Site icon Vistara News

Anchor Aparna: ಅಪರ್ಣಾ ಸಿಗರೇಟ್‌ ಸೇದುವವರಲ್ಲ, ಆದರೂ ಏಕೆ ಶ್ವಾಸಕೋಶದ ಕ್ಯಾನ್ಸರ್‌ಗೆ ಬಲಿಯಾದರು?

Anchor Aparna

ಖ್ಯಾತ ನಿರೂಪಕಿ, ನಟಿ ಅಪರ್ಣಾ (Anchor Aparna) ಅವರ ಸಾವು ಬಹಳಷ್ಟು ತಲ್ಲಣಗಳನ್ನು ಹುಟ್ಟುಹಾಕಿದೆ. ಧೂಮಪಾನಿಗಳಿಗೆ ಮತ್ತು ತಂಬಾಕು ಚಟವಿರುವವರಿಗೆ ಮಾತ್ರವೇ ಶ್ವಾಸಕೋಶದ ಕ್ಯಾನ್ಸರ್‌ ಬರುವಂಥದ್ದು, ಜೀವನಶೈಲಿ ಚೆನ್ನಾಗಿದ್ದರೆ ಇಂಥವೆಲ್ಲ ಹತ್ತಿರ ಸುಳಿಯುವುದಿಲ್ಲ ಎಂಬ ವಿಶ್ವಾಸದ ಮೇಲೆ ಅಪರ್ಣಾ ಅವರ ನಿರ್ಗಮನ ದೊಡ್ಡ ಬರೆ ಹಾಕಿದೆ. ದೇಶದೆಲ್ಲೆಡೆ ಶ್ವಾಸಕೋಶದ ಕ್ಯಾನ್ಸರ್‌ ಪ್ರಮಾಣ ತೀವ್ರಗತಿಯಲ್ಲಿ ಏರುತ್ತಿರುವುದು ಅತ್ಯಂತ ಆತಂಕದ ಸಂಗತಿ. ಇತ್ತೀಚಿನ ಕೆಲವು ಅ‍ಧ್ಯಯನಗಳು ಇನ್ನೂ ವಿಚಿತ್ರ ಸಂಗತಿಗಳನ್ನು ಹೊರಗೆಡವುತ್ತಿವೆ. ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಸಾವನ್ನಪ್ಪುತ್ತಿರುವವರಲ್ಲಿ ಬಹುಪಾಲು ಜನ ಸಿಗರೇಟ್‌ ಸೇದುವವರೇ ಅಲ್ಲ, ತಂಬಾಕಿನ ಯಾವ ಚಟವೂ ಇಲ್ಲದವರು! ಹೀಗೇಕೆ? ಎಲ್ಲೋ ಏನೋ ತೀವ್ರವಾಗಿ ತಪ್ಪುತ್ತಿದೆಯಲ್ಲವೇ?
ಜಗತ್ತಿನ ಉಳಿದೆಲ್ಲ ಕಡೆಗಳಿಗಿಂತ 10 ವರ್ಷ ಮುಂಚಿತವಾಗಿ ಪುಪ್ಪುಸದ ಕ್ಯಾನ್ಸರ್‌ ಭಾರತದಲ್ಲಿ ದಾಳಿ ಮಾಡುತ್ತಿದೆ. ಅಂದರೆ, ಪಶ್ಚಿಮ ದೇಶಗಳಲ್ಲಿ 55 ವರ್ಷಗಳ ನಂತರ ಈ ರೋಗ ಕಂಡುಬಂದರೆ, ನಮ್ಮಲ್ಲಿ ಇನ್ನೂ 10 ವರ್ಷ ಮೊದಲು. ಇಂಥ ಎಲ್ಲ ನತದೃಷ್ಟರನ್ನು ಬಲಿ ತೆಗೆದುಕೊಳ್ಳುತ್ತಿರುವುದು ಮುಗಿಲು ಮುಟ್ಟಿರುವ ವಾಯು ಮಾಲಿನ್ಯ. ವಿಶ್ವ ವಾಯು ಗುಣಮಟ್ಟದ ವರದಿಯನ್ನು ಆಧರಿಸಿ ಹೇಳುವುದಾದರೆ, ವಿಶ್ವದ ೪೦ ಭಯಂಕರ ಮಲಿನ ನಗರಗಳಲ್ಲಿ 37 ನಗರಗಳು ಇರುವುದು ದಕ್ಷಿಣ ಏಷ್ಯಾದಲ್ಲಿ. ಈ ಪೈಕಿ ನಾಲ್ಕು ಅತ್ಯಂತ ಮಲಿನ ನಗರಗಳು ಭಾರತದಲ್ಲೇ ಇವೆ. ಹಾಗಾಗಿ ಬೀಡಿ, ಸಿಗರೇಟು ಸೇದದಿದ್ದರೂ ಇತರರು ಸ್ಮೋಕಿಂಗ್‌ ಮಾಡಿದ ಹೊಗೆ ನಮಗರಿವಿಲ್ಲದೆ ನಮ್ಮ ಉಸಿರಿನೊಳಗೆ ಬಂದರೂ ಅಥವಾ ಸಂಚಾರ ದಟ್ಟಣೆಯಲ್ಲಿ ಮಾಲಿನ್ಯಕಾರಕ ಹೊಗೆ ಸೇವಿಸಿದರೂ ಶ್ವಾಸಕೋಶದ ಕ್ಯಾನ್ಸರ್‌ ಬರುವ ಸಾಧ್ಯತೆ ಇರುತ್ತದೆ. ಚೀನಾ, ಭಾರತ, ಇಂಡೋನೇಷ್ಯಾ, ಫಿಲಿಪ್ಪೀನ್ಸ್‌ ಮತ್ತು ಥಾಯ್ಲೆಂಡ್‌ ದೇಶಗಳು 2020ರಲ್ಲಿ ಅತಿ ಪ್ರಮಾಣದ ಶ್ವಾಸಕೋಶದ ಕ್ಯಾನ್ಸರ್‌ ದಾಖಲಿಸಿವೆ. ಸಾರ್ವಜನಿಕ ಆರೋಗ್ಯ ಕ್ಷೇತ್ರ ಈಗಾಗಲೇ ಸಿಕ್ಕಾಪಟ್ಟೆ ಒತ್ತಡದಲ್ಲಿದ್ದು, ಇವೆಲ್ಲವುಗಳ ಜೊತೆಗೆ ವಾಯು ಮಾಲಿನ್ಯದಿಂದ ಆಗುತ್ತಿರುವ ಸಮಸ್ಯೆಗಳು ಆರೋಗ್ಯವನ್ನು ಪಾತಾಳಕ್ಕೆ ದೂಡುತ್ತಿವೆ. ಭಾರತದಲ್ಲಿ, 1990ರಲ್ಲಿ ಪುಪ್ಪುಸ ಕ್ಯಾನ್ಸರ್‌ನ ಪ್ರಮಾಣ 6.2 %ರಷ್ಟಿತ್ತು. 2019ರಲ್ಲಿ ಈ ಪ್ರಮಾಣ 7.7%ಕ್ಕೇರಿದೆ. 2025ರ ವೇಳೆಗೆ ನಗರ ಪ್ರದೇಶಗಳಲ್ಲಿ ಇನ್ನಷ್ಟು ಹೆಚ್ಚುವ ಆತಂಕವಿದೆ. ಆನುವಂಶಿ ಕಾರಣಗಳು ಸಹ ಇದಕ್ಕೆ ದೊಡ್ಡ ಮಟ್ಟದಲ್ಲಿ ಕೊಡಗೆಯನ್ನು ನೀಡುತ್ತಿವೆ.

ಸುರಕ್ಷಿತವಾಗಿರುವುದು ಹೇಗೆ?

