ರಾಜ್ಮಾ ಹಲವರ ನಿತ್ಯದ ಆಹಾರ. ಮುಖ್ಯವಾಗಿ ಉತ್ತರ ಭಾರತದಲ್ಲಿ ಮಧ್ಯಾಹ್ನದೂಟಕ್ಕೆ ರಾಜ್ಮಾ ಹಾಗೂ ಅನ್ನ ಸಾಮಾನ್ಯ. ಅನ್ನದ ಜೊತೆಗಷ್ಟೇ ಅಲ್ಲ, ಚಪಾತಿಯ ಜೊತೆಗೂ ಒಳ್ಳೆಯ ಕಾಂಬಿನೇಶನ್ ಆಗಿರುವ ರಾಜ್ಮಾವನ್ನು ಉಂಡರೆ ಕೆಲವರಿಗೆ ಅತೀವ ಸಮಸ್ಯೆ. ಹೊಟ್ಟೆಯುಬ್ಬರ, ಗ್ಯಾಸ್ ತೊಂದರೆ, ಎದೆಯುರಿ ಇತ್ಯಾದಿಗಳು ಪಕ್ಕಾ. ಆದರೆ, ರಾಜ್ಮಾ ಬಹಳ ರುಚಿ. ಜೊತೆಗೆ ಪ್ರೊಟೀನ್‌ಯುಕ್ತ ಸಾಕಷ್ಟು ಪೋಷಕಾಂಶಗಳನ್ನೂ ಹೊಂದಿದ ಆಹಾರ ಎಂಬುದರಲ್ಲಿ ಎರಡು ಮಾತೇ ಇಲ್ಲ. ಹಾಗಾದರೆ ರಾಜ್ಮಾದಿಂದ ಈ ಸಮಸ್ಯೆಗಳು ಬರದಂತೆ ತಡೆಯುವುದು ಹೇಗೆ? ಯಾವ ಸಮಸ್ಯೆಯೂ ಆಗದಂತೆ ಮಾಡಲು ಯಾವ ಉಪಾಯವೂ ಇಲ್ಲವೇ ಎಂದು ನೀವು ಕೇಳಬಹುದು. ಖಂಡಿತಾ ಇದೆ. ರಾಜ್ಮಾದ ಅಡಿಗೆ ಮಾಡುವಾಗಲೇ ಕೆಲವು ಅಗತ್ಯ ಕ್ರಮಗಳನ್ನು ಕೈಗೊಂಡರೆ, ಖಂಡಿತ ನಿಮಗೆ ಗ್ಯಾಸ್ ಸಮಸ್ಯೆ ಆಗದು. ಹೊಟ್ಟೆಯುಬ್ಬರ, ಎದೆಯುರಿ ಕಾಡದು. ಕೇವಲ ರಾಜ್ಮಾ ಅಂತಲ್ಲ, ಹೆಚ್ಚು ಗ್ಯಾಸ್ ತೊಂದರೆ ನೀಡುವ ಕಪ್ಪು ಹಾಗೂ ಬಿಳಿ ಚೆನ್ನಾ, ತೊಗರಿ ಬೇಳೆ, ಬಟಾಣಿ ಮತ್ತಿತರ ಕಾಳುಗಳ ಅಡುಗೆ ಮಾಡುವಾಗಲೂ ಈ ಕ್ರಮ (healthy cooking tips) ಅನುಸರಿಸಬಹುದು.
ಸಮಸ್ಯೆ ಏನು?
