Site icon Vistara News

5:2 Diet: ಏನಿದು 5:2 ಮಧ್ಯಂತರ ಉಪವಾಸ? ಇದರ ಪ್ರಯೋಜನಗಳೇನು?

5:2 Diet

ತೂಕ ಇಳಿಕೆಯ ಭರಾಟೆಯಲ್ಲಿ ಯಾರು ಏನು ಸಲಹೆಯನ್ನು ಕೊಟ್ಟರೂ ಕೇಳಬೇಕೆನಿಸುತ್ತದೆ. ಅದು ಒಳ್ಳೆಯದೇ, ಕೆಟ್ಟದ್ದೇ, ಇದರಿಂದ ಆರೋಗ್ಯ ಏನಾಗುತ್ತದೆ- ಇಂಥ ವಿಷಯಗಳನ್ನು ಅಷ್ಟಾಗಿ ಯೋಚಿಸುವುದಿಲ್ಲ. ತೂಕ ಇಳಿಸುವಾಗ ದೇಹದ ಸ್ವಾಸ್ಥ್ಯ ಕ್ಷೀಣಿಸದಂತೆ ನೋಡಿಕೊಳ್ಳುವುದು ಮುಖ್ಯ. ಅಂದರೆ, ಊಟ ಬಿಟ್ಟು ಉಪವಾಸ ಮಾಡುವುದು, ಯಾವುದೋ ಒಂದೇ ರೀತಿಯ ಆಹಾರ ತಿನ್ನುವುದು ಮುಂತಾದ ಹುಚ್ಚು ಖಯಾಲಿಗಳು ದೇಹವನ್ನು ಅಪಾಯಕ್ಕೆ ದೂಡುವಂಥವು. ಈ ಎಲ್ಲವುಗಳ ಹಿನ್ನೆಲೆಯಲ್ಲಿ, ಮಧ್ಯಂತರ ಉಪವಾಸಕ್ಕೆ ಪೋಷಕಾಂಶ ತಜ್ಞರು ಹೆಚ್ಚಿನ ಅಂಕಗಳನ್ನು ನೀಡುತ್ತಾರೆ. ಅದೇ ಹಿನ್ನೆಲೆಯಲ್ಲಿ ಜಾರಿಯಲ್ಲಿ ಇರುವಂಥದ್ದು 5:2 (5:2 Diet) ಉಪವಾಸ.

ಏನಿದು?

ಇದು ಸಹ ಮಧ್ಯಂತರ ಉಪವಾಸದ ಒಂದು ಕ್ರಮ. ಇದನ್ನು ತಿಳಿಯುವ ಮುನ್ನ ಮಧ್ಯಂತರ ಉಪವಾಸ ಎಂದರೇನು ಎಂಬುದನ್ನು ತಿಳಿಯೋಣ. ಈ ಕ್ರಮದಲ್ಲಿ ಇಂಥದ್ದೇ ಆಹಾರಗಳನ್ನು ತಿನ್ನಬೇಕೆಂಬ ಕಟ್ಟುನಿಟ್ಟಿಲ್ಲ. ಬದಲಿಗೆ ಆಹಾರ ಸೇವಿಸುವ ಹೊತ್ತಿನಲ್ಲಿ ವ್ಯತ್ಯಾಸ ಮಾಡಲಾಗುತ್ತದೆ. ನಮ್ಮ ಜೀರ್ಣಾಂಗಗಳು ಅವಿಶ್ರಾಂತವಾಗಿ ದುಡಿಯುವಂತೆ ಹೊಟ್ಟೆಗೆ ಆಹಾರ ನೀಡುತ್ತಿಲೇ ಇದ್ದರೆ, ದೇಹದ ಚಯಾಪಚಯ ವ್ಯವಸ್ಥೆ ಕ್ರಮೇಣ ಕುಸಿಯುತ್ತವೆ. ಹೀಗಾದರೆ ತೂಕ, ಬೊಜ್ಜು ಇಳಿಸುವುದು ಅಸಾಧ್ಯ. ಬದಲಿಗೆ, ನಿಗದಿತವಾಗಿ ಹೊಟ್ಟೆಯನ್ನು ಖಾಲಿ ಬಿಡುವುದು ಮತ್ತು ಆಹಾರ ಸೇವನೆಯ ಸಂದರ್ಭದಲ್ಲಿ ಸಮತೋಲನೆಯತ್ತ ಗಮನ ನೀಡುವುದು. ಉದಾ, ಒಂದು ಊಟದಿಂದ ಇನ್ನೊಂದು ಊಟಕ್ಕೆ 4 ತಾಸುಗಳ ಬಿಡುವು ಸಾಮಾನ್ಯವಾಗಿದ್ದರೆ, ಅದನ್ನು 6 ತಾಸುಗಳಿಗೆ, ನಂತರ 8, ಆಮೇಲೆ 12 ತಾಸುಗಳಿಗೆ ಹೆಚ್ಚಿಸುವುದು… ಹೀಗೆ.

5:2 ಎಂದರೆ…:

ಇದೇ ಕ್ರಮದ ಮುಂದುವರಿಕೆಯಾಗಿ 5:2 ಉಪವಾಸ ಚಾಲ್ತಿಯಲ್ಲಿದೆ. ಅಂದರೆ ವಾರದಲ್ಲಿ 5 ದಿನ ಸಾಮಾನ್ಯ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು; 2 ದಿನ ಹೊಟ್ಟೆಗೆ ಕೊಂಚ ಬಿಡುವು ನೀಡುವುದು. ಎರಡು ದಿನಗಳನ್ನು ವಾರದಲ್ಲಿ ಬೇಕಾದಂತೆ ಇರಿಸಿಕೊಳ್ಳಬಹುದು. ಅಂದರೆ ಒಂದು ಭಾನುವಾರ, ಇನ್ನೊಂದು ಬುಧವಾರ… ಹೀಗೆ. ಆ ದಿನಗಳಲ್ಲೂ ಪೂರ್ಣ ಉಪವಾಸವಲ್ಲ, ಮಹಿಳೆಯರು 500-600 ಕ್ಯಾಲರಿಯಷ್ಟು ಆಹಾರ ಮತ್ತು ಪುರುಷರು 600-800 ಕ್ಯಾಲರಿಯಷ್ಟು ಆಹಾರ ಸೇವಿಸಬಹುದು. ಉಳಿದ ಐದು ದಿನಗಳಲ್ಲಿ ಇಡೀ ಧಾನ್ಯಗಳು, ಸಲಾಡ್‌ಗಳು, ಹಣ್ಣುಗಳು, ಡೇರಿ ಉತ್ಪನ್ನಗಳು, ಕಾಳು-ಬೇಳೆಗಳು, ಬೀಜಗಳು, ಮೀನು-ಮೊಟ್ಟೆಯಂಥವು ಹೊಟ್ಟೆ ಸೇರಬೇಕು. ಅಲ್ಲಿಯೂ ಸಂಸ್ಕರಿತ ಪಿಷ್ಟಗಳು, ಸಕ್ಕರೆ, ಕೆಟ್ಟ ಕೊಬ್ಬುಗಳನ್ನೆಲ್ಲ ತಿನ್ನುವುದಕ್ಕೆ ಅವಕಾಶವಿಲ್ಲ. ಹಾಗಾದರೆ ಉಪವಾಸದ ಎರಡು ದಿನಗಳಲ್ಲಿ ಏನು ತಿನ್ನಬಹುದು? ಬೇಕಾದಷ್ಟು ಹಸಿ ತರಕಾರಿಗಳು, ಕೋಸಂಬರಿ, ಸಿಹಿ ಸೇರಿಲ್ಲದ ಯೋಗರ್ಟ್‌, ಮನೆಯಲ್ಲಿ ಮಾಡಿದ ಮೊಸರು-ಮಜ್ಜಿಗೆ, ಬೇಯಿಸಿದ ಮೊಟ್ಟೆ, ತರಕಾರಿ ಸೂಪ್‌ಗಳು, ಸ್ವಲ್ಪ ಪ್ರಮಾಣದ ಧಾನ್ಯ- ಅಂದರೆ ಒಂದು ಚಪಾತಿ ಅಥವಾ ಸಣ್ಣ ಕಪ್‌ನಲ್ಲಿ ಅನ್ನ- ಇಂಥವುಗಳಲ್ಲಿ ಒಂದೆರಡನ್ನು ಆಯ್ದುಕೊಳ್ಳಬಹುದು.

