗಳನ್ನು 8.9 ಶತಕೋಟಿ ಡಾಲರ್ ಕೊಟ್ಟು ( 72,980 ಕೋಟಿ ರೂ.) ಇತ್ಯರ್ಥಪಡಿಸಲು ಪ್ರಸ್ತಾಪ ಮುಂದಿಟ್ಟಿತ್ತು.
ಮಾರಾಟ ಗಣನೀಯ ಕುಸಿತಕ್ಕೀಡಾದ ಪರಿಣಾಮ ಜಾನ್ಸನ್ & ಜಾನ್ಸನ್ ಅಮೆರಿಕ ಮತ್ತು ಕೆನಡಾದಲ್ಲಿ ತನ್ನ ಟಾಲ್ಕ್ ಆಧರಿತ ಬೇಬಿ ಪೌಡರ್ ಮಾರಾಟವನ್ನು ಹಿಂತೆಗೆದುಕೊಂಡಿತ್ತು. ಈ ವರ್ಷಾಂತ್ಯದೊಳಗೆ ಜಗತ್ತಿನಾದ್ಯಂತ ಟಾಲ್ಕಂ ಪೌಡರ್ ಅನ್ನು ತೆಗೆದು ಹಾಕಲು ಕಂಪನಿ ನರ್ಧರಿಸಿದೆ.