ರಾಜ್ಮಾ ಉಂಡರೆ ಈ ಸಮಸ್ಯೆ ಕಾಡುವುದೇಕೆ ಗೊತ್ತೇ? ರಾಜ್ಮಾದಲ್ಲಿ ಲೆಕ್ಟಿನ್ ಇದೆ. ಲೆಕ್ಟಿನ್‌ಗಳು ಬೊಜ್ಜು, ಉರಿಯೂತ, ಜೀರ್ಣಕ್ರಿಯೆ ಸಮಸ್ಯೆಗಳು ಮತ್ತಿತರ ತೊಂದರೆಗಳಿಗೆ ಕಾರಣವಾಗುತ್ತದೆ. ಇದು ಎಲ್ಲ ಬಗೆಯ ಬೀನ್‌ಗಳಲ್ಲೂ ಇವೆ. ಕಿಡ್ನಿ ಬೀನ್, ಬ್ಲ್ಯಾಕ್ ಚೆನ್ನಾ, ಬಿಳಿ ಚೆನ್ನಾ, ಪಿಂಟೋ ಬೀನ್ ಹೀಗೆ ಎಲ್ಲ ಬಗೆಯ ಬೀನ್‌ಗಳೂ ಲೆಕ್ಟಿನ್ ಹೊಂದಿರುವುದರಿಂದ ಈ ಸಮಸ್ಯೆಯನ್ನು ತೊಂದೊಡ್ಡುತ್ತವೆ. ಲೆಕ್ಟಿನ್ ಈ ಕಾಳುಗಳ ಹೊರಮೈಯಲ್ಲಿ ಇರುವುದರಿಂದ ಹಾಗೂ ಇದು ನೀರಿನಲ್ಲಿ ಕರಗಬಲ್ಲವುಗಳಾಗಿರುವುದರಿಂದ ನೀರಿನ ಮೂಲಕ ಇವನ್ನು ತೊಳೆದುಹೋಗುವಂತೆಯೂ ಮಾಡಬಹುದು. ಇದನ್ನು ತೆಗೆಯದಿದ್ದರೆ, ಈ ಬೀನ್‌ಗಳಲ್ಲಿರುವ ಖನಿಜಾಂಶಗಳಾದ ಕ್ಯಾಲ್ಶಿಯಂ, ಕಬ್ಬಿಣಾಂಶ, ಪಾಸ್ಪರಸ್, ಝಿಂಕ್ ಇವೆಲ್ಲವೂ ಸಮರ್ಪಕವಾಗಿ ದೇಹದಲ್ಲಿ ಹೀರಿಕೆಯಾಗುವುದಿಲ್ಲ. ಆದರೆ, ಇಂತಹ ಕಾಳುಗಳನ್ನು ಬಹಳ ಕಾಲ ನೀರಿನಲ್ಲಿ ನೆನೆಸಿ ಅಡುಗೆ ಮಾಡುವುದರಿಂದ ಇವು ಹೊರಹೋಗಲ್ಪಡುತ್ತವೆ. ಆದರೂ ಕೆಲವೊಮ್ಮೆ ಲೆಕ್ಟಿನ್ ಇಂತಹುಗಳಲ್ಲಿ ಉಳಿದುಬಿಡುವುದುಂಟು. ಅಂತಹ ಸಂದರ್ಭಗಳಲ್ಲಿ ಕೆಲವು ಕ್ರಮಗಳ ಮೂಲಕ ಇದರ ಶಕ್ತಿಯನ್ನು ಇಲ್ಲವಾಗಿಸಬಹುದು. ಬನ್ನಿ, ಲೆಕ್ಟಿನ್ ಅನ್ನು ಯಾವೆಲ್ಲ ಕ್ರದಿಂದ ನಮ್ಮ ದೇಹದ ಮೇಲೆ ಪರಿಣಾಮ ಬೀರದಂತೆ ತಡೆಯುವ ಮೂಲಕ ಗ್ಯಾಸ್, ಹೊಟ್ಟೆಯುಬ್ಬರವಾಗದಂತೆ ನೋಡಿಕೊಳ್ಳಬಹುದು ಎಂಬುದನ್ನು ನೋಡೋಣ.