ಲಾಭಗಳೇನು?

ಯಾವುದೇ ಕಾರಣಕ್ಕೆ ಇಂಥ ಮಧ್ಯಂತರ ಉಪವಾಸಗಳನ್ನು ಮಾಡುತ್ತಿದ್ದರೂ, ಊಟ ಮಾಡುವಾಗ ಆಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಮಹತ್ವದ್ದು. ಉಪವಾಸದ ಹೆಸರಿನಲ್ಲಿ ಶರೀರವನ್ನು ನಿಶ್ಶಕ್ತಗೊಳಿಸುವುದಲ್ಲ; ಬದಲಿಗೆ, ಚೈತನ್ಯವನ್ನು ಹೆಚ್ಚಿಸಿಕೊಳ್ಳುವುದು ನಮ್ಮ ಉದ್ದೇಶ. ತೂಕ ಇಳಿಸುವವರು ಇದನ್ನು ಹೆಚ್ಚಾಗಿ ನೆಚ್ಚಿಕೊಳ್ಳುತ್ತಿರುವುದರಿಂದ, ದೇಹದ ಕೊಬ್ಬು ಮಾತ್ರವೇ ಕರಗಬೇಕೆ ಹೊರತು, ಚರ್ಮ ಸುಕ್ಕಾಗುವುದು, ಕೂದಲುದುರುವುದು ಮುಂತಾದ ಸಮಸ್ಯೆಗಳು ಹೆಚ್ಚುವರಿಯಾಗಿ ಬರಬಾರದು.

ಇದನ್ನೂ ಓದಿ: Food Tips Kannada: ಇನ್‌ಸ್ಟಂಟ್‌ ನೂಡಲ್ಸ್‌ ತಿಂದರೆ ಆರೋಗ್ಯಕ್ಕೆ ತೊಂದರೆ ಇದೆಯೆ?

ರೋಗಗಳು ದೂರ

ಈಗಾಗಲೇ ಮಧುಮೇಹ ಇರುವವರು ಉಪವಾಸ ಮಾಡುವಂತಿಲ್ಲ. ಹಾಗಾಗಿ ಮಧ್ಯಂತರ ಉಪವಾಸಗಳು ಅವರಿಗೆ ಹೇಳಿಸಿದ್ದಲ್ಲ. ಆದರೆ ಇಂಥ ಕ್ರಮಗಳನ್ನು ಅನುಸರಿಸುವುದರಿಂದ, ಆರೋಗ್ಯವಂತರಿಗೆ ಮಧುಮೇಹ ಬರುವಂಥ ಸಾಧ್ಯತೆಗಳು ಕಡಿಮೆ ಎನ್ನುತ್ತವೆ ಅಧ್ಯಯನಗಳು. ಕಾರಣ, ತನಗೆ ದೊರೆಯುವ ಗ್ಲೂಕೋಸ್‌ ಮತ್ತು ಉತ್ಪತ್ತಿಯಾಗುವ ಇನ್‌ಸುಲಿನ್‌ ಪ್ರಮಾಣಗಳನ್ನು ಶರೀರ ಸಮರ್ಥವಾಗಿ ನಿಭಾಯಿಸುತ್ತದೆ.
ಮಧ್ಯಂತರ ಉಪವಾಸಗಳು ರಕ್ತದೊತ್ತಡವನ್ನು ನಿಯಂತ್ರಿಸಿ, ಶರೀರದಲ್ಲಿರುವ ಕೊಬ್ಬು ಕರಗಿಸಬಲ್ಲವು. ಇವೆರಡೂ ಅಂಶಗಳು ಹೃದಯದ ಆರೋಗ್ಯಕ್ಕೆ ಪೂರಕವಾದಂಥವು. ಆಹಾರ ತೆಗೆದುಕೊಳ್ಳುವ ಸಮಯದಲ್ಲಿ ಆರೋಗ್ಯಕರ ಕೊಬ್ಬುಗಳನ್ನು ಸೇವಿಸಿದರೆ, ದೇಹದ ಮೇಲೆ ಅತ್ಯಂತ ಒಳ್ಳೆಯ ಪರಿಣಾಮವನ್ನು ಈ ಉಪವಾಸದ ಕ್ರಮ ನೀಡಬಲ್ಲದು.

Exit mobile version