ವಿಶ್ವವೆಲ್ಲ ಹೊಗೆಯಲ್ಲೇ ಮುಚ್ಚಿರುವಾಗ, ಮಾಲಿನ್ಯದಲ್ಲೇ ಹುದುಗಿರುವಾಗ ಸುರಕ್ಷಿತವಾಗಿರುವುದು ಹೇಗೆ? ಧೂಮಪಾನ ಮತ್ತು ತಂಬಾಕು ಇಂದಿಗೂ ಪುಪ್ಪುಸ ಕ್ಯಾನ್ಸರ್‌ನ ಕಾರಣಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಆದರೆ ಯಾವುದೇ ರೀತಿಯ ಹೊಗೆಯಿಂದ ದೂರವಾಗುವುದು ಹೇಗೆ ಎನ್ನುವುದು ಮಾತ್ರ ಯಕ್ಷಪ್ರಶ್ನೆ. ಮನೆಯೊಳಗೆ ಏರ್‌ ಪ್ಯೂರಿಫಯರ್‌ ಇರಿಸಿಕೊಳ್ಳಲು ಪ್ರಯತ್ನಿಸಿ. ನೆಲದಿಂದ ಮೇಲೇಳುವ ರೇಡಾನ್‌ ಎನ್ನುವ ರೇಡಿಯೋಆಕ್ಟಿವ್‌ ಅನಿಲದ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಇದು ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಆಸ್ಬೆಸ್ಟೋಸ್‌, ಆರ್ಸೆನಿಕ್‌, ಯುರೇನಿಯಂ, ವಾಹನಗಳ ಹೊಗೆ, ಸಿಲಿಕಾ, ಕಲ್ಲಿದ್ದಲ ಉತ್ಪನ್ನಗಳು ಮತ್ತು ಕೆಲವು ಕೈಗಾರಿಕಾ ರಾಸಾಯನಿಕಗಳು ಕ್ಯಾನ್ಸರ್‌ಕಾರಕಗಳ ಪಟ್ಟಿಯಲ್ಲಿವೆ. ಇವುಗಳಿಂದ ದೂರವಿರಿ.

ಇದನ್ನ ಓದಿ: What Is Stage 3 Breast Cancer: ಮೂರನೇ ಹಂತದ ಸ್ತನ ಕ್ಯಾನ್ಸರ್‌ ಎಂದರೇನು? ಇದರ ಲಕ್ಷಣಗಳೇನು?

ಲಕ್ಷಣಗಳೇನು?

ಈ ರೋಗ ಆರಂಭಿಕ ಹಂತದಲ್ಲಿ ಪತ್ತೆಯಾಗುವುದು ಕಡಿಮೆಯೇ. ಮೂರು ವಾರಗಳಿಂದ ವಾಸಿಯಾಗದ ಕೆಮ್ಮು, ಉಸಿರಾಟ್‌ ತೊಂದರೆ, ಕೆಮ್ಮಿನಲ್ಲಿ ರಕ್ತ, ಎದೆನೋವು, ಕಾರಣವಿಲ್ಲದೆ ತೂಕ ಇಳಿಯುವುದು, ಮುಗಿಯದ ಸುಸ್ತು, ಆಯಾಸ, ಮೂಳೆ-ಕೀಲುಗಳಲ್ಲಿ ನೋವು, ತೀವ್ರ ಉರಿಯೂತ, ಮುಖದ ಪಾರ್ಶ್ವವಾಯು ಮುಂತಾದ ಯಾವುದೇ ಲಕ್ಷಣಗಳು ಇದ್ದರೂ ತುರ್ತಾಗಿ ವೈದ್ಯರಲ್ಲಿಗೆ ಧಾವಿಸಿ. ನಿತ್ಯವೂ ವ್ಯಾಯಾಮ ಮಾಡಿ. ಆರೋಗ್ಯಪೂರ್ಣ ಜೀವನಶೈಲಿಯನ್ನು ರೂಢಿಸಿಕೊಳ್ಳಿ.

Exit mobile version