ನವದೆಹಲಿ: ಹೆಣ್ಣುಮಕ್ಕಳಿಗೆ ಸೌಂದರ್ಯದ (Beauty) ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಹೆಚ್ಚು ವಯಸ್ಸಾದರೂ 18ರ ಯುವತಿಯಂತೆ ಕಾಣಲು ಹಲವು ಕಸರತ್ತು ಮಾಡುತ್ತಾರೆ. ಇನ್ನು ನಗರ ಹಾಗೂ ಮಹಾನಗರಗಳಲ್ಲಂತೂ ಬ್ಯೂಟಿ ಪಾರ್ಲರ್‌ಗಳಿಗೆ ನಿಯಮಿತವಾಗಿ ತೆರಳಿ ಮೇಕಪ್, ಫೇಶಿಯಲ್ (Facial) ಮಾಡಿಸಿಕೊಳ್ಳುತ್ತಾರೆ. ಆದರೆ, ಅಮೆರಿಕದಲ್ಲಿ ಸ್ಪಾಗಳಲ್ಲಿ ಫೇಶಿಯಲ್ ಮಾಡಿಸಿಕೊಂಡ ಮೂವರು ಮಹಿಳೆಯರಿಗೆ ಎಚ್‌ಐವಿ ಸೋಂಕು (HIV) ತಗುಲಿದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ವ್ಯಾಂಪೈರ್ ಫೇಶಿಯಲ್ (Vampire Facial) ಮಾಡಿಸಿಕೊಂಡ ಕಾರಣ ಇವರಿಗೆ ಎಚ್‌ಐವಿ ತಗುಲಿದೆ ಎಂಬ ಮಾಹಿತಿಯು ಅಧ್ಯಯನ ವರದಿಯಿಂದ ಲಭ್ಯವಾಗಿದೆ.
ಅಮೆರಿಕದ ನ್ಯೂ ಮೆಕ್ಸಿಕೋ ಸ್ಪಾದಲ್ಲಿ ಕಾಸ್ಮೆಟಿಕ್ ಇಂಜೆಕ್ಷನ್ ಪ್ರೊಸೀಜರ್ ಮೂಲಕ ನಡೆಸುವ ವ್ಯಾಂಪೈರ್ ಫೇಶಿಯಲ್ ಮಾಡಿಸಿಕೊಂಡ ಮೂವರಿಗೆ ಎಚ್‌ಐವಿ ತಗುಲಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಮಾಹಿತಿ ನೀಡಿದೆ. ವ್ಯಾಂಪೈರ್ ಫೇಶಿಯಲ್‌ಅನ್ನು ಕಡಿಮೆ ಬೆಲೆಗೆ ಮಾಡುವುದರಿಂದ ಹೆಚ್ಚಿನ ಮಹಿಳೆಯರು, ಅದರಲ್ಲೂ 40 ವರ್ಷ ದಾಟಿದವರು ಹೆಚ್ಚು ಮಾಡಿಸಿಕೊಳ್ಳುತ್ತಾರೆ. ಆದರೆ, ಇದು ಈಗ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ.
ಏನಿದು ವ್ಯಾಂಪೈರ್ ಫೇಶಿಯಲ್?
ವ್ಯಾಂಪೈರ್ ಫೇಶಿಯಲ್‌ಅನ್ನು ರಕ್ತಪಿಶಾಚಿ ಫೇಶಿಯಲ್ ಎಂದೂ ಕರೆಯಲಾಗುತ್ತದೆ. ಸ್ಪಾಗಳಲ್ಲಿ ಸೂಜಿ ಅಥವಾ ಇಂಜೆಕ್ಷನ್ ಮೂಲಕ ಮಹಿಳೆಯರ ಮುಖದ ಮೇಲಿನ ಸುಕ್ಕು ಮಾಯಮಾಡುವುದು, ಅವರು ಯುವತಿಯರಂತೆ ಮಾಡುವ ಸೌಂದರ್ಯ ವರ್ಧಕ ವಿಧಾನ ಇದಾಗಿದೆ. ಇದನ್ನು ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮಾ (PRP) ಅಥವಾ ಪ್ಲೇಟ್‌ಲೆಟ್ ರಿಚ್ ಫೈಬ್ರಿನ್ (PRF) ಎಂದು ಕೂಡ ಕರೆಯಲಾಗುತ್ತದೆ.
ವಯಸ್ಸಾದ ಮಹಿಳೆಯರು, ಸುಕ್ಕು ಗಟ್ಟಿದ ಚರ್ಮದ ಕಾಂತೀಯತೆಯನ್ನು ಸೂಜಿಯ ಮೂಲಕವೇ ಹೆಚ್ಚಿಸುವುದು ಇದರ ಪ್ರಮುಖ ವಿಧಾನವಾಗಿದೆ. ಚರ್ಮದಲ್ಲಿ ಕಾಲಜಿನ್ ಉತ್ಪಾದನೆ ಹೆಚ್ಚಿಸಿ, ಚರ್ಮವು ಹೊಳೆಯುವಂತೆ ಮಾಡುವುದೇ ರಕ್ತಪಿಶಾಚಿ ಫೇಶಿಯಲ್ ಆಗಿದೆ. ಇದನ್ನು ಭಾರತದ ಪ್ರಮುಖ ನಗರಗಳು ಸೇರಿ ಜಗತ್ತಿನಾದ್ಯಂತ ಸ್ಪಾಗಳಲ್ಲಿ ಮಾಡುತ್ತಾರೆ. ಆದರೆ, ಈ ಫೇಶಿಯಲ್ ಈಗ ಮಹಿಳೆಯರ ಪ್ರಾಣಕ್ಕೇ ಕುತ್ತು ತರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಹೆಣ್ಣುಮಕ್ಕಳ ಕೈಗಳಿಂದ ರಕ್ತವನ್ನು ತೆಗೆದು, ಅದರಿಂದ ಪ್ಲೇಟ್‌ಲೆಟ್‌ಗಳನ್ನು ವಿಗಂಡಣೆ ಮಾಡಿ, ಆ ರಕ್ತವನ್ನು ಸಣ್ಣ ಸೂಜಿಯ ಮೂಲಕ ಮುಖಕ್ಕೆ ಅಳವಡಿಸುತ್ತಾರೆ. ಇದರಿಂದ ಚರ್ಮವು ಹೊಳೆಯುತ್ತದೆ. ಸುಕ್ಕುಗಳು ಮಾಯವಾಗುತ್ತಿವೆ. ಇದು ಸುಲಭ ಹಾಗೂ ಅಷ್ಟೇನೂ ಹೆಚ್ಚಿನ ಹಣ ಖರ್ಚಾಗದ ಕಾರಣ ಜಾಸ್ತಿ ಮಹಿಳೆಯರು ಈ ಫೇಶಿಯಲ್ ಮೊರೆಹೋಗುತ್ತಿದ್ದಾರೆ ಎನ್ನಲಾಗಿದೆ. ಇಂತಹ ಫೇಶಿಯಲ್ ಮಾಡಿಸಿಕೊಳ್ಳುವ ಮೊದಲು ಹೆಣ್ಣುಮಕ್ಕಳು ಎಚ್ಚರಿಕೆಯಿಂದ ಇರಬೇಕು ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: Sweet Potatoes: ಗೆಣಸಿಗೆ ಮಧುಮೇಹ ನಿಯಂತ್ರಿಸುವ, ಕ್ಯಾನ್ಸರ್ ತಡೆಯುವ ಸಾಮರ್ಥ್ಯವಿದೆ!