ಚೆನ್ನಾಗಿ ತೊಳೆಯಿರಿ
ರಾಜ್ಮಾ ಅಥವಾ ಯಾವುದೇ ಕಾಳುಗಳನ್ನು ಅಡುಗೆ ಮಾಡುವಾಗ ಚೆನ್ನಾಗಿ ತೊಳೆದುಕೊಳ್ಳಿ. ಮೂರ್ನಾಲ್ಕು ಬಾರಿ ಚೆನ್ನಾಗಿ ಹರಿಯುವ ನೀರಿನಿಂದ ತೊಳೆದ ಮೇಲೆ ಆರರಿಂದ ಎಂಟು ಗಂಟೆಗಳ ಕಾಲ ನೆನೆಸಿಡಿ.
ನೆನೆಸಿದ ನೀರು ಬೇಡ
ನೆನೆಸಿದ ನೀರನ್ನು ಉಪಯೋಗಿಸಬೇಡಿ. ಅದನ್ನು ಚೆಲ್ಲಿಬಿಡಿ. ಅದರಲ್ಲಿರುವ ಲೆಕ್ಟಿನ್ ಆಗ ಹೊರಟುಹೋಗುತ್ತದೆ. ಮತ್ತೆ ಹೊಸ ನೀರನ್ನು ಸೇರಿಸಿ ಅದಕ್ಕೆ ಶುಂಠಿ, ಇಂಗು ಹಾಗೂ ಜೀರಿಗೆಯನ್ನು ಸೇರಿಸಿ ಇಡಿ.
ಶುಂಠಿ, ಜೀರಿಗೆ
ಹೀಗೆ ಶುಂಠಿ, ಇಂಗು ಹಾಗೂ ಜೀರಿಗೆಯನ್ನು ಸೇರಿಸುವುದರಿಂದ ಇದನ್ನು ತಿಂದಾಗ ನಮ್ಮ ಕರುಳಿನಲ್ಲಿ ಉಂಟಾಗುವ ಒತ್ತಡ ಕಡಿಮೆಯಾಗುತ್ತದೆ. ಹೊಟ್ಟೆ ನೋವು, ಗ್ಯಾಸ್‌ನಿಂದ ಉಂಟಾಗುವ ಹೊಟ್ಟೆಯುಬ್ಬರದ ಅನುಭವ, ಎದೆಯುರಿ ಇತ್ಯಾದಿಗಳು ಆಗುವುದಿಲ್ಲ.
ಉಪ್ಪು ಸೇರಿಸಿ ಬೇಯಿಸಿ
ಅಷ್ಟೇ ಅಲ್ಲ, ಇದನ್ನು ಬೇಯಿಸುವ ಸಂದರ್ಭ ಶುಂಠಿ, ಜೀರಿಗೆ ಹಾಗೂ ಇಂಗನ್ನು ಸೇರಿಸುವ ಜೊತೆಗೆ ಉಪ್ಪನ್ನೂ ಸೇರಿಸಿಯೇ ಬೇಯಿಸಿ. ಯಾಕೆಂದರೆ ಉಪ್ಪಿನಲ್ಲಿರುವ ಸೋಡಿಯಂ ಈ ಕಾಳಿನಲ್ಲಿರುವ ಕ್ಯಾಲ್ಶಿಯಂ ಹಾಗೂ ಮೆಗ್ನೀಶಿಯಂ ಅನ್ನು ಹೊರಗೆಳೆದು, ನಮ್ಮ ದೇಹಕ್ಕೆ ಆಮೇಲೆ ಸರಿಯಾಗಿ ಹೀರಿಕೊಳ್ಳುವಂತೆ ಮಾಡಬಲ್ಲದು. ಹಾಗಾಘಿ ಬೇಯುವಾಗಲೇ ಉಪ್ಪು ಹಾಕಿ. ಬೆಂದ ಮೇಲಿನ ನೀರನ್ನು ಚೆಲ್ಲಬೇಡಿ. ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಇರುವುದರಿಂದ ಅದನ್ನು ಬಳಸಿ.